*  ಮಳೆಗೆ ನೀರು ತುಂಬಿಕೊಂಡ ರಸ್ತೆಯಲ್ಲಿ ವಾಹನ ಸವಾರರ ಸಂಚಾರ*  ಗುಡುಗು ಸಹಿತ ಸುರಿದ ಜೋರು ಮಳೆಗೆ ಸದಾಶಿವನಗರದಲ್ಲಿ ಉರುಳಿ ಬಿದ್ದ ಮರ*  ಟೌನ್‌ಹಾಲ್‌ ಮುಂಭಾಗ ಜಿಟಿಜಿಟಿ ಮಳೆಯಲ್ಲೇ ಸಾಗಿದ ಸಾರ್ವಜನಿಕರು  

ಬೆಂಗಳೂರು(ಮಾ.22): ನಗರದಲ್ಲಿ ಸತತ 2ನೇ ದಿನವೂ ಬೇಸಿಗೆ ಮಳೆಯ(Summer Rain) ಅಬ್ಬರ ಮುಂದುವರೆಯಿತು. ಸೋಮವಾರ ಸಂಜೆ ಗುಡುಗು ಸಹಿತ ಸುರಿದ ಮಳೆಗೆ(Rain) ಒಂದೆರಡು ಕಡೆ ಮರ ಮತ್ತು ಮರದ ಕೊಂಬೆಗಳು ಬಿದ್ದವು. ಜೋರಾದ ಮಳೆಗೆ ಕೆಲವು ರಸ್ತೆಗಳು ಮತ್ತು ಅಂಡರ್‌ ಪಾಸ್‌ಗಳಲ್ಲಿ ನೀರು ನಿಂತ ಹಿನ್ನೆಲೆ ಸಂಚಾರ ಅಸ್ತವ್ಯಸ್ತವಾಗಿ ವಾಹನ ಸವಾರರು ಪರದಾಡಿದರು.

ಮಧ್ಯಾಹ್ನದಿಂದಲೇ ಗಾಳಿ ಬೀಸುವಿಕೆ ಪ್ರಮಾಣ ಹೆಚ್ಚಾಗಿ ಮೋಡ ಮುಸುಕಿದ ವಾತಾವರಣ ಸೃಷ್ಟಿಯಾಯಿತು. ಸಂಜೆ 4 ಗಂಟೆ ನಂತರ ಸುರಿದ ಜೋರು ಮಳೆಗೆ ಯಲಚೇನಹಳ್ಳಿ ಪೈಪ್‌ಲೈನ್‌ ರಸ್ತೆ ಹಾಗೂ ಸದಾಶಿವನಗರದಲ್ಲಿ ತಲಾ ಒಂದು ಮರ ಉರುಳಿ ಬಿದ್ದಿವೆ. ಸದಾಶಿವನಗರ ಸೇರಿದಂತೆ ಕೆಲವೆಡೆ ಮರದ ಕೊಂಬೆಗಳು ಸಹ ಮುರಿದು ಬಿದ್ದಿದ್ದು, ಅದೃಷ್ಟವಶಾತ್‌ ಯಾವುದೇ ಪ್ರಾಣ ಹಾನಿ ಸಂಭವಿಸಿಲ್ಲ. ದೂರಿನ ಮೇರೆಗೆ ಬಿಬಿಎಂಪಿ ಸಿಬ್ಬಂದಿ ಮರ ಮತ್ತು ಕೊಂಬೆಗಳನ್ನು ತೆರವುಗೊಳಿಸಿದರು ಎಂದು ಬಿಬಿಎಂಪಿ(BBMP) ಸಹಾಯವಾಣಿ ತಿಳಿಸಿದೆ.

Rain In Karnataka: 7 ಜಿಲ್ಲೆ​ಗಳ​ಲ್ಲಿ ದಿಢೀರ್‌ ಮಳೆ, ಶಿರಸಿ ಜಾತ್ರೆಯಲ್ಲಿ ಕುಸಿದ ತೊಟ್ಟಿಲು

