ರಾಜ್ಯ ಸರ್ಕಾರಿ ನೌಕರರ ತುಟ್ಟಿಭತ್ಯೆ ದರ ಶೇ.10.75ಕ್ಕೆ ಹೆಚ್ಚಳ

ರಾಜ್ಯ ಸರ್ಕಾರಿ ನೌಕರರಿಗೆ ತುಟ್ಟಿ ಭತ್ಯೆಯನ್ನು ಜುಲೈ 1, 2024 ರಿಂದ 8.50% ರಿಂದ 10.75% ಕ್ಕೆ ಹೆಚ್ಚಿಸಲಾಗಿದೆ. ಪರಿಷ್ಕೃತ ದರಗಳು ಆಗಸ್ಟ್ 1, 2024 ರಿಂದ ಅನ್ವಯವಾಗುತ್ತವೆ. ನಿವೃತ್ತಿ ವೇತನದಾರರಿಗೂ ಸಹ ಇದೇ ರೀತಿಯ ಹೆಚ್ಚಳವನ್ನು ಅನುಮೋದಿಸಲಾಗಿದೆ.

Karnataka Govt employees Dearness allowance rate increased from 8 to 10 percent sat

ಬೆಂಗಳೂರು (ನ.27): ರಾಜ್ಯ ಸರ್ಕಾರದಿಂದ ರಚಿಸಲ್ಪಟ್ಟ 7ನೇ ರಾಜ್ಯ ವೇತನ ಆಯೋಗದ ಶಿಫಾರಸ್ಸುಗಳ ಅಡಿಯಲ್ಲಿ 2024ರ ಪರಿಷ್ಕೃತ ವೇತನ ಶ್ರೇಣಿಗಳಲ್ಲಿ ರಾಜ್ಯ ಸರ್ಕಾರಿ ನೌಕರರುಗಳಿಗೆ ನೀಡಲಾಗುತ್ತಿರುವ ತುಟ್ಟಿ ಭತ್ಯೆಯ ದರಗಳನ್ನು 1ನೇ ಜುಲೈ 2024 ರಿಂದ ಜಾರಿಗೆ ಬರುವಂತೆ ಪ್ರಸ್ತುತ ಮೂಲ ವೇತನದ 8.50% ರಿಂದ 10.75% ಕ್ಕೆ ಪರಿಷ್ಕರಿಸಿ ಹೆಚ್ಚಳ ಮಾಡಲಾಗಿದೆ.

ಪರಿಷ್ಕೃತ ತುಟ್ಟಿ ಭತ್ಯೆಯ ದರಗಳ ಹಣ ಆ.1ರ 2024ರಿಂದ ಅನ್ವಯವಾಗಲಿದೆ. ಇನ್ನು ತುಟ್ಟಿ ಭತ್ಯೆಯ ಉದ್ದೇಶಕ್ಕಾಗಿ 'ಮೂಲ ವೇತನ" ಎಂದರೆ ಸರ್ಕಾರಿ ನೌಕರನು ಧಾರಣ ಮಾಡಿರುವ ಹುದ್ದೆಗೆ ಅನ್ವಯವಾಗುವ ವೇತನ ಶ್ರೇಣಿಯಲ್ಲಿ ಪಡೆಯುತ್ತಿರುವ ವೇತನ ಮತ್ತು ಅದರಲ್ಲಿ ಸ್ಥಗಿತ ವೇತನ ಬಡ್ತಿ, ವೈಯಕ್ತಿಕ ವೇತನ, ಹೆಚ್ಚುವರಿ ವೇತನ ಬಡ್ತಿ ಯಾವುದಾದರೂ ಇದ್ದಲ್ಲಿ, ಅವುಗಳು ಸೇರುತ್ತವೆ. ತುಟ್ಟಿ ಭತ್ಯೆಯ ಮಂಜೂರಾತಿಯ ಉದ್ದೇಶಕ್ಕಾಗಿ ಮೂಲ ವೇತನಕ್ಕೆ ಮೇಲೆ ಸೂಚಿಸಿರುವುದನ್ನು ಹೊರತುಪಡಿಸಿ ಇತರೆ ಯಾವುದೇ ಉಪಲಬ್ಧಗಳನ್ನು ಸೇರಿಸತಕ್ಕದ್ದಲ್ಲ.

