ಹೆಬ್ಬಾಳ ಜಂಕ್ಷನ್‌ನಲ್ಲಿನ ಸಂಚಾರ ದಟ್ಟಣೆಗೆ ಮೂಲಸೌಕರ್ಯ ಕಾಮಗಾರಿಗಳೇ ಕಾರಣ ಎಂದು ಬೆಂಗಳೂರು ಪೊಲೀಸ್ ಆಯುಕ್ತರು ತಿಳಿಸಿದ್ದಾರೆ. ನೀರಿನ ಟ್ಯಾಂಕರ್‌ಗಳ ಅತಿವೇಗ ಮತ್ತು ಕುಡಿತ ಚಾಲನೆ ತಡೆಗೆ ಕ್ರಮ ಕೈಗೊಳ್ಳಲಾಗುವುದು. ಗಲಭೆಗಳ ಬಗ್ಗೆ 112ಕ್ಕೆ ಮಾಹಿತಿ ನೀಡುವಂತೆ ಸಾರ್ವಜನಿಕರಲ್ಲಿ ಮನವಿ ಮಾಡಿದ್ದಾರೆ. ವೇಗದ ಕ್ರಮಕ್ಕೆ ಸಾಮಾಜಿಕ ಜಾಲತಾಣ ಬಳಸುವ ಬದಲು ನೇರವಾಗಿ ಪೊಲೀಸರಿಗೆ ಮಾಹಿತಿ ನೀಡಿ ಎಂದಿದ್ದಾರೆ.
ಬೆಂಗಳೂರು (ಏ.20): ಸಿಲಿಕಾನ್ ಸಿಟಿ ಬೆಂಗಳೂರಿನ ಹೆಬ್ಬಾಳ ಜಂಕ್ಷನ್‌ನಲ್ಲಿ ಇತ್ತೀಚಿನ ದಿನಗಳಲ್ಲಿ ಭಾರೀ ಟ್ರಾಫಿಕ್ ಜಾಮ್ ಉಂಟಾಗುತ್ತಿದ್ದು, ಇಲ್ಲಿ ನಡೆಯುತ್ತಿರುವ ಮೂಲ ಸೌಕರ್ಯ ಕಾಮಗಾರಿಗಳೇ ಮುಖ್ಯ ಕಾರಣವಾಗಿವೆ ಎಂದು ಬೆಂಗಳೂರು ನಗರ ಪೊಲೀಸ್ ಆಯುಕ್ತ ಬಿ. ದಯಾನಂದ ಹೇಳಿದರು.
ಬೆಂಗಳೂರಿನಲ್ಲಿ ಶನಿವಾರ ನಾಗರಿಕರೊಂದಿಗೆ ನೇರ ಸಂವಾದ ಕಾರ್ಯಕ್ರಮಲ್ಲಿ ಮಾತನಾಡಿದ ಅವರು, ಹೆಬ್ಬಾಳ ಜಂಕ್ಷನ್‌ನಲ್ಲಿ ಸಂಚಾರ ದಟ್ಟಣೆ ಮತ್ತು ನಗರದಲ್ಲಿ ನೀರಿನ ಟ್ಯಾಂಕರ್‌ಗಳ ಸಮಸ್ಯೆಯಂತಹ ವಿವಿಧ ಸಮಸ್ಯೆಗಳನ್ನು ಆಲಿಸಿ, ಅವುಗಳಿಗೆ ಸ್ಥಳದಲ್ಲಿಯೇ ಪರಿಹಾರ ಕ್ರಮಗಳನ್ನು ಕೈಗೊಳ್ಳುವುದಾಗಿ ತಿಳಿಸಿದರು. ಹೆಬ್ಬಾಳ ಜಂಕ್ಷನ್‌ನಲ್ಲಿ ಸಂಚಾರ ದಟ್ಟಣೆ ಹೆಚ್ಚಾಗಿದ್ದು, ಸುತ್ತಮುತ್ತ ನಡೆಯುತ್ತಿರುವ ವಿವಿಧ ಮೂಲಸೌಕರ್ಯ ಕಾಮಗಾರಿಗಳಿಂದಾಗಿ ಈ ಸಂಚಾರ ದಟ್ಟಣೆ ಉಂಟಾಗುತ್ತಿದೆ. ಇನ್ನು ಬೆಳಗ್ಗೆ ಹಾಗೂ ಸಂಜೆಯ ವೇಳೆ ಪೀಕ್ ಅವರ್‌ನಲ್ಲಿ ಅಂದರೆ ಜನದಟ್ಟಣೆಯ ಸಮಯದಲ್ಲಿ ಗಂಭೀರ ಟ್ರಾಫಿಕ್ ಸಮಸ್ಯೆ ಉಂಟಾಗುತ್ತದೆ. ಇಲ್ಲಿ ಬಿಬಿಎಂಪಿ, ಬಿಎಂಆರ್‌ಸಿಎಲ್ ಸೇರಿ ವಿವಿಧ ಸಂಸ್ಥೆಗಳಿಂದ ಮಾಡಲಾಗುತ್ತಿರುವ ಮೂಲಸೌಕರ್ಯ ಅಭಿವೃದ್ಧಿ ಯೋಜನೆಗಳನ್ನು ಪೂರ್ಣಗೊಳಿಸುವುದು ಟ್ರಾಫಿಕ್ ಸಮಸ್ಯೆ ನಿವಾರಣೆಗೆ ಉತ್ತಮ ಪರಿಹಾರವಾಗಿದೆ' ಎಂದು ಮಾಹಿತಿ ನೀಡಿದರು.
