ಮಲೆ ಮಹದೇಶ್ವರ ವನ್ಯಧಾಮದಲ್ಲಿ ಐದು ಹುಲಿಗಳ ಸಾವಿನ ಬಗ್ಗೆ ತನಿಖಾ ತಂಡ ವರದಿ ಸಲ್ಲಿಸಿದ್ದು, ಮೂವರು ಅರಣ್ಯ ಅಧಿಕಾರಿಗಳ ಅಮಾನತಿಗೆ ಶಿಫಾರಸು ಮಾಡಲಾಗಿದೆ. ಹುಲಿಗಳ ಸಾವಿಗೆ ರಾಸಾಯನಿಕ ವಿಷಪ್ರಾಶನ ಕಾರಣ ಎಂದು ವರದಿ ತಿಳಿಸಿದೆ. ಈ ಘಟನೆಯಿಂದ ಎಚ್ಚೆತ್ತ ಅರಣ್ಯ ಇಲಾಖೆ ಕಟ್ಟೆಚ್ಚರ ವಹಿಸಿದೆ.

ವರದಿ: ಪುಟ್ಟರಾಜು. ಆರ್. ಸಿ ಏಷ್ಯಾನೆಟ್ ಸುವರ್ಣ ನ್ಯೂಸ್

ಚಾಮರಾಜನಗರ: ಮಲೆ ಮಹದೇಶ್ವರ ವನ್ಯಧಾಮದಲ್ಲಿ 5 ಹುಲಿಗಳ ಹತ್ಯಕಾಂಡದ ಬಗ್ಗೆ ಉನ್ನತ ಮಟ್ಟದ ತನಿಖಾ ತಂಡ ಪ್ರಾಥಮಿಕ ವರದಿ ಸಲ್ಲಿಸಿದೆ. ಡಿಸಿಎಫ್ ಚಕ್ರಪಾಣಿ ಸೇರಿದಂತೆ ಮೂವರು ಅಧಿಕಾರಿಗಳ ಅಮಾನತಿಗೆ ಅರಣ್ಯ ಸಚುವ ಈಶ್ವರ ಖಂಡ್ರೆ ಶಿಫಾರಸು ಮಾಡಿದ್ದಾರೆ. ಇನ್ನೊಂದೆಡೆ ಹುಲಿಗಳ ಹತ್ಯೆ ಬಳಿಕ ಎಚ್ಚೆತ್ತ ಅರಣ್ಯ ಇಲಾಖೆ ಜಿಲ್ಲೆಯ ಹುಲಿರಕ್ಷಿತಾರಣ್ಯ ಹಾಗು ವನ್ಯ ಧಾಮಗಳಲ್ಲಿ ಹೈ ಭಾರೀ ಕಟ್ಟೆಚ್ಚರ ವಹಿಸಿದೆ. ಜಿಲ್ಲೆಯ ಅರಣ್ಯಗಳಲ್ಲಿ ಗಸ್ತು ತೀವ್ರಗೊಳಿಸಿರುವುದಲ್ಲದೆ ಕಾಡಿನ ಒಳಗೆ ಜಾನುವಾರುಗಳನ್ನು ಬಿಡುವುದಕ್ಕೆ ತಡೆ ಒಡ್ಡಿದೆ.

ಕರ್ನಾಟಕ ರಾಜ್ಯದಲ್ಲೇ ಎರಡು ಹುಲಿರಕ್ಷಿತಾರಣ್ಯ ಹಾಗು ಎರಡು ವನ್ಯಧಾಮಗಳನ್ನು ಹೊಂದಿರುವ ಏಕೈಕ ಜಿಲ್ಲೆ ಎಂಬ ಹೆಗ್ಗಳಿಕೆ ಚಾಮರಾಜನಗರಕ್ಕಿದೆ. ರಾಜ್ಯದಲ್ಲೇ ಅತಿ ಹೆಚ್ಚು ಹುಲಿಗಳನ್ನು ಹೊಂದಿ ಹುಲಿಗಳನಾಡು ಎಂಬ ಖ್ಯಾತಿಗು ಚಾಮರಾಜನಗರ ಭಾಜನವಾಗಿದೆ. ಇತ್ತೀಚಿಗೆ ಆಶಾದಾಯಕವಾಗಿ ಹುಲಿಗಳ ಸಂಖ್ಯೆ ವೃದ್ಧಿಸುತ್ತಿದ್ದ ಮಲೆ ಮಹದೇಶ್ವರ ವನ್ಯಧಾಮದಲ್ಲಿ 5 ಹುಲಿಗಳಿಗೆ ವಿಷಪ್ರಾಶಾನ ಮಾಡಿಕೊಂದು ಹಾಕಿರುವುದು ಹುಲಿಗಳ ಸಂತತಿ ವೃದ್ಧಿಗೆ ಭಾರೀ ಪೆಟ್ಟು ಬಿದ್ದಿದೆ. ಈ ಕರಾಳ ಘಟನೆಯ ಬಗ್ಗೆ ತನಿಖೆ ಮಾಡಲು ರಚಿಸಿದ್ದ ಉನ್ನತ ಮಟ್ಟದ ತನಿಖಾ ಸಮಿತಿ ಪ್ರಾಥಮಿಕ ವರದಿ ನೀಡಿದ್ದು ಡಿಸಿಎಫ್ ಚಕ್ರಪಾಣಿ, ಎಸಿಎಫ್ ಗಜಾನನ ಹೆಗಡೆ ಹಾಗು ಆರ್‌ಎಫ್‌ಒ ಮಾದೇಶ ಅವರ ಕರ್ತವ್ಯಲೋಪ ಹಾಗು ನಿರ್ಲಕ್ಷ್ಯದ ಬಗ್ಗೆ ವರದಿ ನೀಡಿದೆ. 

