ಶ್ರೀಶೈಲ ಮಠದ 

ಬೆಳಗಾವಿ(ಜ.08): ಕೇಂದ್ರ ಸರ್ಕಾರದ ಮಹತ್ವಾಕಾಂಕ್ಷಿ ಸ್ಮಾರ್ಟ್‌ಸಿಟಿ ಯೋಜನೆಯಡಿ ಎರಡನೇ ರಾಜಧಾನಿ ಎಂಬ ಹೆಗ್ಗಳಿಕೆ ಹೊತ್ತಿರುವ ಬೆಳಗಾವಿ ಮಹಾನಗರದಲ್ಲಿ ವಿಳಂಬವಾದರೂ ಇದೀಗ ಅಭಿವೃದ್ಧಿ ಕಾಮಗಾರಿ ಭರದಿಂದ ಸಾಗುತ್ತಿವೆ. 

ನಗರದ ವಿವಿಧೆಡೆ ರಸ್ತೆ ಅಭಿವೃದ್ಧಿ ಕಾಮಗಾರಿ ಕೈಗೊಂಡಿರುವುದರಿಂದ ವಾಹನ ಸಂಚಾರ ವ್ಯವಸ್ಥೆ ಹದಗೆಟ್ಟಿದೆ. ವಾಹನ ಸಂಚಾರ ದಟ್ಟಣೆ ಸಮಸ್ಯೆ ಕಾಡುತ್ತಿದೆ. ಸ್ವಲ್ಪ ಯಾಮಾರಿಸಿದರೂ ಅಪಘಾತ ತಪ್ಪಿದ್ದಲ್ಲ. ರಸ್ತೆ ಕಾಮಗಾರಿ ನಡೆಯುತ್ತಿರುವ ಹಿನ್ನೆಲೆಯಲ್ಲಿ ವಾಹನ ಸವಾರರು ನಿಧಾನವಾಗಿ ಸಾಗಬೇಕಿದೆ. 

ಸಂಚಾರ ದಟ್ಟಣೆ ಸಮಸ್ಯೆ ತೀವ್ರ: 

ಎಲ್ಲೆಂದರಲ್ಲಿ ರಸ್ತೆ ಕಾಮಗಾರಿ ನಡೆಯುತ್ತಿದ್ದು, ಸಂಚಾರ ದಟ್ಟಣೆ ಸಮಸ್ಯೆ ತೀವ್ರವಾಗಿದೆ. ಇದರಿಂದಾಗಿ ಅಪಘಾ ತಗಳು ಸಂಭವಿಸುತ್ತಲೇ ಇವೆ. ಕಾಮಗಾರಿ ನಡೆಯುತ್ತಿರುವುದರಿಂದ ವಾಹನ ಸವಾರರು ಜಾಗರೂಕತೆಯಿಂದ ವಾಹನ ಚಲಾಯಿಸಬೇಕು. ಇಲ್ಲದಿದ್ದರೆ ಅಪಘಾತ ತಪ್ಪಿದ್ದಲ್ಲ. ಕಾಲೇಜು ರಸ್ತೆ, ಖಾನಾಪುರ ರಸ್ತೆಯಿಂದ ರೈಲ್ವೆ ಮೇಲ್ಸೇತುವೆ ಮಾರ್ಗದವರೆಗೆ ಒಂದು ಬದಿಯ ರಸ್ತೆಯಲ್ಲಿ ಅಭಿವೃದ್ಧಿ ಕಾಮಗಾರಿ ಕೈಗೊಂಡಿರುವುದರಿಂದ ಈ ರಸ್ತೆಯಲ್ಲಿ ಸಂಚಾರಕ್ಕೆ ಸಂಪೂರ್ಣ ನಿಷೇಧ ಹೇರಲಾಗಿದೆ. ಆದರೆ, ಇನ್ನೊಂದು ಬದಿಯಲ್ಲಿನ ಏಕಮುಖ ಸಂಚಾರದ ರಸ್ತೆಯಲ್ಲಿ ಬಹುಸಂಚಾರ ವ್ಯವಸ್ಥೆ ಜಾರಿಯಲ್ಲಿರುವುದರಿಂದ ವಾಹನ ದಟ್ಟಣೆ ಸಮಸ್ಯೆಗೆ ಪ್ರಮುಖ ಕಾರಣವಾಗಿದೆ. ರಸ್ತೆ ಮಾರ್ಗದ ನಡುವೆಯೇ ಅಲ್ಲಲ್ಲಿ ಅಭಿವೃದ್ಧಿ ಕಾಮಗಾರಿ ಕೈಗೊಂಡಿದ್ದರೆ ಸಂಚಾರ ವ್ಯವಸ್ಥೆಗೆ ಅಷ್ಟೊಂದು ಸಮಸ್ಯೆ ಎದುರಾಗುತ್ತಿರಲಿಲ್ಲ ಎನ್ನುವ ಮಾತುಗಳು ಸಾರ್ವಜನಿಕ ವಲಯದಲ್ಲಿ ಕೇಳಿಬರುತ್ತಿವೆ. 

