ಬೆಂಗಳೂರು ಸೇರಿದಂತೆ ಕೋಲ್ಕತಾ, ಮುಂಬೈ, ಹೈದರಾಬಾದ್ ಮತ್ತು ಚೆನ್ನೈನಂತಹ ದೇಶದ ಮಹಾನಗರಗಳಲ್ಲಿ ಈ ಬಾರಿಯ ಬೇಸಿಗೆಯಲ್ಲಿ ಅತ್ಯಧಿಕ ನೆಲಮಟ್ಟದ ಓಝೋನ್ ಮಾಲಿನ್ಯ ವರದಿಯಾಗಿದೆ.

ನವದೆಹಲಿ (ಜು.17): ಬೆಂಗಳೂರು ಸೇರಿದಂತೆ ಕೋಲ್ಕತಾ, ಮುಂಬೈ, ಹೈದರಾಬಾದ್ ಮತ್ತು ಚೆನ್ನೈನಂತಹ ದೇಶದ ಮಹಾನಗರಗಳಲ್ಲಿ ಈ ಬಾರಿಯ ಬೇಸಿಗೆಯಲ್ಲಿ ಅತ್ಯಧಿಕ ನೆಲಮಟ್ಟದ ಓಝೋನ್ ಮಾಲಿನ್ಯ ವರದಿಯಾಗಿದೆ. ಥಿಂಕ್ ಟ್ಯಾಂಕ್ ಸೆಂಟರ್ ಫಾರ್ ಸೈನ್ಸ್ ಆ್ಯಂಡ್ ಎನ್ವಿರಾನ್ಮೆಂಟ್‌(ಸಿಎಸ್‌ಇ) ಯ ವಿಶ್ಲೇಷಣೆಯಿಂದ ಈ ಮಾಹಿತಿ ಬಹಿರಂಗವಾಗಿದೆ. ಬೆಂಗಳೂರಿನಲ್ಲಿ ಬೇಸಿಗೆಯ 92 ದಿನಗಳ ಪೈಕಿ 45 ದಿನಗಳಲ್ಲಿ ಓಝೋನ್ ಪದರದ ಈ ಸಮಸ್ಯೆ ಮಿತಿಮೀರಿದ್ದು ಕಂಡುಬಂದಿದ್ದು, ಕಳೆದ ವರ್ಷಕ್ಕಿಂತ ಶೇ.29ರಷ್ಟು ಹೆಚ್ಚಾಗಿದೆ.

ನೆಲಮಟ್ಟದ ಓಝೋನ್ ಎಂದರೇನು?: ಓಝೋನ್‌ ಎಂದರೆ, ಸೂರ್ಯನ ಹಾನಿಕಾರಕ ಕಿರಣಗಳಿಂದ ಭೂಮಿಯನ್ನು ರಕ್ಷಿಸುವ ಒಂದು ಪದರ. ನೆಲಮಟ್ಟದ ಓಝೋನ್‌ ಎಂದರೆ, ಇದೊಂದು ಮಾಲಿನ್ಯಕಾರಕ ಪದರ. ಇದು, ಸೂರ್ಯನ ಬೆಳಕಿನ ಉಪಸ್ಥಿತಿಯಲ್ಲಿ, ವಾಹನಗಳು, ವಿದ್ಯುತ್‌ ಸ್ಥಾವರ, ಕಾರ್ಖಾನೆಗಳಿಂದ ಉತ್ಪತ್ತಿಯಾಗುವ ನೈಟ್ರೋಜನ್ ಆಕ್ಸೈಡ್‌ಗಳು ಮತ್ತು ಆವಿಯಾಗುವ ಆರ್ಗಾನಿಕ್‌ ಕಂಪೌಂಡ್‌ಗಳ ನಡುವಿನ ರಾಸಾಯನಿಕ ಕ್ರಿಯೆಗಳ ಮೂಲಕ ರೂಪುಗೊಳ್ಳುತ್ತದೆ. ಇದು ಪರಿಸರ ಮತ್ತು ಜೀವಿಗಳಿಗೆ ಅಪಾಯಕಾರಿ.

ಅಪಾಯವೇನು?: ‘ಓಝೋನ್ ಒಂದು ಪ್ರತಿಕ್ರಿಯಾತ್ಮಕ ಅನಿಲವಾಗಿದ್ದು, ಅದರಕ್ಕೆ ಕೆಲ ಕಾಲ ಒಡ್ಡಿಕೊಲ್ಳುವುದೂ ಆರೋಗ್ಯಕ್ಕೆ ಹಾನಿಕರ. ಅತಿಯಾದ ಬಿಸಿಲು ಮತ್ತು ಶಾಖದಿಂದಾಗಿ, ಉತ್ತರ ಭಾರತದ ನಗರಗಳಲ್ಲಿ ಈ ಸಮಸ್ಯೆ ಅಧಿಕ ಕಾಣಿಸಿಕೊಳ್ಳುತ್ತದೆ’ ಎಂದು ಸಿಎಸ್‌ಇನ ಕಾರ್ಯನಿರ್ವಾಹಕ ನಿರ್ದೇಶಕಿ ಅನುಮಿತಾ ರಾಯ್‌ಚೌಧರಿ ಹೇಳಿದ್ದಾರೆ. ಅಸಮರ್ಪಕ ಮೇಲ್ವಿಚಾರಣೆ, ಸೀಮಿತ ದತ್ತಾಂಶ ಮತ್ತು ವಿಶ್ಲೇಷಣೆಯ ಅಸಮರ್ಪಕ ವಿಧಾನಗಳಿಂದ ಇದರ ಬಗ್ಗೆ ಜನರಿಗೆ ಹೆಚ್ಚು ಅರಿವಿಲ್ಲ ಎನ್ನಲಾಗಿದೆ.

ಪರಿಹಾರವೇನು?: ಇದನ್ನು ತಡೆಯಲು, ವಿಷಕಾರಿ ಅನಿಲಗಳ ಹೊರಸೂಸುವಿಕೆಯನ್ನು ಹಾಗೂ ಅದಕ್ಕೆ ಒಡ್ಡಿಕೊಳ್ಳುವುದನ್ನು ಕಡಿಮೆ ಮಾಡಬೇಕು. ಮಾಲಿನ್ಯವನ್ನು ಅಳೆಯಲು ವಾಯು ಗುಣಮಟ್ಟ ಸೂಚ್ಯಂಕವನ್ನಷ್ಟೇ ನೋಡವ ಬದಲು, ನೆಲಮಟ್ಟದ ಓಝೋನ್ ಪರಿಶೀಲನೆಯೂ ಅಗತ್ಯ.