ಬಳ್ಳಾರಿ ಜಿಲ್ಲೆಯಲ್ಲಿ ವರುಣನ ಅಬ್ಬರ: ಅಪಾರ ಪ್ರಮಾಣದ ಬೆಳೆ ಹಾನಿ

ಪಟ್ಟಣ ಸೇರಿದಂತೆ ಸುತ್ತಮುತ್ತಲಿನ ಗ್ರಾಮಗಳಲ್ಲಿ ಶುಕ್ರವಾರ ರಾತ್ರಿ ಧಾರಾಕಾರ ಮಳೆ|  ಹಲವೆಡೆ ಮನೆಗಳು, ರಸ್ತೆಗಳು ಸೇತುವೆಗಳು ಕುಸಿದು ಜನಜೀವನ ಅಸ್ತವ್ಯಸ್ತ| ಗೇಣಿಕೆಹಾಳ್, ದ್ದಮ್ಮನಹಳ್ಳಿ, ಎರಗಳ್ಳಿ, ಬಾದನಹಟ್ಟಿ, ಕೋಳೂರು, ಮದಿರೆ, ಸೋಮಸಮುದ್ರ ಸೇರಿದಂತೆ ಬಹುತೇಕ ಗ್ರಾಮಗಳ ಹಳ್ಳದ ಸೇತುವೆಗಳು ಸಂಪೂರ್ಣ ಜಲಾವೃತ| ನೂರಾರು ಎಕರೆ ರೈತರ ಬೆಳೆಗಳಿಗೆ ನೀರು ನುಗ್ಗಿ ಅಪಾರ ಪ್ರಮಾಣದ ಹಾನಿ| 

Heavy Rain in Ballari District

ಕುರುಗೋಡು(ಸೆ.29): ಪಟ್ಟಣ ಸೇರಿದಂತೆ ಸುತ್ತಮುತ್ತಲಿನ ಗ್ರಾಮಗಳಲ್ಲಿ ಶುಕ್ರವಾರ ರಾತ್ರಿ ಧಾರಾಕಾರ ಮಳೆ ಸುರಿದಿದ್ದು, ಹಲವೆಡೆ ಮನೆಗಳು, ರಸ್ತೆಗಳು ಸೇತುವೆಗಳು ಕುಸಿದು ಜನಜೀವನ ಅಸ್ತವ್ಯಸ್ತಗೊಂಡಿವೆ. ಗೇಣಿಕೆಹಾಳ್, ದ್ದಮ್ಮನಹಳ್ಳಿ, ಎರಗಳ್ಳಿ, ಬಾದನಹಟ್ಟಿ, ಕೋಳೂರು, ಮದಿರೆ, ಸೋಮಸಮುದ್ರ ಸೇರಿದಂತೆ ಬಹುತೇಕ ಗ್ರಾಮಗಳ ಹಳ್ಳದ ಸೇತುವೆಗಳು ಸಂಪೂರ್ಣ ಜಲಾವೃತಗೊಂಡು ಪಕ್ಕದ ನೂರಾರು ಎಕರೆ ರೈತರ ಬೆಳೆಗಳಿಗೆ ನೀರು ನುಗ್ಗಿ ಅಪಾರ ಪ್ರಮಾಣದ ಹಾನಿ ಉಂಟಾಗಿದೆ. 

ಕೆಲ ಕಡೆ ಗದ್ದೆಗಳಲ್ಲಿ ವಿದ್ಯುತ್ ಕಂಬಗಳು ನೀರಿನ ರಭಸಕ್ಕೆ ವಾಲಿವೆ. ಇನ್ನೂ ಮುಖ್ಯರಸ್ತೆಗಳು ಹಾಗೂ ಸೇತುವೆಗಳು ಸಂಪೂರ್ಣ ಮಳೆ ನೀರಿಗೆ ಕುಸಿದು ಕೊಚ್ಚಿಕೊಂಡು ಹೋಗಿವೆ. ಇದರಿಂದ ಹಲವು ಗ್ರಾಮಗಳಲ್ಲಿ ಸರಿಯಾಗಿ ವಿದ್ಯುತ್ ಇಲ್ಲದಂತಾಗಿದೆ. ಬಸ್ ಸಂಚಾರ ಕೂಡ ಸ್ಥಗಿತಗೊಂಡಿವೆ. ಮುಖ್ಯ ರಸ್ತೆಗಳು ಕುಸಿತಗೊಂಡಿರುವುದರಿಂದ ರಾತ್ರಿ ವೇಳೆ ರೈತರು ಹೊಲ- ಗದ್ದೆಗಳಿಗೆ ಮತ್ತು ವಾಹನ ಚಾಲಕರು ಓಡಾಡುವುದಕ್ಕೆ ತೊಂದರೆಯಾಗಿದೆ. 

