ಮಂಡ್ಯ: ವರುಣನ ಅಬ್ಬರಕ್ಕೆ ಜನ ತತ್ತರ
ಕಳೆದ ಎರಡು ದಿನಗಳಿಂದ ಸುರಿದ ಭಾರೀ ಮಳೆಯಿಂದಾಗಿ ಮಂಡ್ಯ ಜಿಲ್ಲೆ ತತ್ತರಿಸಿದೆ. ಸೋಮವಾರ ಮಧ್ಯರಾತ್ರಿ ವೇಳೆಗೆ ಸುರಿದ ಮಳೆಯಿಂದಾಗಿ ಕೆರೆ ಕೋಡಿಗಳಿಂದ ನೀರು ಜಲಪಾತದ ಮಾದರಿಯಲ್ಲಿ ಹೊರ ಬಿದ್ದು ಮಂಡ್ಯದ ಕೆಲವು ಭಾಗಗಳು ಜಲಾವೃತಗೊಂಡಿವೆ. ಸೋಮವಾರ ರಾತ್ರಿ ಸುರಿದ ಮಳೆಯ ನಂತರ ಬೆಳಿಗ್ಗೆ ವೇಳೆಗೆ ಮಂಡ್ಯ ತಾಲೂಕಿನ ಬಹುತೇಕ ಕೆರೆ ಕಟ್ಟೆಗಳು ತುಂಬಿ ಭೋರ್ಗರೆಯಲಾರಂಭಿಸಿವೆ.
ಮಂಡ್ಯ(ಸೆ. 25): ಕಳೆದ ಎರಡು ರಾತ್ರಿಯಿಂದ ಸುರಿಯುತ್ತಿರುವ ಮಳೆಯಿಂದಾಗಿ ಮಂಡ್ಯ ಜಿಲ್ಲೆ ತತ್ತರಿಸಿ ಹೋಗಿದೆ. ಭಾನುವಾರ ರಾತ್ರಿ ಬಿದ್ದ ಮಳೆ ಸಾಧಾರಣವಾಗಿತ್ತು. ಆದರೆ, ಸೋಮವಾರ ಮಧ್ಯರಾತ್ರಿ ವೇಳೆಗೆ ಸುರಿದ ಮಳೆಯಿಂದಾಗಿ ಕೆರೆ ಕೋಡಿಗಳಿಂದ ನೀರು ಜಲಪಾತದ ಮಾದರಿಯಲ್ಲಿ ಹೊರ ಬಿದ್ದು ಮಂಡ್ಯದ ಕೆಲವು ಭಾಗಗಳು ಜಲಾವೃತಗೊಂಡಿವೆ.
ಈ ವರ್ಷದಲ್ಲಿ ಸುರಿದ ಭಾರೀ ಮಳೆಯಿಂದಾಗಿ ರೈತರಲ್ಲಿ ಬಾರಿ ಹರ್ಷ ಉಂಟಾದರೆ, ಬೆಳೆ ನಷ್ಟವೂ ಉಂಟಾಗಿದೆ. ಮಂಡ್ಯದ ತಗ್ಗು ಪ್ರದೇಶದಲ್ಲಿ ವಾಸಿಸುವ ಜನ ಗುಡಿಸಲಿಗಳಿಗೆ ನೀರು ನುಗ್ಗಿ ಬಡ ಜನರ ಬದುಕೇ ಭಾರವಾಗಿದೆ. ಜನ ತತ್ತರಿಸಿ ಹೋಗಿದ್ದಾರೆ. ಮಳೆಯಿಂದಾಗಿ ಯಾವುದೇ ಪ್ರಾಣಾಪಾಯವಾಗಿಲ್ಲ ಎಂದು ಜಿಲ್ಲಾಡಳಿತ ತಿಳಿಸಿದೆ.
ಅಧಿಕಾರಕ್ಕಾಗಿ JDS ಗೇಮ್ ಪ್ಲಾನ್ ಬದಲು
ಸೋಮವಾರ ರಾತ್ರಿ 11.10ಕ್ಕೆ ಆರಂಭವಾದ ಮಳೆ 1 ಗಂಟೆವರೆಗೂ ಆರ್ಭಟಿಸಿತು. ಈ ವೇಳೆ ಅನೇಕ ಮನೆಗಳು ಜಲಾವೃತಗೊಂಡಿವೆ. ಕೆಲ ಮನೆಗಳು ಸೋರಲು ಆರಂಭಿಸಿ ಜನತೆ ಜಾಗರಣೆ ಮಾಡಬೇಕಾದ ಪರಿಸ್ಥಿತಿ ಉಂಟಾಯಿತು.
