*   ರಾತ್ರಿಯೊಳಗೆ ಗುಂಡಿ ಮುಚ್ಚಲು ಆದೇಶ ನೀಡಿ*   ಬಿಬಿಎಂಪಿಗೆ ಹೈಕೋರ್ಟ್‌ ತಾಕೀತು*  ಪದೇ ಪದೇ ನೆಪ ಹೇಳುತ್ತಿರುವ ಪಾಲಿಕೆ ವಿರುದ್ಧ ವಿಭಾಗೀಯ ನ್ಯಾಯಪೀಠ ಅಸಮಾಧಾನ 

ಬೆಂಗಳೂರು(ಏ.20): ನಗರದ ರಸ್ತೆ ಗುಂಡಿಗಳನ್ನು(Potholes) ಮುಚ್ಚಲು ಬಿಬಿಎಂಪಿ(BBMP) ವಿಳಂಬ ಮಾಡುತ್ತಿರುವುದಕ್ಕೆ ಬೇಸರ ವ್ಯಕ್ತಪಡಿಸಿರುವ ಹೈಕೋರ್ಟ್‌(High Court), ರಸ್ತೆ ಗುಂಡಿ ಭರ್ತಿ ಕಾಮಗಾರಿಯನ್ನು ತುರ್ತಾಗಿ ಆರಂಭಿಸಲು ಅಮೆರಿಕನ್‌ ರೋಡ್‌ ಟೆಕ್ನಾಲಜಿ ಸಲ್ಯೂಷನ್ಸ್‌ (ARTS) ಸಂಸ್ಥೆಗೆ ಬುಧವಾರ ರಾತ್ರಿಯೊಳಗೆ ಕಾರ್ಯಾದೇಶ ನೀಡುವಂತೆ ಪಾಲಿಕೆಗೆ ತಾಕೀತು ಮಾಡಿದೆ.

ಬೆಂಗಳೂರಿನ(Bengaluru) ರಸ್ತೆಗಳ ನಿರ್ವಹಣೆಗೆ ಸಂಬಂಧಿಸಿದಂತೆ ಸಲ್ಲಿಕೆಯಾಗಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ಮಂಗಳವಾರ ವಿಚಾರಣೆ ನಡೆಸಿದ ಮುಖ್ಯ ನ್ಯಾಯಮೂರ್ತಿ ರಿತುರಾಜ್‌ ಅವಸ್ಥಿ ನೇತೃತ್ವದ ವಿಭಾಗೀಯ ನ್ಯಾಯಪೀಠ, ಬಿಬಿಎಂಪಿ 36 ಗಂಟೆ ಒಳಗಾಗಿ ಕಾಮಗಾರಿ ಆರಂಭಿಸಲು ಎಆರ್‌ಟಿಎಸ್‌ ಸಂಸ್ಥೆಗೆ ಕಾರ್ಯಾದೇಶ ನೀಡಬೇಕು. ಈ ಸಂಬಂಧ ದಾಖಲೆಗಳನ್ನು ಗುರುವಾರ ನ್ಯಾಯಾಲಯಕ್ಕೆ ಸಲ್ಲಿಸಬೇಕು ಎಂದು ತಾಕೀತು ಮಾಡಿ, ವಿಚಾರಣೆ ಮುಂದೂಡಿತು.

Bengaluru: ಕರಗ ಮೆರವಣಿಗೆಗೆ ಹೈಕೋರ್ಟ್‌ ಅಸ್ತು

ಇದಕ್ಕೂ ಮುನ್ನ ಎಆರ್‌ಟಿಎಸ್‌ ಕಂಪನಿ ಪರ ವಕೀಲರು ಹಾಜರಾಗಿ, ಪಾಲಿಕೆ ಈವರೆಗೂ ನಮಗೆ ಕಾರ್ಯಾದೇಶ ನೀಡದ ಕಾರಣ ರಸ್ತೆ ಗುಂಡಿ ಮುಚ್ಚುವ ಕಾಮಗಾರಿ ಆರಂಭಿಸಲು ಸಾಧ್ಯವಾಗಿಲ್ಲ ಎಂದು ತಿಳಿಸಿದರು.
ಪಾಲಿಕೆ ಪರ ವಕೀಲರು, ಕೆಲ ವಿಚಾರಗಳಲ್ಲಿ ಲೆಕ್ಕಾಚಾರ ನಡೆಯುತ್ತಿದೆ. ಎಆರ್‌ಟಿಎಸ್‌ ಸಂಸ್ಥೆಯೇ ಎರಡು ದಿನ ಕಾಲಾವಕಾಶ ಕೋರಿರುವ ಮಾಹಿತಿ ಇದೆ. ಅದು ಬಿಟ್ಟು ರಸ್ತೆಗುಂಡಿ ಮುಚ್ಚುವ ಕಾಮಗಾರಿಗೆ ಕಾರ್ಯಾದೇಶ ನೀಡಲು ಬಿಬಿಎಂಪಿ ಸಿದ್ಧವಿದೆ. ಎರಡು ದಿನದಲ್ಲಿ ಕಾರ್ಯಾದೇಶ ನೀಡಲಾಗುವುದು ಎಂದು ಭರವಸೆ ನೀಡಿದರು.

