ಉತ್ತರ ಭಾರತದಲ್ಲಿ ತಾಪಮಾನ ಭಾರೀ ಏರಿಕೆ ಕಾಣುತ್ತಿದ್ದು, ಬೆಂಗಳೂರಿನ ಹಲವೆಡೆ ಇಂದು ಭಾರೀ ಮಳೆಯಾಗಿದೆ. ಕೆಲವೆಡೆ ಆಲಿಕಲ್ಲು ಮಳೆಯಾಗಿದೆ. ಇನ್ನು ಮೂರು ದಿನಗಳ ಕಾಲ ಕರ್ನಾಟಕದ ರಾಜಧಾನಿಯಲ್ಲಿ ಭಾರೀ ಮಳೆಯಾಗುವ ಮುನ್ಸೂಚನೆಯನ್ನು ಹವಾಮಾನ ಇಲಾಖೆ ಈಗಾಗಲೇ ನೀಡಿದೆ.
ಬೆಂಗಳೂರು (ಮೇ.01): ಉತ್ತರ ಭಾರತದಲ್ಲಿ (North Karnataka) ತಾಪಮಾನ ಭಾರೀ ಏರಿಕೆ ಕಾಣುತ್ತಿದ್ದು, ಬೆಂಗಳೂರಿನ (Bengaluru) ಹಲವೆಡೆ ಇಂದು ಭಾರೀ ಮಳೆಯಾಗಿದೆ (Rain). ಕೆಲವೆಡೆ ಆಲಿಕಲ್ಲು (Hailstorm) ಮಳೆಯಾಗಿದೆ. ಇನ್ನು ಮೂರು ದಿನಗಳ ಕಾಲ ಕರ್ನಾಟಕದ (Karnataka) ರಾಜಧಾನಿಯಲ್ಲಿ ಭಾರೀ ಮಳೆಯಾಗುವ ಮುನ್ಸೂಚನೆಯನ್ನು ಹವಾಮಾನ ಇಲಾಖೆ ಈಗಾಗಲೇ ನೀಡಿದೆ. ಬೆಂಗಳೂರು ನಿವಾಸಿಗಳು ಭಾರೀ ಮಳೆ ಮತ್ತು ಬೇಸಿಗೆಯ ಸೆಖೆ ಎರಡನ್ನು ಕೂಡಾ ಅನುಭವಿಸುವಂತಾಗಿದೆ. ಬೆಂಗಳೂರು ನಗರದಲ್ಲಿ ಸುರಿಯುತ್ತಿರುವ ಮಳೆಯಿಂದ ಕಂಠೀರವ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಖೇಲೋ ಇಂಡಿಯಾ ಕ್ರೀಡಾಕೂಟ ತಾತ್ಕಾಲಿಕ ಸ್ಥಗಿತವಾಗಿದೆ.
ಬೆಂಗಳೂರು ದಕ್ಷಿಣ, ಬೊಮ್ಮನಹಳ್ಳಿ, ಕೋರಮಂಗಲ, ಶಾಖಾಂಬರಿ ನಗರ, ದೊರೆಸಾನಿ ಪಾಳ್ಯ, ಅರಕೆರೆ, ಬೊಮ್ಮನಹಳ್ಳಿ, ಬಿಟಿಎಂ ಲೇಔಟ್, ಬಿಳೇಕಹಳ್ಳಿ, ಸಾರಕ್ಕಿ, ಬೇಗೂರು ಸೇರಿದಂತೆ ಹಲವು ಪ್ರದೇಶಗಳಲ್ಲಿ ಆಲಿಕಲ್ಲು ಮಳೆಯಾಗಿದೆ. ಬಿಳೇಕಹಳ್ಳಿ, ಅರಕೆರೆಯಲ್ಲಿ 20 ಮಿ.ಮೀ ಮಳೆ ಸುರಿದಿದೆ. ಆನೇಕಲ್ ತಾಲೂಕಿನಾಧ್ಯಂಥ ಬಾರಿ ಆಲಿಕಲ್ಲು ಮಳೆಯಾಗಿದ್ದು, ನಾಮಫಲಕಗಳು ಧರೆಗುಳಿದಿದೆ. ರಸ್ತೆ ಬದಿ ಮತ್ತು ಕಟ್ಟಡಗಳ ಮೇಲಿನ ನಾಮಫಲಕಗಳು ಧರೆಗೆ ಉರುಳಿದ್ದು, ಗಾಳಿಗೆ ಮನೆ ಮೇಲಿದ್ದ ಹೋಲ್ಡಿಂಗ್ ಬಾಗಿದ್ದರಿಂದ ಕಟ್ಟಡದಲ್ಲಿ ಬಿರುಕುಗಳು ಕಾಣಿಸಿಕೊಂಡಿವೆ.
