Bengaluru: ಕರಗ ಮೆರವಣಿಗೆಗೆ ಹೈಕೋರ್ಟ್‌ ಅಸ್ತು

*   ಫ್ರೀಡಂ ಪಾರ್ಕಲ್ಲಿ ಮಾತ್ರ ಪ್ರತಿಭಟನೆ, ಮೆರವಣಿಗೆ ನಡೆಸಲು ಹೈಕೋರ್ಟ್‌ ಆದೇಶ
*  ಈ ಹಿನ್ನೆಲೆಯಲ್ಲಿ ಮೆರವಣಿಗೆಗೆ ಅವಕಾಶ ಕೋರಿ ಧರ್ಮರಾಯಸ್ವಾಮಿ ದೇಗುಲದಿಂದ ಅರ್ಜಿ
*  ಇಂದು ‘ಹಸಿ ಕರಗ’ ಸಂಭ್ರಮ
 

High Court of Karnataka Allow Karaga Procession in Bengaluru grg

ಬೆಂಗಳೂರು(ಏ.14):  ಕರಗ ಮಹೋತ್ಸವದ(Karaga Mahotsva) ಹಿನ್ನೆಲೆಯಲ್ಲಿ ಏ.16ರಂದು ರಾತ್ರಿ ನಗರದಲ್ಲಿ ಮೆರವಣಿಗೆ ನಡೆಸಲು ಧರ್ಮರಾಯಸ್ವಾಮಿ ದೇವಾಲಯ ವ್ಯವಸ್ಥಾಪನಾ ಸಮಿತಿಗೆ ಹೈಕೋರ್ಟ್‌(High Court) ಅನುಮತಿ ನೀಡಿದೆ.

ಸ್ವಾತಂತ್ರ್ಯ ಉದ್ಯಾನ ಹೊರತುಪಡಿಸಿ ನಗರದ ಇತರೆ ಯಾವುದೇ ಭಾಗದಲ್ಲೂ ಯಾವುದೇ ರಾಜಕೀಯ(Politics) ಅಥವಾ ರಾಜಕಿಯೇತರ ಸಂಘಟನೆಗಳು ಮೆರವಣಿಗೆ, ಪ್ರತಿಭಟನೆ, ಬಹಿರಂಗ ಸಭೆ ನಡೆಸದಂತೆ ಸರ್ಕಾರ ಕ್ರಮ ಕೈಗೊಳ್ಳಬೇಕು ಎಂದು ನಿರ್ದೇಶಿಸಿ ಹೈಕೋರ್ಟ್‌ ಮಾ.3ರಂದು ಆದೇಶಿಸಿರುವ ಹಿನ್ನೆಲೆಯಲ್ಲಿ ಕರಗ ಮೆರವಣಿಗೆ ನಡೆಸಲು ಕಷ್ಟವಾಗಿದೆ. ಆದ್ದರಿಂದ ಕರಗ ಮೆರವಣಿಗೆ ನಡೆಸಲು ಅನುಮತಿ ನೀಡುವಂತೆ ಕೋರಿ ಧರ್ಮರಾಯಸ್ವಾಮಿ ದೇವಾಲಯ ವ್ಯವಸ್ಥಾಪನಾ ಸಮಿತಿ ಮಧ್ಯಂತರ ಅರ್ಜಿ ಸಲ್ಲಿಸಿತ್ತು.

ವಿವಾದದ ಮಧ್ಯೆ ಇತಿಹಾಸ ಪ್ರಸಿದ್ಧ ಬೆಂಗಳೂರು ಕರಗಕ್ಕೆ ಸಿದ್ಧತೆ

ಈ ಅರ್ಜಿ ಪುರಸ್ಕರಿಸಿದ ಮುಖ್ಯ ನ್ಯಾಯಮೂರ್ತಿ ರಿತುರಾಜ್‌ ಅವಸ್ಥಿ ಮತ್ತು ನ್ಯಾಯಮೂರ್ತಿ ಎಸ್‌.ಆರ್‌. ಕೃಷ್ಣ ಕುಮಾರ್‌ ಅವರಿದ್ದ ವಿಭಾಗೀಯ ನ್ಯಾಯಪೀಠ, ನಗರದಲ್ಲಿ ಏ.16ರಂದು ಬೆಂಗಳೂರು ಕರಗ ಮೆರವಣಿಗೆ ನಡೆಸಲು ಧರ್ಮರಾಯಸ್ವಾಮಿ ದೇವಸ್ಥಾನದ ವ್ಯವಸ್ಥಾಪನಾ ಸಮಿತಿಗೆ ಅನುಮತಿ ನೀಡಿ ಆದೇಶಿಸಿತು. ಜತೆಗೆ ಸಂಚಾರಕ್ಕೆ ಯಾವುದೇ ರೀತಿ ಅಡಚಣೆ ಉಂಟಾಗದಂತೆ ನೋಡಿಕೊಳ್ಳಬೇಕು ಎಂದು ಷರತ್ತು ವಿಧಿಸಿದೆ.

