ಮಂಗಳೂರು (ಡಿ.09): ಮಂಗಳೂರು ಸೇರಿದಂತೆ ದ.ಕ. ಜಿಲ್ಲೆಯಲ್ಲಿ ಹಠಾತ್ತನೆ ಧಾರಾಕಾರ ಮಳೆ ಕಾಣಿಸಿದೆ.

ಅರ್ನಾಬ್‌ ಚಂಡಮಾರುತ ಪ್ರಭಾವದಿಂದ ಕರಾವಳಿ ಭಾಗದಲ್ಲೂ ಮಳೆ ಕಾಣಿಸಿದೆ ಎಂದು ಹವಾಮಾನ ಇಲಾಖೆ ಮೂಲಗಳು ತಿಳಿಸಿವೆ.

ಮಂಗಳವಾರ ಸಂಜೆಯಾಗುತ್ತಿದ್ದಂತೆ ಮೋಡ ಕವಿದ ವಾತಾವರಣದಲ್ಲಿ ಗುಡುಗು, ಮಿಂಚು ಸಹಿತ ಅರ್ಧ ಗಂಟೆಗೂ ಹೆಚ್ಚು ಹೊತ್ತು ಧಾರಾಕಾರ ಮಳೆ ಸುರಿದಿದೆ. ಮಂಗಳೂರು ನಗರ ಹಾಗೂ ಸುತ್ತಮುತ್ತ ಮತ್ತು ಗ್ರಾಮಾಂತರ ಪ್ರದೇಶಗಳಲ್ಲೂ ಸಂಜೆಯಿಂದ ರಾತ್ರಿ ವರೆಗೂ ಮಳೆಯಾಗಿದೆ.

ರಾಜ್ಯದಲ್ಲಿ ಅಕಾಲಿಕ ಮಳೆ : ರೈತರು ಕಂಗಾಲು ...

ಮೂಡುಬಿದಿರೆಯಲ್ಲಿ ಸಂಜೆ ಭಾರಿ ಗುಡುಗು, ಮಿಂಚು ಸಹಿತ ಭರ್ಜರಿ ಮಳೆ ಸುರಿದಿದೆ. ಮುಸ್ಸಂಜೆಯ ವೇಳೆಗೆ ಹನಿಮಳೆ, ಮೋಡ ಕವಿದ ವಾತಾವರಣವಿದ್ದು ಕತ್ತಲಾಗುವ ಹೊತ್ತಿಗೆ ಭಾರೀ ಸಿಡಿಲು, ಮಿಂಚು ಸಹಿತ ಸುಮಾರು ಅರ್ಧ ಗಂಟೆ ಕಾಲ ಮಳೆ ಸುರಿದು ತಂಪೆರೆದಿದೆ.

ಅಕಾಲಿಕವಾಗಿ ಸುರಿದ ಮಳೆಗೆ ದ್ವಿಚಕ್ರವಾಹನ ಸವಾರರ ಸಹಿತ, ಪಾದಚಾರಿಗಳು, ಸಾರ್ವಜನಿಕರು ಪೇಟೆಯಲ್ಲಿ ಕೆಲಕಾಲ ಪರದಾಡುವ ಸ್ಥಿತಿ ಉಂಟಾಯಿತು. ಬಳಿಕ ಮಳೆಯ ಅಬ್ಬರ ಇಳಿದರೂ ಗುಡುಗು ಮಿಂಚುಗಳ ಆರ್ಭಟ ಮುಂದುವರಿದಿತ್ತು.