ಬಾಗಲಕೋಟೆ ಜಿಲ್ಲೆಯ ಹಿಪ್ಪರಗಿ ಬ್ಯಾರೇಜ್‌ನ 25 ವರ್ಷ ಹಳೆಯ ಕ್ರಸ್ಟ್‌ಗೇಟ್‌ಗಳ ಬದಲಿಗೆ ₹42 ಕೋಟಿ ವೆಚ್ಚದಲ್ಲಿ ಹೊಸ, ಆಧುನಿಕ ಸ್ಟೀಲ್ ಗೇಟ್‌ಗಳನ್ನು ಅಳವಡಿಸಲು ಕರ್ನಾಟಕ ನೀರಾವರಿ ನಿಗಮ ಟೆಂಡರ್ ಕರೆದಿದೆ. ಶಾಸಕ ಸಿದ್ದು ಸವದಿ ಅವರ ನಿರಂತರ ಒತ್ತಾಯದ ಫಲವಾಗಿ, ಬ್ಯಾರೇಜ್‌ನ ಸುರಕ್ಷತೆ ಮತ್ತು ರೈತರ ಹಿತ ಕಾಯುವ ಈ ಮಹತ್ವದ ಕಾಮಗಾರಿ ಶೀಘ್ರದಲ್ಲೇ ಆರಂಭವಾಗಲಿದೆ.

ರಬಕವಿ-ಬನಹಟ್ಟಿ: ಬಾಗಲಕೋಟೆ ಜಿಲ್ಲೆಯ ರೈತರ ಜೀವನಾಡಿಯಾಗಿರುವ 25 ವರ್ಷಗಳಿಂದ ಸತತವಾಗಿ ಯಾವ ಬದಲಾವಣೆಯಿಲ್ಲದೇ ಕಾರ್ಯನಿರ್ವಹಿಸುತ್ತಿರುವ ಹಿಪ್ಪರಗಿ ಬ್ಯಾರೇಜ್‌ನ ಹಳೆಯ ಕ್ರಸ್ಟ್‌ಗೇಟ್‌ಗಳ ಬದಲಿಗೆ ಹೊಸ ಆಧುನಿಕ ತಂತ್ರಜ್ಞಾನದ ಸ್ಟೀಲ್ ಕ್ರಸ್ಟ್‌ಗೇಟ್‌ಗಳನ್ನು ಅಳವಡಿಸುವ ಮಹತ್ವದ ಕಾಮಗಾರಿಗೆ ಕರ್ನಾಟಕ ನೀರಾವರಿ ನಿಗಮವು ₹ 42 ಕೋಟಿ.ಗಳ ವೆಚ್ಚದಲ್ಲಿ ಟೆಂಡರ್ ಆಹ್ವಾನಿಸಿದೆ. ಜನವರಿಯಲ್ಲಿ ಬ್ಯಾರೇಜ್‌ನ 22ನೇಕ್ರಸ್ ಗೇಟ್ ನೀರಿನ ಒತ್ತಡಕ್ಕೆ ಮುರಿದು ಅಪಾರ ನೀರು ಪೋಲಾಗಿತ್ತು. ಬಳಿಕ ಅಂದಾಜು 1.60 ಲಕ್ಷ ರೂ.ದಲ್ಲಿ ಹೊಸ ಗೇಟ್ ಅಳವಡಿಕೆ ಮಾಡಲಾಗಿತ್ತು. ಹೀಗಾಗಿ ಈಗ ಉಳಿದಿರುವ 21 ಹೊಸ ಗೇಟ್‌ಗಳ ಅಳವಡಿಕೆಗೆ ಟೆಂಡರ್ ಕರೆಯಲಾಗಿದೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಹಿಪ್ಪರಗಿ ಬ್ಯಾರೇಜ್‌ನ ಕ್ರೆಸ್ಟ್ಗೇಟ್‌ಗಳು ಸವಕಳಿಗೊಂಡಿರುವ ಹಿನ್ನೆಲೆಯಲ್ಲಿ ಅವುಗಳನ್ನು ತಕ್ಷಣ ನವೀಕರಿಸಬೇಕೆಂದು ತೇರದಾಳ ಶಾಸಕ ಸಿದ್ದು ಸವದಿ ವಿಧಾನಸಭೆಯಲ್ಲಿ ನಿರಂತರವಾಗಿ ಸರ್ಕಾರಕ್ಕೆ ಒತ್ತಾಯಿಸಿದ್ದರು. ಅವರ ಪತ್ರ ನೀಡಿದ ಬಳಿಕ ಸರ್ಕಾರ ಅಗತ್ಯ ಕ್ರಮ ಕೈಗೊಂಡಿರುವುದು ಗಮನಾರ್ಹವಾಗಿದೆ.

