Ballari: ಕುಡಿಯುವ ನೀರಿಗಾಗಿ ಹೆದ್ದಾರಿ ತಡೆದು ಜನರ ಆಕ್ರೋಶ

ಸರಿಯಾಗಿ ನೀರು ಬಾರದ ಹಿನ್ನೆಲೆ ಬಿಸಿಲ ಹಳ್ಳಿಯ ಜನರು ಅಂತರರಾಜ್ಯ ಹೆದ್ದಾರಿ ತಡೆದು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಎರಡು ಗಂಟೆಗೂ ಹೆಚ್ಚು ಸಮಯ ರಸ್ತೆ ತಡೆ ನಡೆಸಿದ್ದರಿಂದ ವಾಹನ ಸವಾರರು ಪರದಾಡಿದರು.

highway barrier from ballari villagers for drinking water gvd

ವರದಿ: ನರಸಿಂಹ ಮೂರ್ತಿ ಕುಲಕರ್ಣಿ, ಬಳ್ಳಾರಿ 

ಬಳ್ಳಾರಿ (ಏ.01): ದೀಪದ ಕೆಳಗೆ ಕತ್ತಲು ಅನ್ನೋ‌ ಮಾತು ಬಳ್ಳಾರಿ (Ballari) ಜಿಲ್ಲೆಯ ಜನರಿಗೆ ಅಕ್ಷರಶಃ ಅನ್ವಯವಾಗುತ್ತಿದೆ. ಯಾಕಂದರೆ ರಾಜ್ಯದ ಅತಿದೊಡ್ಡ ಎರಡನೇ ತುಂಗಭದ್ರಾ ಜಲಾಶಯ (Tungabhadra Dam) ಇದ್ದರೂ, ಇಲ್ಲಿ ಬೇಸಿಗೆ ಕಾಲ (Summer) ಬಂತು ಅಂದರೆ ಜನರು ಬೀದಿಗೆ ಬರೋದು ಸಾಮಾನ್ಯವಾಗಿದೆ. ಕಳೆದೊಂದು ತಿಂಗಳಿಂದ ಸರಿಯಾಗಿ ನೀರು (Drinking Water) ಬಾರದ ಹಿನ್ನೆಲೆ ಬಿಸಿಲ ಹಳ್ಳಿಯ ಜನರು ಅಂತರರಾಜ್ಯ ಹೆದ್ದಾರಿ ತಡೆದು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಎರಡು ಗಂಟೆಗೂ ಹೆಚ್ಚು ಸಮಯ ರಸ್ತೆ ತಡೆ ನಡೆಸಿದ್ದರಿಂದ ವಾಹನ ಸವಾರರು ಪರದಾಡಿದರು.

ನೀರಿಗಾಗಿ ಪ್ರತಿವರ್ಷ ಪರದಾಟ: ಬಳ್ಳಾರಿ ಮಹಾನಗರ ಪಾಲಿಕೆ ಹದಿನೆಂಟನೆಯ ವಾರ್ಡ್ ವ್ಯಾಪ್ತಿಯಲ್ಲಿಇರುವ ಬಿಸಿಲಹಳ್ಳಿ ನಗರದ ಹೊರವಲಯದಲ್ಲಿದೆ. ನಗರ ಪ್ರದೇಶಕ್ಕೆ ನೀರು ಸರಬರಾಜು ಮಾಡುವ ಪಾಲಿಕೆ ಇಲ್ಲಿಗೆ ಸರಿಯಾಗಿ ನೀರು ಬಿಡೋದಿಲ್ಲ. ಈ ಬಗ್ಗೆ ಇಲ್ಲಿಯ ಜನರು ಅದೆಷ್ಟೋ ಬಾರಿ ಮಹಾನಗರ ಪಾಲಿಕೆ ಅಧಿಕಾರಿಗಳಿಗೆ ದೂರು ನೀಡಿದರೂ ಯಾವುದೇ ಪ್ರಯೋಜನವಾಗಿಲ್ಲ ಎನ್ನುತ್ತಾರೆ ಸ್ಥಳೀಯರು. 