ಕರಗ ಮೆರವಣಿಗೆಗೆ ಮಾತ್ರ ಅನ್ವಯ:

ಅಲ್ಲದೆ, ಈ ಆದೇಶ ಕರಗ ಮೆರವಣಿಗೆಗೆ ಮಾತ್ರ ಅನ್ವಯಿಸಲಿದ್ದು, ಮಾ.3ರಂದು ಹೊರಡಿಸಿರುವ ಮಧ್ಯಂತರ ಆದೇಶ ಜಾರಿಯಯಲ್ಲಿದೆ. ಆದೇಶದಲ್ಲಿನ ಇತರೆ ಷರತ್ತು ಹಾಗೂ ನಿಯಮಗಳು ಅರ್ಜಿ ಕುರಿತ ಮುಂದಿನ ವಿಚಾರಣೆವರೆಗೆ ಯಥಾಸ್ಥಿತಿಯಲ್ಲೇ ಮುಂದುವರಿಯಲಿದೆ ನ್ಯಾಯಪೀಠ ಸ್ಪಷ್ಟಪಡಿಸಿದೆ.

ಹೆಮ್ಮೆಯ ಪ್ರತೀಕ:

ಕರಗ ಮಹೋತ್ಸವವು ಅತ್ಯಂತ ಹಳೆಯ ಹಬ್ಬವಾಗಿದ್ದು, 300 ವರ್ಷಗಳಿಂದ ನಡೆಸಲಾಗುತ್ತಿದೆ. ಕರಗವು ಜಾನಪದ ನೃತ್ಯದ ಹಬ್ಬವಾಗಿದ್ದು, ಬೆಂಗಳೂರು(Bengaluru) ಸಂಸ್ಕೃತಿಯ ಹೆಮ್ಮೆಯ ಪ್ರತೀಕವಾಗಿದೆ. ತಿಗಳರಪೇಟೆಯ ಧರ್ಮರಾಯ ಸ್ವಾಮಿ ದೇವಸ್ಥಾನದಿಂದ ಹಬ್ಬದ ಆಚರಣೆ ಆರಂಭವಾಗುತ್ತದೆ. ಧರ್ಮರಾಯಸ್ವಾಮಿ ದೇವಸ್ಥಾನ ದೇಶದಲ್ಲಿ ಪಾಂಡವರಿಗೆ ಮೀಸಲಾದ ಏಕೈಕ ದೇವಸ್ಥಾನವಾಗಿದೆ.
ಹಿಂದು ಕ್ಯಾಲೆಂಡರ್‌ ಪ್ರಕಾರ ಕರ್ನಾಟಕದಲ್ಲಿ(Karnataka) ಪ್ರತಿವರ್ಷ ಚೈತ್ರ ಮಾಸದಲ್ಲಿ (ಮಾರ್ಚ್‌/ಏಪ್ರಿಲ್‌) ಕರಗ ಮಹೋತ್ಸವ ಆಚರಣೆ ಮಾಡಲಾಗುತ್ತದೆ. ಇದು ಬೆಂಗಳೂರು ಕರಗ ಮಹೋತ್ಸವವೆಂದೇ ಖ್ಯಾತಿ ಪಡೆದಿದೆ. ತಿಗಳರ ಸಮುದಾಯ ಈ ಹಬ್ಬವನ್ನು ಆಚರಿಸುತ್ತದೆ. ಮಹಭಾರತದ ಆದರ್ಶ ಮಹಿಳೆ ಮತ್ತು ಶಕ್ತಿ ದೇವತೆಯಾದ ದೌಪ್ರದಿಗೆ ಗೌರವ ಸಲ್ಲಿಸುವ ಸಲುವಾಗಿ ಈ ಹಬ್ಬ ಆಚರಣೆ ಮಾಡಲಾಗುತ್ತಿದೆ. ಅದರಂತೆ ಏ.16ರಂದು ಹುಣ್ಣಿಮೆ ರಾತ್ರಿ ಇಡೀ ಕರಗ ಮೆರವಣಿಗೆ ನಡೆಸಲಾಗುತ್ತದೆ. ಆದ್ದರಿಂದ ಕರಗ ಮೆರವಣಿಗೆಗೆ ಅನುಮತಿ ನೀಡುವ ಮೂಲಕ ಮಾ.3ರಂದು ಹೊರಡಿಸಿರುವ ಆದೇಶಕ್ಕೆ ತಿದ್ದುಪಡಿ ಮಾಡಬೇಕು ಎಂದು ಧರ್ಮರಾಯ ಸ್ವಾಮಿ ದೇವಾಲಯ ತನ್ನ ಅರ್ಜಿಯಲ್ಲಿ ನ್ಯಾಯಾಲಯವನ್ನು ಕೋರಿತ್ತು.

