ಜಾಮೀನು ಸಿಕ್ಕವರಿಗೆ ಬಾಡಿ ವಾರಂಟ್ ಅನ್ವಯಿಸದು: ಹೈಕೋರ್ಟ್
* ಒಂದು ಕೇಸಲ್ಲಿ ಜಾಮೀನು ಸಿಕ್ರೆ ಇನ್ನೊಂದು ಕೇಸಲ್ಲಿ ವಾರಂಟ್ ಅನ್ವಯ ಆಗಲ್ಲ
* ಇನ್ನೊಂದು ಕೇಸಿನ ನೆಪ ಹೇಳಿ ಜಾಮೀನು ಸಿಕ್ಕವರನ್ನು ಜೈಲಲ್ಲಿ ಇರಿಸುವುದು ಅಕ್ರಮ
* ತುಮಕೂರು ಪ್ರಕರಣದಲ್ಲಿ ಹೈಕೋರ್ಟ್ ಮಹತ್ವದ ಆದೇಶ
ವೆಂಕಟೇಶ್ ಕಲಿಪಿ
ಬೆಂಗಳೂರು(ಏ.09): ಪ್ರಕರಣವೊಂದರಲ್ಲಿ ನ್ಯಾಯಾಲಯದಿಂದ ಜಾಮೀನು(Bail) ದೊರೆತಿದ್ದರೂ ಮತ್ತೊಂದು ಪ್ರಕರಣದಲ್ಲಿ ಬಾಡಿ ವಾರೆಂಟ್ ಜಾರಿಯಾಗಿದೆ ಎಂಬ ಕಾರಣಕ್ಕೆ ಆರೋಪಿಯನ್ನು ಜೈಲಿನಲ್ಲಿಯೇ ಇಟ್ಟುಕೊಳ್ಳುವುದು ಅಕ್ರಮ ಬಂಧನವಾಗುತ್ತದೆ ಎಂದು ಹೈಕೋರ್ಟ್(High Court) ಮಹತ್ವದ ಆದೇಶ ಮಾಡಿದೆ. ತುಮಕೂರಿನ ಶಿರಾ ತಾಲೂಕಿನ ನಿವಾಸಿಗಳಾದ ಎಂ.ಶಶಿಧರ್ ಮತ್ತು ಅಭಿಷೇಕ್ ಸಲ್ಲಿಸಿದ್ದ ಜಾಮೀನು ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ವಿ.ಶ್ರೀಷಾನಂದ ಈ ಆದೇಶ ಮಾಡಿದ್ದಾರೆ.
ಪ್ರಕರಣದ ವಿವರ:
ಶಶಿಧರ್ ಮತ್ತು ಅಭೀಷೇಕ್ ವಿರುದ್ಧ ತುಮಕೂರಿನ ನ್ಯೂ ಎಕ್ಸ್‌ಟೆನ್ಷನ್ ಟೌನ್ ಠಾಣೆಯಲ್ಲಿ 2021ರ ಡಿ.6ರಂದು ಪ್ರಕರಣ ದಾಖಲಾಗಿತ್ತು. ಆ ಪ್ರಕರಣದಲ್ಲಿ ಅವರನ್ನು ನ್ಯಾಯಾಂಗ ಬಂಧನಕ್ಕೆ (ಜೈಲಿಗೆ) ಒಪ್ಪಿಸಲಾಗಿತ್ತು. ನಂತರ ತುಮಕೂರಿನ ಜಯನಗರ ಪೊಲೀಸ್(Police) ಠಾಣೆಯಲ್ಲಿ ಇದೇ ಆರೋಪಿಗಳ ವಿರುದ್ಧ ಮತ್ತೊಂದು ಪ್ರಕರಣ ದಾಖಲಾಗಿತ್ತು. ಆ ಸಂಬಂಧ ಮ್ಯಾಜಿಸ್ಪ್ರೇಟ್ ಕೋರ್ಚ್ 2021ರ ಡಿ.29ರಂದು ಬಾಡಿ ವಾರೆಂಟ್ ಜಾರಿ ಮಾಡಿತ್ತು.
