ಹಿರೇಕೆರೂರು: ಕಾಂಗ್ರೆಸ್‌ನಲ್ಲಿ ಸಿಗದ ಮಂತ್ರಿಗಿರಿ ಬಿಜೆಪಿಯಲ್ಲಿ ದಕ್ಕಿಸಿಕೊಂಡ ಪಾಟೀಲ!

ಗೆದ್ದು ಮಂತ್ರಿಗಿರಿ ಖಾತ್ರಿಪಡಿಸಿಕೊಂಡ ಬಿ.ಸಿ.ಪಾಟೀಲ ಕಾಂಗ್ರೆಸ್ ವಿರುದ್ಧ ಸೆಡ್ಡು ಹೊಡೆದು ಗೆದ್ದ ಕೌರವ | ಮೈತ್ರಿ ಸರ್ಕಾರದಲ್ಲಿ ಸಚಿವ ಸ್ಥಾನ ಸಿಗದ್ದಕ್ಕೆ ಅಸಮಾಧಾನಗೊಂಡಿದ್ದ ಪಾಟೀಲ| ಪ್ರಭಾವಿ ಖಾತೆ ಮೇಲೆ ಕಣ್ಣು| ವಾರದೊಳಗಾಗಿ ಕೌರವ ಖ್ಯಾತಿಯ ಪಾಟೀಲರ ಮಂತ್ರಿಗಿರಿ ಕನಸು ನನಸು|

Hirekerur MLA B C Patil Confirm Minister Seat on BS Yediyurappa Cabinet

ನಾರಾಯಣ ಹೆಗಡೆ

ಹಾವೇರಿ(ಡಿ.11): ಕಳೆದ ಮೈತ್ರಿ ಸರ್ಕಾರದಲ್ಲಿ ಸಚಿವ ಸ್ಥಾನಕ್ಕಾಗಿ ಸಾಕಷ್ಟು ಪ್ರಯತ್ನ ನಡೆಸಿದ್ದ ಹಿರೇಕೆರೂರು ಶಾಸಕ ಬಿ.ಸಿ.ಪಾಟೀಲ ಈಗ ಬಿಜೆಪಿಗೆ ಬಂದು ಕೆಲವೇ ದಿನಗಳಲ್ಲಿ ಆ ಕನಸನ್ನು ನನಸಾಗಿಸಿಕೊಳ್ಳುವ ಹಾದಿಯಲ್ಲಿದ್ದಾರೆ. ಭರ್ಜರಿ ಗೆಲುವಿನೊಂದಿಗೆ ಮಂತ್ರಿ ಪದವಿ ಖಾತ್ರಿ ಪಡಿಸಿಕೊಂಡಿರುವ ಅವರು, ಪ್ರಭಾವಿ ಖಾತೆ ಮೇಲೆಯೇ ಕಣ್ಣಿದ್ದಾರೆ ಎನ್ನಲಾಗುತ್ತಿದೆ.

ಉಪಚುನಾವಣೆಯಲ್ಲಿ ಗೆದ್ದವರಿಗೆ ಮಂತ್ರಿ ಸ್ಥಾನ ಕೊಡುವುದಾಗಿ ಈಗಾಗಲೇ ಮುಖ್ಯಮಂತ್ರಿ ಯಡಿಯೂರಪ್ಪ ಅವರು ಘೋಷಿಸಿದ್ದಾರೆ. ಜಿಲ್ಲೆಯ ಬಸವರಾಜ ಬೊಮ್ಮಾಯಿ ಅವರು ಸಂಪುಟದಲ್ಲಿದ್ದು, ಬಿ.ಸಿ.ಪಾಟೀಲರೂ ಶೀಘ್ರದಲ್ಲೇ ಸಚಿವ ಸ್ಥಾನ ಪಡೆಯುವುದು ನಿಶ್ಚಿತ. ಇದರೊಂದಿಗೆ ಜಿಲ್ಲೆಯ ಇಬ್ಬರಿಗೆ ಮಂತ್ರಿ ಸ್ಥಾನ ದೊರೆಯಲಿದ್ದು, ಆರ್.ಶಂಕರ್ ಅವರನ್ನು ಎಂಎಲ್‌ಸಿ ಮಾಡಿ ಮಂತ್ರಿ ಮಾಡುವುದಾಗಿ ಸಿಎಂ ಹೇಳಿದ್ದು, ಅದಕ್ಕಾಗಿ ಇನ್ನು ಕೆಲ ತಿಂಗಳು ಕಾಯಬೇಕಾಗಬಹುದು. ಆದರೆ, ಬಿ.ಸಿ.ಪಾಟೀಲ ಇನ್ನೊಂದು ವಾರದೊಳಗಾಗಿ ಸಚಿವ ಸ್ಥಾನ ಪಡೆಯುವ ವಿಶ್ವಾಸದಲ್ಲಿದ್ದಾರೆ. 