ಹೆಚ್ಚಿನ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ 

ನಗರದಲ್ಲಿ ಎಲ್ಲೆಂದರಲ್ಲಿ ರಸ್ತೆ ಅಭಿವೃದ್ಧಿ ಕಾಮಗಾರಿ ನಡೆಯುತ್ತಿದೆ ನಿಜ. ಆದರೆ, ಈ ರಸ್ತೆ ಕಾಮಗಾರಿ ನಗರದ ನಾಗರಿಕರ ನೆಮ್ಮದಿಯನ್ನು ಹಿಂಡಿ ಹಿಪ್ಪಿ ಮಾಡಿದೆ. ಎಲ್ಲೆಂದರಲ್ಲಿ ರಸ್ತೆಯನ್ನು ಅಗೆಯಲಾಗಿದ್ದು, ರಸ್ತೆ ಮಾರ್ಗದುದ್ದಕ್ಕೂ ರಸ್ತೆ ಕಾಮಗಾರಿ ಕೈಗೊಂಡಿರುವುದು ವಾಹನ ಸಂಚಾರಕ್ಕೆ ತೀವ್ರ ಅಡೆತಡೆ ಉಂಟಾಗಿದೆ. 

ಪಾದಚಾರಿಗಳಿಗೂ ತಪ್ಪದ ಕಿರಿಕಿರಿ: 

ನಗರದ ಪ್ರಮುಖ ರಸ್ತೆ ಮಾರ್ಗವಾದ ಚನ್ನಮ್ಮ ವೃತ್ತದ ಬಳಿಯ ಗಣೇಶ ಮಂದಿರದ ಬಳಿಯಿಂದ ಕಾಲೇಜು ರಸ್ತೆ, ಖಾನಾಪುರ ರಸ್ತೆಯ ರೈಲ್ವೆ ಮೇಲ್ಸೇತುವೆವರೆಗೆ ರಸ್ತೆ ವಿಭಜಕದ ಒಂದು ಬದಿಯ ರಸ್ತೆಯಲ್ಲಿ ಕಾಮಗಾರಿ ಕೈಗೊಳ್ಳಲಾಗಿದೆ. ಒನ್ ವೇ ರಸ್ತೆಯಲ್ಲಿ ವಾಹನ ಸಂಚಾರ ವ್ಯವಸ್ಥೆ ಜಾರಿಯಲ್ಲಿದೆ. ಇದರಿಂದಾಗಿ ವಾಹನ ಸಂಖ್ಯೆ ವಿಪರೀತವಾಗಿ ಹೆಚ್ಚಳವಾಗಿರುವುದರಿಂದ ವಾಹನ ದಟ್ಟಣೆ ಸಮಸ್ಯೆ ತೀವ್ರಗೊಂಡಿದೆ. ಇದರಿಂದಾಗಿ ಪಾದಚಾರಿಗಳಿಗೂ ಕಿರಿಕಿರಿ ತಪ್ಪಿದ್ದಲ್ಲ. ಸ್ಮಾರ್ಟ್‌ಸಿಟಿ ಯೋಜನೆಯಡಿ ನಗರ ಬಸ್ ನಿಲ್ದಾಣದ ಕಾಮಗಾರಿಯನ್ನು ಕೈಗೊಳ್ಳಲಾಗಿದೆ. ಸ್ಮಾರ್ಟ್‌ಸಿಟಿ ಕಾಮಗಾರಿ ನಗರದ ವಿವಿಧೆಡೆ ಕೈಗೊಳ್ಳಲಾಗಿದ್ದು, ಇದರಿಂದಾಗಿ ವಾಹನ ಸಂಚಾರ ವ್ಯವಸ್ಥೆ ಮೇಲೆ ಪ್ರತಿಕೂಲ ಪರಿಣಾಮ ಬೀರಿದೆ. 

