Haveri Floods: ಕೊಳೆಯುತ್ತಿರುವ ಬೆಳೆ, ದಿಕ್ಕು ತೋಚದಾದ ಬೆಳೆಗಾರರು

ಬಿತ್ತನೆ ಸಂದರ್ಭದಿಂದ ಪ್ರಾರಂಭವಾದ ಮಳೆ ಫಸಲು ಬರುವವರೆಗೂ ನಿಂತಿಲ್ಲ, ಹೆಚ್ಚಾದ ಮಳೆಯಿಂದ ರೈತರು ಹೈರಾಣಾಗಿದ್ದಾರೆ. ಇನ್ನೇನು ಮಾಡಿದ ಖರ್ಚನ್ನು ಸರಿದೂಗಿಸುವಷ್ಟುಫಸಲು ಬರುತ್ತದೆ ಎಂಬ ನಿರೀಕ್ಷೆಯಲ್ಲಿದ್ದ ರೈತರಿಗೆ ಕೆರೆ ಕೋಡಿ ಬಿದ್ದಿರುವುದರಿಂದ ಹೊಲಗಳೆಲ್ಲ ನೀರು ಸಂಗ್ರಹದ ಹೊಂಡಗಳಾಗಿ ಮಾರ್ಪಾಡಾಗುತ್ತಿವೆ

heavy rain Crop crop destroyed Farmers problems in haveri rav

ಮಂಜುನಾಥ ಯರವಿನತಲಿ

ಗುತ್ತಲ (ಸೆ.18) : ಪಟ್ಟಣ ಸೇರಿದಂತೆ ಸುತ್ತಮುತ್ತಲಿನ ಪ್ರದೇಶಗಳಲ್ಲಿ ನಿರಂತರ ಸುರಿದ ಮಳೆಯಿಂದ ಕಂಗೆಟ್ಟಿದ್ದ ರೈತರಿಗೆ ಐತಿಹಾಸಿಕ ಕೆರೆ ಕೋಡಿ ಬಿದ್ದು ಹೊಲಗಳಲ್ಲಿನ ಬೆಳೆಗಳು ಜಲಾವೃತವಾಗಿದ್ದು, ರೈತರು ಕಂಗಾಲಾಗಿದ್ದಾರೆ. ಸಮೀಪದ ಎಂ.ಜಿ. ತಿಮ್ಮಾಪುರ, ಶಿವನಗರ ತಾಂಡಾ, ಯಲ್ಲಮ್ಮನ ತೋಟದ ಬಳಿ, ಪುರದ ರಸ್ತೆ ಸೇರಿದಂತೆ ವಿವಿಧ ಭಾಗದ ನೂರಾರು ಹೆಕ್ಟೇರ್‌ ಕೃಷಿ ಭೂಮಿಯು ಹೆಚ್ಚಿದ ಮಳೆ ಹಾಗೂ ಗುತ್ತಲದ ತಾಂಡಾ ಬಳಿಯ ಐತಿಹಾಸಿಕ ಕೆರೆ ಕೋಡಿ ಬಿದ್ದು ಮುಸುಕಿನ ಜೋಳ, ಶೇಂಗಾ, ಹತ್ತಿ, ಈರುಳ್ಳಿ, ಬತ್ತ, ತೋಟಗಾರಿಕಾ ಬೆಳೆಗಳು ಕೊಳೆಯುವ ಹಂತದಲ್ಲಿದ್ದು, ಬೆಳೆಗಳು ನೆಲ ಕಚ್ಚುವುದನ್ನು ನೋಡುತ್ತಿರುವ ರೈತರು ದಿಕ್ಕು ತೋಚದಂತಾಗಿದ್ದಾರೆ.

ನಿರಂತರ ಮಳೆ; ನೀರಿನಲ್ಲಿ ಕೊಳೆಯುತ್ತಿದೆ ಸೋಯಾ

ಬಿತ್ತನೆ ಸಂದರ್ಭದಿಂದ ಪ್ರಾರಂಭವಾದ ಮಳೆ ಫಸಲು ಬರುವವರೆಗೂ ನಿಂತಿಲ್ಲ, ಹೆಚ್ಚಾದ ಮಳೆಯಿಂದ ರೈತರು ಹೈರಾಣಾಗಿದ್ದಾರೆ. ಇನ್ನೇನು ಮಾಡಿದ ಖರ್ಚನ್ನು ಸರಿದೂಗಿಸುವಷ್ಟುಫಸಲು ಬರುತ್ತದೆ ಎಂಬ ನಿರೀಕ್ಷೆಯಲ್ಲಿದ್ದ ರೈತರಿಗೆ ಕೆರೆ ಕೋಡಿ ಬಿದ್ದಿರುವುದರಿಂದ ಹೊಲಗಳೆಲ್ಲ ನೀರು ಸಂಗ್ರಹದ ಹೊಂಡಗಳಾಗಿ ಮಾರ್ಪಾಡಾಗುತ್ತಿವೆ. ಸಾಲ ಮಾಡಿ ಬೀಜ, ಗೊಬ್ಬರ ಖರೀದಿಸಿ, ಕಷ್ಟಪಟ್ಟು ಹೊಲಗಳನ್ನು ಉಳುಮೆ ಮಾಡಿದ ಬೆಳೆಗಳು ರೈತನ ಕಣ್ಣೆದುರೆ ಕೊಳೆಯುತ್ತಿರುವುದರಿಂದ ರೈತನ ಶ್ರಮಕ್ಕೆ ಬೆಲೆಯೇ ಇಲ್ಲದಂತಾಗಿದೆ. ಮಳೆ ಹಾಗೂ ಹೆಚ್ಚಿದ ನೆರೆಯಿಂದ ರೈತರ ಕೈಗೆ ಬಂದ ತುತ್ತು ಬಾಯಿಗೆ ಬಾರದಂತಾಗಿದೆ. ರೈತರ ಕಷ್ಟಕ್ಕೆ ಆಸರೆಯಾಗಲು ಸಂಬಂಧಪಟ್ಟಕೃಷಿ, ತೋಟಗಾರಿಕೆ ಇಲಾಖೆಯ ಅಧಿಕಾರಿಗಳು ಆದಷ್ಟೂಬೇಗನೆ ಹಾನಿಯಾದ ಹೊಲಗಳಿಗೆ ಭೇಟಿ ನೀಡಿ ಪರಿಹಾರ ಒದಗಿಸಬೇಕು ಎಂದು ರೈತರು ಮೊರೆ ಇಡುತ್ತಿದ್ದಾರೆ.