ಅದರ ಆಧಾರದ ಮೇಲೆ ಡಿ.29 ಮತ್ತು 30ರವರೆಗೆ ಆರೋಪಿಗಳನ್ನು ತಮ್ಮ ವಶಕ್ಕೆ ಪಡೆದಿದ್ದ ಜಯನಗರ ಠಾಣಾ ಪೊಲೀಸರು ವಿಚಾರಣೆ ನಡೆಸಿ ಮರಳಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದರು. 2022ರ ಜ.18ರಂದು ನ್ಯೂ ಎಕ್ಸ್‌ಟೆನ್ಷನ್ ಪೊಲೀಸ್ ಠಾಣೆಯ ಪ್ರಕರಣದಲ್ಲಿ ನ್ಯಾಯಾಲಯ ಜಾಮೀನು ನೀಡಿತ್ತು. ಆದರೆ, ಜಯನಗರ ಪೊಲೀಸ್ ಠಾಣೆಯ ಪ್ರಕರಣದಲ್ಲಿ ಬಾಡಿ ವಾರೆಂಟ್ ಜಾರಿಯಾಗಿದೆ ಎಂಬ ಕಾರಣಕ್ಕೆ ಆರೋಪಿಗಳನ್ನು(Accused) ಜೈಲಿನಿಂದ(Jail) ಬಿಡುಗಡೆ ಮಾಡಿರಲಿಲ್ಲ. ಇದರಿಂದ ಜಾಮೀನು ಕೋರಿ ಕ್ರಿಮಿನಲ್ ಅರ್ಜಿ ಸಲ್ಲಿಸಿದ್ದರು.
Kannada Language: ಪದವಿಯಲ್ಲಿ ಕನ್ನಡ ಕಡ್ಡಾಯಕ್ಕೆ ಹೈಕೋರ್ಟ್ ತಡೆ
ಅಕ್ರಮ ಬಂಧನ:
ಪ್ರಕರಣದ ವಿಚಾರಣೆ ನಡೆಸಿದ ಹೈಕೋರ್ಟ್, ಒಂದು ಪ್ರಕರಣದಲ್ಲಿ ನ್ಯಾಯಾಂಗ ಬಂಧನದಲ್ಲಿರುವ ಆರೋಪಿಗೆ ಆ ಪ್ರಕರಣದಲ್ಲಿ ಜಾಮೀನು ದೊರೆತ ಸಂದರ್ಭದಲ್ಲಿ ಮತ್ತೊಂದು ಪ್ರಕರಣದಲ್ಲಿ ಬಾಡಿ ವಾರೆಂಟ್ ಜಾರಿಯಾಗಿದೆ ಎಂಬ ಕಾರಣಕ್ಕೆ ಆತನನ್ನು ನ್ಯಾಯಾಂಗ ಬಂಧನದಲ್ಲಿ ಮುಂದುವರಿಸಲು ಜೈಲು ಪ್ರಾಧಿಕಾರಕ್ಕೆ (ಅಧಿಕಾರಿಗಳಿಗೆ) ಅಧಿಕಾರ ಇರುವುದಿಲ್ಲ. ಪ್ರಕರಣವೊಂದರ ವಿಚಾರಣಾಧೀನ ಅಥವಾ ಶಿಕ್ಷೆಗೆ ಗುರಿಯಾದ ಕೈದಿಯನ್ನು ಮತ್ತೊಂದು ಪ್ರಕರಣ ಸಂಬಂಧ ಬಾಡಿ ವಾರೆಂಟ್ ಮೂಲಕ ನ್ಯಾಯಾಂಗ ಬಂಧನದಿಂದ ವಶಕ್ಕೆ ಪಡೆದಂತಹ ಸಂದರ್ಭದಲ್ಲಿ ತನಿಖೆ/ವಿಚಾರಣೆ ಮುಗಿಸಿದ ನಂತರ ಮರಳಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಬೇಕು. ನಂತರ ಮತ್ತೆ ವಶಕ್ಕೆ ಪಡೆಯಬೇಕಾದರೆ ನ್ಯಾಯಾಲಯದಿಂದ ಹೊಸದಾಗಿ ಆದೇಶ ಪಡೆದುಕೊಳ್ಳಬೇಕಾಗುತ್ತದೆ. ಹಾಗಾಗಿ, ಬಾಡಿ ವಾರೆಂಟ್ ಆದೇಶವನ್ನು ವಿಸ್ತರಿಸಲು ಮ್ಯಾಜಿಸ್ಪ್ರೇಟ್ ಮತ್ತು ಜಿಲ್ಲಾ ನ್ಯಾಯಾಲಯಕ್ಕೆ ಅಧಿಕಾರ ಇಲ್ಲ ಎಂದು ಹೈಕೋರ್ಚ್ ಆದೇಶಿಸಿದೆ.
