Asianet Suvarna News Asianet Suvarna News

‘ಕಾಂಗ್ರೆಸ್‌ ಈಸ್‌ ರಿಯಲ್‌ ಕಮ್ಯುನಲ್‌ ಪಾರ್ಟಿ’: ಮಾಜಿ ಸಚಿವ ಸಿ.ಟಿ.ರವಿ ವ್ಯಂಗ್ಯ

ದೇಶದ ಸಂಪತ್ತು ಅಲ್ಪಸಂಖ್ಯಾತರಿಗೆ ಸೇರಿದ್ದು ಎನ್ನುವ ಮೂಲಕ ಸಿದ್ದರಾಮಯ್ಯ ಅವರು ಓಲೈಕೆ ರಾಜಕಾರಣ ಮಾಡುತ್ತಿದ್ದಾರೆ. ಇದು ಅಪಾಯಕಾರಿ ಹೇಳಿಕೆಯಾಗಿದ್ದು, ಕಾಂಗ್ರೆಸ್‌ನ ಕೋಮುವಾದ ನೀತಿಗೆ ನಿದರ್ಶನವಾಗಿದೆ. 

Ex Minister CT Ravi Slams On Congress Govt At Mangaluru gvd
Author
First Published Dec 7, 2023, 1:00 AM IST

ಮಂಗಳೂರು (ಡಿ.07): ದೇಶದ ಸಂಪತ್ತು ಅಲ್ಪಸಂಖ್ಯಾತರಿಗೆ ಸೇರಿದ್ದು ಎನ್ನುವ ಮೂಲಕ ಸಿದ್ದರಾಮಯ್ಯ ಅವರು ಓಲೈಕೆ ರಾಜಕಾರಣ ಮಾಡುತ್ತಿದ್ದಾರೆ. ಇದು ಅಪಾಯಕಾರಿ ಹೇಳಿಕೆಯಾಗಿದ್ದು, ಕಾಂಗ್ರೆಸ್‌ನ ಕೋಮುವಾದ ನೀತಿಗೆ ನಿದರ್ಶನವಾಗಿದೆ. ಕಾಂಗ್ರೆಸ್‌ನ ಇಂತಹ ಮಾನಸಿಕತೆಯಿಂದಲೇ ದೇಶ ವಿಭಜನೆಗೆ ಕಾರಣವಾಗಿದೆ. ಹಾಗಾಗಿ ‘ಕಾಂಗ್ರೆಸ್‌ ಈಸ್‌ ರಿಯಲ್‌ ಕಮ್ಯುನಲ್‌ ಪಾರ್ಟಿ’ ಎಂದು ಬಿಜೆಪಿ ಮುಖಂಡ, ಮಾಜಿ ಸಚಿವ ಸಿ.ಟಿ.ರವಿ ವ್ಯಂಗ್ಯವಾಡಿದ್ದಾರೆ.

ಮಂಗಳೂರಿನಲ್ಲಿ ಬುಧವಾರ ಸುದ್ದಿಗಾರರಲ್ಲಿ ಮಾತನಾಡಿ, ಕಾಂಗ್ರೆಸಿಗರು ವೋಟ್ ಬ್ಯಾಂಕ್‌ಗಾಗಿ ಇಂತಹ ಅಪಾಯಕಾರಿ ಹೇಳಿಕೆ ನೀಡುತ್ತಿದ್ದಾರೆ. ಈ ದೇಶದ ಸಂಪತ್ತು ಭಾರತೀಯರಿಗೆ ಸೇರಿದ್ದು, ಭಾರತೀಯತೆಯನ್ನು ಒಪ್ಪಿದವರಿಗೆ ಸೇರಿದ್ದು. ಭಾರತದಲ್ಲೇ ಇದ್ದು ಭಾರತ ದೇಶಕ್ಕೆ ದ್ರೋಹ ಬಗೆಯುವವರಿಗೆ ಅಲ್ಲ. ದೇಶದ ಸಂಪತ್ತಿನ ಮೊದಲ ಹಂಚಿಕೆ ಬಡವರಿಗೆ ಆಗಬೇಕು, ಇದು ನಮ್ಮ ನೀತಿ. ಈ ಓಲೈಕೆಯ ರಾಜನೀತಿಯ ಪರಿಣಾಮ ಕೋಟ್ಯಂತರ ಜನತೆ ನಿರ್ವಸಿತರಾಗಲು ಕಾರಣವಾಗಿದೆ ಎಂದರು.

