ಮಂಗಳೂರು(ಫೆ.28): ಒಡಿಶಾದಲ್ಲಿ ಮಳೆ ಹಿನ್ನೆಲೆಯಲ್ಲಿ ಕರ್ನಾಟಕದಲ್ಲೂ ಮಳೆ ಕಾಣಿಸಿದೆ. ಗುರುವಾರ ಮುಂಜಾನೆ ಮಂಗಳೂರು ನಗರ ಹೊರತುಪಡಿಸಿ ದ.ಕ. ಜಿಲ್ಲೆಯಾದ್ಯಂತ ಹಠಾತ್ತನೆ ಧಾರಾಕಾರ ಮಳೆ ಸುರಿದಿದೆ.

ಬೇಸಗೆಯ ಆರಂಭದಲ್ಲಿ ಈ ರೀತಿ ಧಾರಾಕಾರ ಮಳೆ ಇದೇ ಮೊದಲ ಬಾರಿಗೆ ಸುರಿದಿದೆ. ಮುಂಜಾನೆ ಸುಮಾರು 5 ಗಂಟೆ ಸುಮಾರಿಗೆ ತುಂತುರು ಮಳೆ ಕಾಣಿಸಿದೆ. 5.30ರ ಬಳಿಕ ಅರ್ಧ ಗಂಟೆ ಕಾಲ ಧಾರಾಕಾರ ಮಳೆಯಾಗಿದೆ. ಬಳಿಕ ಮಳೆಯ ಪ್ರಮಾಣ ಕಡಿಮೆಯಾಗಿದ್ದು, ಗುಡುಗಿನ ಆರ್ಭಟ ಕೇಳಿಬಂದಿದೆ.

'BJPಯವ್ರಿಗೆ ಅಧಿಕಾರದ ಅಮಲು ತಲೆಗೇರಿದೆ'..!

ಜಿಲ್ಲೆಯ ಸುಳ್ಯ, ಪುತ್ತೂರು, ಬೆಳ್ತಂಗಡಿ, ಬಂಟ್ವಾಳ, ವಿಟ್ಲ ಅಲ್ಲಲ್ಲಿ ನಸುಕಿನ ಜಾವ ಉತ್ತಮ ವರ್ಷಧಾರೆಯಾಗಿದೆ. ಈ ದಿಢೀರ್‌ ಮಳೆಯಿಂದ ನಾಗರಿಕರು ಕಕ್ಕಾಬಿಕ್ಕಿಯಾಗಿದ್ದಾರೆ. ಪುತ್ತೂರಿನ ಕೊಯಿಲದಲ್ಲಿ ಪ್ರಥಮ ಮಳೆಗೆ ಮಾರುತಿ ಒಮ್ನಿ ಪಲ್ಟಿಯಾಗಿ ಅದರಲ್ಲಿದ್ದವರು ಸಣ್ಣಪುಟ್ಟಗಾಯಗೊಂಡಿದ್ದಾರೆ. ರಸ್ತೆಯಲ್ಲಿ ತೈಲದ ಅಂಶಕ್ಕೆ ಪ್ರಥಮ ಮಳೆಗೆ ತಿರುವಿನಲ್ಲಿ ಚಾಲಕನ ನಿಯಂತ್ರಣ ತಪ್ಪಿ ಈ ಅಪಘಾತ ಸಂಭವಿಸಿತ್ತು ಎಂದು ಹೇಳಲಾಗಿದೆ.

ಒಡಿಶಾ ಚಂಡಮಾರುತ ಪ್ರಭಾವದಿಂದ ಕರ್ನಾಟಕದಲ್ಲಿ ಐದು ದಿನಗಳ ಕಾಲ ಮಳೆಯ ಮುನ್ಸೂಚನೆಯನ್ನು ಭಾರತೀಯ ಹವಾಮಾನ ಇಲಾಖೆ ನೀಡಿತ್ತು. ಈ ಹಿನ್ನೆಲೆಯಲ್ಲಿ ಗುರುವಾರ ಸಂಜೆ ವೇಳೆಗೆ ಮತ್ತೆ ಮೋಡದ ವಾತಾವರಣ ಮಂಗಳೂರಿನಲ್ಲಿ ಕಂಡುಬಂದಿದೆ.

ಮದರಂಗಿ ಶಾಸ್ತ್ರ ಮುಗಿಸಿ ಮಲಗಿದ್ದ ವಧು ಮದುವೆ ದಿನ ನಾಪತ್ತೆ

ಗುರುವಾರ ಹಗಲು ಬಿಸಿನ ಝಳ ಕಂಡುಬಂದಿದ್ದು, ಸಂಜೆ ವೇಳೆಗೆ ತಂಪಿನ ವಾತಾವರಣ ನೆಲೆಸಿತ್ತು. ಉಡುಪಿ ಜಿಲ್ಲೆಯಲ್ಲಿ ಮೋಡ ಕವಿದ ವಾತಾವರಣವಿದ್ದು, ಕುಂದಾಪುರದಲ್ಲಿ ತುಂತುರು ಮಳೆಯಾಗಿದೆ. ಕೊಡಗು ಜಿಲ್ಲೆಯಲ್ಲಿ ಮಳೆಯಾಗಿಲ್ಲ, ಮೋಡ ಕವಿದ ವಾತಾವರಣವಿತ್ತು.