ಅತಿವೃಷ್ಟಿಗೆ ಶೇ. 90ರಷ್ಟುಹೆಸರುಕಾಳು ಹಾಳು

ಒಟ್ಟಿನಲ್ಲಿ ಮಳೆ ಬಂದರೂ ಕಷ್ಟ, ಬಾರದಿದ್ದರೂ ಕಷ್ಟಅನ್ನುವ ಹಾಗೆ ಅತಿಯಾದ ಮಳೆಯಿಂದಾಗಿ ಈ ಬಾರಿ ಗುತ್ತಲ ಹೋಬಳಿಯ ರೈತರು ಸಂಕಷ್ಟಕ್ಕೀಡಾಗಿದ್ದು, ಬೆಳೆದ ಬೆಳೆಗಳು ರೈತನ ಕಣ್ಣೆದುರೇ ಕಮರಿ ಹೋಗುತ್ತಿರುವುದನ್ನು ನೋಡಿ ರೈತನ ಮೊಗದಲ್ಲಿ ಆತಂಕದ ಛಾಯೆ ಮೂಡಿದೆ.

ಸುಮಾರು ನಾಲ್ಕೈದು ವರ್ಷಗಳಿಂದ ಹೆಚ್ಚುತ್ತಿರುವ ಮಳೆ ಹಾಗೂ ಕೆರೆ ಕೋಡಿ ಬಿದ್ದು ನೀರು ನಮ್ಮ ಜಮೀನಿಗೆ ಸರಾಗವಾಗಿ ನುಗ್ಗುತ್ತಿರುವುದರಿಂದ ಪ್ರತಿ ವರ್ಷ ಬೆಳೆ ಬೆಳೆಯಲು ಮಾಡುವ ಸಾಲವೇ ಹೆಚ್ಚಾಗಿ ಹೊಲದಲ್ಲಿನ ಫಸಲು ಕೈ ಸೇರದಾಗಿದೆ, ಹೊಲದ ತುಂಬೆಲ್ಲ ನೀರು ನಿಂತಿದ್ದು ಮುಂದೇನು ಮಾಡಬೇಕು ಎಂದು ತಿಳಿಯದಾಗಿದೆ. ಇರುವ ಜಮೀನಿನಲ್ಲಿಯೇ ಜೀವನ ಸಾಗಿಸಬೇಕಾಗಿದ್ದು, ಕುಟುಂಬ ನಿರ್ವಹಣೆ ಮಾಡುವುದೆ ಯೋಚನೆಯಾಗಿದೆ.

ಕರಿಯಲ್ಲಪ್ಪ ದೊಣ್ಣಿ ಎಂ.ಜಿ. ತಿಮ್ಮಾಪುರ ರೈತ

ಹೆಚ್ಚಿದ ಮಳೆ ಹಾಗೂ ಕೆರೆ ಕೋಡಿ ಬಿದ್ದು ಹರಿಯುತ್ತಿರುವ ನೀರಿನಿಂದ ಹಾನಿಗೆ ಒಳಗಾಗಿರುವ ಹೊಲದ ಹಾಗೂ ಬೆಳೆಗಳ ಸರ್ವೇ ಕಾರ್ಯ ಕಂದಾಯ ಹಾಗೂ ಕೃಷಿ ಇಲಾಖೆ ಅಧಿಕಾರಿಗಳಿಂದ ನಡೆದಿದೆ, ಆದಷ್ಟುಬೇಗನೆ ಜಿಲ್ಲಾಡಳಿತ ಹಾಗೂ ಸಂಬಂಧಪಟ್ಟಇಲಾಖೆಯವರಿಗೆ ಹಾನಿಯಗಿರುವ ಬಗ್ಗೆ ಮಾಹಿತಿ ನೀಡಿ ಜಿಲ್ಲಾಧಿಕಾರಿಗಳ ಮಾರ್ಗದರ್ಶನದಲ್ಲಿ ಮುಂದಿನ ಕ್ರಮ ಕೈಗೊಳ್ಳಲಾಗುವುದು.

ಗಿರೀಶ ಸ್ವಾದಿ ತಹಸೀಲ್ದಾರ್‌ ಹಾವೇರಿ

Latest Videos
Follow Us:
Download App:
  • android
  • ios