ಮುಸ್ಲಿಂ ಯುವತಿ ಜತೆ 'ಭಜರಂಗಿ ವಿವಾಹ': ಇದೆಂಥಾ ಜಿಹಾದ್?, ಮಂಗ್ಳೂರಲ್ಲಿ ಬಿಸಿ ಬಿಸಿ ಚರ್ಚೆ..!
ಭಜರಂಗದಳದ ಕಾರ್ಯಕರ್ತನೊಬ್ಬ ಮುಸ್ಲಿಂ ಯುವತಿಯನ್ನ ವರಿಸೋ ಮೂಲಕ ಮಂಗಳೂರಿನಲ್ಲಿ ಮತ್ತೊಂದು ಬಿಸಿಬಿಸಿ ಚರ್ಚೆ ಹುಟ್ಟುಹಾಕಿದೆ. ಲವ್ ಜಿಹಾದ್ ವಿರುದ್ದ ಧ್ವನಿಯೆತ್ತಿದ್ದ ಭಜರಂಗದಳದಲ್ಲೇ ಅಂತರ್ಧರ್ಮೀಯ ವಿವಾಹ ನಡೆದಿದ್ದು, ಮಂಗಳೂರಿನ ಸುರತ್ಕಲ್ ನಲ್ಲೊಂದು ಹಿಂದೂ-ಮುಸ್ಲಿಂ ಲವ್ ಸ್ಟೋರಿ ಭಾರೀ ಚರ್ಚೆಗೆ ಕಾರಣವಾಗಿದೆ.
ಭರತ್ ರಾಜ್, ಏಷ್ಯಾನೆಟ್ ಸುವರ್ಣ ನ್ಯೂಸ್, ಮಂಗಳೂರು
ಮಂಗಳೂರು(ಡಿ.08): ಲವ್ ಜಿಹಾದ್ ಮೂಲಕ ಸುದ್ದಿಯಾಗೋ ಕಡಲತಡಿ ಮಂಗಳೂರಿನಲ್ಲಿ ಮತ್ತೊಂದು ಅಂತರ್ಧರ್ಮೀಯ ವಿವಾಹ ಭಾರೀ ಚರ್ಚೆ ಹುಟ್ಟು ಹಾಕಿದೆ. ಆದರೆ ಈ ಬಾರಿ ಸ್ವತಃ ಭಜರಂಗದಳದ ಕಾರ್ಯಕರ್ತನೇ ಮುಸ್ಲಿಂ ಯುವತಿಯೊಬ್ಬಳನ್ನ ವರಿಸಿದ್ದು, ಕರಾವಳಿಯಲ್ಲಿ ರಿವರ್ಸ್ ಲವ್ ಜಿಹಾದ್ ಚರ್ಚೆ ಹುಟ್ಟು ಹಾಕಿದೆ. ಅಲ್ಲದೇ ಈ ಭಜರಂಗಿ ವಿವಾಹ ಯಾವ ಜಿಹಾದ್ ಅಂತ ಸಾಮಾಜಿಕ ತಾಣಗಳಲ್ಲಿ ವಿವಾದದ ಅಲೆಯನ್ನೇ ಎಬ್ಬಿಸಿದೆ.
ಲವ್ ಜಿಹಾದ್ ಅನ್ನೋದು ಕಡಲ ತಡಿ ಮಂಗಳೂರಿನಲ್ಲಿ ಹಲವು ವರ್ಷಗಳಿಂದ ಭಾರೀ ವಿವಾದ ಎಬ್ಬಿಸಿರೋ ವಿಚಾರ. ಹಿಂದೂ ಯುವತಿಯರನ್ನ ಮುಸ್ಲಿಂ ಯುವಕರು ಪ್ರೀತಿಯ ಬಲೆಗೆ ಬೀಳಿಸಿ ಜಿಹಾದ್ ನಡೆಸ್ತಿದಾರೆ ಅನ್ನೋದು ಹಿಂದೂ ಸಂಘಟನೆಗಳ ಆರೋಪ. ಆದರೆ ಇದೀಗ ಇದಕ್ಕೆ ತದ್ವಿರುದ್ಧವಾಗಿ ಭಜರಂಗದಳದ ಕಾರ್ಯಕರ್ತನೊಬ್ಬ ಮುಸ್ಲಿಂ ಯುವತಿಯನ್ನ ವರಿಸೋ ಮೂಲಕ ಮಂಗಳೂರಿನಲ್ಲಿ ಮತ್ತೊಂದು ಬಿಸಿಬಿಸಿ ಚರ್ಚೆ ಹುಟ್ಟುಹಾಕಿದೆ. ಲವ್ ಜಿಹಾದ್ ವಿರುದ್ದ ಧ್ವನಿಯೆತ್ತಿದ್ದ ಭಜರಂಗದಳದಲ್ಲೇ ಅಂತರ್ಧರ್ಮೀಯ ವಿವಾಹ ನಡೆದಿದ್ದು, ಮಂಗಳೂರಿನ ಸುರತ್ಕಲ್ ನಲ್ಲೊಂದು ಹಿಂದೂ-ಮುಸ್ಲಿಂ ಲವ್ ಸ್ಟೋರಿ ಭಾರೀ ಚರ್ಚೆಗೆ ಕಾರಣವಾಗಿದೆ.