ರಾಜ್ಯ ಸರ್ಕಾರದ ನಿವೃತ್ತಿ ವೇತನದಾರರು/ಕುಟುಂಬ ನಿವೃತ್ತಿ ವೇತನದಾರರಿಗೆ ಮತ್ತು ರಾಜ್ಯದ ಸಂಚಿತ ನಿಧಿಯಿಂದ ನಿವೃತ್ತಿ ವೇತನ ಮತ್ತು ಕುಟುಂಬ ನಿವೃತ್ತಿ ವೇತನವನ್ನು ಪಡೆಯುತ್ತಿರುವಂತಹ ಅನುದಾನಿತ ಶಿಕ್ಷಣ ಸಂಸ್ಥೆಗಳ ನಿವೃತ್ತಿ ವೇತನದಾರರು/ಕುಟುಂಬ ನಿವೃತ್ತಿ ವೇತನದಾರರಿಗೂ ಸಹ 1ನೇ ಜುಲೈ 2024 ರಿಂದ ಜಾರಿಗೆ ಬರುವಂತೆ ಹಾಲಿ ಲಭ್ಯವಿರುವ ತುಟ್ಟಿಭತ್ಯೆಯ ದರಗಳನ್ನು ಮೂಲ ನಿವೃತ್ತಿ ವೇತನ/ಕುಟುಂಬ ನಿವೃತ್ತಿ ವೇತನದ ಪ್ರಸಕ್ತ 8.50% ರಿಂದ 10.75% ಗೆ ಹೆಚ್ಚಿಸಿ ಮಂಜೂರು ಮಾಡಲಾಗಿದೆ. ಆದರೆ, ಪರಿಷ್ಕೃತ ತುಟ್ಟಿ ಭತ್ಯೆಯ ದರಗಳ ಆರ್ಥಿಕ ಲಾಭವು ಆ.1ರ 2024 ರಿಂದ ಲಭ್ಯವಾಗುತ್ತದೆ. ತುಟ್ಟಿ ಭತ್ಯೆಯ ಮಂಜೂರಾತಿಯ ಉದ್ದೇಶಕ್ಕಾಗಿ ಕರ್ನಾಟಕ ನಾಗರೀಕ ಸೇವಾ ನಿಯಮಗಳಲ್ಲಿ ಸೂಚಿಸಿರುವ ಮೂಲ ನಿವೃತ್ತಿ ವೇತನ/ಕುಟುಂಬ ನಿವೃತ್ತಿ ವೇತನವನ್ನು ಹೊರತುಪಡಿಸಿ ಇತರೆ ಯಾವುದೇ ಉಪಲಬ್ಧಗಳನ್ನು ಸೇರಿಸತಕ್ಕದ್ದಲ್ಲ ಎಂದು ತಿಳಿಸಲಾಗಿದೆ.

ಯುಜಿಸಿ/ಎಐಸಿಟಿಇ/ಐಸಿಎಆರ್ ವೇತನ ಶ್ರೇಣಿಗಳ ನಿವೃತ್ತ ನೌಕರರುಗಳಿಗೂ ಸಹ ಈ ಆದೇಶಗಳು ಅನ್ವಯಿಸುತ್ತವೆ. ಸರ್ಕಾರದ ಮತ್ತು ಜಿಲ್ಲಾ ಪಂಚಾಯತ್‌ಗಳ ಪೂರ್ಣಾವಧಿ ನೌಕರರಿಗೆ, ಕಾಲಿಕ ವೇತನ ಶ್ರೇಣಿಗಳಲ್ಲಿರುವ ಪೂರ್ಣಾವಧಿ ವರ್ಕ್‌ಚಾರ್ಜ್ ನೌಕರರಿಗೆ ಹಾಗೂ ಸರ್ಕಾರದಿಂದ ಸಹಾಯಾನುದಾನ ಪಡೆಯುತ್ತಿರುವ ಶಿಕ್ಷಣ ಸಂಸ್ಥೆಗಳಲ್ಲಿ ಮತ್ತು ವಿಶ್ವವಿದ್ಯಾಲಯಗಳಲ್ಲಿ ಕಾಲಿಕ ವೇತನ ಶ್ರೇಣಿಗಳಲ್ಲಿರುವ ಪೂರ್ಣಾವಧಿ ನೌಕರರುಗಳಿಗೆ ಈ ಆದೇಶ ಅನ್ವಯಿಸುತ್ತದೆ.

