ಕೋಲಾರ(ಮಾ.01): ಚೀನಾದಲ್ಲಿ ಮಾರಕ ಕರೋನಾ ಸೋಂಕು ಮತ್ತು ಕಳೆದ ನಾಲ್ಕು ವರ್ಷಗಳಿಂದ ರೇಷ್ಮೆ ಆಮದು ಕಡಿಮೆ ಆಗಿರುವುದರಿಂದ ಸ್ಥಳೀಯ ಮಾರುಕಟ್ಟೆಗಳಲ್ಲಿ ರೇಷ್ಮೆ ಗೂಡಿಗೆ ಬಂಪರ್‌ ಬೆಲೆ ಬಂದಿದ್ದು ರೈತರು ಸಂತಸಗೊಂಡಿದ್ದಾರೆ. ಮಾರುಕಟ್ಟೆಯಲ್ಲಿ ಮಿಶ್ರತಳಿ ಒಂದು ಕೆಜಿಗೆ ರೇಷ್ಮೆ ಗೂಡಿನ ಬೆಲೆ 450ರಿಂದ 500 ರು.ಗೆ ಏರಿಕೆಯಾಗಿದ್ದು, ಬವೋಲ್ಟಿನ್‌ ರೇಷ್ಮೆ ಗೂಡಿನ ಬೆಲೆ 550ರಿಂದ 650 ರು.ಗೆ ಏರಿಕೆ ಆಗಿದೆ.

ಗಣನೀಯವಾದಿ ಆಮದು ಇಳಿಕೆ:

ಇತ್ತೀಚೆಗೆ ಕರೋನಾ ವೈರಸ್‌ ಸೋಂಕು ಎಲ್ಲೆಡೆ ಹರಡುತ್ತಿರುವುದರಿಂದ ಚೀನಾ ರೇಷ್ಮೆ ಭಾರತಕ್ಕೆ ಆಮದಿನಲ್ಲಿ ಗಣನೀಯವಾಗಿ ಏರುಪೇರಾಗಿರುವುದರಿಂದ ಮತ್ತು 2015ರಿಂದ ಚೀನಾ ರೇಷ್ಮೆ ಆಮದು ಪ್ರಮಾಣ ವರ್ಷದಿಂದ ವರ್ಷಕ್ಕೆ ತಗ್ಗಿರುವುದರಿಂದ ದೇಶಿಯ ರೇಷ್ಮೆಗೂಡಿಗೆ ಬೇಡಿಕೆ ಹೆಚ್ಚಿದೆ. ಚೀನಾದಿಂದ 2014-15ರಲ್ಲಿ 3315 ಟನ್‌ ಕಡಿಮೆ ಆಗಿದೆ. 2015-16ರಲ್ಲಿ 3108, 2016-17ರಲ್ಲಿ 3000, 2017-18ಕ್ಕೆ 2928, 2018-19ಕ್ಕೆ 1078 ಟನ್‌ಗೆ ಆಮದು ಪ್ರಮಾಣಕ್ಕೆ ಇಳಿದಿದೆ. ಈ ನಾಲ್ಕು ವರ್ಷಗಳಲ್ಲಿ ಗಣನೀಯ ಪ್ರಮಾಣದಲ್ಲಿ ಇಳಿಕೆ ಆಗಿದೆ. ಇತ್ತೀಚೆಗೆ ಕರೋನಾ ವೈರಸ್‌ ಸೋಂಕಿನಿಂದ ಆಮದು ಪ್ರಮಾಣ ಮತ್ತಷ್ಟುಇಳಿಕೆ ಮುಖವಾಗಿದ್ದು ದೇಶೀಯ ರೇಷ್ಮೆಗೆ ಬೆಲೆ ಬಂದಿದೆ.