ಇಂದು ‘ಹಸಿ ಕರಗ’ ಸಂಭ್ರಮ

ಐತಿಹಾಸಿಕ ಬೆಂಗಳೂರು ಕರಗ ಮಹೋತ್ಸವ ಆರಂಭಗೊಂಡು ಏಳನೇ ದಿನವಾದ ಗುರುವಾರ ತಡರಾತ್ರಿ ಸಡಗರದ ‘ಹಸಿ ಕರಗ’ ಉತ್ಸವ ಜರುಗಲಿದೆ. ಶ್ರೀಧರ್ಮರಾಯ ಸ್ವಾಮಿ ದೇವಸ್ಥಾನದಲ್ಲಿ ಕಳೆದ ಏ.8ರಿಂದ ಆರಂಭಗೊಂಡ ಕರಗ ಮಹೋತ್ಸವದ ಅಂಗವಾಗಿ ವಿವಿಧ ಧಾರ್ಮಿಕ ಕೈಂಕರ್ಯಗಳು, ವಿಧಿ ವಿಧಾನಗಳು ಮುಂದುವರಿದಿವೆ. ಗುರುವಾರ ತಡರಾತ್ರಿ(ಶುಕ್ರವಾರ ಮುಂಜಾನೆ) 3 ಗಂಟೆಗೆ ಕಬ್ಬನ್‌ ಉದ್ಯಾನದಲ್ಲಿನ ಸಂಪಂಗಿ ಅಂಗಳ ಶಕ್ತಿ ಪೀಠದಲ್ಲಿ ದ್ರೌಪದಮ್ಮ ದೇವರಿಗೆ ವಿಶೇಷ ಪೂಜೆಗಳು ನೆರವೇರಲಿದೆ. ನಂತರ ಅಲ್ಲಿಂದ ‘ಹಸಿ ಕರಗ ಉತ್ಸವ’ ಪ್ರಮುಖ ಬೀದಿಗಳ ಮೂಲಕ ಮೆರವಣಿಗೆ ಸಾಗಲಿದೆ.

ಮುಸ್ಲಿಮರ ಸಹಭಾಗಿತ್ವದಲ್ಲೇ ನಡೆಯಲಿದೆ ಬೆಂಗಳೂರು ಕರಗ ಮಹೋತ್ಸವ

ಜನರ ಕಷ್ಟ ಪರಿಹಾರಕ್ಕಾಗಿ ದ್ರೌಪದಮ್ಮ ತಾಯಿಯು ತ್ರಯೋದಶಿಯಂದು(ಗುರುವಾರ) ಭೂಮಿಗೆ ಬರುತ್ತಾಳೆ ಎಂಬ ನಂಬಿಕೆ ಇದೆ. ಈ ಸಂದರ್ಭವನ್ನು ‘ಹಸಿ ಕರಗ’ ಎಂದು ಬಹುಕಾಲದಿಂದಲೂ ಆಚರಿಸಿಕೊಂಡು ಬರಲಾಗುತ್ತಿದೆ. ಇದರ ಪ್ರಯುಕ್ತ ಸಂಜೆಯಿಂದಲೇ ದೇವರ ಮೂರ್ತಿ ಪೂಜೆ, ಅಲಂಕಾರಗಳು ನಡೆಯಲಿವೆ. ನಂತರ ದ್ರೌಪದಮ್ಮನ ಮೂರ್ತಿ ಕಂಕುಳಲ್ಲಿ ಇಟ್ಟುಕೊಂಡು ಸಂಪಂಗಿ ಅಂಗಳ ಶಕ್ತಿ ಪೀಠದಿಂದ ಸಾಗಿ ಬೆಳಗ್ಗೆ 7 ಗಂಟೆ ವೇಳೆಗೆ ದೇವಸ್ಥಾನ ತಲುಪುವುದು. ಇದರೊಂದಿಗೆ ‘ಹಸಿ ಕರಗ’ ಆಚರಣೆ ಸಂಪನ್ನಗೊಳ್ಳಲಿದೆ.

ಈ ವೇಳೆ ಸಾವಿರಾರು ವೀರಕುಮಾರರು, ಪೂಜಾರಿ ಮನೆತನದವರು, ಭಕ್ತರು ಸೇರಿದಂತೆ ಸಾವಿರಾರು ಮಂದಿ ದೇವಿಯ ದರ್ಶನ ಪಡೆದು ಪುನೀತರಾಗುತ್ತಾರೆ. ಮರುದಿನ ಶುಕ್ರವಾರ ದ್ರೌಪದಮ್ಮ ದೇವಿಗೆ ರಾತ್ರಿ 12 ಗಂಟೆಯಿಂದ ವಿವಿಧ ಸೇವೆಗಳು ಆರಂಭವಾಗುತ್ತವೆ. ಪೊಂಗಲು ಸೇವೆ, ಪುರಾಣ ಕಥನದಂತಹ ಸೇವೆಗಳು ನಡೆಯಲಿದೆ. ಬಳಿಕ ಇದೇ ವೇಳೆ ಭÜಕ್ತರಿಗೆ ಪ್ರಸಾದ ಸೇವೆ ನಡೆಯಲಿದೆ ಎಂದು ದೇವಸ್ಥಾನ ಉತ್ಸವ ಸಮಿತಿ ಅಧ್ಯಕ್ಷ ಸತೀಶ್‌ ಮಾಹಿತಿ ನೀಡಿದರು.
 

Latest Videos
Follow Us:
Download App:
  • android
  • ios