ಸಾಕಷ್ಟು ನೀರಿದೆ ಆದರೆ ವ್ಯವಸ್ಥೆ ಸರಿಯಲ್ಲ: ಈ ಹಿಂದೆ ಬಳ್ಳಾರಿ ವ್ಯಾಪ್ತಿಯಲ್ಲಿ ಇದೀಗ ವಿಜಯನಗರ ಜಿಲ್ಲೆಯ ವ್ಯಾಪ್ತಿಯಲ್ಲಿರೋ  100 ಟಿಎಮ್‌ಸಿ ಸಾಮರ್ಥ್ಯದ ತುಂಗಭದ್ರಾ ಜಲಾಶಯದಿಂದ ಬಳ್ಳಾರಿಯ ಅಲ್ಲಿಪುರ ಮತ್ತು ಮೋಕ ಕೆರೆಗಳಿಗೆ ನೀರು ತುಂಬಿಸಿ ಅದನ್ನು ಶುದ್ಧೀಕರಿಸಿ ನಗರದ ಜನರಿಗೆ ನೀರನ್ನು ಬಿಡಲಾಗುತ್ತದೆ. ಆದರೆ ಕಳೆದ ಕೆಲ ವರ್ಷಗಳ ಹಿಂದೆ ಸರಿಯಾಗಿ ಡ್ಯಾಂ ತುಂಬದೇ ಇರುವ ಹಿನ್ನೆಲೆ ವಾರ ಅಥವಾ ಹದಿನೈದು ದಿನಕ್ಕೆ ನೀರನ್ನು ಬಿಡೋ ವ್ಯವಸ್ಥೆಯನ್ನು ಪಾಲಿಕೆ ಮಾಡಿಕೊಂಡಿತ್ತು. 

ಪಂಚನದಿಗಳ ಬೀಡು ವಿಜಯಪುರದಲ್ಲಿ ಹನಿ ನೀರಿಗೂ ಹಾಹಾಕಾರ: ಬೀದಿಗಿಳಿದ ನಾರಿಯರು..!

ಅದು‌ ನೀರು ಹೆಚ್ಚಾಗಿ ಇಲ್ಲದೇ, ಕೊರತೆ ಇದ್ದರೆ ಯಾರು ಏನು ಮಾಡೋಕೆ ಆಗಲ್ಲ ಅದನ್ನು ಒಪ್ಪಿಕೊಳ್ಳೊಣ. ಆದರೆ ಕಳೆದ ಎರಡು ವರ್ಷದಿಂದ ಜಲಾಶಯ ಸಮರ್ಪಕವಾಗಿ ತುಂಬಿದೆ ಹೆಚ್ಚುವರಿಯಾಗಿ ನೂರಾರು ಟಿಎಂಸಿ ನೀರು ನದಿಗೆ ಹರಿದು ಹೋಗಿದೆ. ಮಳೆಗಾಲದಲ್ಲಿ ಮೋಕಾ ಮತ್ತು ಅಲ್ಲಿಪುರ ಎರಡು ಬೃಹತ್ ಕೆರೆ ತುಂಬಿಸಲಾಗಿದೆ. ಆದರೂ ಕೆಲ ಏರಿಯಾಗಳಲ್ಲಿ ನೀರು ಬರೋದಿಲ್ಲ. ಹೀಗಾದ್ರೇ ಹೇಗೆ ಜನರು ಜೀವನ ಮಾಡೋದು ಎಂದು ಪ್ರಶ್ನೆ ಮಾಡ್ತಿದ್ದಾರೆ.

ಒಂದು ಕಡೆ ನೀರು ಪೋಲು‌ ಮತ್ತೊಂದು ಕಡೆ ನೀರಿಲ್ಲ: ಹೌದು! ಹೀಗೆ ಕಳೆದೊಂದು ತಿಂಗಳಿಂದ ಸರಿಯಾಗಿ ನೀರು ಬರುತ್ತಿಲ್ಲವೆಂದು ಬಿಂದಿಗೆ ಹಿಡಿದು ರಸ್ತೆ ತಡೆ ಮಾಡುತ್ತಿದ್ದರೆ, ಮತ್ತೊಂದು ಕಡೆ ರಾಮಯ್ಯ ಕಾಲೋನಿಯಲ್ಲಿ ನೀರು ಬಿಡೋ ಬೃಹತ್ ಟ್ಯಾಂಕ್ ಓವರ್ ಪ್ಲೋ ಆಗಿ ಸತತ ಎರಡು ಗಂಟೆ ನೀರು ಪೋಲಾಗಿ ಹೋಗಿದೆ. ಹೀಗಾಗಿ ಇದೆಲ್ಲವೂ ನೋಡುತ್ತಿದ್ದರೇ ಪಾಲಿಕೆಯ ಅಧಿಕಾರಿಗಳು ಮತ್ತು ವಾಟರ್ ಮ್ಯಾನ್‌ಗಳ ನಿರ್ಲಕ್ಷ್ಯ ಎದ್ದು ಕಾಣುತ್ತಿದೆ. ಹೀಗಾಗಿ ಕೂಡಲೇ ಈ ಬಗ್ಗೆ ಕ್ರಮ ತೆಗೆದುಕೊಳ್ಳುವ ಮೂಲಕ ಜನರಿಗೆ ಶುದ್ಧ ಕುಡಿಯುವ ನೀರು ನೀಡಬೇಕಿದೆ.