ಮುಸ್ಲಿಮರೂ ಸೇರಿ ಎಲ್ಲರಿಗೂ ರಕ್ಷಣೆ ಕೊಡ್ತೇವೆ ಅನ್ನೋದು ತಪ್ಪಾ: ಸಿಎಂ ಸಿದ್ದರಾಮಯ್ಯ

ಗಂಭೀರ ತನಿಖೆಯಾಗಲಿ: ‘ಮುಖ್ಯಮಂತ್ರಿ ಭಾಗವಹಿಸಿದ್ದ ಹುಬ್ಬಳ್ಳಿಯ ಸಭೆಯಲ್ಲಿ ಐಸಿಸ್ ನಂಟಿದ್ದ ವ್ಯಕ್ತಿ ವೇದಿಕೆಯಲ್ಲಿ ಇದ್ದ’ ಎಂಬ ಬಿಜೆಪಿ ಶಾಸಕ ಬಸನಗೌಡ ಯತ್ನಾಳ್ ಆರೋಪದ ಬಗ್ಗೆ ಪ್ರತಿಕ್ರಿಯಿಸಿದ ಸಿ.ಟಿ.ರವಿ, ಯತ್ನಾಳ್ ಅವರು ಸುಮ್ಮನೆ ಆರೋಪ ಮಾಡಿದ್ದಾರೆ ಎಂದು ಅನಿಸುವುದಿಲ್ಲ. ಈ ವಿಷಯದ ಬಗ್ಗೆ ಸಿಬಿಐ ಅಥವಾ ಎನ್‌ಐಎ ತನಿಖೆ ನಡೆಸುವ ಅವಶ್ಯಕತೆ ಇದೆ. ಆ ಕಾರ್ಯಕ್ರಮದಲ್ಲಿ ಯಾರ್ಯಾರು ಇದ್ದರು?, ಅವರ ಹಿನ್ನೆಲೆ ಏನು ಎನ್ನುವುದರ ಬಗ್ಗೆ ಗಂಭೀರ ತನಿಖೆಯಾಗಬೇಕು ಎಂದರು.

ಮಾಜಿ ಸಚಿವ ಸೋಮಣ್ಣ ಅಸಮಾಧಾನ ವಿಚಾರಕ್ಕೆ ಸಂಬಂಧಿಸಿ ಮಾತನಾಡಿದ ಸಿ.ಟಿ. ರವಿ, ಸಿದ್ಧಾಂಗಂಗಾ ಮಠದಲ್ಲಿ ಬುಧವಾರ ಗುರುಭವನದ ಉದ್ಘಾಟನಾ ಕಾರ್ಯಕ್ರಮಕ್ಕೆ ಬಿಜೆಪಿ ಹಾಗೂ ಕಾಂಗ್ರೆಸ್‌ನವರನ್ನು ಆಹ್ವಾನಿಸಲಾಗಿದೆ. ಕೇವಲ ಕಾಂಗ್ರೆಸ್‌ನವರನ್ನೇ ಕರೆದಿದ್ದಾರೆ ಎನ್ನುವುದು ತಪ್ಪು ಮಾಹಿತಿ. ನನಗೂ ಕಾರ್ಯಕ್ರಮದ ಆಮಂತ್ರಣ ಸಿಕ್ಕಿದೆ. ಜಿಲ್ಲಾ ಉಸ್ತುವಾರಿ ಸಚಿವ ಪರಮೇಶ್ವರ್, ಅದೇ ಜಿಲ್ಲೆಯವರಾದ ಸಚಿವ ರಾಜಣ್ಣ ಅವರನ್ನು ಕರೆದಿದ್ದಾರೆ ಎಂದರು.