ತುಂಬಿದ ಕೆರೆ ಕಟ್ಟೆಗಳು:
ಸೋಮವಾರ ರಾತ್ರಿ ಸುರಿದ ಮಳೆಯ ನಂತರ ಬೆಳಿಗ್ಗೆ ವೇಳೆಗೆ ಮಂಡ್ಯ ತಾಲೂಕಿನ ಬಹುತೇಕ ಕೆರೆ ಕಟ್ಟೆಗಳು ತುಂಬಿ ಭೋರ್ಗರೆಯಲಾರಂಭಿಸಿದವು. ಹೊಳಲು, ಕೋಣನಹಳ್ಳಿ, ಸಾತನೂರು, ಕೊಮ್ಮೇರಹಳ್ಳಿ, ಇಂಡುವಾಳು, ಬೇಲೂರು, ಮಾದರಹಳ್ಳಿ , ಸೂಳೆಕೆರೆ, ಯಡಗನಹಳ್ಳಿ ಕೆರೆ ಸೇರಿದಂತೆ ಬಹುತೇಕ ಕೆರೆಗಳು ತುಂಬಿ ಹಿಂದೆಂಗಿಂತಲೂ ಹೆಚ್ಚಿನ ಪ್ರಮಾಣದಲ್ಲಿನೀರು ಹೊರಗೆ ಹರಿಯಲಾರಂಭಿಸಿತು.
ಹೊಳಲಿನಲ್ಲಿ ಗುಡಿಸಲು ಜಲಾವೃತ:
ಕಳೆದ ವರ್ಷ ಇದೇ ವೇಳೆಯಲ್ಲಿ ಜಲಾವೃತವಾಗಿದ್ದ ಹೊಳಲು ಗ್ರಾಮದ ಎಚ್.ಡಿ.ಚೌಡಯ್ಯ ಬಡಾವಣೆ ಮಂಗಳವಾರ ಕೂಡ ಜಲಾವೃತವಾಗಿತ್ತು. ರಸ್ತೆಗಳೇ ನಾಲೆಗಳಂತೆ ಕಂಡು ಬಂದವು. ಕೆರೆಯ ನೀರು ಉಕ್ಕಿ ಹರಿದ ಪರಿಣಾಮ ಮನೆಗಳಿಗೆ ನೀರು ನುಗ್ಗಿ ಧವಸ ದಾನ್ಯಗಳು ನಾಶವಾದವು.
ರಸ್ತೆ ಸಂಪರ್ಕ ಕಡಿತ:
ಸಾತನೂರು ಕೆರೆ ಕೂಡ ಉಕ್ಕಿ ಹರಿದು ಗ್ರಾಮದ ಕೆಲ ಬೀದಿಗಳಲ್ಲಿ ಸಂಪರ್ಕ ಕಡಿತವಾಗಿತ್ತು. ಮನೆಗಳಿಗೆ ನೀರು ನುಗ್ಗಿದ್ದರಿಂದ ಜನತೆ ಪರದಾಡಿದರು. ಕೊಮ್ಮೇರಹಳ್ಳಿ ಬಳಿ ಇಟ್ಟಿಗೆ ಗೂಡಿಗೆ ಮಳೆ ನೀರು ನುಗ್ಗಿದ್ದು, ಮೊನ್ನೆಯಷ್ಟೇ ಮಾಡಿದ್ದ ಇಟ್ಟಿಗೆಗಳು ಮಣ್ಣು ಪಾಲಾದವು.