ಹೆಚ್ಚಿನ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ  

ಪಟ್ಟಣದ ಸುತ್ತಮುತ್ತ ಸುಮಾರು ಮೂರ್ನಾಲ್ಕು ದಿನಗಳಿಂದ ಸುರಿದ ಮಳೆಯಿಂದ ಸೋಮಸಮುದ್ರ ಗ್ರಾಮದಲ್ಲಿ 8  ಮನೆಗಳು, ಕುರುಗೋಡು ಪಟ್ಟಣದಲ್ಲಿ 12  ಗುಡಿಸಲುಗಳು, ಬಾದನಹಟ್ಟಿಯಲ್ಲಿ 6 ಮನೆಗಳು, ಕೋಳೂರು ಗ್ರಾಮದಲ್ಲಿ 10, ದಮ್ಮೂರಲ್ಲಿ ೨, ಸಿಂಧಿಗೇರಿಯಲ್ಲಿ 3 , ಎರಗಳ್ಳಿ 3 , ವದ್ದಟ್ಟಿ ಗ್ರಾಮದಲ್ಲಿ 5  ಮನೆಗಳು ಸಂಪೂರ್ಣ ಕುಸಿದು ಜನಜೀವನ ಅಸ್ತವ್ಯಸ್ತಗೊಂಡಿದೆ. 

ಇನ್ನೂ ಮಳೆ ನೀರು ಮನೆಗಳಿಗೆ ನುಗ್ಗಿದ ಪರಿಣಾಮ ಸಾರ್ವಜನಿಕರು ಪಂಪ್‌ಸೆಟ್ ಇಟ್ಟು ನೀರನ್ನು ಹೊರಗಡೆ ಹಾಕುತ್ತಿದ್ದಾರೆ. ಕುರುಗೋಡು, ಏಳುಬೆಂಚಿ, ಗೇಣಿಕೆಹಾಳ್, ಬಾದನಹಟ್ಟಿ ಗ್ರಾಮಗಳಲ್ಲಿ ಸುರಿದ ಮಳೆಗೆ 300 ಎಕರೆ ಭತ್ತ, 150 ಎಕರೆ ಮೆಣಿಸಿನಕಾಯಿ, 60 ಎಕರೆ ಸಜ್ಜೆ, 20  ಎಕರೆ ತೊಗರಿ, 20 ಎಕರೆ ಹತ್ತಿ, ಕೋಳೂರು ಹೋಬಳಿಯಲ್ಲಿ 250  ಎಕರೆ ಭತ್ತ, 140 ಎಕರೆ ಹತ್ತಿ, 18 ಎಕರೆ ತೊಗರಿ, 4 ಎಕರೆ ಸಜ್ಜೆ, ರಾಗಿ, ನವಣೆ ಸೇರಿದಂತೆ ಒಟ್ಟು ಅಪಾರ ಪ್ರಮಾಣದ ಬೆಳೆ ಹಾನಿಯಾಗಿದೆ. ಸಂಬಂಧಿಸಿದ ಕಂದಾಯ ಅಧಿಕಾರಿಗಳು ಮತ್ತು ಕೃಷಿ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಸಮೀಕ್ಷೆ ನಡೆಸಿದ್ದಾರೆ.

