ಬೆಂಗಳೂರು (ನ.16):  ರಾಜಧಾನಿಯ ಹಲವೆಡೆ ಭಾನುವಾರ ಸಂಜೆ ಸುರಿದ ಮಳೆ ದೀಪಾವಳಿ ಸಂಭ್ರಮವನ್ನು ಕೊಂಚ ಮಂಕಾಗಿಸಿತು. ನಗರದ ಕೆಲವು ಕಡೆಗಳಲ್ಲಿ ಸುರಿದ ಮಳೆಯಿಂದ ಹಬ್ಬಕ್ಕೆಂದು ದೇವಸ್ಥಾನ, ಸಂಬಂಧಿಕರ ಮನೆಗೆ ಹೋಗಬೇಕೆಂದಿದ್ದವರು ಕಿರಿಕಿರಿ ಅನುಭವಿಸಿದರು.

ಮುಂಜಾನೆಯಿಂದಲೂ ನಗರದಲ್ಲಿ ಮೋಡ ಮುಸುಕಿದ ವಾತಾವರಣವಿದ್ದು, ಮಧ್ಯಾಹ್ನದ ವೇಳೆಗೆ ಹಲವೆಡೆ ತುಂತುರು ಮಳೆಯಾಯಿತು. ಸಂಜೆಯ ನಂತರ ಅನೇಕ ಪ್ರದೇಶಗಳಲ್ಲಿ ಸಾಧಾರಣ ಮಳೆ ಸುರಿಯಿತು. ಹೀಗಾಗಿ ಪಾದಚಾರಿಗಳು, ದ್ವಿಚಕ್ರವಾಹನ ಸವಾರರು ಮಳೆಯಿಂದ ತಪ್ಪಿಸಿಕೊಳ್ಳಲು ಸಮೀಪದ ಅಂಗಡಿ, ಮುಂಗಟ್ಟುಗಳನ್ನು ಆಶ್ರಯಿಸಿದರು. ಮೆಜೆಸ್ಟಿಕ್‌ನ ಕೆಎಸ್‌ಆರ್‌ಟಿಸಿ ಬಸ್‌ ನಿಲ್ದಾಣ ಹಾಗೂ ಬಿಎಂಟಿಸಿ ಬಸ್‌ ನಿಲ್ದಾಣ, ಮೆಟ್ರೋ ರೈಲು ನಿಲ್ದಾಣಗಳಲ್ಲಿ ಮಳೆಯಿಂದಾಗಿ ಪ್ರಯಾಣಿಕರ ದಟ್ಟಣೆ ಹೆಚ್ಚಾಗಿತ್ತು.

ಮೂರು ದಿನ ರಾಜ್ಯದಲ್ಲಿ ಮಳೆ ಸುರಿಯಲಿದೆ : ಯಾವ ಜಿಲ್ಲೆಗೆ ಅಲರ್ಟ್?

ಇನ್ನು ಶಿವಾನಂದ ವೃತ್ತ, ಓಕಳಿಪುರ, ಹೆಬ್ಬಾಳ, ಕಾವೇರಿ ಜಂಕ್ಷನ್‌ ಸೇರಿದಂತೆ ಕೆಳ ಸೇತುವೆಗಳಲ್ಲಿ ನೀರು ನಿಂತ ಪರಿಣಾಮ ಸವಾರರು ರಸ್ತೆ ದಾಟಲು ಪರದಾಡಿದರು. ಗಾಳಿ ಆಂಜನೇಯಸ್ವಾಮಿ ದೇವಸ್ಥಾನ, ಮೈಸೂರು ರಸ್ತೆ, ಮೆಜೆಸ್ಟಿಕ್‌, ಶೇಷಾದ್ರಿಪುರ, ಕಾಟನ್‌ಪೇಟೆ, ಸಂಪಂಗಿರಾಮನಗರ, ನಾಗರಬಾವಿ, ಹೆಬ್ಬಾಳ, ವಿಜಯನಗರ, ಮಲ್ಲೇಶ್ವರ, ರಾಜಾಜಿನಗರ, ಕೋರಮಂಗಲ, ಮಾರುತಿ ಮಂದಿರ, ವಿದ್ಯಾಪೀಠ, ಬಸವನಗುಡಿ, ಆರ್‌.ಆರ್‌.ನಗರ, ಕೆಂಗೇರಿ ಸೇರಿದಂತೆ ಹಲವೆಡೆ ತುಂತುರು ಹಾಗೂ ಸಾಧಾರಣ ಮಳೆ ಸುರಿಯಿತು.

ಸಾಮಾನ್ಯ ಮಳೆ ಬಿದ್ದಿದ್ದರಿಂದ ಹಾಗೂ ಜೋರು ಗಾಳಿ ಇಲ್ಲದ ಪರಿಣಾಮ ನಗರದಲ್ಲಿ ಯಾವುದೇ ಮರ, ವಿದ್ಯುತ್‌ ಕಂಬ ಮುರಿದು ಬಿದ್ದಿರುವ ಘಟನೆಗಳು ಜರುಗಿಲ್ಲ ಎಂದು ಪಾಲಿಕೆ ನಿಯಂತ್ರಣ ಕೊಠಡಿ ಸಿಬ್ಬಂದಿ ಮಾಹಿತಿ ನೀಡಿದರು.

ಕಾಡುಗೋಡಿಯಲ್ಲಿ ಅಧಿಕ ಮಳೆ:  ಕಾಡುಗೋಡಿಯಲ್ಲಿ 19.5 ಮಿ.ಮೀ., ದೊಡ್ಡನೆಕ್ಕುಂದಿ 13.5 ಮಿ.ಮೀ., ಹಗದೂರು 13.5 ಮಿ.ಮೀ., ರಾಜಮಹಲ್‌ ಗುಟ್ಟಹಳ್ಳಿ 12.5 ಮಿ.ಮೀ., ಎಚ್‌ಎಎಲ್‌ ಏರ್‌ಪೋರ್ಟ್‌ 11.5 ಮಿ.ಮೀ., ಮಾರಪ್ಪನಪಾಳ್ಯ 11 ಮಿ.ಮೀ., ಕೊಟ್ಟಿಗೆಪಾಳ್ಯ 10.5 ಮಿ.ಮೀ., ಹೊರಮಾವು, ಪೀಣ್ಯ ಕೈಗಾರಿಕಾ ಪ್ರದೇಶ, ಕೋನೇನ ಅಗ್ರಹಾರ, ನಂದಿನಿ ಲೇಔಟ್‌ನಲ್ಲಿ ತಲಾ 10.ಮಿ.ಮೀ., ಮಳೆಯಾಗಿದೆ.

ನಗರದಲ್ಲಿ ಇನ್ನೂ ಎರಡು ದಿನ ಮೋಡ ಕವಿದ ವಾತಾವರಣ ಇರಲಿದ್ದು, ಸಾಧಾರಣ ಮಳೆಯಾಗುವ ಸಾಧ್ಯತೆಯಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.