ರಾಘವೇಂದ್ರ ಬ್ಯಾಂಕ್ ಹಗರಣ: ವಂಚಕರಿಂದ 1 ಸಾವಿರ ಕೋಟಿ ಆಸ್ತಿ ಜಪ್ತಿ?
ಸಿಐಡಿ ವರದಿ| ಕಾನೂನು ಬಾಹಿರವಾಗಿ ಬ್ಯಾಂಕ್‌ನಿಂದ 400 ಕೋಟಿ ಸಾಲ| ಒಟ್ಟಾರೆ 900 ಕೋಟಿ ಅಕ್ರಮ ಪತ್ತೆ| ಇನ್ನೂ ಲೆಕ್ಕ ಪರಿಶೋಧನೆ| ಬಸವನಗುಡಿಯ ಶ್ರೀ ಗುರು ರಾಘವೇಂದ್ರ ಬ್ಯಾಂಕ್ ಅಧ್ಯಕ್ಷ, ಆತನ ಪುತ್ರ ಇನ್ನಿತರ ಆರೋಪಿಗಳ ಆಸ್ತಿ|
ಬೆಂಗಳೂರು(ಡಿ.12): ನಗರದ ಬಸವನಗುಡಿಯ ಶ್ರೀ ಗುರು ರಾಘವೇಂದ್ರ ಬ್ಯಾಂಕ್ ಬಹುಕೋಟಿ ವಂಚನೆ ಪ್ರಕರಣ ಸಂಬಂಧ ಬ್ಯಾಂಕ್‌ನ ಅಧ್ಯಕ್ಷ ಹಾಗೂ ಅವರ ಪುತ್ರ ಸೇರಿದಂತೆ ಆರೋಪಿಗಳ ಒಡೆತನದ ಸುಮಾರು ಒಂದು ಸಾವಿರ ಕೋಟಿ ರು. ಮೌಲ್ಯದ ಆಸ್ತಿ ಜಪ್ತಿಗೆ ಇಡಿ ಮತ್ತು ಸಕ್ಷಮ ಪ್ರಾಧಿಕಾರಕ್ಕೆ ಸಿಐಡಿ ವರದಿ ಸಲ್ಲಿಸಿದೆ.
ಬೆಂಗಳೂರು ಹಾಗೂ ಚಿಕ್ಕಮಗಳೂರು ಸೇರಿದಂತೆ ರಾಜ್ಯದ ವಿವಿಧೆಡೆ ಆರೋಪಿಗಳ ಚರ ಮತ್ತು ಸ್ಥಿರ ಆಸ್ತಿಯನ್ನು ಗುರುತಿಸಲಾಗಿದೆ. ಸರ್ಕಾರದ ಮಾರ್ಗಸೂಚಿ ದರಪಟ್ಟಿ ಆಧರಿಸಿ ಆಸ್ತಿ ಮೌಲ್ಯವನ್ನು ಅಂದಾಜಿಸಲಾಗಿದೆ. ಇದನ್ನು ಸಾರ್ವಜನಿಕವಾಗಿ ಹರಾಜಿನ ಮೂಲಕ ಮಾರಾಟ ಮಾಡಿ ಬ್ಯಾಂಕ್‌ನ ಠೇವಣಿದಾರರಿಗೆ ಹಣ ಮರಳಿಸಲು ಕ್ರಮ ತೆಗೆದುಕೊಳ್ಳುವಂತೆ ಸಹ ಸಂಬಂಧಪಟ್ಟಇಲಾಖೆಗಳಿಗೆ ಕೋರಲಾಗಿದೆ ಎಂದು ಸಿಐಡಿ ಮೂಲಗಳು ‘ಕನ್ನಡಪ್ರಭ’ಕ್ಕೆ ಮಾಹಿತಿ ನೀಡಿವೆ.