ಇದನ್ನೂ ಓದಿ: ರಸ್ತೆ ಗುಂಡಿ ಬಗ್ಗೆ ದೂರು ನೀಡಿದವರ X ಖಾತೆಯೇ ಬಂದ್! ಬಿಬಿಎಂಪಿ ಬ್ಲಾಕ್ ಮಾಡಿದ್ದು ಏಕೆ?
ಇನ್ನು ಹೆಬ್ಬಾಳದಲ್ಲಿ ಉಂಟಾಗುತ್ತಿರುವ ನೀರಿನ ಟ್ಯಾಂಕರ್‌ಗಳ ಹಾವಳಿಯ ಬಗ್ಗೆ ಮಾತನಾಡಿದ ಅವರು, ಇಲ್ಲಿ ನೀರಿನ ಟ್ಯಾಂಕರ್ ಚಾಲಕರು ನಿರ್ಲಕ್ಷ್ಯ ಮತ್ತು ಅತಿವೇಗದ ಚಾಲನೆ ಮಾಡುವುದು ಕಂಡುಬಂದಿದೆ. ಇದಕ್ಕೆ ಕಾರಣ ಕೆಲವು ಸಂದರ್ಭಗಳಲ್ಲಿ ಟ್ಯಾಂಕರ್ ವಾಹನ ಚಾಲಕರು ಕುಡಿದು ವಾಹನ ಚಲಾಯಿಸುವ ಬಗ್ಗೆ ಪೊಲೀಸರಿಗೆ ತಿಳಿದಿತ್ತು. ಈ ಹಿನ್ನೆಲೆಯಲ್ಲಿ ಇಂತಹ ಟ್ಯಾಂಕರ್‌ಗಳ ಚಾಲಕರನ್ನು ಪರಿಶೀಲನೆ ಮಾಡಲಾಗುತ್ತಿದೆ. ಇನ್ನು 'ಈ ವಾಹನಗಳ ಪರವಾನಗಿಗಳು ಮತ್ತು ಅವು ಯಾವ ಷರತ್ತುಗಳ ಅಡಿಯಲ್ಲಿ ನಗರದಲ್ಲಿ ಸಂಚಾರ ಮಾಡಬೇಕು ಎಂಬುದನ್ನು ಪರಿಶೀಲಿಸಲು ನಾವು ಆರ್‌ಟಿಒ ಅಧಿಕಾರಿಗಳೊಂದಿಗೆ ವಿಶೇಷ ಡ್ರೈವ್ ಗಳನ್ನು ನಡೆಸುತ್ತಿದ್ದೇವೆ' ಎಂದು ತಿಳಿಸಿದರು.
ಸೋಶಿಯಲ್ ಮೀಡಿಯಾ ವೇದಿಕೆಗಳಲ್ಲಿ ಪ್ರಸಾರವಾದ ಈ ಸಂವಾದದಲ್ಲಿ ಸಂಚಾರ ನಿರ್ವಹಣೆ, ಗಲಾಟೆ, ವೀಲಿಂಗ್ ಮತ್ತು ಲಂಚ ಮುಂತಾದ ವಿಷಯಗಳ ಬಗ್ಗೆ ಮಾತನಾಡಿದರು. ರಸ್ತೆಗಳಲ್ಲಿ ಗಲಭೆ ಘಟನೆ ನಡೆದರೆ ತಕ್ಷಣವೇ 112 ಸಂಖ್ಯೆಗೆ ಪೊಲೀಸರಿಗೆ ಮಾಹಿತಿ ನೀಡಿ. ಯಾವುದೇ ಸ್ಥಳದಲ್ಲಿ ಗಲಭೆ ಅಥವಾ ಸಮಾಜಬಾಹಿರ ಘಟನೆಗಳು ನಡೆದಲ್ಲಿ ಅವುಗಳನ್ನು ಮೊಬೈಲ್‌ನಲ್ಲಿ ರೆಕಾರ್ಡ್ ಮಾಡಿ ಸಾಮಾಜಿಕ ಮಾಧ್ಯಮದಲ್ಲಿ ಪೋಸ್ಟ್ ಮಾಡುವ ಬದಲು, ನಮಗೆ ತಕ್ಷಣ ಮಾಹಿತಿ ನೀಡಿದರೆ ತತಕ್ಷಣವೇ ಸ್ಥಳಕ್ಕೆ ಬಂದು ಪರಿಹರಿಸುವುದು ತುಂಬಾ ಸುಲಭವಾಗಲಿದೆ. ನಮ್ಮ ಬೆಂಗಳೂರು ಪೋಲೀಸರ ಪ್ರತಿಕ್ರಿಯೆ ತುಂಬಾ ಬೇಗನೆ ಸಿಗಲಿದ್ದು, ನಾವು ಬೇಗನೆ ಸ್ಥಳಕ್ಕೆ ಬರುತ್ತೇವೆ ಎಂದು ಪೊಲೀಸ್ ಆಯುಕ್ತ ದಯಾನಂದ್ ಭರವಸೆ ನೀಡಿದರು.
ಇದನ್ನೂ ಓದಿ: ಬೆಂಗಳೂರು ಮೆಟ್ರೋ 13 ವರ್ಷ ಸೇವೆಯಲ್ಲಿ 3ನೇ ಅತ್ಯಧಿಕ ಪ್ರಯಾಣಿಕ ಸಂಚಾರ ದಾಖಲೆ!
