Holi Festival: ಗುಮ್ಮಟನಗರಿ ವಿಜಯಪುರದಲ್ಲಿ ಹೋಳಿ ಬಣ್ಣದಾಟದ ಸಂಭ್ರಮ..!
ಗುಮ್ಮಟನಗರಿ ವಿಜಯಪುರದಲ್ಲಿ ಹೋಳಿ ಹಬ್ಬದ ಕಾಮದ ದಹನ ಬಳಿಕ ಬಣ್ಣದಾಟದ ಸಂಭ್ರಮ ಮುಗಿಲು ಮುಟ್ಟಿದೆ. ಕಾಮದಹನದ ಮರುದಿನ ಬಣ್ಣದಾಟವಾಡೋದು ರೂಢಿಯಲ್ಲಿದೆ.
ಷಡಕ್ಷರಿ ಕಂಪೂನವರ್, ಏಷ್ಯಾನೆಟ್ ಸುವರ್ಣ ನ್ಯೂಸ್ ವಿಜಯಪುರ
ವಿಜಯಪುರ (ಮಾ.18): ಗುಮ್ಮಟನಗರಿ ವಿಜಯಪುರದಲ್ಲಿ ಹೋಳಿ ಹಬ್ಬದ ಕಾಮದ ದಹನ ಬಳಿಕ ಬಣ್ಣದಾಟದ ಸಂಭ್ರಮ ಮುಗಿಲು ಮುಟ್ಟಿದೆ. ಕಾಮದಹನದ ಮರುದಿನ ಬಣ್ಣದಾಟವಾಡೋದು ರೂಢಿಯಲ್ಲಿದೆ. ವಿಜಯಪುರ ನಗರದಾದ್ಯಂತ ಬಣ್ಣದಾಟದ ಸಂಭ್ರಮ ಜೋರಾಗಿದೆ. ಜನರು ಪರಸ್ಪರ ಬಣ್ಣ ಹಾಕುವ ಮೂಲಕ ಸಂಭ್ರಮಿಸುತ್ತಿದ್ದಾರೆ.
ಇನ್ನು ಮಕ್ಕಳು ಕೂಡ ಕಯ್ಯಲ್ಲಿ ಕಲರ್ ನೀರು ತುಂಬಿದ ಬಾಟಲಿಗಳನ್ನ ಹಿಡಿದು ಪರಸ್ಪರ ಬಣ್ಣ ನೀರು ಎರಚಿ ಸಂಭ್ರಮಿಸಿದರು. ಇನ್ನು ಮಹಿಳೆಯರು ಪರಸ್ಪರ ಬಣ್ಣ ಹಚ್ಚುವ ಮೂಲಕ ಸಂಭ್ರಮಿಸಿದರು. ಇನ್ನು ಚಿದಂಬರ ನಗರದ ನಿವಾಸಿಗಳು ನಿನ್ನೆ ರಾತ್ರಿ ಕಾಮದಹನ ಮಾಡಿ ಇಂದು ಬಣ್ಣದಾಟದಲ್ಲಿ ಮಿಂದೆದ್ದರು. ಇತ್ತ ನಗರದ ಗೋಳಗುಮ್ಮಟ ಏರಿಯಾದ ಜಾಡರ ಓಣಿ, ಬಂಡಿಗೇರಿ ಓಣಿ ಸೇರಿದಂತೆ ಬಡಾವಣೆಗಳಲ್ಲು ಜನರು ಬಣ್ಣದೋಕುಳಿಯಲ್ಲಿ ಮೈಮರೆತಿದ್ದು ಕಂಡು ಬಂತು..
Hijab Row: ಬಂದ್ ಮಾಡಿದವರ ಜತೆ ವ್ಯಾಪಾರ ಬೇಡ: ಮುಸ್ಲಿಮರ ವಿರುದ್ಧ ಸೋಶಿಯಲ್ ವಾರ್..!
