ಬೊಂಬೆನಗರಿ ಚನ್ನಪಟ್ಟಣದಲ್ಲಿ ಮಳೆ ಅವಾಂತರ: 200ಕ್ಕೂ ಹೆಚ್ಚು ಮನೆಗಳಿಗೆ ನುಗ್ಗಿದ ನೀರು
ತಡರಾತ್ರಿ ಸುರಿದ ಭಾರಿ ಮಳೆಯಿಂದಾಗಿ ರೇಷ್ಮೆ ನಗರಿ ರಾಮನಗರ ಅಕ್ಷರಶಃ ನಲುಗಿ ಹೋಗಿದೆ. ಕೆರೆ ಕೋಡಿ ಬಿದ್ದು ಹಲವು ಮನೆಗಳಿಗೆ ನೀರು ನುಗ್ಗಿ ಸಾಕಷ್ಟು ಅವಾಂತರ ಸೃಷ್ಟಿಸಿದ್ದು, ಮತ್ತೊಂದು ಕಡೆ ಅಪಾರ ಪ್ರಮಾಣದ ಬೆಳೆ ಹಾನಿಯಾಗಿದ್ದು, ಜನರು ಪರಿಹಾರದ ನಿರೀಕ್ಷೆಯಲ್ಲಿದ್ದಾರೆ.
ವರದಿ: ಜಗದೀಶ್, ಏಷ್ಯಾನೆಟ್ ಸುವರ್ಣನ್ಯೂಸ್, ರಾಮನಗರ
ರಾಮನಗರ (ಆ.27): ತಡರಾತ್ರಿ ಸುರಿದ ಭಾರಿ ಮಳೆಯಿಂದಾಗಿ ರೇಷ್ಮೆ ನಗರಿ ರಾಮನಗರ ಅಕ್ಷರಶಃ ನಲುಗಿ ಹೋಗಿದೆ. ಕೆರೆ ಕೋಡಿ ಬಿದ್ದು ಹಲವು ಮನೆಗಳಿಗೆ ನೀರು ನುಗ್ಗಿ ಸಾಕಷ್ಟು ಅವಾಂತರ ಸೃಷ್ಟಿಸಿದ್ದು, ಮತ್ತೊಂದು ಕಡೆ ಅಪಾರ ಪ್ರಮಾಣದ ಬೆಳೆ ಹಾನಿಯಾಗಿದ್ದು, ಜನರು ಪರಿಹಾರದ ನಿರೀಕ್ಷೆಯಲ್ಲಿದ್ದಾರೆ.
ಹಲವು ಗ್ರಾಮಗಳ ಸಂಪರ್ಕ ಕಟ್: ಹೌದು! ತಡರಾತ್ರಿ ಸುರಿದ ಭಾರಿ ಮಳೆಯಿಂದಾಗಿ ರಾಮನಗರ ಜಿಲ್ಲೆಯಾದ್ಯಂತ ಸಾಕಷ್ಟು ಅವಾಂತರಗಳು ಸೃಷ್ಟಿಯಾಗಿದೆ. ಬೊಂಬೆನಗರಿ ಚನ್ನಪಟ್ಟಣ ಅಕ್ಷರಶಃ ನಲುಗಿ ಹೋಗಿದೆ. ತಾಲ್ಲೂಕಿನ ಬಹುತೇಕ ಕೆರೆಗಳು ಸಂಪೂರ್ಣ ಭರ್ತಿಯಾಗಿ ಕೋಡಿ ಬಿದ್ದು, ಮನೆಗಳಿಗೆ ನೀರು ನುಗ್ಗಿದೆ, ಕೆಲಕಡೆ ರಸ್ತೆಗಳೆಲ್ಲವೂ ನದಿಯಂತಾಗಿದೆ. ಚನ್ನಪಟ್ಟಣ ಟೌನ್‌ನ ಬಿಡಿ ಕಾಲೋನಿಯ 30ಕ್ಕೂ ಹೆಚ್ಚು ಮನೆಗಳು ಜಲಾವೃತವಾಗಿದ್ದು, ಮನೆಯಲ್ಲಿದ್ದ ವಸ್ತುಗಳು, ಪದಾರ್ಥಗಳು ಸಂಪೂರ್ಣವಾಗಿ ಜಲಾವೃತವಾಗಿವೆ.
Ramanagara; ಕಾಂಗ್ರೆಸ್‌ನಲ್ಲಿ ಬಣ ರಾಜಕೀಯ ಮತ್ತೊಮ್ಮೆ ಸ್ಫೋಟ!
ಅಲ್ಲೇ ಪಕ್ಕದಲ್ಲಿ ಇದ್ದ ರಂಗನಾಥ ರೈಸ್ ಮಿಲ್‌ಗೆ ನೀರು ನುಗ್ಗಿ ರೈಸ್ ಮಿಲ್‌ನಲ್ಲಿದ್ದ, ಅಕ್ಕಿ, ಗೋಧಿ, ಮೆಕ್ಕಿಜೋಳದ ಮೂಟೆಗಳು ಸಂಪೂರ್ಣವಾಗಿ ನಾಶವಾಗಿದ್ದು, ಮಾಲೀಕರಿಗೆ ಲಕ್ಷಾಂತರ ರೂಪಾಯಿ ನಷ್ಟವಾಗಿದೆ. ಇನ್ನೂ 20 ವರ್ಷಗಳ ನಂತರ ಹೊಂಗನೂರು ಕೆರೆ ತುಂಬಿ ಕೋಡಿ ಬಿದ್ದು, ರಸ್ತೆಯಲ್ಲೇ ನೀರು ಹರಿಯುತ್ತಿದ್ದು, ಕಬ್ಬಾಳು, ಸಾತನೂರು, ಹಲಗೂರು, ಇಗ್ಗಲೂರು ಸೇರಿದಂತೆ ಹಲವು ಗ್ರಾಮಗಳ ಸಂಪರ್ಕ ಕಟ್ ಆಗಿದ್ದು, ಅಲ್ಲಿನ ಜನರು ಹತ್ತಾರು ಕಿಮೀ ಬಳಸಿಕೊಂಡು ಓಡಾಡುವ ಪರಿಸ್ಥಿತಿ ನಿರ್ಮಾಣವಾಗಿದೆ. ತಿಟ್ಟಮಾರನಹಳ್ಳಿಯ ರಾಮಮ್ಮನ ಕೆರೆ ಕೋಡಿ ಹೊಡೆದು ಅಲ್ಲಿನ 30 ಮನೆಗಳು ಸಂಪೂರ್ಣವಾಗಿ ಜಲಾವೃತವಾಗಿವೆ.