ಅಯ್ಯಪ್ಪ ಮಾಲೆ ಧರಿಸಿ ವಂಚನೆ; ಆರೋಪಿಗಳನ್ನು ಹಿಡಿದು ಪೊಲೀಸರಿಗೆ ಒಪ್ಪಿಸಿದ ಸಾರ್ವಜನಿಕರು!
ಹಿಂದೂ ಸಂಘಟನೆಯಲ್ಲಿ ಗುರುತಿಸಿಕೊಂಡಿರೋ ಪ್ರಶಾಂತ್ ಭಂಡಾರಿ ಮುಸ್ಲಿಂ ಯುವತಿ ಜೊತೆ ವಿವಾಹವಾಗಿದ್ದಾನೆ. ನ.30ರಂದೇ ಸುರತ್ಕಲ್ ನ ಯುವತಿ ಜೊತೆ ತೆರಳಿದ್ದ ಪ್ರಶಾಂತ್ ಸದ್ಯ ಮದುವೆಯಾಗಿರೋದು ಗೊತ್ತಾಗಿದೆ. ಮೂರು ವರ್ಷಗಳಿಂದ ಪರಸ್ಪರ ಪ್ರೀತಿಸುತ್ತಿದ್ದು, ಇದೀಗ ಮದುವೆ ಆಗಿದ್ದಾರೆ. ಪ್ರಶಾಂತ್ ಕೊಲೆ ಯತ್ನ, ಹಲ್ಲೆ ಕೇಸ್ ಗಳಲ್ಲಿ ಆರೋಪಿಯಾಗಿದ್ದು, 2018ರಲ್ಲಿ ಕೋಮು ಹತ್ಯೆಯಾದ ಸುರತ್ಕಲ್ ನ ದೀಪಕ್ ರಾವ್ ಆಪ್ತನಾಗಿದ್ದ. ದೀಪಕ್ ರಾವ್ ಹತ್ಯೆ ಆರೋಪಿ ಪಿಂಕಿ ನವಾಜ್ ಎಂಬಾತನ ಹತ್ಯೆಗೂ ಯತ್ನಿಸಿದ್ದ ಪ್ರಶಾಂತ್ ಭಂಡಾರಿ ಸುರತ್ಕಲ್ ಠಾಣೆಯ ರೌಡಿಶೀಟರ್ ಕೂಡ ಆಗಿದ್ದಾನೆ. ಸದ್ಯ ಸುರತ್ಕಲ್ ಠಾಣೆಯಲ್ಲಿ ನಾಪತ್ತೆ ದೂರು ದಾಖಲಿಸಿರೋ ಯುವತಿಯ ಪೋಷಕರು ದೂರಿನಲ್ಲಿ ಹಲವು ವಿಚಾರ ಉಲ್ಲೇಖಿಸಿದ್ದಾರೆ. ಅಲ್ಲದೇ ತಮ್ಮ ಮಗಳು ಒಪ್ಪಿಗೆಯಿಂದಲೇ ಪ್ರಶಾಂತ್ ಜೊತೆ ತೆರಳಿದ್ದಾಗಿ ದೂರಿನಲ್ಲಿ ಉಲ್ಲೇಖಿಸಿದ್ದಾರೆ.
ಸುರತ್ಕಲ್ ಠಾಣೆಗೆ ಯುವತಿಯ ತಾಯಿ ಕೊಟ್ಟ ದೂರಿನಲ್ಲೇನಿದೆ?