ವಾಚರ್ಸ್‌ ಗಳಿಗೆ ವೇತನ ನೀಡದೆ ಕರ್ತವ್ಯ ಲೋಪ ಎಸಗಿದ್ದು ಇದರಿಂದ ಗಸ್ತ ಕಾರ್ಯಕ್ಕೆ ಹಿನ್ನಡೆ ಉಂಟಾಗಿದೆ, ಅಲ್ಲದೆ ಗಸ್ತು ಸಿಬ್ಬಂದಿಯ ಕಾರ್ಯಕ್ಷಮತೆ ಮೇಲೆ ನಿಗಾ ಇಡುವಲ್ಲಿ ಇವರು ವಿಫಲರಾಗಿದ್ದಾರೆ ಎಂದು ವರದಿ ನೀಡಲಾಗಿದೆ. ಹುಲಿಗಳ ಸಾವಿಗೆ ರಾಸಾಯನಿಕ ಸಂಯುಕ್ತ ಕಾರಣ ಎಂದು ವರದಿಯಲ್ಲಿ ತಿಳಿಸಲಾಗಿದೆ. ಈ ಹಿನ್ನಲೆಯಲ್ಲಿ ಡಿಸಿಎಫ್ ಚಕ್ರಪಾಣಿ, ಎಸಿಎಫ್ ಗಜಾನನ ಹೆಗಡೆ ಹಾಗು ಆರ್‌ಎಫ್‌ಒ ಮಾದೇಶ ಅವರ ಅಮಾನತಿಗೆ ಅರಣ್ಯ ಸಚಿವ ಈಶ್ವರ ಖಂಡ್ರೆ ಮುಖ್ಯಮಂತ್ರಿ ಹಾಗು ಆಡಳಿತ ಮತ್ತು ಸಿಬ್ಬಂದಿ ಸುಧಾರಣಾ ಇಲಾಖೆಗೆ ಶಿಫಾರಸು ಮಾಡಿದ್ದಾರೆ.

ಇನ್ನೊಂದೆಡೆ ಹುಲಿಗಳ ಹತ್ಯೆ ಬಳಿಕ ಎಚ್ಚೆತ್ತಿರುವ ಅರಣ್ಯ ಇಲಾಖೆ ಜಿಲ್ಲೆಯ ಬಂಡೀಪುರ ಹಾಗು ಬಿಆರ್ಟಿ ಹುಲಿ ಸಂರಕ್ಷಿತ ಪ್ರದೇಶ, ಮಲೆಮಹದೇಶ್ವರ ಹಾಗು ಕಾವೇರಿ ವನ್ಯಧಾಮಗಳಲ್ಲಿ ಭಾರೀ ಕಟ್ಟಚರ ವಹಿಸಿದೆ. ಈ ಅರಣ್ಯಗಳಲ್ಲಿ ಗಸ್ತು ತೀವ್ರಗೊಳಿಸಲಾಗಿದೆ. ಕಾಡಂಚಿನ ಗ್ರಾಮಸ್ಥರು ಜಾನುವಾರುಗಳನ್ನು ಅರಣ್ಯದೊಳಗೆ ಮೇಯಲು ಬಿಡದಂತೆ ಜಾಗೃತಿ ಮೂಡಿಸಲಾಗುತ್ತಿದೆ. ತಮಿಳುನಾಡು ಗಡಿ ಭಾಗದ ಹಳ್ಳಿಗಳಿಂದ ಬರುವ ಜಾನುವಾರುಗಳಿಗು ಕಡಿವಾಣ ಹಾಕಲಾಗಿದೆ.