ಹೆಚ್ಚಿನ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ 

ಮೈತ್ರಿ ಸರ್ಕಾರದಲ್ಲಿ ಅನೇಕ ಬಾರಿ ಮಂತ್ರಿಪಟ್ಟದ ಭರವಸೆ ಸಿಕ್ಕು ಕೊನೆಗೆ ನಿರಾಸೆ ಅನುಭವಿಸುತ್ತ ಬಂದಿದ್ದ ಬಿ.ಸಿ.ಪಾಟೀಲರಿಗೆ ಈಗ ಬಿಜೆಪಿಯಿಂದ ಆ ಕನಸು ನನಸಾಗುವ ಕಾಲ ಸನ್ನಿಹಿತವಾಗಿದೆ. ಆ ಮೂಲಕ ಸುಮಾರು 35 ವರ್ಷಗಳ ಬಳಿಕ ಹಿರೇಕೆರೂರು ಕ್ಷೇತ್ರದ ಶಾಸಕರಿಗೆ ಮಂತ್ರಿಗಿರಿ ಭಾಗ್ಯ ಬಂದಿದೆ. 

ಕಾಂಗ್ರೆಸ್‌ನಲ್ಲಿದ್ದಾಗ ಕೈಗೂಡದ ಕನಸು: 

2018ರ ವಿಧಾನಸಭೆ ಚುನಾವಣೆಯಲ್ಲಿ ಜಿಲ್ಲೆಯಿಂದ ಗೆದ್ದ ಏಕೈಕ ಶಾಸಕ ಎಂಬ ಹಿರಿಮೆಗೆ ಬಿ.ಸಿ.ಪಾಟೀಲ ಪಾತ್ರರಾಗಿದ್ದರು. ಅವರಿಂದಾಗಿ ಜಿಲ್ಲೆಯಲ್ಲಿ ಒಂದು ಕ್ಷೇತ್ರದಲ್ಲಿ ಕಾಂಗ್ರೆಸ್ ಉಳಿದಿತ್ತು. ಬಳಿಕ ಮೈತ್ರಿ ಸರ್ಕಾರ ರಚನೆಯಾದಾಗ ಜಿಲ್ಲೆಯ ಖೋಟಾದಲ್ಲಿ ಅವರಿಗೆ ಸಚಿವ ಸ್ಥಾನ ಸಿಗುವ ನಿರೀಕ್ಷೆ ಹೊಂದಲಾಗಿತ್ತು. ಆದರೆ, ಮಂತ್ರಿಗಿರಿ ಆರ್.ಶಂಕರ್‌ಗೆ ಪಾಲಾಗಿತ್ತು. ಅಲ್ಲದೇ ಜಾತಿ ಖೋಟಾದಲ್ಲೂ ಬಿ.ಸಿ.ಪಾಟೀಲ್ ಅವಕಾಶದಿಂದ ವಂಚಿತರಾದರು. ಆಗಿನಿಂದಲೇ ಕಾಂಗ್ರೆಸ್ ನಾಯಕತ್ವದ ವಿರುದ್ಧ ಕಿಡಿ ಕಾರುತ್ತ ಬಂದಿದ್ದ ಪಾಟೀಲರನ್ನು ಕೈ ನಾಯಕರು ಭರವಸೆ ನೀಡುತ್ತ ಸಮಾಧಾನಪಡಿಸುತ್ತ ಬಂದಿದ್ದರು. ಸಂಪುಟ ವಿಸ್ತರಣೆ ವೇಳೆ ಮತ್ತೆ ಮಂತ್ರಿಗಿರಿ ಸಿಗದ್ದಕ್ಕೆ ಮತ್ತೆ ಸಿಟ್ಟು ಹೊರಹಾಕಿದ್ದರು. 