ಈ ಬಹುಕೋಟಿ ವಂಚನೆ ಕೃತ್ಯದಲ್ಲಿ ಬ್ಯಾಂಕ್‌ನ ಅಧ್ಯಕ್ಷ ಕೆ.ರಾಮಕೃಷ್ಣ ಹಾಗೂ ಅವರ ಪುತ್ರರೂ ಆಗಿರುವ ಉಪಾಧ್ಯಕ್ಷ ನಿರ್ದೇಶಕ ಕೆ.ಆರ್.ವೇಣುಗೋಪಾಲ್ ಸೇರಿದಂತೆ ನಿರ್ದೇಶಕರು ಬಂಧಿತರಾಗಿದ್ದಾರೆ. ಬ್ಯಾಂಕ್‌ಗೆ ಸುಳ್ಳು ದಾಖಲೆ ಸೃಷ್ಟಿಸಿ ಸಾಲ ಮಂಜೂರು ಮಾಡಿಕೊಂಡು ಆರೋಪಿಗಳು ಕೋಟ್ಯಂತರ ಹಣ ವಂಚಿಸಿರುವುದು ತನಿಖೆಯಲ್ಲಿ ಬೆಳಕಿಗೆ ಬಂದಿದೆ. ಬ್ಯಾಂಕಿನಲ್ಲಿ ಅಕ್ರಮವಾಗಿ ಗಳಿಸಿದ ಹಣವನ್ನು ವಿನಿಯೋಗಿಸಿ ಸಂಪಾದಿಸಿದ್ದ ಆಸ್ತಿಯನ್ನು ಮಾತ್ರ ಮುಟ್ಟುಗೋಲು ಹಾಕಿಕೊಳ್ಳಲಾಗುತ್ತದೆ ಎಂದು ಅಧಿಕಾರಿಗಳು ಹೇಳಿದ್ದಾರೆ.
ಗುರು ರಾಘವೇಂದ್ರ ಬ್ಯಾಂಕ್ ವಂಚನೆ: ಕೊನೆಗೂ ಅಧ್ಯಕ್ಷ, 7 ನಿರ್ದೇಶಕರ ಬಂಧನ
ಸಾಲ 400 ಕೋಟಿ, ಬಡ್ಡಿ 500 ಕೋಟಿ:
ಬ್ಯಾಂಕಿನಲ್ಲಿ ಸುಮಾರು 1400 ಕೋಟಿ ಅಕ್ರಮ ನಡೆದಿದೆ ಎಂಬ ಆರೋಪವಿದೆ. ಆದರೆ ಇದುವರೆಗಿನ ತನಿಖೆಯಲ್ಲಿ ಕಾನೂನುಬಾಹಿರವಾಗಿ ಆರೋಪಿಗಳು ಸುಮಾರು 400 ಕೋಟಿಯಷ್ಟು ಸಾಲ ಪಡೆದಿರುವ ಬಗ್ಗೆ ದಾಖಲೆಗಳು ಸಿಕ್ಕಿವೆ. ಈ ಸಾಲಕ್ಕೆ ಬಡ್ಡಿ, ಚಕ್ರ ಬಡ್ಡಿ ಹೀಗೆ 500 ಕೋಟಿಯಷ್ಟು ಬಡ್ಡಿ ವಿಧಿಸಲಾಗಿದೆ. ಹೀಗಾಗಿ ಬ್ಯಾಂಕಿಗೆ ಒಟ್ಟಾರೆ 900 ಕೋಟಿ ಅಕ್ರಮ ನಡೆದಿದೆ ಎಂದು ಪತ್ತೆ ಹಚ್ಚಲಾಗಿದೆ. ಇನ್ನು ಲೆಕ್ಕ ಪರಿಶೋಧನೆ ಪ್ರಕ್ರಿಯೆ ಮುಂದುವರೆದಿದೆ ಎಂದು ಸಿಐಡಿ ಮೂಲಗಳು ವಿವರಿಸಿವೆ.