ಹುಲಿಗಳ ಹತ್ಯೆ ಪ್ರಕರಣದ ಸಮಗ್ರ ಬಗ್ಗೆ ತನಿಖೆಗೆ ಉನ್ನತ ಮಟ್ಟದ ತನಿಖಾ ತಂಡ ರಚಿಸಿರುವ ಅರಣ್ಯ ಇಲಾಖೆ ಈಗಾಗಲೇ ಹುಲಿಗಳಿಗೆ ವಿಷ ಪ್ರಾಶಾನ ಮಾಡಿದ ಮೂವರು ಆರೋಪಿಗಳನ್ನು ಜೈಲಿಗಟ್ಟಿದೆ. ಕರ್ತವ್ಯ ನಿರ್ಲಕ್ಷ ಆರೋಪದ ಮೇರೆಗೆ ಮಲೆಮಹದೇಶ್ವರ ವನ್ಯಧಾಮದ ಡಿಸಿಎಫ್ ಚಕ್ರಪಾಣಿ, ಎಸಿಎಫ್ ಗಜಾನನ ಹೆಗಡೆ ಹಾಗು ಆರ್ ಎಫ್ಒ ಮಾದೇಶ್ ಅವರ ಅಮಾನತಿಗೆ ಅರಣ್ಯ ಸಚಿವರು ಶಿಫಾರಸು ಮಾಡಿದ ಬೆನ್ನಲ್ಲೆ ಮತ್ತೇ ಇಬ್ಬರು ಕೆಳಹಂತದ ಅರಣ್ಯ ಸಿಬ್ಬಂದಿಯ ವಿರುದ್ಧವು ಚಾಮರಾಜನಗರ ವೃತ್ತದ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ಶಿಸ್ತು ಕ್ರಮ ಜರುಗಿಸಿದ್ದಾರೆ.ಉಪ ವಲಯ ಅರಣ್ಯಾಧಿಕಾರಿ ವೀರೇಶ್ ಕಟ್ಟಿಮಣಿ ಹಾಗು ಗಸ್ತು ಅರಣ್ಯ ಪಾಲಕ ಮಧುಸೂದನ್ ಅವರನ್ನು ಕಡ್ಡಾಯ ರಜೆ ಮೇಲೆ ಹೋಗುವಂತೆ ಆದೇಶ ನೀಡಿದ್ದಾರೆ. ಇವರ ಸ್ಥಾನಕ್ಕೆ ಹೂಗ್ಯಂ ವಲಯದಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ಅರಣ್ಯ ಸಿಬ್ಬಂದಿಗಳನ್ನು ಪ್ರಭಾರವಾಗಿ ನಿಯೋಜಿಸಿದ್ದಾರೆ..

ಹುಲಿ ಗಳ ಹತ್ಯೆ ಪ್ರಕರಣದ ತನಿಖೆ ಮುಂದುವರಿದಿದ್ದು ತನಿಖಾ ತಂಡ ಜುಲೈ 10 ರೊಳಗೆ ಪೂರ್ಣ ಪ್ರಮಾಣದ ತನಿಖಾ ವರದಿ ನೀಡಲು ಅರಣ್ಯ ಸಚಿವರು ತನಿಖಾ ಸಮಿತಿಗೆ ಸೂಚಿಸುದ್ದಾರೆ. ಅರಣ್ಯದಲ್ಲಿ ತೀವ್ರ ಗಸ್ತು, ಅಧಿಕಾರಿಗಳ ಮೇಲೆ ಕ್ರಮ ಹಾಗು ಕಾಡಿನಲ್ಲಿ ಜಾನುವಾರುಗಳನ್ನು ಮೇಯಿಸುವುದಕ್ಕೆ ಕಡಿವಾಣ ಹಾಕುವ ಜೊತೆಗೆ ಅರಣ್ಯದಂಚಿನಲ್ಲಿ ಸಮರ್ಪಕ ಆನೆ ಕಂದಕ, ಸೋಲಾರ್ ಬೇಲಿ ಹಾಗು ರೈಲ್ವೇ ಬ್ಯಾರಿಕೇಡ್ ಅಳವಡಿಸುವ ಮೂಲಕ ಮಾನವ ವನ್ಯಜೀವಿ ಸಂಘರ್ಷ ತಡೆಗಟ್ಟಲು ಅರಣ್ಯ ಇಲಾಖೆ ಮುಂದಾಗಬೇಕಿದೆ.