ಕರ್ನಾಟಕದಲ್ಲಿ ಬೇಸಿಗೆ ಮಳೆ ಆರ್ಭಟ: 9 ಮನೆ ಕುಸಿತ, ಕೊಪ್ಪಳ, ವಿಜಯನಗರದಲ್ಲಿ ಬೆಳೆ ನಾಶ
ಸಂಜೆ ಹೊತ್ತಿಗೆ ಚಾಲುಕ್ಯ, ವಸಂತನಗರ, ಕೆ.ಆರ್.ಸರ್ಕಲ್, ಕಾಮಾಕ್ಷಿಪಾಳ್ಯ ,ಬಸವೇಶ್ವರ ನಗರ ,ಸುಂಕದಕಟ್ಟೆ ಸೇರಿ ಹಲವೆಡೆ ಮಳೆ ಗುಡುಗು ಸಹಿತ ಮಳೆ ಪ್ರಾರಂಭವಾಗಿದ್ದು, ರೇಸ್ ಕೋರ್ಸ್ ರೋಡ್, ಚಾಲುಕ್ಯ ಸರ್ಕಲ್, ಮೆಜೆಸ್ಟಿಕ್ ಗಾಂಧೀ ನಗರ ಸೇರಿದಂತೆ ಹಲವು ಭಾಗಗಳಲ್ಲಿ ಮಳೆಯಾಗಿದೆ. ಸಂಜೆ ಸಮಯ ದ್ವಿಚಕ್ರ ವಾಹನ ಸವಾರರು ಮಳೆಯಲ್ಲಿ ಸಿಲುಕಿಕೊಂಡರು. ಮಳೆ ಹಿನ್ನಲೆ ಬಸ್ ನಿಲ್ದಾಣ, ಅಂಗಡಿ ಮುಗ್ಗಟ್ಟು ಬಳಿ ಜನರು ಆಶ್ರಯ ಪಡೆದರು. ಕಾವೇರಿ ನಗರದಲ್ಲಿ ಮಳೆ ಆರ್ಭಟದಿದಂದ ಸ್ಯಾನಿಟರಿ ಚೇಂಬರ್ ಇಂದ ನೀರು ಉಕ್ಕುತ್ತಿದ್ದು, ಮನೆಗಳಿಗೆ ನೀರು ನುಗ್ಗುವ ಭೀತಿಯಲ್ಲಿ ಜನರಿದ್ದಾರೆ.
ಬಿಎಂಟಿಸಿ ಬಸ್ ಮೇಲೆ ಮರ ಬಿದಿದ್ದು, ಬೆಂಗಳೂರಿನ ಕೆಜಿ ರಸ್ತೆಯಲ್ಲಿ ಘಟನೆ ನಡೆದಿದೆ. ಘಟನೆಯಲ್ಲಿ ಯಾವುದೇ ಪ್ರಯಾಣಿಕರಿಗೆ ಗಾಯವಾಗಿಲ್ಲ. ಸ್ಥಳಕ್ಕೆ ಉಪ್ಪಾರಪೇಟೆ ಸಂಚಾರಿ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿದ್ದು, ಸದ್ಯ ಪೊಲೀಸರು ಹಾಗೂ ಬಿಬಿಎಂಪಿ ಸಿಬ್ಬಂದಿ ಮರವನ್ನು ತೆರವು ಮಾಡುತ್ತಿದ್ದಾರೆ. ಮಳೆ ಎಫೆಕ್ಟ್‌ಗೆ ಉತ್ತರಳ್ಳಿ ಜನತೆ ಹೈರಾಣಾಗಿದ್ದು, 1 ಗಂಟೆ ಸುರಿದ ಮಳೆ ಎಫೆಕ್ಟಟ್‌ನಿಂದ ಮನೆಗಳಿಗೆ ನೀರು ನುಗ್ಗಿದೆ. ಉತ್ತರಹಳ್ಳಿಯ ಲಕ್ಷ್ಮಯ್ಯ ಲೇಔಟ್ ನ 100 ಕ್ಕೂ ಹೆಚ್ಚು ಮನೆ ಅಂಗಡಿಗಳಿಗೆ ನೀರು ನುಗ್ಗಿದ್ದು, ಇಡೀ ಏರಿಯಾಗೆ ಏರಿಯಾನೇ ಜಲಾವೃತವಾಗಿದೆ. ಕಳೆದ 15 ದಿನ ಹಿಂದೆಯೂ ಜಲಾವೃತವಾಗಿದ್ದ ಸಂಪೂರ್ಣ ಏರಿಯಾ, ರಾಜಕಾಲುವೇ ತುಂಬಿ ಏರಿಯಾಗೆ ಹರಿದಿರುವ ಮಳೆ ನೀರಿನಿಂದ ಬಿಬಿಎಂಪಿ ಸರ್ಕಾರದ ವಿರುದ್ಧ ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಮಳೆ ಅವಾಂತರ ಉತ್ತರಹಳ್ಳಿಯ ಲಕ್ಷ್ಮಯ್ಯ ಲೇಔಟ್ ಮನೆಗಳಿಗೆ ನೀರು ನುಗ್ಗಿರೋ ಹಿನ್ನೆಲೆಯಲ್ಲಿ ಸ್ಥಳಕ್ಕೆ ಅಗ್ನಿ ಶಾಮಕದಳ ತಂಡ ಆಗಮಿಸಿ, ಮೋಟರ್‌ಗಳ ಮೂಲಕ ಅಗ್ನಿಶಾಮಕ ದಳ ಸಿಬ್ಬಂದಿ ನೀರು ಹೊರಹಾಕಿದ್ದಾರೆ. ಈ ವೇಳೆ ಸ್ಥಳಕ್ಕೆ ಸ್ಥಳೀಯ ಶಾಸಕ ಎಂ ಕೃಷ್ಣಪ್ಪ ಭೇಟಿ ನೀಡಿ ಸ್ಥಳ ಪರಿಶೀಲನೆ ಮಾಡಿದ್ದಾರೆ. ಧಾರಾಕಾರ ಮಳೆಗೆ ಬೃಹತ್ ಗಾತ್ರದ ಮರಗಳು ಧರೆಗೆ ಉರುಳಿದ್ದು, ಪಿರಿಯಾಪಟ್ಟಣ ತಾಲೂಕಿನ ಬೈಲುಕುಪ್ಪೆಯಲ್ಲಿ ಘಟನೆ ನಡೆದಿದೆ. ಗಾಳಿ ಸಹಿತ ಆಲಿಕಲ್ಲು ಮಳೆಯಾಗಿದ್ದು, ಚಲಿಸುತ್ತಿದ್ದ ಲಾರಿ ಮೇಲೆ ಮರ ಬಿದ್ದಿದೆ. ಇದರಿಂದ ಅರ್ಧ ಗಂಟೆ ಕಾಲ ವಾಹನ ಸಂಚಾರ ಸ್ಥಗಿತವಾಗಿದ್ದು, ಮೈಸೂರು ಮಡಿಕೇರಿ ರಸ್ತೆಯಲ್ಲಿ ವಾಹನ ಸಂಚಾರ ಅಸ್ತವ್ಯಸ್ತವಾಗಿತ್ತು.
ಕರ್ನಾಟಕದ ಹಲವೆಡೆ ಗುಡುಗು ಸಿಡಿಲಿನ ಮಳೆ ಆರ್ಭಟ, ಗಿಡ, ಬಣವಿಗಳಿಗೆ ಬೆಂಕಿ, ಓರ್ವ ಸಾವು
ವರುಣನ ಅಬ್ಬರಕ್ಕೆ ರಾಷ್ಟ್ರೀಯ ಹೆದ್ದಾರಿ ಕೆರೆಯಂತಾಗಿದ್ದು, ಬೆಂಗಳೂರು - ಮೈಸೂರು ರಾಷ್ಟ್ರೀಯ ಹೆದ್ದಾರಿ ಸಂಪೂರ್ಣ ಜಲಾವೃತವಾಗಿದೆ. ರಸ್ತೆ ತುಂಬಾ ನೀರು ನಿಂತ ಕಾರಣ ಫುಲ್ ಟ್ರಾಫಿಕ್ ಜಾಮ್ ಆಗಿದ್ದು, ಚನ್ನಪಟ್ಟಣ ನಗರದ ಗಾಂಧಿ ಭವನದಿಂದ ಅಂಚೆ ಕಚೇರಿವರೆಗೂ ನಿಂತಿರುವ ನೀರು ನಿಂತಿದೆ. ಸುಮಾರು ಮೂರ್ನಾಲ್ಕು ಕಿ.ಮೀ ಉದ್ದ ಟ್ರಾಫಿಕ್ ಜಾಮ್ ಹಾಗೂ ಮಳೆರಾಯಣ ಆರ್ಭಟಕ್ಕೆ ಜನರು ತತ್ತರಿಸಿದ್ದರು. ಇನ್ನು ಕೋಲಾರ ಜಿಲ್ಲೆಯ ಮುಳಬಾಗಿಲು, ಮಾಲೂರು ತಾಲೂಕುಗಳಲ್ಲಿ ಗುಡುಗು ಮಿಂಚು ಸಹಿತ ಮಳೆಯಾಗಿದ್ದು, ಬಿಸಿಲ ಝಳಕ್ಕೆ ಬೆಂದಿದ್ದ ಜನತೆಗೆ ಮಳೆರಾಯನ ಸಿಂಚನವಾಗಿದೆ.
