- Home
- Karnataka Districts
- ಕೊಡಗಿನಲ್ಲಿ ಮಳೆ ಅಬ್ಬರ: ಕಾವೇರಿ ಅಬ್ಬರಕ್ಕೆ ಭಾಗಮಂಡಲ ಜಲಾವೃತ, ನಾಪೋಕ್ಲು ರಸ್ತೆ ಸಂಪರ್ಕ ಕಡಿತ
ಕೊಡಗಿನಲ್ಲಿ ಮಳೆ ಅಬ್ಬರ: ಕಾವೇರಿ ಅಬ್ಬರಕ್ಕೆ ಭಾಗಮಂಡಲ ಜಲಾವೃತ, ನಾಪೋಕ್ಲು ರಸ್ತೆ ಸಂಪರ್ಕ ಕಡಿತ
ಕರ್ನಾಟಕದ ಸ್ಕಾಟ್ಲೆಂಡ್ ಖ್ಯಾತೊಯ ಕೊಡಗು ಜಿಲ್ಲೆಯಲ್ಲಿ ಸುರಿಯುತ್ತಿರುವ ಧಾರಾಕಾರ ಮಳೆಯಿಂದಾಗಿ ಭಾಗಮಂಡಲದ ತ್ರಿವೇಣಿ ಸಂಗಮ ಜಲಾವೃತವಾಗಿದೆ. ಪ್ರವಾಹದ ನೀರು ಭಾಗಂಡೇಶ್ವರ ದೇವಾಲಯದ ಆವರಣಕ್ಕೆ ನುಗ್ಗಿದ್ದು, ಪ್ರಮುಖ ರಸ್ತೆಗಳು ಮುಳುಗಡೆಯಾಗಿವೆ. ಕಾವೇರಿ ನದಿ ಪಾತ್ರದಲ್ಲಿ ಪ್ರವಾಹದ ಆತಂಕ ಹೆಚ್ಚಾಗಿದೆ.

ಕೊಡಗು (ಆ.01): ಕರ್ನಾಟಕದ ಸ್ಕಾಟ್ಲೆಂಡ್ ಖ್ಯಾತಿಯ ಕೊಡಗು ಜಿಲ್ಲೆಯಲ್ಲಿ ಕಳೆದ ಕೆಲವು ದಿನಗಳಿಂದ ಸುರಿಯುತ್ತಿರುವ ಧಾರಾಕಾರ ಮಳೆ (Heavy Rain) ಇದೀಗ ಪ್ರವಾಹದ (Flood) ಆತಂಕವನ್ನು ಮತ್ತಷ್ಟು ಹೆಚ್ಚಿಸಿದೆ. ಬ್ರಹ್ಮಗಿರಿ (Brahmagiri) ಹಾಗೂ ತಲಕಾವೇರಿ (Talacauvery) ಬೆಟ್ಟ ಪ್ರದೇಶಗಳಲ್ಲಿ ಸುರಿಯುತ್ತಿರುವ ನಿರಂತರ ಮಳೆಯ ಪರಿಣಾಮವಾಗಿ ಭಾಗಮಂಡಲದ (Bhagamandala) ತ್ರಿವೇಣಿ ಸಂಗಮ (Triveni Sangama) ಸಂಪೂರ್ಣ ಜಲಾವೃತವಾಗಿದೆ.
ಕಾವೇರಿ (Cauvery), ಕನಿಕೆ (Kannike) ಮತ್ತು ಸುಜ್ಯೋತಿ (Sujyothi) ನದಿಗಳ ಸಂಗಮ ಸ್ಥಳವಾಗಿರುವ ತ್ರಿವೇಣಿ ಸಂಗಮದ ಸ್ನಾನಘಟ್ಟ (Bathing Ghat) ಸಂಪೂರ್ಣ ನೀರಿನಲ್ಲಿ ಮುಳುಗಿದ್ದು, ಅದರ ಸಮೀಪದಲ್ಲಿದ್ದ ಅಂಗಡಿ-ಮುಂಗಟ್ಟುಗಳಿಗೂ ಪ್ರವಾಹದ ನೀರು ನುಗ್ಗಿದೆ. ಇದರಿಂದ ಸ್ಥಳೀಯ ವ್ಯಾಪಾರಿಗಳು ಸಂಕಷ್ಟಕ್ಕೆ ಸಿಲುಕಿದ್ದಾರೆ. ಇದರ ಜೊತೆಗೆ, ಪ್ರಸಿದ್ಧ ಭಾಗಂಡೇಶ್ವರ ದೇವಾಲಯ (Bhagandeshwara Temple) ಆವರಣಕ್ಕೂ ಪ್ರವಾಹದ ನೀರು ನುಗ್ಗಲಾರಂಭಿಸಿದ್ದು, ಭಕ್ತರಲ್ಲಿ ಆತಂಕ ಮೂಡಿಸಿದೆ.