ರಾತ್ರಿ ಏಕಾಏಕಿ ಮನೆಗಳಿಗೆ ನೀರು ನುಗ್ಗಿದ ಪರಿಣಾಮ ಅಲ್ಲಿನ ನಿವಾಸಿಗಳು ಆತಂಕಕ್ಕೆ ಒಳಗಾಗಿದ್ದಾರೆ. ಮನೆ ಬಿಟ್ಟು ಮರದ ಕೆಳಗೆ ದಿನ ಕಳೆಯುವ ಪರಿಸ್ಥಿತಿ ಉಂಟಾಗಿದ್ದು, ಶಾಶ್ವತ ಪರಿಹಾರ ಒದಗಿಸುವಂತೆ ಅಧಿಕಾರಿಗಳ ಬಳ ಅಂಗಲಾಚಿದ್ದಾರೆ. ಅಂದಹಾಗೆ ನಿನ್ನೆ (ಶುಕ್ರವಾರ) ಸುರಿದ ಮಳೆಯಿಂದಾಗಿ ಸಾಕಷ್ಟು ಅವಾಂತರ ಸೃಷ್ಟಿಸಿದ ಹಿನ್ನಲೆ ಮಾಜಿ ಸಿಎಂ ಹಾಗೂ ಕ್ಷೇತ್ರದ ಶಾಸಕರು ಆದ ಹೆಚ್.ಡಿ.ಕುಮಾರಸ್ವಾಮಿ ಮಳೆ ಹಾನಿ ಪ್ರದೇಶಗಳಿಗೆ ಭೇಟಿ ನೀಡಿ ಅಲ್ಲಿನ ಜನರ ಸಮಸ್ಯೆ ಆಲಿಸಿದರು. ಜನರ ಕಷ್ಟಗಳನ್ನು ಕೇಳಿ ಸಮಸ್ಯೆ ಬಗೆಹರಿಸುವ ಪ್ರಯತ್ನ ಮಾಡಿದರು. ಕೆಲವು ಕಡೆ ಕೆರೆಗಳು ಕೋಡಿ ಬಿದ್ದು ಮನೆಗಳಿಗೆ ನೀರು ನುಗ್ಗಿದೆ.
ಭಾರೀ ಮಳೆಗೆ ಕೊಚ್ಚಿ ಹೋದ ಸೇತುವೆಗಳು; ಸೇತುವೆ ಇಲ್ಲದೆ ಹತ್ತಾರು ಹಳ್ಳಿಗಳ ಪರದಾಟ!
ಇನ್ನೂ ಕೆಲವು ಕಡೆ ಬೆಂಗಳೂರು-ಮೈಸೂರು ಬೈಪಾಸ್ ರಸ್ತೆಯ ಅವೈಜ್ಞಾನಿಕ ಕಾಮಗಾರಿಯಿಂದಾಗಿ ಈ ಸಮಸ್ಯೆಗಳು ಆಗಿದೆ. ಆಗಾಗಿ ಅಧಿಕಾರಿಗಳಿಗೆ ಸೂಚನೆ ನೀಡಿದ್ದು, ಪರಿಹಾರದ ಹಣವನ್ನು ಈ ಕೂಡಲೇ ಬಿಡುಗಡೆ ಮಾಡುವಂತೆ ಅಧಿಕಾರಿಗಳಿಗೆ ತಾಕೀತು ಮಾಡಿದರು. ಜೊತೆಗೆ ಜೆಡಿಎಸ್ ಪಕ್ಷದ ವತಿಯಿಂದ ನಿರಾಶ್ರಿತರಿಗೆ ಪುಡ್ ಕಿಟ್ ನೀಡುವ ಜೊತೆಗೆ ಪರಿಹಾರ ನೀಡುವ ಭರವಸೆ ನೀಡಿದ್ದಾರೆ. ಒಟ್ಟಾರೆ ತಡರಾತ್ರಿ ಸುರಿದ ಮಳೆ ಸಾಕಷ್ಟು ಅವಾಂತರ ಸೃಷ್ಟಿಸಿದ್ದು, ಮುಂದಿನ ದಿನಗಳಲ್ಲಿ ಮಳೆ ಇದೇ ರೀತಿ ಮುಂದುವರಿದರೆ ಜನರು ಸಾಕಷ್ಟು ತೊಂದರೆ ಅನುಭವಿಸಬೇಕಾಗುತ್ತದೆ. ತಕ್ಷಣ ಅಧಿಕಾರಿಗಳು ಜನರ ಸಮಸ್ಯೆ ಬಗೆಹರಿಸುವ ಕೆಲಸ ಮಾಡಬೇಕಾಗಿದೆ.