ಕ್ರಿಕೆಟ್‌ ಆಡುವಾಗಲೇ ಹೃದಯಾಘಾತ: ಯುವ ಆಟ​ಗಾರ ಸಾವು

ಕೋಲಾರ ರೇಷ್ಮೆ ಉತ್ಪಾದನೆಗೆ ಪ್ರಸಿದ್ಧಿ ಪಡೆದಿದ್ದು ರಾಜ್ಯದಲ್ಲಿ ಹೆಚ್ಚು ರೇಷ್ಮೆ ಉತ್ಪಾದನೆ ಮಾಡಲಾಗುತ್ತದೆ. ಜಿಲ್ಲೆಯಲ್ಲಿ ಸುಮಾರು 19 ಸಾವಿರ ಮಂದಿ ರೇಷ್ಮೆ ಬೆಳೆಯಲ್ಲಿ ತೊಡಗಿಕೊಂಡಿದ್ದು, 22 ಸಾವಿರ ಹೆಕ್ಟೇರ್‌ ಪ್ರದೇಶದಲ್ಲಿ ರೇಷ್ಮೆಯನ್ನು ಬೆಳೆಯಲಾಗುತ್ತಿದೆ. ಅಂತಾರಾಷ್ಟಿ್ರಯ ಗುಣಮಟ್ಟದ ಬೈವೋಲ್ಟಿಲ್‌ ರೇಷ್ಮೆಗೆ ಹೆಚ್ಚು ಬೇಡಿಕೆ ಇದ್ದು, ಅಲ್ಲಿನ ಬೇಡಿಕೆಯನ್ನು ಎದುರಿಸುವಷ್ಟುಗುಣಮಟ್ಟದ ರೇಷ್ಮೆಯನ್ನು ಬೆಳೆಯುವ ಸಾಮರ್ಥ್ಯ ನಮ್ಮ ರೈತರಿಗೂ ಬಂದಿದೆ ಎನ್ನುವುದು ರೇಷ್ಮೆ ಇಲಾಖೆ ಅಧಿಕಾರಿಗಳ ಮಾತು.

ಚಳಿಗಾಲದಲ್ಲಿ ಉತ್ಪಾದನೆ ಇಳಿಕೆ:

ಕಳೆದ ಅಕ್ಟೋಬರ್‌ನಿಂದ ಫೆಬ್ರವರಿವರೆಗೆ ಚಳಿಗಾಲ ಇರುವುದರಿಂದ ರೇಷ್ಮೆ ಉತ್ಪಾದನೆ ಕಡಿಮೆ ಆಗುತ್ತದೆ. ರೇಷ್ಮೆಗೂಡು ಬೆಲೆ ಏರಿಕೆಗೆ ಇದೂ ಕೂಡಾ ಒಂದು ಕಾರಣ. ಈ ಕಾಲದಲ್ಲಿ ರೇಷ್ಮೆಗೆ ಸುಣ್ಣಕಟ್ಟು ರೋಗ ಬರುವುದು ಸಾಮಾನ್ಯ. ಈ ಸಂದರ್ಭದಲ್ಲಿ ರೇಷ್ಮೆ ಉತ್ಪಾದನೆ ಕಡಿಮೆ ಆಗುತ್ತದೆ. ಎಲೆ ಸುರಳಿ ರೋಗ ಹಾಗೂ ಚಳಿಯಲ್ಲಿ ಗೂಡಿನ ಉತ್ಪಾದನೆಯ ಗುಣಮಟ್ಟಕಡಿಮೆ ಇರುತ್ತದೆ.

ತಿಂಗಳಿಗೆ 330 ಟನ್‌ ಉತ್ಪಾದನೆ:

ಜಿಲ್ಲೆಯಲ್ಲಿ ಪ್ರತಿ ತಿಂಗಳು 2.50 ಲಕ್ಷ ಬೈವೋಲ್ಟಿನ್‌ ಮೊಟ್ಟೆಚಾಕಿ ಆಗುತ್ತದೆ. ಮಿಶ್ರ ತಳಿ 10ರಿಂದ 12 ಲಕ್ಷ ಮೊಟ್ಟೆಚಾಕಿ ಆಗುತ್ತದೆ. ಜಿಲ್ಲೆಯಲ್ಲಿ 6 ತಾಲೂಕುಗಳಲ್ಲಿ ತಿಂಗಳಿಗೆ 70ರಿಂದ 80 ಟನ್‌ ಬೈವೋಲ್ಟಿನ್‌ ರೇಷ್ಮೆ ಗೂಡು ಮತ್ತು ಮಿಶ್ರ ತಳಿ 250 ಟನ್‌ ಗೂಡು ಉತ್ಪಾದನೆ ಆಗುತ್ತದೆ. ಜಿಲ್ಲೆಯಲ್ಲಿ ಒಟ್ಟು ಒಂದು ತಿಂಗಳಿಗೆ 40 ಕೋಟಿ ರು. ಗೂಡು ಉತ್ಪಾನೆಯಾಗುತ್ತದೆ.

ಕೋಲಾರ ಜಿಲ್ಲೆಯಲ್ಲಿ ಬಂಗಾರಪೇಟೆ ತಾಲೂಕಿನಲ್ಲಿ ಹೆಚ್ಚು ರೇಷ್ಮೆ ಉತ್ಪಾದನೆಯಾಗುತ್ತಿದ್ದು, ಜಿಲ್ಲೆಯಲ್ಲಿ ಅತಿ ಹೆಚ್ಚು ಉದ್ಯೋಗ ಕೊಡುವ ಉದ್ದಿಮೆ ರೇಷ್ಮೆ ಆಗಿದ್ದು, ರೇಷ್ಮೆಗೆ ಕೋಲಾರದಲ್ಲಿ ಕೋಲಾರ, ಶ್ರೀನಿವಾಸಪುರ ಹಾಗೂ ಕ್ಯಾಲನೂರಿನಲ್ಲಿ ಮಾರುಕಟ್ಟೆಗಳಿವೆ.