ಬಳ್ಳಾರಿ ನೀರಿನ ಬವಣೆ ನೀಗಿಸಲು ಡ್ಯಾಂ ನಿರ್ಮಾಣ: ಜಿಲ್ಲೆಯಲ್ಲಿ ನೀರಿನ ಬವಣೆ ನೀಗಿಸಲು ಕನಕಗಿರಿ ತಾಲೂಕಿನ ನವಲಿ ಬಳಿ 35 ಟಿಎಂಸಿ ಅಡಿ ಸಾಮರ್ಥ್ಯದ ಸಮಾನಾಂತರ ಜಲಾಶಯ ನಿರ್ಮಿಸಲಾಗುವುದು ಎಂದು ಜಿಲ್ಲಾ ಉಸ್ತುವಾರಿ ಸಚಿವ ಬಿ. ಶ್ರೀರಾಮುಲು ಹೇಳಿದರು. ತಾಲೂಕಿನ ಯರ್ರಂಗಳಿ ಗ್ರಾಮದ ಹುಲಿಗೆಮ್ಮ ಮತ್ತು ಸುಂಕ್ಲಮ್ಮ ದೇವಿ ದೇವಸ್ಥಾನಕ್ಕೆ ಗುರುವಾರ ಭೇಟಿ ನೀಡಿದ ನಂತರ ಖಾಸಗಿ ಕಾರ್ಯಕ್ರಮದಲ್ಲಿ ಮಾತನಾಡಿದರು. ಸಮಾನಾಂತರ ಜಲಾಶಯ ನಿರ್ಮಾಣದಿಂದ ತುಂಗಭದ್ರಾ ಜಲಾಶಯದ ಅಚ್ಚುಕಟ್ಟು ಪ್ರದೇಶದ ಕೊನೆಯಭಾಗದ ರೈತರಿಗೆ ಸಮರ್ಪಕ ನೀರು ದೊರೆಯುತ್ತದೆ. 

ಮುಂದಿನ ವರ್ಷಾಂತ್ಯಕ್ಕೆ 110 ಹಳ್ಳಿಗಳಿಗೆ ಕುಡಿವ ನೀರು: ಸಿಎಂ ಬೊಮ್ಮಾಯಿ

ಮಳೆಯಾಶ್ರಿತ ಪ್ರದೇಶಗಳನ್ನು ನೀರಾವರಿ ವ್ಯಾಪ್ತಿಗೆ ಒಳಪಡಿಸಲು ಅನುಕೂಲವಾಗುತ್ತದೆ ಎಂದರು. ಜಿಲ್ಲೆಯ ಕೆಲವು ಗ್ರಾಮಗಳಲ್ಲಿ ಜಲಜೀವನ್‌ ಮಿಷನ್‌ ಯೋಜನೆಯಲ್ಲಿ ನಳಗಳನ್ನು ಅಳವಡಿಸಿ ನೀರು ಸರಬರಾಜು ಮಾಡಲು ಕ್ರಮಕೈಗೊಡಿದ್ದಾರೆ. ಕೆಲವು ಗ್ರಾಮಗಳಲ್ಲಿ ಪ್ರಗತಿಯಲ್ಲಿದ್ದು, ಶೀಘ್ರವಾಗಿ ಪೂರ್ಣಗೊಳಿಸಿ ಬೇಸಿಗೆಯಲ್ಲಿ ಕುಡಿಯುವ ನೀರಿನ ಸಮಸ್ಯೆಯಾಗದಂತೆ ನೋಡಿಕೊಳ್ಳಲು ಅಧಿಕಾರಿಗಳಿಗೆ ಸೂಚಿಸಿದ್ದೇನೆ ಎಂದರು.

Latest Videos
Follow Us:
Download App:
  • android
  • ios