ಮಳೆಯಿಂದಾಗಿ ಶಾಂತಿನಗರದ ಬಜಾರ್‌ ಸ್ಟ್ರೀಟ್‌, ಸ್ವಾತಂತ್ರ್ಯ ಉದ್ಯಾನ ಬಳಿ, ಕೆ.ಆರ್‌.ವೃತ್ತ, ಹಂಪಿನಗರ, ರಾಜಾಜಿನಗರ, ಟೌನ್‌ಹಾಲ್‌, ಕೆ.ಆರ್‌ಮಾರುಕಟ್ಟೆ, ಅಂಬೇಡ್ಕರ್‌ ವೀದಿ, ಹೆಬ್ಬಾಳ, ನಾಗವಾರ ಜಂಕ್ಷನ್‌, ಓಕಳಿಪುರಂ ರಸ್ತೆ ಅಂಡರ್‌ಪಾಸ್‌, ಮೆಜೆಸ್ಟಿಕ್‌ ಸುತ್ತಮುತ್ತಲು ಸೇರಿದಂತೆ ಹಲವು ಪ್ರಮುಖ ರಸ್ತೆಗಳಲ್ಲಿ ರಾತ್ರಿವರೆಗೂ ಮಳೆ ನೀರು ನಿಂತದ್ದು ಕಂಡು ಬಂತು.

ವಾಹನ ಸವಾರರು ಸಂಚರಿಸಲಾಗದೇ ಕೆಲ ಕಾಲ ವಾಹನ ದಟ್ಟಣೆಯಲ್ಲಿ ನಿಲ್ಲುವಂತಾಯಿತು. ಜಿಟಿಜಿಟಿ ಮಳೆ ಹಾಗೂ ಗಾಳಿಯಿಂದ ಸಾರ್ವಜನಿಕರು, ಬೀದಿ ಬದಿ ವ್ಯಾಪಾರಿಗಳು ಕಿರಿಕಿರಿ ಅನುಭವಿಸಿದರು. ತಗ್ಗುಪ್ರದೇಶದ ರಸ್ತೆಗಳಲ್ಲಿ ಒಳಚರಂಡಿ ಸಹಿತ ಮಳೆ ನೀರು ಉಕ್ಕಿಹರಿಯಿತು.

ಇಂದು, ನಾಳೆ ಸಹ ಮಳೆ ನಿರೀಕ್ಷೆ

ಅಂಡಮಾನ್‌ ದ್ವೀಪ ಸಮುದ್ರದಲ್ಲಿ ವಾಯುಭಾರ ಕುಸಿತ ತೀವ್ರಗೊಂಡ ಪರಿಣಾಮ ಬೆಂಗಳೂರು(Bengaluru) ನಗರ ಮತ್ತು ಗ್ರಾಮಾಂತರದ ಹಲವು ಪ್ರದೇಶಗಳಲ್ಲಿ ಮಾ.23ರ ವರೆಗೆ ಇದೇ ರೀತಿ ಗುಡುಗು ಸಹಿತ ಮಳೆ ಮುಂದುವರಿಯುವ ನಿರೀಕ್ಷೆ ಇದೆ. ಈ ವೇಳೆ ಮೋಡ ಮುಸುಕಿದ ವಾತಾವರಣ ಕಂಡು ಬರಲಿದ್ದು, ಆಗಾಗ ಜೋರು ಗಾಳಿ ಬೀಸಲಿದೆ. ತಾಪಮಾನ ಗರಿಷ್ಠ 33 ಮತ್ತು ಕನಿಷ್ಠ 21ಡಿಗ್ರಿ ಸೆಲ್ಸಿಯಸ್‌ ದಾಖಲಾಗುವ ಸಾಧ್ಯತೆ.

ನಾಗೇನಹಳ್ಳಿ ವ್ಯಾಪ್ತೀಲಿ 48 ಮಿ.ಮೀ. ಮಳೆ

ನಗರದ ವಿ.ನಾಗೇನಹಳ್ಳಿ ವ್ಯಾಪ್ತಿಯಲ್ಲಿ ಅಧಿಕ 48 ಮಿ.ಮೀ. ಮಳೆ ದಾಖಲಾಗಿದೆ. ಅಂಜನಾಪುರ 24 ಮಿ.ಮೀ., ಲಕ್ಕಸಂದ್ರ 21, ಗೊಟ್ಟಿಗರೆ 18.5, ಯಲಹಂಕ ಮತ್ತು ಕೊಡಿಗೇಹಳ್ಳಿಯಲ್ಲಿ ತಲಾ 18, ಆರ್‌.ಆರ್‌.ನಗರ 17.5, ರಾಜಮಹಲ್‌ ಗುಟ್ಟಳ್ಳಿ 15, ಹಂಪಿನಗರ 13.5, ಕೋರಮಂಗಲದ್ಲಿ 11.5 ಮಿ.ಮೀ ಮಳೆ ಸುರಿದ ಬಗ್ಗೆ ವರದಿಯಾಗಿದೆ. ಉಳಿದಂತೆ ಹಲವೆಡೆ ತುಂತುರು ಮಳೆ ಸುರಿದಿದೆ ಎಂದು ಕರ್ನಾಟಕ ರಾಜ್ಯ ನೈಸರ್ಗಿಕ ವಿಕೋಪ ಉಸ್ತುವಾರಿ ಕೇಂದ್ರದ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ಇನ್ನಷ್ಟು ಹೆಚ್ಚಾಲಿದೆ ಬಿಸಿಲ ಧಗೆ : ಹವಾಮಾನ ಇಲಾಖೆ ಎಚ್ಚರಿಕೆ

