ಬೆಂಗಳೂರು [ಆ.02]: ನಗರದಲ್ಲಿ ಸಾರ್ವಜನಿಕ ಸಭೆ ಮತ್ತು ಮೆರವಣಿಗೆಗಳನ್ನು ನಿರ್ಬಂಧಿಸುವ ಕುರಿತು 2009ರಲ್ಲಿ ಹೊರಡಿಸಿರುವ ಅಧಿಸೂಚನೆಯನ್ನು ಸಮರ್ಪಕವಾಗಿ ಜಾರಿಗೊಳಿಸಲು ಎಲ್ಲ ಅಗತ್ಯ ಕ್ರಮ ಜರುಗಿಸುವಂತೆ ನಗರ ಪೊಲೀಸ್‌ ಆಯುಕ್ತರಿಗೆ ಹೈಕೋರ್ಟ್‌ ನಿರ್ದೇಶಿಸಿದೆ.

ಬೆಂಗಳೂರು ನಗರದಲ್ಲಿ ಸಾರ್ವಜನಿಕ ಸಭೆ ಮತ್ತು ಮೆರವಣಿಗೆಗಳ ಹೆಸರಿನಲ್ಲಿ ಪದೇ ಪದೇ ರಸ್ತೆಗಳನ್ನು ಬಂದ್‌ ಮಾಡುತ್ತಿರುವುದರಿಂದ ವಾಹನ ಸವಾರರು ತೊಂದರೆಗೆ ಗುರಿಯಾಗುತ್ತಿದ್ದಾರೆ ಎಂದು ವಕೀಲ ಎ.ವಿ.ಅಮರನಾಥನ್‌ ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿ ವಿಚಾರಣೆ ವೇಳೆ ನಡೆಸಿದ ಮುಖ್ಯ ನ್ಯಾಯಮೂರ್ತಿ ಎ.ಎಸ್‌.ಓಕ ನೇತೃತ್ವದ ವಿಭಾಗೀಯ ಪೀಠ ಈ ಸೂಚನೆ ನೀಡಿ ಅರ್ಜಿ ಇತ್ಯರ್ಥಪಡಿಸಿತು.

ವಿಚಾರಣೆ ವೇಳೆ ಸರ್ಕಾರಿ ವಕೀಲರು, ಬೆಂಗಳೂರು ನಗರದಲ್ಲಿ ಸಾರ್ವಜನಿಕ ಸಭೆ ಮತ್ತು ಮೆರವಣಿಗೆಗಳನ್ನು ನಿರ್ಬಂಧ ಮಾಡುವ ನಿಟ್ಟಿನಲ್ಲಿ 2008ರಲ್ಲಿ ಕರಡು ಆದೇಶ ಹೊರಡಿಸಲಾಗಿತ್ತು. ಬಳಿಕ ಅದನ್ನು ಅಂತಿಮಗೊಳಿಸಿ 2009ರ ಮೇ 21ರಂದು ಅಧಿಸೂಚನೆ ಹೊರಡಿಸಲಾಗಿದೆ ಎಂದು ವಿವರಿಸಿದರು.