Karnataka High Court ಸಿದ್ಧಗಂಗೆ ಶಿವಕುಮಾರ ಸ್ವಾಮೀಜಿಗೆ ಭಾರತ ರತ್ನ ಕೋರಿ ಸಲ್ಲಿಸಿದ್ದ ಅರ್ಜಿ ವಜಾ!
ಬಿಡುಗಡೆ ಆದರೆ ತನಿಖೆಗೆ ಅಡ್ಡಿ: ಸರ್ಕಾರಿ ವಕೀಲ
ಆರೋಪಿ ಕುಖ್ಯಾತ ಕ್ರಿಮಿನಲ್(Criminal) ಆಗಿದ್ದು, ಜೈಲಿನಿಂದ ಬಿಡುಗಡೆ ಮಾಡಿದರೆ ಆತನ ವಿರುದ್ಧದ ಇತರೆ ಪ್ರಕರಣಗಳ ತನಿಖೆಗೆ ಅಡ್ಡಿಯಾಗಬಹುದು ಎಂದು ರಾಜ್ಯ ಸರ್ಕಾರಿ ಅಭಿಯೋಜಕರು ನ್ಯಾಯಾಲಯದ ಮುಂದೆ ಆತಂಕ ವ್ಯಕ್ತಪಡಿಸಿದರು.
ಅದನ್ನು ಪರಿಗಣಿಸಿದ ನ್ಯಾಯಪೀಠ,ಆರೋಪಿ ಯಾವ ಪ್ರಕರಣದಲ್ಲಿ ಪೊಲೀಸರಿಗೆ ಬೇಕಾಗಿದ್ದಾನೆ? ಜೈಲಿನಲ್ಲಿದ್ದಾನೆಯೇ, ಆತನ ವಿರುದ್ಧ ಎಷ್ಟುಪ್ರಕರಣಗಳಿವೆ, ಎಷ್ಟು ಪ್ರಕರಣಗಳಲ್ಲಿ ಜಾಮೀನು ದೊರೆತಿದೆ, ಬಾಡಿ ವಾರೆಂಟ್ ಜಾರಿಯಾಗಿದೆ, ಎಂಬ ಬಗ್ಗೆ ನಿಗಾವಹಿಸಲು ಎನ್‌ಐಸಿ ಅಭಿವೃದ್ಧಿಪಡಿಸಿರುವ ‘ಇ-ಪ್ರಿಸನ್ಸ್’ ಮಾದರಿಯಲ್ಲಿ ಸೂಕ್ತ ಮತ್ತು ಅಗತ್ಯವಾದ ವೆಬ್ ಅಪ್ಲಿಕೇಷನ್ ರೂಪಿಸಲು ರಾಜ್ಯ ಗೃಹ ಇಲಾಖೆ(Home Department) ಮುಕ್ತವಾಗಿದೆ ಎಂದು ಸಲಹೆ ನೀಡಿದೆ. ಆದರೆ, ಈ ಆತಂಕ ಆರೋಪಿಯನ್ನು ಜೈಲಿನಲ್ಲಿಯೇ ಬಂಧಿಸಿಡುವುದಕ್ಕೆ ದೊರೆತ ಅನುಮತಿ ಆಗುವುದಿಲ್ಲ ಎಂದು ಸ್ಪಷ್ಟಪಡಿಸಿದೆ.