ಇದನ್ನೂ ಓದಿ: ಇವಿಎಂ ಬದಲು ಬ್ಯಾಲೆಟ್ ಪೇಪರ್ ಕೋರಿದ್ದ ಪಿಐಎಲ್ ವಜಾಗೊಳಿಸಿದ ಸುಪ್ರೀಂ ಕೋರ್ಟ್

ಯುಜಿಸಿ/ಎಐಸಿಟಿಇ/ಐಸಿಎಆರ್ ವೇತನ ಶ್ರೇಣಿಗಳಲ್ಲಿ ವೇತನ ಪಡೆಯುತ್ತಿರುವ ಮತ್ತು ಎನ್‌ಜೆಪಿಸಿ ವೇತನ ಶ್ರೇಣಿಗಳ ನ್ಯಾಯಾಂಗ ಅಧಿಕಾರಿಗಳಿಗೆ ಸಂಬಂಧಿಸಿದಂತೆ ಪ್ರತ್ಯೇಕ ಆದೇಶಗಳನ್ನು ಹೊರಡಿಸಲಾಗವುದು. ಈ ಆದೇಶದ ಮೇರೆಗೆ ಲಭ್ಯವಿರುವ ತುಟ್ಟಿಭತ್ಯೆಯನ್ನು ನಗದಾಗಿ ಪಾವತಿ ಮಾಡುವುದು.

ತುಟ್ಟಿ ಭತ್ಯೆಯ ಕಾರಣದಿಂದ ಸಂದಾಯ ಮಾಡಬೇಕಾಗಿರುವ ಐವತ್ತು ಪೈಸೆ ಹಾಗೂ ಅದಕ್ಕಿಂತ ಹೆಚ್ಚಿನ ಭಿನ್ನಾಂಕಗಳನ್ನು ಮುಂದಿನ ರೂಪಾಯಿಗೆ ಪೂರ್ಣಗೊಳಿಸತಕ್ಕದ್ದು ಮತ್ತು ಐವತ್ತು ಪೈಸೆಗಿಂತ ಕಡಿಮೆ ಇರುವ ಭಿನ್ನಾಂಕಗಳನ್ನು ಕಡೆಗಣಿಸತಕ್ಕದ್ದು. ಈ ಆದೇಶಗಳನ್ವಯ ಪಾವತಿ ಮಾಡಬೇಕಾಗಿರುವ ತುಟ್ಟಿಭತ್ಯೆ ಬಾಕಿ ಮೊತ್ತವನ್ನು, 2024ರ ಡಿಸೆಂಬರ್ ಮಾಹೆಯ ವೇತನ ಬಟವಾಡೆಗೂ ಮೊದಲು ಪಾವತಿ ಮಾಡತಕ್ಕದ್ದಲ್ಲ. ತುಟ್ಟಿ ಭತ್ಯೆಯನ್ನು ಸಂಭಾವನೆಯ ವಿಶಿಷ್ಟ ಅಂಶವಾಗಿ ತೋರಿಸುವುದು ಮತ್ತು ಯಾವುದೇ ಉದ್ದೇಶಕ್ಕಾಗಿ ಇದನ್ನು ವೇತನ ಎಂದು ಪರಿಗಣಿಸಲಾಗುವುದಿಲ್ಲ ಎಂದು ಆದೇಶ ಹೊರಡಿಸಲಾಗಿದೆ.

Latest Videos
Follow Us:
Download App:
  • android
  • ios