ಮಳೆಯಿಂದ ಕುಸಿದ ರಸ್ತೆಗೆ ಬಿದ್ದು ರೈತ ಸಾವು    

ಕಳೆದ ನಾಲ್ಕು ದಿನಗಳಿಂದ ಸುರಿದ ಧಾರಾಕಾರ ಮಳೆಯಿಂದ ಸಿಂಧಿಗೇರಿ ಮತ್ತು ಕುರುಗೋಡಿಗೆ ಸಂಪರ್ಕ ರಸ್ತೆ ಕುಸಿತಗೊಂಡಿದ್ದು, ಅದರಲ್ಲಿ ದ್ವಿಚಕ್ರ ವಾಹನ ಸವಾರ ಬಿದ್ದು ಸಾವಿಗೀಡಾದ ಘಟನೆ ಶುಕ್ರವಾರ ರಾತ್ರಿ ನಡೆದಿದೆ. ಸಿಂಧಿಗೇರಿ ಗ್ರಾಮದ ರೈತ ಪಿ.ಟಿ. ಸಿದ್ದಪ್ಪ (58) ಮೃತಪಟ್ಟ ರೈತ. ಅವರು ದ್ವಿಚಕ್ರ ವಾಹನದಲ್ಲಿ ಕುರುಗೋಡಿನಿಂದ ಗ್ರಾಮಕ್ಕೆ ತೆರಳುವ ಸಂದರ್ಭದಲ್ಲಿ ರಸ್ತೆ ಕುಸಿತಗೊಂಡಿರುವುದನ್ನು ಗಮನಿಸದೆ ವಾಹನ ಸಮೇತ ರಸ್ತೆಯಲ್ಲಿ ಬಿದ್ದು ಸ್ಥಳದಲ್ಲೇ ಸಾವಿಗೀಡಾಗಿದ್ದಾರೆ. ಈ ಕುರಿತು ಕುರುಗೋಡು ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಸ್ಥಳಕ್ಕೆ ತಹಸೀಲ್ದಾರ್ ಎಸ್. ಪದ್ಮಾವತಿ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. 

ಶಾಸಕರ ಭೇಟಿ: 

ರಸ್ತೆ ಕುಸಿತದಿಂದ ಉಂಟಾದ ಗುಂಡಿಯಲ್ಲಿ ಬಿದ್ದು ಮೃತಪಟ್ಟ ಕುಟುಂಬದ ಮನೆಗೆ ಶಾಸಕ ಜೆ.ಎನ್. ಗಣೇಶ ಅವರು ಭೇಟಿ ನೀಡಿ ಕುಟುಂಬದವರಿಗೆ ಸಾಂತ್ವನ ಹೇಳಿದರು. ಕಳೆದ ನಾಲ್ಕು ದಿನಗಳ ಹಿಂದೆ ಮಳೆ ಸುರಿದು ಸಿಂಧಿಗೇರಿ ರಸ್ತೆ ಕೊಚ್ಚಿಕೊಂಡು ಹೋಗಿದ್ದು, ಅದನ್ನು ಸರಿಪಡಿಸದೆ ಪುರಸಭೆ ಆಡಳಿತ ಹಾಗೂ ಕಂದಾಯ ಇಲಾಖೆ ನಿರ್ಲಕ್ಷ್ಯ ತೋರಿದೆ. ಇದರಿಂದ ಈ ಘಟನೆ ಸಂಭವಿಸಿದೆ. ಅದ್ದರಿಂದ ಮೃತಪಟ್ಟ ಪಿ.ಟಿ. ಸಿದ್ದಪ್ಪ ಅವರ ಕುಟುಂಬಕ್ಕೆ 10 ಲಕ್ಷ ಪರಿಹಾರ ನೀಡಬೇಕು ಹಾಗೂ ನಿರ್ಲಕ್ಷ್ಯ ತೋರಿದ ಅಧಿಕಾರಿಗಳ ವಿರುದ್ಧ ಜಿಲ್ಲಾಧಿಕಾರಿಗಳು ಕೂಡಲೇ ಕಾನೂನು ಕ್ರಮ ಜರುಗಿಸಬೇಕು ಎಂದು ಸ್ಥಳೀಯರು ಒತ್ತಾಯಿಸಿದ್ದಾರೆ.   
 

Latest Videos
Follow Us:
Download App:
  • android
  • ios