ಸುತ್ತುವರಿದ ಸಂಚಾರ ಅನಿವಾರ್ಯ: 

ಎಲ್ಲೆಡೆ ರಸ್ತೆ ಕಾಮಗಾರಿ ಕೈಗೊಂಡಿರುವುದರಿಂದ ಕೆಂಧೂಳು ನಾಗರಿಕರ ನೆಮ್ಮದಿ ಹಾಳು ಮಾಡಿದೆ. ರಸ್ತೆ ಅಭಿವೃದ್ಧಿ ಕಾಮಗಾರಿ ಕೈಗೊಂಡಿರುವ ರಸ್ತೆ ಕೂಡುವ ರಸ್ತೆಗಳ ಸಂಚಾರ ಸ್ಥಗಿತಗೊಳಿಸಲಾಗಿದೆ. ಕಾಲೇಜು ರಸ್ತೆಯ ಸರ್ದಾರ್ ಕಾಲೇಜು, ವನಿತಾ ವಿದ್ಯಾಲಯ, ಬಿ ಎಸ್‌ಎನ್‌ಎನ್ ಕಚೇರಿ ಹೀಗೆ ಪ್ರಮುಖ ರಸ್ತೆಗೆ ಕೂಡುವ ಬಹುತೇಕ ರಸ್ತೆಗಳ ಸಂಚಾರಕ್ಕೆ ನಿಷೇಧ ಹೇರಲಾಗಿದೆ. ಆಯಾ ಸ್ಥಳಗಳಲ್ಲಿ ಬ್ಯಾರಿಕೇಡ್‌ಗಳ ನ್ನು ಅಳವಡಿಸಲಾಗಿದೆ. ಹಾಗಾಗಿ, ವಾಹನ ಸವಾರ ರು ಸುತ್ತುವರೆದು ಸಂಚರಿಸುವುದು ಅನಿವಾಯ ವಾರ್ಗಿದೆ. ಕೇಂದ್ರ ಬಸ್ ನಿಲ್ದಾಣದದ ಸುತ್ತಲು ರಸ್ತೆ ಅಭಿವೃದ್ಧಿ ಕಾಮಗಾರಿ ನಡೆಯುತ್ತಿದೆ. ಹಾಗಾಗಿ, ಇಲ್ಲಿ ಬಸ್ ಸೇರಿದಂತೆ ಬಹುತೇಕ ವಾಹನಗಳು ಆಗಮಿಸುತ್ತವೆ. ಮಾರ್ಕೆಟ್ ಪೊಲೀಸ್ ಠಾಣೆಯಿಂದ ಅಶೋಕ ವೃತ್ತದವರೆಗೆ ವಾಹನ ಓಡಿಸಿಕೊಂಡು ಹೋಗಲು ಬರೋಬ್ಬರಿ 45 ನಿಮಿಷಗಳ ಕಾಲ ತಗಲುವಂತಾಗಿದೆ. ಅಂದರೆ ಇಲ್ಲಿ ವಾಹನ ದಟ್ಟಣೆ ಎಷ್ಟಿರುತ್ತದೆ ಎಂಬುವುದು ಗೊತ್ತಾಗುತ್ತದೆ. 