ದಸರಾ, ದೀಪಾವಳಿ ಎನ್ನುತ್ತಲೇ ಕಾಲಕಳೆದ ಮೈತ್ರಿ ಸರ್ಕಾರದ ನಾಯಕರು ಭರವಸೆ ಮಾತ್ರ ಈಡೇರಿಸಿರಲಿಲ್ಲ. ಬಳಿಕ ಲೋಕಸಭೆ ಚುನಾವಣೆ ಬಳಿಕ ಮಂತ್ರಿಗಿರಿ ಪಕ್ಕಾ ಎನ್ನತೊಡಗಿದ್ದರು. ಆದರೆ, ಮತ್ತೆ ಕೈತಿರುಗಿಸಿದ್ದರಿಂದ ಪಕ್ಷ ಬಿಡುವ ನಿರ್ಧಾರಕ್ಕೆ ಬಂದ ಪಾಟೀಲರು, ಕೆಲವೇ ತಿಂಗಳಲ್ಲಿ ಮೈತ್ರಿ ಸರ್ಕಾರ ಬೀಳಲು ಕಾರಣರಾದರು. ಇದಾದ ಬಳಿಕ ಅನರ್ಹತೆ ಶಿಕ್ಷೆ ಅನುಭವಿಸಿ ಟೀಕೆಗೆ ಗುರಿಯಾದ ಅವರು ಈಗ ಅಭೂತಪೂರ್ವ ರೀತಿಯಲ್ಲಿ ಜಯಗಳಿಸುವ ಮೂಲಕ ಟೀಕಾಕಾರರ ಬಾಯಿ ಮುಚ್ಚಿಸಿದ್ದಾರೆ. ನಾಲ್ಕು ಬಾರಿ ಗೆದ್ದ ಕೌರವ: ತಮ್ಮ ರಾಜಕೀಯ ಮತ್ತು ಸಾಮಾಜಿಕ ಸೇವೆಗಾಗಿ ಹಿರೇಕೆರೂರು ಕ್ಷೇತ್ರವನ್ನು ಆಯ್ಕೆ ಮಾಡಿಕೊಂಡ ಬಿ.ಸಿ.ಪಾಟೀಲ ಅವರು ತಮ್ಮ ಸಿನಿಮಾ ಜೀವನದ ಯಶಸ್ಸನ್ನೇ ರಾಜಕೀಯದ ಮೆಟ್ಟಿಲಾಗಿ ಬಳಸಿಕೊಂಡರು. 

2004ರಲ್ಲಿ ಜೆಡಿಎಸ್‌ನಿಂದ ಗೆದ್ದು ಪ್ರಥಮ ಬಾರಿಗೆ ಶಾಸಕರಾದರು. 2008ರಲ್ಲಿ ಜೆಡಿಎಸ್ ತೊರೆದು ಕಾಂಗ್ರೆಸ್ ಪಕ್ಷದಿಂದ ಸ್ಪರ್ಧಿಸಿದರು. ಆಗ ಎರಡನೇ ಬಾರಿಗೆ ಗೆದ್ದು ಕ್ಷೇತ್ರದ ಶಾಸಕರಾದರು. 2013ರಲ್ಲಿ ಮತ್ತೆ ಕಾಂಗ್ರೆಸ್‌ನಿಂದ ಸ್ಪರ್ಧಿಸಿ ಯು.ಬಿ.ಬಣಕಾರ ವಿರುದ್ಧ ಪರಾಭವಗೊಂಡರು. ಆಗ ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರವಿತ್ತಾದರೂ ಇವರು ಸೋತಿದ್ದರಿಂದ ಅವಕಾಶ ಸಿಕ್ಕಿರಲಿಲ್ಲ. 2018ರಲ್ಲಿ ಮೂರನೇ ಬಾರಿಗೆ ಕಾಂಗ್ರೆಸ್‌ನಿಂದ ಆಯ್ಕೆಯಾಗುವ ಮೂಲಕ ಜಿಲ್ಲೆಯಿಂದ ಗೆದ್ದ ಪಕ್ಷದ ಏಕೈಕ ಶಾಸಕ ಎಂಬ ಹೆಗ್ಗಳಿಕೆಗೆ ಪಾತ್ರರಾದರು. 