ಪೈರು ಜಲಾವೃತ:
ಮಾದರಹಳ್ಳಿ ಕೆರೆಯಿಂದ ಅಧಿಕ ನೀರಿನ ಜತೆಗೆ ಗಿಡ, ಗಂಟಿಗಳು ಕೊಚ್ಚಿ ಬಂದು ನಾಲೆಯ ಮರಗಳಿಗೆ ಸಿಕ್ಕಿಕೊಂಡಿದ್ದರಿಂದ ನೀರು ರಸ್ತೆಯ ಮೇಲೆ ಹರಿದು ಸೇತುವೆಯೊಂದು ಕೊಚ್ಚಿ ಹೋಯಿತು. 50ಕ್ಕೂ ಹೆಚ್ಚು ಏಕರೆ ಭತ್ತ, ಕಬ್ಬು ಜಲಾವೃತವಾಗಿತ್ತು. ಭತ್ತದ ಗದ್ದೆಗೆ ಗಿಡ ಗಂಟಿಗಳ ರಾಶಿ ಹೋಗಿಬಿದ್ದಿದ್ದು, ರಮೇಶ್ ಎಂಬುವರ 20 ಗುಂಟೆ ಭತ್ತ ನಾಶವಾಗಿದೆ.
ಮಂಡ್ಯ: ನಿಖಿಲ್ ಸ್ಪರ್ಧೆ ಸುತರಾಂ ಇಷ್ಟವಿರಲಿಲ್ಲ ಎಂದ ಮಾಜಿ ಶಾಸಕ
ಬೇಲೂರು ಕೆರೆ, ಕನ್ನಲಿ ಕೆರೆ ನೀರಿನಿಂದಾಗಿ 20ಕ್ಕೂ ಹೆಚ್ಚು ಎಕರೆ ಪ್ರದೇಶದಲ್ಲಿದ್ದ ಭತ್ತ ಜಲಾವೃತವಾಗಿದೆ. ಬಹುತೇಕ ಕಬ್ಬಿನ ಗದ್ದೆಗಳು ಜಲಾವೃತವಾಗಿದ್ದು, ಹಳ್ಳ ಕೊಳ್ಳಗಳು ತುಂಬಿ ತುಳುಕುತ್ತಿವೆ. ಭೂತನಹೊಸೂರು ಬಳಿ ಹೆಬ್ಬಾಳ ಹಳೇ ಸೇತುವೆ ಮೇಲೆ ನೀರು ಹರಿಯುತ್ತಿದೆ. ಗುತ್ತಲು ಅರ್ಕೇಶ್ವರ ದೇವಾಲಯದ ಬಳಿ ಹೆಬ್ಬಾಳ ಸೇತುವೆ ಮುಟ್ಟುತ್ತಿದೆ. ಬೆಳಗ್ಗೆಯಿಂದ ಬಿಸಿಲು ಜೋರಾಗಿದೆ. ಆದರೆ, ಮಂಗಳವಾರ ರಾತ್ರಿ ಕೂಡ ಮಳೆ ಬರುವ ಸಾಧ್ಯತೆಗಳಿವೆ. ಇದೇ ರೀತೀ ವರುಣ ಆರ್ಭಟಿಸಿದರೆ ಗತಿ ಏನೆಂಬ ಆತಂಕ ಜನರನ್ನು ಕಾಡುತ್ತಿದೆ.
ಜಿಲ್ಲೆಯಲ್ಲಿ ಅಧಿಕ ಮಳೆ ಎಲ್ಲಿ?
ಮಂಡ್ಯ ತಾಲೂರು 69.3 ಮಿ.ಮೀ., ಮದ್ದೂರು 55.6 ಮಿ.ಮೀ. ಕೆ.ಆರ್.ಪೇಟೆ 54.0 ಮಿ.ಮೀ ಮಳವಳ್ಳಿ ತಾಲೂಕಿನಲ್ಲಿ 26.8 ಮಿ.ಮೀ. ಶ್ರೀರಂಗಪಟ್ಟಣ ತಾಲೂಕಿನಲ್ಲಿ 24.6 ಮಿ.ಮೀ. ಪಾಂಡವಪುರ ತಾಲೂಕು 20.8 ಮಿ.ಮೀ. ನಾಗಮಂಗಲ ತಾಲೂಕು 8.7 ಮಿ.ಮೀ ಜಿಲ್ಲೆಯ 7 ತಾಲೂಕುಗಳ ಪೈಕಿ ಮಂಡ್ಯ ತಾಲೂಕಿನಲ್ಲಿ ಅಧಿಕ ಹಾಗೂ ನಾಗಮಂಗಲ ತಾಲೂಕಿನ ಅತೀ ಕಡಮೆ ಮಳೆಯಾಗಿದೆ.