ಕಾಮದಹನ ಮರುದಿನ ಶ್ರೀಶೈಲಕ್ಕೆ ಹೊರಟ ಮಲ್ಲಯ್ಯನ ಕಂಬಿಗಳು: ಇತ್ತ ಕಾಮದಹನ ಮರುದಿನ ಬಣ್ಣದಾಟ ಜೋರಾಗಿದ್ದರೆ ಇತ್ತ ಮಲ್ಲಿಕಾರ್ಜುನನ ಭಕ್ತರು ಮಲ್ಲಯ್ಯನ ಕಂಬಿಗಳ ಜೊತೆಗೆ ಶ್ರೀಶೈಲಕ್ಕೆ ಪಾದಯಾತ್ರೆ ಹೊರಟಿದ್ದಾರೆ. ಕಾಮ ದಹನವಾದ ರಾತ್ರಿಯೇ ಮಲ್ಲಯ್ಯನ ಕಂಬಿಗಳು ಶ್ರೀಶೈಲದತ್ತ ಹೊರಡುತ್ತವೆ. ಕಂಬಿ ಹೊತ್ತ ಭಕ್ತರು 15 ದಿನಗಳ ಕಾಲ ಪಾದಯಾತ್ರೆ ಮಾಡಿ ಯುಗಾದಿಯಂದು ಶ್ರೀಶೈಲಂ ತಲುಪಿ ಅಲ್ಲಿ ಮಲ್ಲಿಕಾರ್ಜುನನ ದರ್ಶನ ಪಡೆಯುತ್ತಾರೆ. ವಿಜಯಪುರ, ಬಾಗಲಕೋಟೆ, ಬೆಳಗಾವಿ , ಧಾರವಾಡ ಸೇರಿದಂತೆ ಅನೇಕ ಜಿಲ್ಲೆಗಳಿಂದ ಕಂಬಿಗಳನ್ನ ಹೊತ್ತ ಭಕ್ತರು ಶ್ರೀಶೈಲಕ್ಕೆ ಪಾದಯಾತ್ರೆ ಹೊರಡುತ್ತಾರೆ. ಸರಿಸುಮಾರು 500 ರಿಂದ 600 ಕೀಲೋ ಮೀಟರ್ ನಡೆದು ಶ್ರೀಶೈಲಂ ಸೇರುತ್ತಾರೆ. ಇನ್ನು ದಾರಿಯುದ್ದಕ್ಕು ಮಲ್ಲಿಕಾರ್ಜುನ ಭಕ್ತರು ಪಾದಯಾತ್ರಿಕರಿಗೆ ಊಟ, ಪಾನೀಯ ಸೇರಿದಂತೆ ವೈದ್ಯಕೀಯ ಸೇವೆಯನ್ನ ನೀಡುತ್ತಾರೆ.
ಶ್ರೀಶೈಲಕ್ಕೆ ಹೊರಟ ಮಲ್ಲಯ್ಯನ ಭಕ್ತರಿಗೆ ಯುಗಾದಿಯಂದೆ ಬಣ್ಣದಾಟ: ಹೋಳಿ ಕಾಮದಹನ ಬಳಿಕ ಎಲ್ಲೆಡೆ ಬಣ್ಣದಾಟವನ್ನ ಆಡಿದರೆ, ಇದೆ ದಿನ ಶ್ರೀಶೈಲಕ್ಕೆ ಹೊರಡುವ ಮಲ್ಲಿಕಾರ್ಜುನನ ಭಕ್ತರು ಬಣ್ಣವನ್ನ ಆಡುವುದಿಲ್ಲ, ರಂಗಮಂಚಮಿಯನ್ನು ಆಚರಿಸೋದಿಲ್ಲ. ಯುಗಾದಿಯಂದು ಶ್ರೀಶೈಲದ ಮಲ್ಲಿಕಾರ್ಜುನನ ಸನ್ನಿದಿ ತಲುಪಿದ ಬಳಿಕವೇ ಪರಸ್ಪರ ಬಣ್ಣ ಹಚ್ಚಿ ರಂಗ ಪಂಚಮಿಯನ್ನ ಆಚರಿಸೋದು ವಾಡಿಕೆಯಾಗಿದೆ..
