ಜನರಿಯ 8ರೊಳಗೆ ವರದಿ ಸಲ್ಲಿಸಲು ಸರ್ಕಾರಕ್ಕೆ ನಿರ್ದೇಶನ| ಹೈಕೋರ್ಟ್ ನೀಡಿರುವ ಹಲವು ನಿರ್ದೇಶನಗಳನ್ನು ಪಾಲಿಸುವಲ್ಲಿ ಸರ್ಕಾರ ವಿಫಲ| ಜ.11ಕ್ಕೆ ವಿಚಾರಣೆ ಮುಂದೂಡಿದ ನ್ಯಾಯಾಲಯ|
ಬೆಂಗಳೂರು(ಡಿ.24): ಹೂಡಿಕೆದಾರರ ಠೇವಣಿ ಹಣ ದುರ್ಬಳಕೆ ಪ್ರಕರಣಕ್ಕೆ ಸಂಬಂಧಿಸಿದಂತೆ ನಗರದ ಗುರು ರಾಘವೇಂದ್ರ ಬ್ಯಾಂಕ್‌ಗೆ ಸೇರಿದ ಎಲ್ಲ ಆಸ್ತಿಗಳನ್ನು ಜಪ್ತಿ ಮಾಡುವಂತೆ ಸರ್ಕಾರಕ್ಕೆ ಹೈಕೋರ್ಟ್ ನಿರ್ದೇಶಿಸಿದೆ.
ಬ್ಯಾಂಕ್ ಹಗರಣದ ಕುರಿತು ಉನ್ನತ ಮಟ್ಟದ ತನಿಖೆಗೆ ಆದೇಶಿಸಲು ಕೋರಿ ಕೆ.ಆರ್.ನರಸಿಂಹಮೂರ್ತಿ ಮತ್ತಿತರರು ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿ ವಿಚಾರಣೆ ನಡೆಸಿದ ಮುಖ್ಯ ನ್ಯಾಯಮೂರ್ತಿ ಎ.ಎಸ್.ಓಕ ಅವರ ನೇತೃತ್ವದ ವಿಭಾಗೀಯ ಪೀಠ ಈ ಆದೇಶ ಮಾಡಿತು.
ರಾಘವೇಂದ್ರ ಬ್ಯಾಂಕ್ ಹಗರಣ: ವಂಚಕರಿದ 1 ಸಾವಿರ ಕೋಟಿ ಆಸ್ತಿ ಜಪ್ತಿ?
ಠೇವಣಿದಾರರ ಹಿತದೃಷ್ಟಿಯಿಂದ ಕೆಪಿಐಡಿ ಕಾಯ್ದೆಯಡಿ ಬ್ಯಾಂಕ್‌ನ ಎಲ್ಲ ಆಸ್ತಿಗಳನ್ನು ಮುಟ್ಟುಗೋಲು ಹಾಕಿಕೊಳ್ಳಬೇಕು. ಆ ಕುರಿತ ವರದಿಯನ್ನು 2021ರ ಜ.8ರೊಳಗೆ ಸಲ್ಲಿಸಬೇಕು. ಆರ್‌ಬಿಐ ಸೂಚಿಸಿರುವ ಇಬ್ಬರು ನಿವೃತ್ತ ಬ್ಯಾಂಕ್ ಅಧಿಕಾರಿಗಳ ಪೈಕಿ ಒಬ್ಬರನ್ನು ಈಗಾಗಲೇ ಬ್ಯಾಂಕ್‌ಗೆ ಆಡಳಿತಾಧಿಕಾರಿಯಾಗಿ ನೇಮಿಸಲಾಗಿದೆ. ಮತ್ತೊಬ್ಬರನ್ನು ಗುರು ರಾಘವೇಂದ್ರ ಕೋ-ಆಪರೇಟಿವ್ ಸೊಸೈಟಿಗೆ ಆಡಳಿತಾಧಿಕಾರಿಯಾಗಿ ನೇಮಿಸಲು ಕ್ರಮ ಕೈಗೊಳ್ಳಬೇಕು ಎಂದು ಸರ್ಕಾರಕ್ಕೆ ನಿರ್ದೇಶಿಸಿತು.
ಪ್ರಕರಣ ಸಂಬಂಧ ಹೈಕೋರ್ಟ್ ನೀಡಿರುವ ಹಲವು ನಿರ್ದೇಶನಗಳನ್ನು ಪಾಲಿಸುವಲ್ಲಿ ಸರ್ಕಾರ ವಿಫಲವಾಗುತ್ತಿದೆ. ಹೀಗಾಗಿ ಸರ್ಕಾರ ವಿಳಂಬ ಮಾಡದೆ ಕೋರ್ಟ್ ನಿರ್ದೇಶನಗಳ ಪಾಲನೆಗೆ ಕ್ರಮ ಕೈಗೊಳ್ಳಬೇಕು. ತಪ್ಪಿದರೆ ನ್ಯಾಯಾಂಗ ನಿಂದನೆ ಪ್ರಕರಣದಡಿ ಕ್ರಮ ಜರುಗಿಸಬೇಕಾಗುತ್ತದೆ ಎಂದು ಎಚ್ಚರಿಸಿತು. ಅಲ್ಲದೆ, ಬ್ಯಾಂಕ್‌ನ ಬಾಕಿ ಸಾಲ ವಸೂಲಿ ಸೇರಿದಂತೆ ಹಲವು ವಿಚಾರಗಳಿಗೆ ಸಂಬಂಧಿಸಿದಂತೆ ನ್ಯಾಯಾಲಯ ಹೊರಡಿಸಿರುವ ಆದೇಶಗಳ ಅನುಪಾಲನಾ ವರದಿಯನ್ನು ಮುಂದಿನ ವಿಚಾರಣೆ ವೇಳೆ ತಪ್ಪದೆ ಸಲ್ಲಿಸುವಂತೆ ಆಡಳಿತಾಧಿಕಾರಿಗೆ ಸೂಚಿಸಿದ ನ್ಯಾಯಪೀಠ, ವಿಚಾರಣೆಯನ್ನು ಜ.11ಕ್ಕೆ ಮುಂದೂಡಿತು.
Read Exclusive COVID-19 Coronavirus News updates, from Karnataka, India and World at Asianet News Kannada.
ವರ್ಚುಯಲ್ ಬೋಟ್ ರೇಸಿಂಗ್ ಗೇಮ್ ಆಡಿ ಮತ್ತು ನಿಮಗೆ ನೀವೇ ಸವಾಲು ಹಾಕಿಕೊಳ್ಳಿ ಈಗಲೇ ಆಡಲು ಕ್ಲಿಕ್ಕಿಸಿ
Last Updated Dec 24, 2020, 7:07 AM IST