Tumakuru Rains: ನೀರಿನಲ್ಲಿ ಸಿಲುಕಿದ್ದ ಬಸ್ ಪ್ರಯಾಣಿಕರು ಪರದಾಟ
- ತುಮಕೂರು ಜಿಲ್ಲೆಯಲ್ಲಿ ಮುಂದುವರಿದ ಮಳೆ;
- ಮಳೆಯಿಂದ ತುಂಬಿ ಹರಿದ ಹಳ್ಳಕೊಳ್ಳಗಳು
- ನೀರಿನಲ್ಲಿ ಸಿಲುಕಿದ ಬಸ್ ಪ್ರಯಾಣಿಕರ ಪರದಾಟ
- ಕೊಚ್ಚಿ ಹೋದ ಬೈಕ್ : ವಾಹನ ಸವಾರನ ರಕ್ಷಣೆ.
ವರದಿ : ಮಹಂತೇಶ್ ಕುಮಾರ್ ಏಷ್ಯನೆಟ್ ಸುವರ್ಣ ನ್ಯೂಸ್ ತುಮಕೂರು.
ತುಮಕೂರು (ಅ.19) : ಜಿಲ್ಲೆಯಲ್ಲಿ ಸುರಿಯುತ್ತಿರುವ ಮಳೆಗೆ ಹಲವು ಅವಾಂತರಗಳು ಸೃಷ್ಟಿಯಾಗಿವೆ. ಜಿಲ್ಲೆಯ ಎಲ್ಲಾ ಕೆರೆಗಳು ಭರ್ತಿಯಾಗಿ ಕೋಡಿ ಬಿದ್ದಿವೆ. ಅಲ್ಲದೆ ಹಳ್ಳ ಕೊಳ್ಳಗಳು ಭರ್ತಿಯಾಗಿವೆ. ಅದರಲ್ಲೂ 'ಬರದ ನಾಡು' ಎಂಬ ಖ್ಯಾತಿ ಹೊಂದಿದ್ದ ಪಾವಗಡದಲ್ಲಿ ಅತಿ ಹೆಚ್ಚು ಮಳೆ ಸುರಿದಿದೆ.
40 ವರ್ಷದ ಬಳಿಕ ರಂಗಸಮುದ್ರ ಕೆರೆ ಭರ್ತಿ
ತುಮಕೂರು(Tumakuru) ಜಿಲ್ಲೆಯ ಪಾವಗಡ(Pavagad) ತಾಲೂಕಿನ ಹನುಮಯ್ಯನಪಾಳ್ಯ(Hanumayyanapalya) ಹಳ್ಳದಲ್ಲಿ ಬೈಕ್ ಸಾವರನೊಬ್ಬ ಕೊಚ್ಚಿಹೋಗಿದ್ದಾನೆ. ರಾತ್ರಿ ಸುರಿದ ಧಾರಕಾರ ಮಳೆ ಹನುಮಯ್ಯನಪಾಳ್ಯದ ಹಳ್ಳ ತುಂಬಿ ಹರಿದಿದೆ. ಆಂಧ್ರದಲ್ಲಿ ಕೃಷಿ ಇಲಾಖೆಯ ಅಧಿಕಾರಿಯಾಗಿ ಕೆಲಸ ಮಾಡುತ್ತಿದ್ದ ಪ್ರಭು(Prabhu) ಎಂಬುವರು ಬೈಕ್ ನಲ್ಲಿ ಹಳ್ಳ ದಾಟುವಾಗ ಬೈಕ್ ಸಮೇತ ಕೊಚ್ಚಿ ಹೋಗಿದ್ದಾರೆ. ಸ್ಥಳೀಯರು ಪ್ರಭು ಅವರನ್ನು ರಕ್ಷಣೆ ಮಾಡಿದ್ದಾರೆ. ಪ್ರಭು ಸಿ.ಕೆಪುರದಿಂದ ಹನುಮಯ್ಯನಪಾಳ್ಯ ಹಳ್ಳದ ಮೂಲಕ ಕನ್ನಮೇಡಿ ಕಡೆ ಬೈಕ್ ನಲ್ಲಿ ಹೊಗುತ್ತಿದ್ದರು.
ಪ್ರಭು ಕೊಚ್ಚಿ ಹೋಗುತ್ತಿರುವುದನ್ನು ನೋಡಿದ ಕೂಡಲೇ ಹಳ್ಳಕ್ಕೆ ಇಳಿದ ನಾಲ್ವರು ಯುವಕರು ಸವಾರನನ್ನು ರಕ್ಷಿಸಿದ್ದಾರೆ. ನೀರಿನಲ್ಲಿ ಬೈಕ್, ಲ್ಯಾಪ್‌ಟಾಪ್, ಕಡತಗಳು ನೀರಿನಲ್ಲಿ ಕೊಚ್ಚಿ ಹೋಗಿವೆ. ಅಸ್ವಸ್ಥಗೊಂಡಿದ್ದ ಪ್ರಭುವನ್ನು ಹತ್ತಿರದ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಚಿಕಿತ್ಸೆ ಕೊಡಿಸಲಾಗಿದೆ.