ಮೈತ್ರಿ ಸರ್ಕಾರ ರಚನೆಯಾಗಿದ್ದರಿಂದ ಬಿ.ಸಿ.ಪಾಟೀಲ ಕೂಡ ಸಚಿವ ಸ್ಥಾನದ ಮೇಲೆ ಕಣ್ಣಿಟ್ಟು ಪ್ರಯತ್ನ ನಡೆಸಿದರು. ಆದರೆ, ಒಂದು ವರ್ಷ ಕಳೆದರೂ ಮಂತ್ರಿಯಾಗುವ ಯಾವ ಸಾಧ್ಯತೆಯೂ ಕೈಗೂಡದ್ದರಿಂದ ಹಾಗೂ ಕ್ಷೇತ್ರದ ಅಭಿವೃದ್ಧಿ ಕಾರ್ಯಗಳಿಗೆ ಸ್ಪಂದನೆ ದೊರೆಯದ್ದರಿಂದ ಬಿಜೆಪಿ ನಾಯಕರ ಸಂಪರ್ಕಕ್ಕೆ ಬಂದರು. ಒಂದು ತಿಂಗಳ ಹಿಂದಷ್ಟೇ ಸುಪ್ರೀಂ ಕೋರ್ಟ್ ತೀರ್ಪು ಬಂದು ಸ್ಪರ್ಧೆಗೆ ಅವಕಾಶ ದೊರೆತ ಬಳಿಕ ಬಿಜೆಪಿ ಸೇರಿದ್ದರು. ಕ್ಷೇತ್ರದ ಅಭಿವೃದ್ಧಿಗಾಗಿ ಎಂದು ಮತದಾರರ ಬಳಿ ಹೋದ ಅವರಿಗೆ ನಿರೀಕ್ಷೆಗೂ ಮೀರಿ ಬೆಂಬಲ ದೊರೆತಿದೆ. 29 ಸಾವಿರಕ್ಕೂ ಹೆಚ್ಚಿನ ಮತಗಳ ಅಂತರದಿಂದ ಗೆದ್ದಿದ್ದಾರೆ. ಶಾಸಕ ಸ್ಥಾನ ತ್ಯಾಗ ಮಾಡಿ ಬಿಜೆಪಿ ಸರ್ಕಾರದ ಅಸ್ತಿತ್ವಕ್ಕೆ ಕಾರಣರಾದ ಹಿನ್ನೆಲೆಯಲ್ಲಿ ಬಿ.ಸಿ.ಪಾಟೀಲರಿಗೆ ಈಗ ಮಂತ್ರಿ ಭಾಗ್ಯ ದೊರೆಯುವುದು ಪಕ್ಕಾ ಆಗಿದೆ. 