ಚೇತರಿಕೆ:

ಚೀನಾ ರೇಷ್ಮೆ ಆಮದಿನಿಂದ ಜಿಲ್ಲೆಯ ರೇಷ್ಮೆ ಬೆಳೆಗಾರರು ಸಾಕಷ್ಟುನಷ್ಟಅನುಭವಿಸಿದ್ದರು. ಚೀನಾ ರೇಷ್ಮೆಯ ಆಮದಿಗೆ ಸುಂಕವನ್ನು ಕಡಿತ ಗೊಳಿಸಿದ್ದರಿಂದ ಸ್ಥಳೀಯ ರೇಷ್ಮೆಗೆ ಬೇಡಿಕೆ ಇಲ್ಲದಂತಾಗಿದೆ. ನಾಲ್ಕೈದು ವರ್ಷಗಳು ಸ್ಥಳೀಯ ರೇಷ್ಮೆಯನ್ನು ಕೇಳುವವರಿಲ್ಲದೆ ರೈತರು ಪರದಾಡುವಂತಾಗಿತ್ತು. ಆದರೆ ಚೀನಾದಲ್ಲಿ ಕರೋನಾ ಸೋಂಕು ಇರುವುದರಿಂದ ಮಾರುಕಟ್ಟೆಯಲ್ಲಿ ಆಗಿರುವ ಏರುಪೇರಿನಿಂದ ಚೀನಾದಿಂದ ಆಗುವ ರೇಷ್ಮೆ ಆಮದಿನಲ್ಲಿ ವ್ಯತ್ಯಯ ಉಂಟಾಗಿದ್ದು, ಸ್ಥಳೀಯ ಮಾರುಕಟ್ಟೆಗಳಲ್ಲಿ ರೇಷ್ಮೆ ಗೂಡಿಗೆ ಬೆಲೆ ಏರಿಕೆ ಆಗಿದೆ. ಈ ಬೆಳವಣಿಗೆಯಿಂದಾಗಿ ಜಿಲ್ಲೆಯಲ್ಲಿ ರೇಷ್ಮೆ ಬೆಳೆಯಲು ಮುಂದಾಗಿದ್ದಾರೆ.

'ದೊರೆಸ್ವಾಮಿ ಸ್ವಾತಂತ್ರ್ಯಕ್ಕಾಗಿ ಹೋರಾಡಿದ ಮಹಾನ್‌ ಪುರುಷ'

ಚೀನಾ ರೇಷ್ಮೆ ಆಮದು ಆಗುವುದು 2015ರಿಂದಲೂ ಗಣನೀಯ ಪ್ರಮಾಣದಲ್ಲಿ ಕಡಿಮೆ ಆಗಿರುವುದರಿಂದ ಸ್ಥಳೀಯ ರೇಷ್ಮೆಗೆ ಬೆಲೆ ಹೆಚ್ಚಾಗುತ್ತಿದೆ. ಕರೋನಾ ವೈರಸ್‌ ಹರಡುವಿಕೆಯ ಪರಿಣಾಮದಿಂದ ರೇಷ್ಮೆ ಆಮದು ಕಡಿಮೆಯಾಗಿದೆ ಎನ್ನುವ ಮಾತುಗಳೂ ಕೇಳಿ ಬರುತ್ತಿವೆ. ಆದರೆ ಕಳೆದ 5 ವರ್ಷಗಳಿಂದ ಚೀನಾ ದೇಶದಿಂದಾಗುತ್ತಿರುವ ರೇಷ್ಮೆ ಪ್ರಮಾಣ ಗಣನೀಯ ಪ್ರಮಾಣದಲ್ಲಿ ತಗ್ಗಿದೆ. ಇದರಿಂದಾಗಿ ಸ್ಥಳೀಯ ರೇಷ್ಮೆಗೂಡಿಗೆ ಶೇ.30 ರಷ್ಟುಚೇತರಿಕೆ ಕಂಡು ಬೆಲೆ ಬಂದಿದೆ ಎಂದು ರೇಷ್ಮೆ ಇಲಾಖೆ ಉಪನಿರ್ದೇಶಕ ಪ್ರಭಾಕರ್‌ ಹೇಳಿದ್ದಾರೆ.