ಅದಕ್ಕೆ ಪ್ರತಿಕ್ರಿಯಿಸಿದ ನ್ಯಾಯಪೀಠ, 2009ರಲ್ಲೇ ಆದೇಶದ ಅಧಿಸೂಚನೆ ಹೊರಡಿಸಿದ್ದರೂ ಇದುವರೆಗೆ ಏಕೆ ಸಮರ್ಪಕ ಅನುಷ್ಠಾನಕ್ಕೆ ತಂದಿಲ್ಲ. ಮೇಲಾಗಿ ಅಧಿಸೂಚನೆ ಜಾರಿಗೆ 2011ರ ಏ.21ರಂದು ಹೈಕೋರ್ಟ್‌ನಿಂದ ಮತ್ತೆ ಏಕೆ ಮೂರು ತಿಂಗಳ ಕಾಲಾವಕಾಶ ಪಡೆಯಲಾಗಿತ್ತು ಎಂದು ಕೇಳಿತು. ನಂತರ ನಗರದಲ್ಲಿ ಸಾರ್ವಜನಿಕ ಸಭೆ ಮತ್ತು ಮೆರವಣಿಗೆಗಳನ್ನು ನಿರ್ಬಂಧಿಸುವ ಕುರಿತು 2009ರಲ್ಲಿ ಹೊರಡಿಸಿರುವ ಅಧಿಸೂಚನೆಯನ್ನು ಸಮರ್ಪಕವಾಗಿ ಜಾರಿಗೊಳಿಸಲು ಎಲ್ಲ ಅಗತ್ಯ ಕ್ರಮ ಕೈಗೊಳ್ಳಬೇಕು. 2009ರ ಆದೇಶವನ್ನು ತಪ್ಪದೆ ಪಾಲಿಸುವಂತೆ ತಮ್ಮ ಎಲ್ಲ ಅ​ಧೀನ ಅಧಿ​ಕಾರಿಗಳಿಗೆ ಸೂಚಿಸಬೇಕು. ಸಾರ್ವಜನಿಕ ಸಭೆ ಹಾಗೂ ಮೆರವಣಿಗೆಗಳನ್ನು ನಿರ್ಬಂಧಿಸಿದ ಆದೇಶದ ಬಗ್ಗೆ ಕನ್ನಡ ಹಾಗೂ ಆಂಗ್ಲ ಪತ್ರಿಕೆಗಳಲ್ಲಿ ವ್ಯಾಪಕ ಪ್ರಚಾರ ನೀಡಬೇಕು ಎಂದು ನಗರ ಪೊಲೀಸ್‌ ಆಯುಕ್ತರು ನಿರ್ದೇಶಿಸಿದೆ.

ಬೆಂಗಳೂರು ನಗರದಲ್ಲಿ ಸಾರ್ವಜನಿಕ ಸಭೆ ಮತ್ತು ಮೆರವಣಿಗೆಗಳ ಹೆಸರಿನಲ್ಲಿ ಪದೇ ಪದೇ ರಸ್ತೆಗಳನ್ನು ಬಂದ್‌ ಮಾಡಲಾಗುತ್ತಿದೆ. ಇದರಿಂದ ವಾಹನ ಸವಾರರು ಸಂಚಾರ ದಟ್ಟಣೆ ಸಮಸ್ಯೆ ಎದುರಿಸುತ್ತಿದ್ದಾರೆ. ಇದೇ ವಿಚಾರದ ಸಂಬಂಧ 2011ರಲ್ಲಿ ಪಿಐಎಲ್‌ ಸಲ್ಲಿಸಲಾಗಿತ್ತು. ಆಗ ಬೆಂಗಳೂರು ನಗರದಲ್ಲಿನ ಸಾರ್ವಜನಿಕ ಸಭೆ ಮತ್ತು ಮೆರವಣಿಗೆಗಳನ್ನು ನಿಯಂತ್ರಿಸುವ ಸಂಬಂಧ ಅಂದಿನ ಪೊಲೀಸ್‌ ಆಯುಕ್ತರು, ‘ಲೈಸನ್ಸಿಂಗ್‌ ಆ್ಯಂಡ್‌ ಕಂಟ್ರೋಲಿಂಗ್‌ ಆಫ್‌ ಅಸೆಂಬ್ಲೀಸ್‌ ಆ್ಯಂಡ್‌ ಪ್ರೊಸೆಷನ್‌’-2008 (ಬೆಂಗಳೂರು ನಗರ) ಸಲ್ಲಿಸಿದ್ದರು. ಆದರೆ ಅದನ್ನು ಅಂತಿಮಗೊಳಿಸಿಲ್ಲ ಎಂದು ಅರ್ಜಿಯಲ್ಲಿ ತಿಳಿಸಲಾಗಿತ್ತು.