ಬಿಸಿಲ ಬೇಗೆಯ ಮಧ್ಯೆ ವರುಣ ಸಿಂಚನ, ಮಲೆನಾಡಿನ ಕೆಲವು ಭಾಗಗಳಲ್ಲಿ ವರ್ಷದ ಮಳೆ

ಚಿಕ್ಕಮಗಳೂರು: ಮಲೆನಾಡಿನ ಕೆಲವು ಭಾಗಗಳಲ್ಲಿ (Malnad Areas) ವರ್ಷದ ಮಳೆ ಧಾರಾಕಾರವಾಗಿ ಸುರಿದಿದೆ. ಮಾ.18 ರಂದು ಸಂಜೆ ಇದ್ದಕ್ಕಿದ್ದಂತೆ ಸುರಿದ ಮೊದಲ ಮಳೆ ಅನೇಕ ಅನಾಹುತಗಳನ್ನು ಸೃಷ್ಟಿಸಿತ್ತು. 
ಮಲೆನಾಡ ಭಾಗದಲ್ಲಿ ಭಯಂಕರ ಮಳೆಯ‌ ಪರಿಣಾಮ‌ ಕಬ್ಬಿಣದ ಶೀಟ್ ಗಳು ಹಾರಿ ಹೋಗಿವೆ. ಮಲೆನಾಡು ಭಾಗದಲ್ಲಿ ಒಂದು ಗಂಟೆಗಳ‌ ಕಾಲ ಮಳೆ‌ ಬಂದಿದೆ. ಬಿಸಿಲ ಬೇಗೆಯಿಂದ ಬೇಸತ್ತಿದ್ದ ಜನರು ಹಾಗೂ ರೈತರಿಗೆ ಈ ಮಳೆ ಸಂತೋಷವನ್ನುಂಟುಮಾಡಿದೆ. ಮಲೆನಾಡಿನ ಶೃಂಗೇರಿ, ಕೊಪ್ಪ ತಾಲೂಕು ಹಾಗೂ ಎನ್ಆರ್ ಪುರ ತಾಲೂಕಿನಲ್ಲಿ ಧಾರಾಕಾರ ಮಳೆಯಾಗಿತ್ತು. 

ಇನ್ನು ಹುಯಿಗೆರೆ, ಖಾಂಡ್ಯ, ಮೇಲ್ಪಾಲ್, ಬಾಳೆಹೊನ್ನೂರು, ಕಟ್ಟಿನಮನೆ, ಹುಣಸೆಹಳ್ಳಿ, ಕುಂಬರಗೋಡು, ಗಡಿಗೇಶ್ವರ, ಬೆರಣಗೊಡು, ಸಿಗಸೆ ಹಾಗೂ ಚಿಕ್ಕಮಗಳೂರು ತಾಲೂಕಿನ ಹೊರ ಭಾಗದಲ್ಲಿ ಸುಧಾರಣಾ ಮಳೆಯಾಗಿದೆ. ಮಲೆನಾಡ ಭಾಗದಲ್ಲಿ ಭಯಂಕರ ಮಳೆ, ಭಾರೀ ಗಾಳಿಗೆ ಕಬ್ಬಿಣದ ಶೀಟ್ ಗಳು ಹಾರಿ ಹೋಗಿವೆ. ಅದೃಷ್ಟವಶಾತ್ ಯಾವುದೇ ಪ್ರಾಣಹಾನಿ ಸಂಭವಿಸಿಲ್ಲ,ಗಾಳಿಗೆ ತೆಂಗಿನ ಮರದಿಂದ ಸೋಗೆ ಗರಿಗಳು ಮುರಿದು ಬಿದ್ದಿದೆ.ಭಾರೀ ಗಾಳಿ-ಮಳೆ ಕಂಡು ಜನರು ಕಂಗಾಲಾಗಿದ್ದರು.