ಹಳ್ಳದಲ್ಲಿ ಸಿಲುಕಿಕೊಂಡ ಬಸ್; ಭಾರಿ ಅಪಾಯದಿಂದ ಪಾರಾದ ಪ್ರಯಾಣಿಕರು
ಪಾವಗಡ ತಾಲೂಕಿನ ಕಸಬಾ ಹೋಬಳಿಯ ವೆಂಕಟಾಪುರ ಗ್ರಾಮದ ಹೊರವಲಯದ ಹಳ್ಳದಲ್ಲಿ ಖಾಸಗಿ ಬಿಎಸ್‌ಟಿ ಬಸ್ಸು ಪಾವಗಡದಿಂದ ಹಿಂದೂಪುರಕ್ಕೆ ಪ್ರಯಾಣಿಸುವ ವೇಳೆ ಹಳ್ಳದ ಮಧ್ಯದಲ್ಲಿ ಸಿಲುಕಿಕೊಂಡ ಘಟನೆ ನಡೆದಿದೆ. ಇನ್ನು ಬಸ್ನಲ್ಲಿ ಸುಮಾರು 50ಕ್ಕೂ ಅಧಿಕ ಜನ ಪ್ರಯಾಣಿಕರು ಇದ್ದರು ಎನ್ನಲಾಗಿದೆ, ಈ ರಸ್ತೆಯ ಮೂಲಕ ವಾಹನ ಸವಾರರು ಮತ್ತು ಬಸ್ ಗಳು ಬರಬೇಡಿ ಎಂದು ಗ್ರಾಮಸ್ಥರು ಮನವಿ ಮಾಡಿಕೊಂಡರೂ, ಕೇಳದ ಕೆಲ ಖಾಸಗಿ ಬಸ್ ಗಳು ಮತ್ತು ವಾಹನ ಸವಾರರು ಇದೇ ಹಳ್ಳದ ಮೂಲಕ ಬಂದು ಅಪಾಯಕ್ಕೆ ಸಿಲುಕುತ್ತಿದ್ದಾರೆ, ಇನ್ನು ಹಳ್ಳದ ನೀರಿನಲ್ಲಿ ಸಿಲುಕಿಕೊಂಡ ಬಸ್ಸನ್ನು ಜೆಸಿಬಿ ಸಹಾಯದ ಮೂಲಕ ದಡ ಸೇರಿಸಲಾಗಿದೆ. ಬಸ್ ಹಳ್ಳದಲ್ಲಿ ಸಿಲುಕಿಕೊಂಡಿದೆ ಎನ್ನುವ ಮಾಹಿತಿ ತಿಳಿದ ಗ್ರಾಮಸ್ಥರು. ಹಳ್ಳದ ಬಳಿ ತಂಡೋಪತಂಡವಾಗಿ ಆಗಮಿಸಿದ್ದರು.
ತುಮಕೂರು: ಮಳೆಹಾನಿ ಪ್ರದೇಶದಲ್ಲಿ ಮೇಯರ್, ಉಪಮೇಯರ್ ಸುತ್ತಾಟ
ನೋಡನೋಡುತ್ತಲೇ ಹಳ್ಳದಲ್ಲಿ ಕೊಚ್ಚಿ ಹೋದ ಫ್ಯಾಷನ್ ಪ್ರೊ ಬೈಕ್
ತಾಲೂಕಿನ ನಿಡುಗಲ್ ಹೋಬಳಿಯ ವಿ ಎಚ್ ಪಾಳ್ಯ ಹಾಗೂ ಮದ್ದೆ ಗ್ರಾಮಗಳ ನಡುವೆ ಹರಿಯುವಂತಹ ದೊಡ್ಡ ಹಳ್ಳದಲ್ಲಿ ಕಾರ್ಯನಿಮಿತ್ತ ಮದ್ದೆ ಗ್ರಾಮದಿಂದ ವಿ ಎಚ್ ಪಾಳ್ಯ ಗ್ರಾಮದ ಕಡೆಗೆ ಹೋಗುತ್ತಿರುವ ಸಮಯದಲ್ಲಿ ರಭಸವಾಗಿ ಹರಿಯುತ್ತಿರುವ ನೀರಿನ ಹಳ್ಳದಲ್ಲಿ ದಾಟುವ ವೇಳೆ ದ್ವಿಚಕ್ರ ವಾಹನವು ನೀರಿನಲ್ಲಿ ಕೊಚ್ಚಿ ಹೋಗಿದೆ. ಈ ಘಟನೆ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಹೆಚ್ಚು ವೈರಲ್ ಆಗಿದೆ. ಪಾವಗಡ ತಾಲೂಕಿನಾದ್ಯಂತ ಇತ್ತೀಚೆಗೆ ಸುರಿದ ಭಾರಿ ಮಳೆಯಿಂದಾಗಿ ಬಹುತೇಕ ಹಳ್ಳ ಕೊಳ್ಳಗಳು ತುಂಬಿ ಕೆರೆಕಟ್ಟೆಗಳು ತುಂಬಿ ಕೋಡಿ ಬಿದ್ದಿವೆ. ಕೋಡಿ ನೀರು ಹಳ್ಳಗಳ ಮೂಲಕ ಹಾದು ಬರುವ ವೇಳೆಯಲ್ಲಿ ಇಂತಹ ಘಟನೆಗಳು ಮತ್ತೆ ಸಂಭವಿಸುತ್ತವೆ.