ಕಾಮಗಾರಿ ಕುರಿತಾದ ಫಲಕಗಳೇ ಇಲ್ಲ

ಸ್ಮಾರ್ಟ್‌ಸಿಟಿ ಯೋಜನೆಯಡಿ ನಗರದ ವಿವಿಧೆಡೆ ಅಭಿವೃದ್ಧಿ ಕಾಮಗಾರಿ ಕೈಗೊಳ್ಳಲಾಗಿದ್ದರೂ ಈ ಕುರಿತು ಆಯಾ ಸ್ಥಳಗಳಲ್ಲಿ ಅಭಿವೃದ್ಧಿ ಕಾಮಗಾರಿ ಕುರಿತು ಫಲಕಗಳನ್ನೇ ಅಳವಡಿಸಿಲ್ಲ. ಸ್ಮಾರ್ಟ್‌ಸಿಟಿ ಕಾಮಗಾರಿಯಿಂದ ರಸ್ತೆ ಮಾರ್ಗದ ಸಂಚಾರವನ್ನು ಬದಲಾವಣೆ ಮಾಡಿದ್ದರೂ ಈ ಕುರಿತು ಯಾವುದೇ ಮಾಹಿತಿಯನ್ನು ಸ್ಮಾರ್ಟ್ ಸಿಟಿಯೋಜನೆ ಅಧಿಕಾರಿಗಳು ನೀಡುವುದೇ ಇಲ್ಲ. ಕನಿಷ್ಠ ಪಕ್ಷ ಪತ್ರಿಕಾ ಪ್ರಕಟಣೆಯನ್ನು ಹೊರಡಿಸದೇ ವಿವಿಧೆಡೆ ರಸ್ತೆ ಅಭಿವೃದ್ಧಿ ಕಾಮಗಾರಿ ಕೈಗೊಳ್ಳಲಾಗುತ್ತಿದೆ. ಇದು ನಾಗರಿಕರ ಆಕ್ರೋಶಕ್ಕೆ ಕಾರಣವಾಗಿದೆ. ಯಾವುದೇ ಅಭಿವೃದ್ಧಿ ಕಾಮಗಾರಿ ಕೈಗೊಂಡಿದ್ದರೂ ಆಯಾ ಸ್ಥಳಗಳಲ್ಲಿ ಕಡ್ಡಾಯವಾಗಿ ಕಾಮಗಾರಿ ಗುತ್ತಿದಾರರರು, ಎಷ್ಟು ಕಿಮೀ ರಸ್ತೆ, ಅಂದಾಜು ವೆಚ್ಚ ಸೇರಿದಂತೆ ಮತ್ತಿತರ ಮಾಹಿತಿಗಳುಳ್ಳ ಫಲಕವನ್ನು ಹಚ್ಚಬೇಕು. ಆದರೆ, ಸ್ಮಾರ್ಟ್‌ಸಿಟಿ ಯೋಜನೆಯಡಿ ಕೈಗೊಳ್ಳಲಾದ ಕಾಮಗಾರಿ ಕುರಿತ ನಾಮಫಲಕ ಅಳವಡಿಸಿರುವುದು ಅಪರೂಪವಾಗಿದೆ.

ಈ ಬಗ್ಗೆ ಮಾತನಾಡಿದ ಸ್ಮಾರ್ಟ್‌ಸಿಟಿ ಎಂಡಿ ಶಶಿಧರ ಕುರೇರ ಅವರು, ಸ್ಮಾಟ್ ಸಿರ್ಟಿ ಯೋಜನೆಯಡಿ ನಗರದ ವಿವಿಧೆಡೆ ಅಭಿವೃದ್ಧಿ ಕಾಮಗಾರಿಗಳನ್ನು ಕೈಗೊಳ್ಳಲಾಗಿದೆ. ನಗರದ ಅಭಿವೃದ್ಧಿಗೆ ನಾಗರಿಕರು, ವಾಹನ ಸವಾರರು ಸಹಕರಿಸಬೇಕು. ನಗರದ ಅಭಿವೃದ್ಧಿ ಕಾಮಗಾರಿ ನಡೆಯುತ್ತಿರುವುದರಿಂದ ವಾಹನ ಸವಾರರು ನಿಧಾನವಾಗಿ ಸಾಗಬೇಕು ಎಂದು ಹೇಳಿದ್ದಾರೆ. 

ಸ್ಮಾರ್ಟ್‌ಸಿಟಿ ಯೋಜನೆಯಡಿ ನಗರದಲ್ಲಿ ವಿವಿಧ ಅಭಿವೃದ್ಧಿ ಕಾಮಗಾರಿ ಕೈಗೊಂಡಿರುವುದು ನಗರದ ಹಿತದೃಷ್ಟಿಯಿಂದ ಸ್ವಾಗತಾರ್ಹ. ಆದರೆ, ನಗರದ ಎಲ್ಲೆಡೆ ಏಕಕಾಲಕ್ಕೆ ಕಾಮಗಾರಿ ಕೈಗೊಂಡಿರುವುದರಿಂದ ವಾಹನ ಸಂಚಾರ ದಟ್ಟನೆ ಉಂಟಾಗಿದೆ. ಇದರಿಂದಾಗಿ ನಾಗರಿಕರು ತೀವ್ರ ಸಮಸ್ಯೆ ಎದುರಿಸುವಂತಾಗಿದೆ ಎಂದು ನಾಗರಿಕ ಬಸವರಾಜ ಹಾದಿಮನಿ ಅವರು ಹೇಳಿದ್ದಾರೆ.