ಸೋಮಣ್ಣ ಅವರು ಬಿಜೆಪಿ ತ್ಯಜಿಸುತ್ತಾರೆ ಎನ್ನುವುದು ತಪ್ಪು ಮಾಹಿತಿ. ಮೊನ್ನೆ ಅಸೆಂಬ್ಲಿ ಚುನಾವಣೆಯಲ್ಲಿ ಪಕ್ಷ ಹೇಳಿದ್ದಕ್ಕೆ ಸೋಮಣ್ಣ ಎರಡು ಕಡೆ ಸ್ಪರ್ಧೆ ಮಾಡಿದ್ದಾರೆ. ಅವರು ಬಿಜೆಪಿ ಬಿಡುತ್ತಾರೆ ಎನ್ನುವುದು ಉಹಾಪೋಹ. ಅವರು ದೆಹಲಿಗೆ ಯಾವಾಗ ಹೋಗುತ್ತಾರೆ ಎನ್ನುವ ಬಗ್ಗೆ ನನಗೆ ಮಾಹಿತಿ ಇಲ್ಲ ಎಂದರು. ಬೇರೆ ಪಕ್ಷದಿಂದ ಬಿಜೆಪಿಗೆ ಬರುವವರು ಕೇವಲ ರಾಜಕೀಯ ಕಾರಣಕ್ಕೆ ಬರುವುದಿಲ್ಲ. ಬಿಜೆಪಿಯ ವಿಚಾರಧಾರೆ ಒಪ್ಪಿಕೊಂಡು ಬರುತ್ತಾರೆ. ಪಂಚರಾಜ್ಯ ಚುನಾವಣೆಯಲ್ಲಿ ಪಕ್ಷ ಅಭೂತಪೂರ್ವ ಗೆಲವು ಸಾಧಿಸಿದೆ. 

ಸಿದ್ದರಾಮಯ್ಯ ಸರ್ಕಾರದಿಂದ ರೈತರಿಗೆ ಅನ್ಯಾಯ ಆಗುವುದಿಲ್ಲ: ಸಚಿವ ಮಹದೇವಪ್ಪ

ಮುಂದಿನ ಲೋಕಸಭಾ ಚುನಾವಣೆಯಲ್ಲಿ ನಾವು 28 ಕ್ಷೇತ್ರವನ್ನು ಗೆಲ್ಲುತ್ತೇವೆ. ಲೋಕಸಭಾ ಚುನಾವಣೆ ನಂತರ ಕಾಂಗ್ರೆಸ್ ಸರ್ಕಾರ ಇರುತ್ತದೆ ಎನ್ನುವ ವಿಶ್ವಾಸ ಕಾಂಗ್ರೆಸ್‌ನವರಿಗೆ ಇಲ್ಲ. ಕಾಂಗ್ರೆಸ್‌ನಲ್ಲಿ ಹಲವು ನಾಯಕರು ಈಗಾಗಲೇ ಬಂಡೆದ್ದಿದ್ದಾರೆ. ಬಸವರಾಜ ರಾಯರೆಡ್ಡಿ, ಬಿ. ಆರ್. ಪಾಟೀಲ್ ಬಂಡಾಯ ಎದ್ದಿದ್ದಾರೆ. ಪತ್ರ ಚಳವಳಿ ಮಾಡುತ್ತಿದ್ದಾರೆ. ಅದನ್ನು ನಾವು ಹೇಳಿಕೊಟ್ಟಿದ್ದು ಅಲ್ಲ. ಕಾಂಗ್ರೆಸ್‌ನವರೇ ಹೇಳುತ್ತಿದ್ದಾರೆ, ‘ಈ ಹಾಳಾದ ಸರ್ಕಾರ ಯಾಕೆ ಬಂತೋ ಏನೋ’ ಎಂದು. ಒಂದು ರುಪಾಯಿ ಕೆಲಸ ಆಗುತ್ತಿಲ್ಲ ಎಂದು ಕಾಂಗ್ರೆಸ್‌ನವರೇ ಬೈಯುತ್ತಿದ್ದಾರೆ. ಇದು ನನ್ನ ಮಾತಲ್ಲ, ಕಾಂಗ್ರೆಸ್ಸಿಗರ ಮಾತು ಎಂದು ಸಿ.ಟಿ.ರವಿ ಹೇಳಿದರು.

Follow Us:
Download App:
  • android
  • ios