ರಸ್ತೆಗಳು ಜಲಾವೃತ, ಮೇಲ್ಸೇತುವೆ ಮೂಲಕ ಮಾತ್ರ ಸಂಚಾರ
ಭಾಗಮಂಡಲ–ನಾಪೋಕ್ಲು (Napoklu) ರಸ್ತೆಯ ಮೇಲೆ ಪ್ರವಾಹದ ನೀರು ಹರಿಯುತ್ತಿದ್ದು, ಭಾಗಮಂಡಲ–ಮಡಿಕೇರಿ (Madikeri) ರಸ್ತೆಯ ಕೆಳಭಾಗವೂ ಜಲಾವೃತವಾಗಿದೆ. ಸುರಕ್ಷತೆಯ ದೃಷ್ಟಿಯಿಂದ ಮೇಲ್ಸೇತುವೆ (Flyover) ಮೂಲಕ ಮಾತ್ರ ವಾಹನ ಸಂಚಾರಕ್ಕೆ ಅವಕಾಶ ಕಲ್ಪಿಸಲಾಗಿದೆ.
ಕೆಳಭಾಗದ ರಸ್ತೆಯಲ್ಲಿ ಯಾರೂ ಸಂಚರಿಸದಂತೆ ಪೊಲೀಸರು (Police) ಸೂಚನಾ ಫಲಕಗಳನ್ನು ಅಳವಡಿಸಿದ್ದು, ಸಾರ್ವಜನಿಕರು ಅನಗತ್ಯವಾಗಿ ಪ್ರವಾಹದ ನೀರಿಗೆ ಇಳಿಯದಂತೆ ಎಚ್ಚರಿಕೆ ನೀಡಿದ್ದಾರೆ.
ಕಾವೇರಿ ನದಿ ಪಾತ್ರದಲ್ಲಿ ಪ್ರವಾಹದ ಆತಂಕ
ಬ್ರಹ್ಮಗಿರಿ ಬೆಟ್ಟ ಪ್ರದೇಶದಲ್ಲಿ ಮಳೆ ಮುಂದುವರಿದಿರುವ ಕಾರಣ ಕಾವೇರಿ ನದಿಯ (Cauvery River) ನೀರಿನ ಮಟ್ಟ ಮತ್ತಷ್ಟು ಏರಿಕೆಯಾಗುವ ಸಾಧ್ಯತೆ ಇದೆ. ಇದರಿಂದ ನದಿ ಪಾತ್ರದ (River Basin) ಗ್ರಾಮಗಳ ನಿವಾಸಿಗಳಲ್ಲಿ ಪ್ರವಾಹದ ಭೀತಿ ಹೆಚ್ಚಾಗಿದೆ.
ಹವಾಮಾನ ಇಲಾಖೆ (IMD) ಈಗಾಗಲೇ ಕೊಡಗು ಸೇರಿದಂತೆ ಕರಾವಳಿ ಹಾಗೂ ಮಲೆನಾಡು ಭಾಗಗಳಲ್ಲಿ ಭಾರೀ ಮಳೆಯ ಮುನ್ಸೂಚನೆ ನೀಡಿರುವ ಹಿನ್ನೆಲೆಯಲ್ಲಿ, ಜಿಲ್ಲಾಡಳಿತ ಪರಿಸ್ಥಿತಿಯನ್ನು ನಿಕಟವಾಗಿ ಗಮನಿಸುತ್ತಿದೆ. ಮಳೆ ಮತ್ತಷ್ಟು ತೀವ್ರಗೊಂಡರೆ ತಗ್ಗು ಪ್ರದೇಶಗಳ ಜನರು ಸುರಕ್ಷಿತ ಸ್ಥಳಗಳಿಗೆ ತೆರಳುವಂತೆ ಅಧಿಕಾರಿಗಳು ಸೂಚಿಸುವ ಸಾಧ್ಯತೆ ಇದೆ. ಸಾರ್ವಜನಿಕರು ಅನಗತ್ಯ ಪ್ರಯಾಣವನ್ನು ತಪ್ಪಿಸಿ, ಜಿಲ್ಲಾಡಳಿತ ಮತ್ತು ಹವಾಮಾನ ಇಲಾಖೆಯ ಅಧಿಕೃತ ಸೂಚನೆಗಳನ್ನು ಪಾಲಿಸುವಂತೆ ಮನವಿ ಮಾಡಲಾಗಿದೆ.