'ನಾನು ಬೈಕಂಪಾಡಿಯಲ್ಲಿರುವ BPCL ಕಂಪನಿಯಲ್ಲಿ ಹೌಸ್ ಕೀಪಿಂಗ್ ಆಗಿ ಕೆಲಸ ಮಾಡಿಕೊಂಡಿರುತ್ತೇನೆ. ನ.30 ರಂದು ಮಗಳು ಪಕ್ಕದ ಮನೆಯಲ್ಲಿ ಇರುವುದನ್ನು ಗಮನಿಸಿ ಅಲ್ಲಿಗೆ ಹೋಗಿ ನನ್ನ ಮಗಳನ್ನು ಕರೆಯುವಾಗ ಸ್ಥಳದಲ್ಲಿ 3 ರಿಂದ 4 ಜನ ಹುಡುಗರು ಇದ್ದರು. ಅವರಲ್ಲಿ ಪಚ್ಚು ಆಲಿಯಾಸ್ ಪ್ರಶಾಂತ್ ನಮ್ಮ ಮನೆಗೆ ಬಂದು "ನಾನು ನಿಮ್ಮ ಮಗಳನ್ನು ಸುಮಾರು 3 ವರ್ಷಗಳಿಂದ ಪ್ರೀತಿ ಮಾಡುತ್ತಿದ್ದೇನೆ. ನಿಮ್ಮ ಅನುಮತಿಯನ್ನು ಪಡೆದು ನಿಮ್ಮ ಮಗಳನ್ನು ಮದುವೆಯಾಗಲು ನಿರ್ಧರಿಸಿದ್ದೇನೆ" ಎಂದು ಹೇಳಿದ್ದಾನೆ. ಅದಕ್ಕೆ ನಾನು ತನ್ನ ಗಂಡ ಹಾಗೂ ಸಂಬಂಧಿಕರ ಒಪ್ಪಿಗೆಯನ್ನೂ ಸಹ ಪಡೆಯಬೇಕು ಎಂದದ್ದಕ್ಕೆ ನನ್ನ ಮಗಳು, ಪಚ್ಚುವಿನಲ್ಲಿ "ನೀನು ನನ್ನನ್ನು ಕರೆದುಕೊಂಡು ಹೋಗದಿದ್ದರೆ ನನ್ನ ತಾಯಿ ನನ್ನನ್ನು ಊರಿಗೆ ಕಳುಹಿಸಿಕೊಡುತ್ತಾರೆ ನಾನು ನಿಮ್ಮ ಜೊತೆಯಲ್ಲೇ ಬರುತ್ತೇನೆ" ಎಂದಾಗ ಹುಡುಗ ನನ್ನ ಮಗಳನ್ನು ಎದುರಿನಲ್ಲಿಯೇ ಕರೆದುಕೊಂಡು ಹೋಗಿದ್ದಾನೆ. ಇದಕ್ಕೆ ನನ್ನ ಮಗಳ ಒಪ್ಪಿಗೆಯೂ ಸಹ ಇರುತ್ತದೆ. ಆದರೆ ನಾಳೆ ಬರುತ್ತೇವೆ ಎಂದು ತಿಳಿಸಿದವರು ಈವರೆಗೂ ಮನೆಗೆ ಬಂದಿರುವುದಿಲ್ಲ' ಅಂತ ದೂರಿನಲ್ಲಿ ಉಲ್ಲೇಖಿಸಿದ್ದಾರೆ.
ಯುವತಿ ಅಕ್ಷತಾ ಆಗಿದ್ದೇಗೆ?
ಇನ್ನು ಸುರತ್ಕಲ್ ನ ಯುವತಿ ಅಕ್ಷತಾ ಆಗಿದ್ದಾಳೆ. ಉತ್ತರ ಕರ್ನಾಟಕ ಮೂಲದ ಹುಡುಗಿಗೆ ಮಂಗಳೂರು ಹುಡುಗನ ಜೊತೆ ಲವ್ ಆಗಿದ್ದು, ಕಳೆದ ಮೂರು ವರ್ಷಗಳಿಂದ ಪರಸ್ಪರ ಯುವತಿ ಮತ್ತು ಪ್ರಶಾಂತ್ ಪ್ರೀತಿಸ್ತಿದ್ದರಂತೆ. ಸುಮಾರು 5 ವರ್ಷಗಳ ಹಿಂದಷ್ಟೇ ಯುವತಿಯ ಕುಟುಂಬ ಸುರತ್ಕಲ್ ಗೆ ಬಂದಿದ್ದು, ಸುರತ್ಕಲ್ ನ ಕಂಪೆನಿಯೊಂದರಲ್ಲಿ ಆಕೆಯ ತಾಯಿ ಹೌಸ್ ಕೀಪಿಂಗ್ ಕೆಲಸ ಮಾಡ್ತಿದಾರೆ. ಮನೆ ಸಮೀಪದ ಪ್ರಶಾಂತ್ ಭಂಡಾರಿ ಜೊತೆ ಮೂರು ವರ್ಷಗಳ ಪ್ರೇಮವಿದ್ದು, ವಿವಾಹವಾದ ಬೆನ್ನಲ್ಲೇ ಯುವತಿ ಅಕ್ಷತಾ ಆಗಿ ಬದಲಾಗಿದ್ದಾಳೆ. ಆದರೆ ಭಜರಂಗದಳದ ಹುಡುಗ ಮುಸ್ಲಿಂ ಯುವತಿ ವರಿಸಿದ್ರೆ ಯಾವ ಜಿಹಾದ್? ಅಂತ ಕರಾವಳಿಯಲ್ಲಿ ಸೋಶಿಯಲ್ ಮೀಡಿಯಾಗಳಲ್ಲಿ ಭರ್ಜರಿ ಚರ್ಚೆ ಆರಂಭವಾಗಿದೆ.