ಪತ್ರಿಕೆಯೊಂದಿಗೆ ಮಾತನಾಡಿದ ಶಾಸಕ ಸಿದ್ದು ಸವದಿ, 2001ರಲ್ಲಿ ಹಿಪ್ಪರಗಿ ಬ್ಯಾರೇಜ್‌ಗೆ ಕಬ್ಬಿಣದ ಕ್ರೆಸ್ಟ್ಗೇಟ್‌ಗಳನ್ನು ಅಳವಡಿಸಲಾಗಿತ್ತು. ಹೈದರಾಬಾದ್‌ನಿಂದ ಬಂದ ತಜ್ಞರ ಪ್ರಕಾರ ಅವುಗಳ ಬಾಳಿಕೆ 15 ವರ್ಷಗಳಷ್ಟೇ ಇದ್ದರೂ, ಹೆಚ್ಚುವರಿಯಾಗಿ ಸುಮಾರು 10 ವರ್ಷಗಳಿಗೂ ಹೆಚ್ಚು ಅವು ಕಾರ್ಯನಿರ್ವಹಿಸಿವೆ. ಆದರೆ, ಕಳೆದ ಜನವರಿಯಲ್ಲಿ 22ನೇ ಗೇಟ್‌ನಲ್ಲಿ ಸಂಭವಿಸಿದ ಅವಘಡ ಗೇಟ್‌ಗಳ ಸ್ಥಿತಿಗತಿಯನ್ನು ಗಂಭೀರವಾಗಿ ಪರಿಗಣಿಸುವ ಅಗತ್ಯವಿದೆ ಎಂಬ ಎಚ್ಚರಿಕೆಯನ್ನು ನೀಡಿತ್ತು ಎಂದರು.

ಈ ಹಿನ್ನೆಲೆಯಲ್ಲಿ ಎಲ್ಲ ಕ್ರೆಸ್ಟ್ಗೇಟ್‌ಗಳನ್ನು ಹೊಸದಾಗಿ ಅಳವಡಿಸಬೇಕೆಂದು ಸರ್ಕಾರವನ್ನು ಒತ್ತಾಯಿಸಿದ್ದೆವು. ಇದೀಗ ಕಾಮಗಾರಿಗೆ ಟೆಂಡರ್ ಕರೆಯಲಾಗಿರುವುದು ಸ್ವಾಗತಾರ್ಹ ಬೆಳವಣಿಗೆ. ಈ ಕ್ರಮಕ್ಕಾಗಿ ರಾಜ್ಯ ಸರ್ಕಾರವನ್ನು ಅಭಿನಂದಿಸುತ್ತೇನೆ ಎಂದು ಅವರು ತಿಳಿಸಿದರು.

ಈ ಬಾರಿ ಕಬ್ಬಿಣದ ಬದಲಿಗೆ ಉಕ್ಕಿನಿಂದ (ಸ್ಟೀಲ್) ಕ್ರೆಸ್ಟ್ಗೇಟ್‌ಗಳನ್ನು ನಿರ್ಮಿಸಲಾಗುತ್ತಿದ್ದು, ಅವುಗಳ ಬಾಳಿಕೆ ಸುಮಾರು 50 ವರ್ಷಗಳವರೆಗೆ ಇರಲಿದೆ ಎಂದು ಶಾಸಕರು ಮಾಹಿತಿ ನೀಡಿದರು. ಒಟ್ಟು 22 ಗೇಟ್‌ಗಳ ಪೈಕಿ 21 ಗೇಟ್‌ಗಳನ್ನು ನವೀಕರಿಸಲಾಗುತ್ತದೆ. ಪ್ರಸಕ್ತ ಮಳೆಗಾಲ ಮುಗಿದ ನಂತರ ಕಾಮಗಾರಿ ಆರಂಭವಾಗಲಿದ್ದು, ಮುಂದಿನ ಮಳೆಗಾಲದ ವೇಳೆಗೆ ಹೊಸ ಕ್ರೆಸ್ಟ್ಗೇಟ್‌ಗಳ ಮೂಲಕವೇ ಬ್ಯಾರೇಜ್‌ನಲ್ಲಿ ನೀರು ತಡೆಹಿಡಿಯುವ ವ್ಯವಸ್ಥೆ ಸಿದ್ಧವಾಗುವ ನಿರೀಕ್ಷೆಯಿದೆ ಎಂದು ಹೇಳಿದರು.