ಆ ಹೇಳಿಕೆಯನ್ನು ಎಆರ್‌ಟಿಎಸ್‌ ಪರ ವಕೀಲರು ನಿರಾಕರಿಸಿದ್ದರಿಂದ ಪಾಲಿಕೆ ಪರ ವಕೀಲರು ಉತ್ತರಿಸಿ, ಪ್ರಕರಣವನ್ನು ಗುರುವಾರ ವಿಚಾರಣೆಗೆ ನಿಗದಿಪಡಿಸಬೇಕು. ಕಾರ್ಯಾದೇಶ ನೀಡಿ ದಾಖಲೆ ಒದಗಿಸಲಾಗುವುದು ಎಂದು ನ್ಯಾಯಾಲಯವನ್ನು ಕೋರಿದರು.

ಜಾಮೀನು ಸಿಕ್ಕವರಿಗೆ ಬಾಡಿ ವಾರಂಟ್‌ ಅನ್ವಯಿಸದು: ಹೈಕೋರ್ಟ್‌

ಇದು ಅತೀ ಆಯ್ತು: ಕೋರ್ಟ್‌

ಬಿಬಿಎಂಪಿ ಪರ ವಕೀಲರು ಸಮಜಾಯಿಷಿಯನ್ನು ಒಪ್ಪದ ನ್ಯಾಯಪೀಠ, ರಸ್ತೆ ದುರಸ್ತಿ ಪಡಿಸುವಂತೆ ನ್ಯಾಯಾಲಯ ಸೂಚಿಸಿದೆ. ಪಾಲಿಕೆ ಮಾತ್ರ ಒಂದಲ್ಲ ಒಂದು ಕಾರಣ ಹೇಳುತ್ತಾ ಕೆಲಸ ಮುಂದೂಡುತ್ತಿದೆ. ಮೊದಲು ಸಂಚಾರ ದಟ್ಟಣೆ, ನಂತರ ಮೂಲಸೌಕರ್ಯ ಕೊರತೆ, ಆಮೇಲೆ ಮಳೆಯ ನೆಪ ಹೇಳಿತು. ಇದೀಗ ಎಆರ್‌ಟಿಎಸ್‌ ಬಗ್ಗೆ ದೂರುತ್ತಿದೆ, ಇದು ನಿಜಕ್ಕೂ ವಿಪರೀತವಾಯಿತು ಎಂದು ಪಾಲಿಕೆಯನ್ನು ತರಾಟೆಗೆ ತೆಗೆದುಕೊಂಡಿತು.

ಸದ್ಯ ನ್ಯಾಯಾಲಯಕ್ಕೆ(Court) ರಸ್ತೆ ಗುಂಡಿ ಮುಚ್ಚುವ ಕೆಲಸ ಆರಂಭವಾಗಿದೆಯೇ ಅಥವಾ ಇಲ್ಲವೇ ಎನ್ನುವುದಷ್ಟೇ ಬೇಕು. ಈಗಾಗಲೇ ಮಳೆ ಆರಂಭವಾಗಿದೆ. ಆದರೆ, ರಸ್ತೆ ಗುಂಡಿ ಭರ್ತಿ ಕಾರ್ಯ ಮಾತ್ರ ಆರಂಭವಾಗಿಲ್ಲ. ಮಳೆ ಪ್ರಾರಂಭವಾದರೆ ಮೂರ್ನಾಲ್ಕು ತಿಂಗಳು ಯಾವ ಕೆಲಸವೂ ಮಾಡಲಾಗದು. ನ್ಯಾಯಾಲಯ ಪಾಲಿಕೆಗೆ ಈಗಾಗಲೇ ತುಂಬಾ ಸಮಯ ನೀಡಿದೆ, ಇಷ್ಟಾದರೂ ಕೆಲಸ ಆರಂಭಿಸದಿರುವುದು ನಿಜಕ್ಕೂ ದುರದೃಷ್ಟಕರ ಸಂಗತಿ ಎಂದು ನ್ಯಾಯಪೀಠ ಅಸಮಾಧಾನ ವ್ಯಕ್ತಪಡಿಸಿತು.