‘ಕಾಂಗ್ರೆಸ್ ಈಸ್ ರಿಯಲ್ ಕಮ್ಯುನಲ್ ಪಾರ್ಟಿ’: ಮಾಜಿ ಸಚಿವ ಸಿ.ಟಿ.ರವಿ ವ್ಯಂಗ್ಯ
ಅಕ್ಷತಾ-ಪ್ರಶಾಂತ್ ಮದುವೆ ಫೋಟೋ ಹಾಕಿ ಹಿಂದೂ ನಾಯಕರು ಶುಭ ಕೋರಿದ್ದಾರೆ. ಅಕ್ಷತಾ ಅಂತ ವಿಎಚ್ ಪಿ ಮುಖಂಡ ಶರಣ್ ಪಂಪ್ ವೆಲ್ ಪೋಸ್ಟ್ ಮಾಡಿದ್ದು, "ನೈಜವಾಗಿ ಪ್ರೀತಿಸಿ ಹಿಂದೂ ಸಂಪ್ರದಾಯದಂತೆ ಮದುವೆಯಾದ ಜೋಡಿ' ಅಂತ ಪೋಸ್ಟ್ ಹಾಕಿದ್ದಾರೆ. ಅಲ್ಲದೇ ಮಂಗಳೂರಿನ ಪ್ರಶಾಂತ್ ಮತ್ತು ಅಕ್ಷತಾ, ನಿಮ್ಮ ವೈವಾಹಿಕ ಜೀವನಕ್ಕೆ ಶುಭಾಶಯಗಳು' ಅಂತ ಪೋಸ್ಟ್ ಮಾಡಿದ್ದಾರೆ. ಪೋಸ್ಟ್ ಬೆನ್ನಲ್ಲೇ ಇದೆಂಥಾ ಲವ್ ಕೇಸರಿಯಾ ಅಂತ ಬಿಸಿ ಬಿಸಿ ಚರ್ಚೆ ಶುರುವಾಗಿದೆ. 'ನಾವು ಮಾಡಿದರೆ ಲವ್ ಜಿಹಾದ್, ನೀವು ಮಾಡಿದರೆ ಲವ್ ಕೇಸರಿ ಅಲ್ವಾ?' ಅಂತ ಪ್ರಶ್ನೆ ಮಾಡಲಾಗಿದ್ದು, ಹಿಂದೂ ನಾಯಕರ ಪೋಸ್ಟ್ ಗೆ ಸಾಮಾಜಿಕ ತಾಣಗಳಲ್ಲಿ ಭಾರೀ ಚರ್ಚೆಯಾಗ್ತಿದೆ. ಆದರೆ ಈ ಬಗ್ಗೆ ವಿಎಚ್ ಪಿ ಮುಖಂಡ ಶರಣ್ ತಿರುಗೇಟು ನೀಡಿದ್ದಾರೆ.
ಒಟ್ಟಾರೆ ಚರ್ಚೆಗಳೇನೇ ಇದ್ದರೂ ಇಬ್ಬರು ವಯಸ್ಸಿಗೆ ಬಂದವರಾದ ಕಾರಣ ಪೊಲೀಸರು ಯುವತಿ ಹೇಳಿಕೆ ಪಡೆದು ಬಿಡಲು ನಿರ್ಧರಿಸಿದ್ದಾರೆ. ಒಂದು ವೇಳೆ ಯುವತಿ ಬೇರೆ ಹೇಳಿಕೆ ಕೊಟ್ಟರಷ್ಟೇ ಪ್ರಕರಣ ಮತ್ತೊಂದು ತಿರುವು ಪಡೆಯಬಹುದು.