ತಜ್ಞರ ತಂಡದ ವರದಿಗೆ ಮನ್ನಣೆ:

ಕಳೆದ ಮೇ ತಿಂಗಳಲ್ಲಿ ಹೈದರಾಬಾದ್‌ನ ತಜ್ಞರ ವಿಶೇಷ ತಂಡ ಬ್ಯಾರೇಜ್‌ಗೆ ಭೇಟಿ ನೀಡಿ ಕ್ರೆಸ್ಟ್ಗೇಟ್‌ಗಳ ಸಮಗ್ರ ಪರಿಶೀಲನೆ ನಡೆಸಿತ್ತು. ಪರಿಶೀಲನೆಯಲ್ಲಿ ಬಹುತೇಕ ಎಲ್ಲ ಗೇಟ್‌ಗಳು ಸವಕಳಿಗೊಂಡಿರುವುದು ದೃಢಪಟ್ಟಿದ್ದು, ಅವುಗಳನ್ನು ಸಂಪೂರ್ಣವಾಗಿ ನವೀಕರಿಸಬೇಕೆಂದು ಸರ್ಕಾರಕ್ಕೆ ವರದಿ ಸಲ್ಲಿಸಲಾಗಿತ್ತು. ಅದರ ಆಧಾರದ ಮೇಲೆ ಸುಮಾರು ₹ 42 ಕೋಟಿಗಳ ಅಂದಾಜು ವೆಚ್ಚದಲ್ಲಿ ನವೀಕರಣ ಕಾಮಗಾರಿಗೆ ಅನುಮೋದನೆ ದೊರೆತಿದ್ದು, ಇದೀಗ ಟೆಂಡರ್ ಪ್ರಕ್ರಿಯೆ ಆರಂಭವಾಗಿದೆ. ಶಾಸಕ ಸವದಿ ನಿರಂತರ ಆಗ್ರಹದಿಂದ ನೂತನ ಗೇಟ್‌ಗಳು ಅಳವಡಿಕೆಯಾಗುತ್ತಿದ್ದು, ಶಾಸಕರನ್ನು ಧುರೀಣರಾದ ಸುರೇಶ ಅಕ್ಕಿವಾಟ, ಧರೆಪ್ಪ ಉಳ್ಳಾಗಡ್ಡಿ, ಸಂಜಯ ತೆಗ್ಗಿ, ಆನಂದ ಕಂಪು ಮೊದಲಾದವರು ಅಭಿನಂದಿಸಿದ್ದಾರೆ.

2001ರಲ್ಲಿ ಹಿಪ್ಪರಗಿ ಬ್ಯಾರೇಜ್‌ ಗೆ ಕ್ರಸ್ಟ್‌ ಗೇಟ್ ಅಳವಡಿಸಲಾಗಿತ್ತು. ತಜ್ಞರ ಪ್ರಕಾರ ಅವುಗಳ ಬಾಳಿಕೆ 15 ವರ್ಷ. ಆದರೆ ಹೆಚ್ಚುವರಿಯಾಗಿ 10 ವರ್ಷ ಕಾರ್ಯನಿರ್ವಹಿಸಿವೆ. ಹೊಸಗೇಟ್ ಅಳವಡಿಕೆಗೆ ಸರಕಾರದ ಮೇಲೆ ನಿರಂತರ ಒತ್ತಡ ಹೇರಲಾಗಿತ್ತು.ಹಿಪ್ಪರಗಿ ಬ್ಯಾರೇಜ್‌ನ ಸುರಕ್ಷತೆ ಮತ್ತು ರೈತರ ಹಿತದೃಷ್ಟಿಯಿಂದ ಸರ್ಕಾರ ಕೈಗೊಂಡಿರುವ ಈ ನಿರ್ಧಾರ ಶ್ಲಾಘನೀಯ. ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಹಾಗೂ ನೀರಾವರಿ ಸಚಿವ ರಾಮಲಿಂಗಾರೆಡ್ಡಿ ಅವರಿಗೆ ಹೃತ್ಪೂರ್ವಕ ಧನ್ಯವಾದಗಳನ್ನು ಸಲ್ಲಿಸುತ್ತೇನೆ.

-ಸಿದ್ದು ಸವದಿ ತೇರದಾಳ ಶಾಸಕ