ಈ ಸಾಲದಲ್ಲಿ ಪ್ರಮುಖವಾಗಿ 27 ಮಂದಿಯೇ ಸಾಲ ಪಡೆದಿದ್ದಾರೆ. ಅದರಲ್ಲಿ ಅಧ್ಯಕ್ಷ ಸೇರಿದಂತೆ ಆಡಳಿತ ಮಂಡಳಿಯ ಸದಸ್ಯರು, ತಮ್ಮ ಕುಟುಂಬದ ಸದಸ್ಯರು, ಪರಿಚಿತರು ಹಾಗೂ ಸಂಬಂಧಿಕರ ಹೀಗೆ ಬೇನಾಮಿ ಹೆಸರಿನಲ್ಲಿ ಅಕ್ರಮವಾಗಿ ಸಾಲ ಪಡೆದಿದ್ದಾರೆ. ಅಲ್ಲದೆ, 1,576 ಸಾಲದ ಖಾತೆಗಳಲ್ಲಿ 1,224 ಪ್ರಕರಣಕ್ಕೆ ಸಂಬಂಧಪಟ್ಟಂತೆ ದಾಖಲೆಗಳು/ ಕಡತಗಳು ಇಲ್ಲದಿರುವುದು ತನಿಖೆ ವೇಳೆ ಬೆಳಕಿಗೆ ಬಂದಿದೆ ಎಂದು ಸಿಐಡಿ ಮೂಲಗಳು ತಿಳಿಸಿವೆ.
ಠೇವಣಿ ಇಲ್ಲದಿದ್ದರೂ ಠೇವಣಿ ಇದೆ ಎಂದು ಸಾಲ ಮಂಜೂರು ಹಾಗೂ ಠೇವಣಿದಾರರ ಒಪ್ಪಿಗೆ ಸಹಿ ಪಡೆಯದೆ ಅವರ ಹೆಸರಿನಲ್ಲಿ ಸಾಲ ಮಂಜೂರು ಮಾಡಿದ್ದಾರೆ. ಈ ಮೂಲಕ ಆದಾಯ ಗುರುತಿಸುವಿಕೆ- ಆಸ್ತಿ ವರ್ಗೀಕರಣ ನಿಯಮಗಳನ್ನು ಉಲ್ಲಂಘನೆ ಮಾಡಿರುವುದು ಪ್ರಾಥಮಿಕ ತನಿಖೆಯಲ್ಲಿ ಗೊತ್ತಾಗಿದೆ. ಗುರು ರಾಘವೇಂದ್ರ ಕೋ-ಆಪರೇಟಿವ್ ಬ್ಯಾಂಕ್‌ನಲ್ಲಿ 40,661 ಗ್ರಾಹಕರಿದ್ದು, .231 ಕೋಟಿ ಠೇವಣಿ ಇಟ್ಟಿದ್ದಾರೆ ಎಂದು ತಿಳಿದು ಬಂದಿದೆ.
ಸಿಐಡಿಗೆ ಆಸ್ತಿ ಜಪ್ತಿ ಅಧಿಕಾರವಿಲ್ಲ
ಅಪರಾಧ ಪ್ರಕರಣಗಳಲ್ಲಿ ಆರೋಪಿಗಳ ಆಸ್ತಿ ಜಪ್ತಿಗೆ ಸಿಐಡಿಗೆ ಅಧಿಕಾರವಿಲ್ಲ. ಹೀಗಾಗಿ ಈ ಪ್ರಕರಣದಲ್ಲಿ ನೇಮಕವಾಗಿರುವ ಕೆಪಿಐಡಿ ಕಾಯ್ದೆಯಡಿ ಸಕ್ಷಮ ಪ್ರಾಧಿಕಾರ ಹಾಗೂ ಇಡಿ ಅಧಿಕಾರಿಗಳಿಗೆ ಆಸ್ತಿ ಮುಟ್ಟುಗೋಲಿಗೆ ವರದಿ ಸಲ್ಲಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಅಧ್ಯಕ್ಷನದ್ದೇ 50 ಕೋಟಿ ಸಾಲ
ಇನ್ನು ಬ್ಯಾಂಕ್‌ನಲ್ಲಿ ಅಕ್ರಮವಾಗಿ ಪಡೆದಿರುವ .400 ಕೋಟಿ ಸಾಲದಲ್ಲಿ ಅಧ್ಯಕ್ಷ ರಾಮಕೃಷ್ಣ ಅವರೇ .50 ಕೋಟಿ ಪಡೆದಿರುವುದು ಪತ್ತೆಯಾಗಿದೆ. ಈ ಸಂಬಂಧ ಕೆಲವು ದಾಖಲೆಗಳು ಕೂಡಾ ಲಭಿಸಿವೆ ಎಂದು ಅಧಿಕಾರಿಗಳು ಹೇಳಿದ್ದಾರೆ.