ಪ್ರಭಾವಿ ಖಾತೆ ಮೇಲೆ ಕಣ್ಣು: 

ಕಾಂಗ್ರೆಸ್ ಬಿಟ್ಟು ಬಂದ ಪ್ರಮುಖರಲ್ಲಿ ಬಿ.ಸಿ. ಪಾಟೀಲ ಅವರೂ ಪ್ರಭಾವಿಯಾಗಿ ಗುರುತಿಸಿಕೊಂಡಿದ್ದಾರೆ. ಆದ್ದರಿಂದ ಪ್ರಭಾವಿ ಖಾತೆ ಮೇಲೆಯೇ ಅವರು ಕಣ್ಣು ಹಾಕಿದ್ದಾರೆ ಎಂದು ಕ್ಷೇತ್ರದ ಜನರು ಮಾತನಾಡಿಕೊಳ್ಳುತ್ತಿದ್ದಾರೆ. ರಾಜಕೀಯಕ್ಕೆ ಬರುವ ಮುನ್ನ ಬಿ.ಸಿ.ಪಾಟೀಲ ಪೊಲೀಸ್ ಇನ್ಸಪೆಕ್ಟರ್ ಆಗಿದ್ದರು. ಆದ್ದರಿಂದ ಅವರು ಗೃಹ ಖಾತೆ ಮೇಲೆ ಕಣ್ಣಿಟ್ಟಿರುವ ಸಾಧ್ಯತೆಯಿದೆ ಎನ್ನಲಾಗುತ್ತಿದೆ. ಇನ್ನು ಕೆಲವರ ಪ್ರಕಾರ ಗೃಹಕ್ಕಿಂತ ಲೋಕೋಪಯೋಗಿ, ಇಂಧನ, ಜಲಸಂಪನ್ಮೂಲದಂಥ ಪ್ರಭಾವಿ ಖಾತೆಗಳಲ್ಲಿ ಯಾವುದಾದರೂ ಒಂದು ಖಾತೆಗೆ ಪಟ್ಟು ಹಿಡಿಯುವ ಸಾಧ್ಯತೆ ಇದೆ ಎನ್ನಲಾಗುತ್ತಿದೆ. ಅಲ್ಲದೇ ಜಿಲ್ಲಾ ಉಸ್ತುವಾರಿಯೂ ಬೇಕು ಎನ್ನುವ ಸಾಧ್ಯತೆಯಿದೆ. ಒಟ್ಟಿನಲ್ಲಿ ಸಂಪುಟ ದರ್ಜೆ ಸಚಿವ ಸ್ಥಾನ ಸಿಗುವುದಂತೂ ನಿಶ್ಚಿತವಾಗಿದ್ದು, ವಾರದೊಳಗಾಗಿ ಕೌರವ ಖ್ಯಾತಿಯ ಪಾಟೀಲರ ಮಂತ್ರಿಗಿರಿ ಕನಸು ನನಸಾಗಲಿದೆ. 

ಈ ಬಗ್ಗೆ ಮಾತನಾಡಿದ ಹಿರೇಕೆರೂರು ಶಾಸಕ ಬಿ.ಸಿ.ಪಾಟೀಲ ಅವರು, ನಾನು ಯಾವುದೇ ಖಾತೆ ಬೇಕು ಎಂದು ಕೇಳಿಲ್ಲ. ಯಾವ ಖಾತೆ ಕೊಟ್ಟರೂ ನಿಭಾಯಿಸುತ್ತೇನೆ. ಮುಖ್ಯಮಂತ್ರಿ ಯಡಿಯೂರಪ್ಪನವರನ್ನು ಭೇಟಿಯಾಗಿ ಚರ್ಚಿಸುತ್ತೇನೆ. ಅವರ ತೀರ್ಮಾನವೇ ಅಂತಿಮ. ಕ್ಷೇತ್ರದ ಜನ ನನ್ನ ಮೇಲೆ ವಿಶ್ವಾಸವಿಟ್ಟು ಗೆಲ್ಲಿಸಿದ್ದಾರೆ. ಅದನ್ನು ಉಳಿಸಿಕೊಳ್ಳಲು ಪ್ರಾಮಾಣಿಕ ರೀತಿಯಲ್ಲಿ ಕೆಲಸ ಮಾಡುತ್ತೇನೆ ಎಂದು ಹೇಳಿದ್ದಾರೆ.
 

Latest Videos
Follow Us:
Download App:
  • android
  • ios