ಮರಿಗೆ ಜನ್ಮ ನೀಡಿದ ಅಪರೂಪದ ಉದ್ದಕೊಕ್ಕಿನ ರಣಹದ್ದು: ಪರಿಸರ ಪ್ರೇಮಿಗಳಲ್ಲಿ ಸಂತಸ
ಕಟ್ಟಿಗೆಗಳಿಂದ ಮಾಡಿರುವ ಮಲ್ಲಯ್ಯನ ಕಂಬಿಗಳಿಗೆ ಬೆಳ್ಳಿಯ ಕವಚ: ಪ್ರತಿವರ್ಷ ಹೋಳಿ ಹುಣ್ಣಿಮೆಯ ಕಾಮದಹನ ರಾತ್ರಿಯಂದು ಉತ್ತರ ಕರ್ನಾಟಕದಿಂದ ಶ್ರೀಶೈಲಕ್ಕೆ ಹೊರಡುವ ಮಲ್ಲಯ್ಯನ ಕಂಬಿಗಳಿಗೆ ತನ್ನದೆಯಾದ ಇತಿಹಾಸವಿದೆ. ನೂರಾರು ವರ್ಷಗಳಿಂದ ಸಾಗವಾಣಿ ಕಟ್ಟಿಗೆಗಳಿಂದ ಮಾಡಿರುವ ಮಲ್ಲಯ್ಯನ ಕಂಬಿಗಳು ಶಿವರಾತ್ರಿಯಿಂದ ಹೊರಗೆ ಬೀಳುತ್ತವೆ. ಶಿವರಾತ್ರಿಯಿಂದ ಹೋಳಿ ಹುಣ್ಣಿಮೆಯವರೆಗೆ 15 ದಿನಗಳ ಕಾಲ ಆಯಾ ಊರು, ಪಟ್ಟಣಗಳಲ್ಲಿ ಭಕ್ತರ ಮನೆಗಳಿಗೆ ಮಲ್ಲಯ್ಯನ ಕಂಬಿಗಳು ಹೋಗುತ್ವೆ. ಮನೆಗಳಿಗೆ ಕಂಬಿಗಳನ್ನ ಬರಮಾಡಿಕೊಳ್ಳುವ ಭಕ್ತರು ಪೂಜೆ ಪುನಸ್ಕಾರ ಸಲ್ಲಿಸುವ ಪದ್ದತಿ ಇದೆ.
15 ದಿನಗಳ ಕಾಲ ಭಕ್ತರ ಮನೆಗಳಲ್ಲಿ ಪೂಜೆ ಸಲ್ಲಿಸಿಕೊಳ್ಳುವ ಮಲ್ಲಯ್ಯನ ಕಂಬಿಗಳನ್ನ ಭಕ್ತರು ಹೋಳಿ ಹಬ್ಬದ ದಿನ ಶ್ರೀಶೈಲಕ್ಕೆ ಪದಯಾತ್ರೆ ಮೂಲಕ ಕೊಂಡೊಯ್ಯುತ್ತಾರೆ.. ಇನ್ನು ಕಟ್ಟಿಗೆಗಳಿಂದ ತಯಾರಾಗಿರುವ ಕಂಬಿಗಳಿಗೆ ಸುತ್ತ ನಾಲ್ಕು ತುದಿಗಳಲ್ಲು ನಂದಿ, ಮುಂಬಾಗದಲ್ಲಿ ಲಿಂಗ, ತುದಿಗಳ ಮೇಲ್ಬಾಗದಲ್ಲಿ ಹಿತ್ತಾಳೆ, ಬೆಳ್ಳಿಯಿಂದ ಮಾಡಿರುವ ಸಣ್ಣ ಶಿಖರಗಳನ್ನ ಅಳವಡಿಸಿರುತ್ತಾರೆ. ಇನ್ನು ಭಕ್ತರು ಕಟ್ಟಿಗೆಗೆ ಬೆಳ್ಳಿಯ ಕವಚ, ಬೆಳ್ಳಿ ಛತ್ರಿಗಳನ್ನ ಕಾಣಿಕೆಯಾಗಿ ನೀಡುವುದು ಇದೆ.