ಅತಿವೃಷ್ಟಿಗೆ ಶೇ. 90ರಷ್ಟುಹೆಸರುಕಾಳು ಹಾಳು
ಉತ್ತರ ಕರ್ನಾಟಕದ ಪ್ರಮುಖ ಬೆಳೆಗಳಲ್ಲಿ ಹೆಸರು ಕೂಡ ಒಂದು. ಆದರೆ ಈ ವರ್ಷ ಸುರಿದ ಮಳೆಗೆ ಈ ಭಾಗದ ಹೆಸರು ಬಹುತೇಕ ಹಾನಿಗೀಡಾಗಿದೆ. ಅಳಿದುಳಿದ ಹೆಸರು ಉಳಿಸಲು ರೈತರು ಹರಸಾಹಸ ಪಡುತ್ತಿದ್ದಾರೆ.
ಶಿವಾನಂದ ಗೊಂಬಿ
ಹುಬ್ಬಳ್ಳಿ (ಆ.23) : ಉತ್ತರ ಕರ್ನಾಟಕದ ಪ್ರಮುಖ ಬೆಳೆಗಳಲ್ಲಿ ಹೆಸರು ಕೂಡ ಒಂದು. ಆದರೆ ಈ ವರ್ಷ ಸುರಿದ ಮಳೆಗೆ ಈ ಭಾಗದ ಹೆಸರು ಬಹುತೇಕ ಹಾನಿಗೀಡಾಗಿದೆ. ಅಳಿದುಳಿದ ಹೆಸರು ಉಳಿಸಲು ರೈತರು ಹರಸಾಹಸ ಪಡುತ್ತಿದ್ದಾರೆ. ಮುಂಗಾರಿನಲ್ಲಿ ಸಹಜವಾಗಿ ಹೆಸರು ಬೆಳೆಯುವುದು ಮಾಮೂಲಿ. ಇದು ಮೂರು ತಿಂಗಳ ಬೆಳೆ. ಆದರೆ ಈ ವರ್ಷ ಅತಿವೃಷ್ಟಿಯಿಂದಾಗಿ ಹುಬ್ಬಳ್ಳಿ-ಧಾರವಾಡ, ಗದಗ ಸೇರಿದಂತೆ ವಿವಿಧ ಜಿಲ್ಲೆಗಳಲ್ಲಿನ ಹೆಸರು ಸಂಪೂರ್ಣ ಹಾಳಾಗಿದೆ. ಅಳಿದುಳಿದ ಹೆಸರು ಕಟಾವ್ ಮಾಡಿಕೊಂಡ ರೈತರು ಒಣಗಿಸಲು ರಸ್ತೆಯಲ್ಲೇ ರಾಶಿ ಮಾಡಿಕೊಂಡು ಕುಳಿತುಕೊಂಡಿದ್ದಾರೆ. ಧಾರವಾಡ ಹಾಗೂ ಗದಗ ಜಿಲ್ಲೆಯ ಹಳ್ಳಿಗಳಿಗೆ ಹೋದರೆ ರಸ್ತೆಯ ಬದಿಗಳಲ್ಲಿ ಹೆಸರು ಒಣಗಿಸುವ ದೃಶ್ಯ ಕಣ್ಣಿಗೆ ರಾಚುತ್ತದೆ. ಇನ್ನು ಆಗಾಗ ಉದುರುವ ಮಳೆ ಹನಿಯಿಂದ ಬೆಳೆ ರಕ್ಷಿಸಲು ಅದರ ಮೇಲೆ ತಾಡಪತ್ರಿಯಿಂದ ಮುಚ್ಚುತ್ತಾರೆ. ಹೀಗೆ ಹಗಲು ರಾತ್ರಿ ಇದೇ ರೀತಿ ನಡೆಯುತ್ತಲೇ ಇರುತ್ತದೆ ರೈತರ ಗೋಳು.
ಮಾರುಕಟ್ಟೆಯಲ್ಲಿ ಹೆಸರು ಕಾಳು ಬೆಲೆ ದಿಢೀರ್ ಕುಸಿತ: ಸಂಕಷ್ಟದಲ್ಲಿ ಬೆಳೆಗಾರ
ಎಲ್ಲಿ ಎಷ್ಟುಹಾನಿ?:
ಧಾರವಾಡ ಜಿಲ್ಲೆಯಲ್ಲಿ ಬರೋಬ್ಬರಿ 2.73 ಲಕ್ಷ ಹೆಕ್ಟೇರ್ ಪ್ರದೇಶದಲ್ಲಿ ಮುಂಗಾರು ಹಂಗಾಮಿನಲ್ಲಿ ಬಿತ್ತನೆಯಾಗಿತ್ತು. ಆದರೆ ಮೇ, ಜೂನ್, ಜುಲೈನಲ್ಲಿ ಸುರಿದ ಮಳೆಯಿಂದಾಗಿ ಬರೋಬ್ಬರಿ 89141 ಹೆಕ್ಟೇರ್ ಪ್ರದೇಶದಲ್ಲಿನ ಬೆಳೆ ಹಾನಿಯಾಗಿದೆ. ಈ ನಡುವೆ ಜಿಲ್ಲೆಯಲ್ಲಿ 71 ಸಾವಿರ ಹೆಕ್ಟೇರ್‌ನಲ್ಲಿ ಹೆಸರು ಬಿತ್ತನೆಯಾಗಿತ್ತು. ಈ ಪೈಕಿ 61566 ಹೆಕ್ಟೇರ್ ಪ್ರದೇಶದಲ್ಲಿ ಹೆಸರು ಬೆಳೆ ಹಾಳಾಗಿದೆ. ನವಲಗುಂದ, ಅಣ್ಣಿಗೇರಿ, ಕುಂದಗೋಳ, ಧಾರವಾಡ ಗ್ರಾಮೀಣ ತಾಲೂಕುಗಳಲ್ಲಿ ಹೆಚ್ಚು ಹಾನಿಯಾಗಿದೆ. ಅಂದರೆ ಬರೋಬ್ಬರಿ ಶೇ.90ಕ್ಕೂ ಅಧಿಕ ಪ್ರದೇಶದಲ್ಲಿನ ಹೆಸರು ಬೆಳೆ ಹಾನಿಯಾದಂತಾಗಿದೆ.
ಗದಗ ಜಿಲ್ಲೆಯಲ್ಲಿ 3 ಲಕ್ಷಕ್ಕೂ ಅಧಿಕ ಮುಂಗಾರು ಬಿತ್ತನೆ ಕ್ಷೇತ್ರವಿದೆ. ಈ ಪೈಕಿ 93,912 ಹೆಕ್ಟೇರ್ ಪ್ರದೇಶದಲ್ಲಿನ ವಿವಿಧ ಬೆಳೆಗಳು ಹಾನಿಗೀಡಾಗಿವೆ. ಈ ಪೈಕಿ 76672 ಹೆಕ್ಟೇರ್ ಪ್ರದೇಶದಲ್ಲಿ ಬೆಳೆದಿರುವ ಹೆಸರು ಬೆಳೆ ಹಾಳಾಗಿದೆ. ಹಾವೇರಿ ಜಿಲ್ಲೆಯ ಪರಿಸ್ಥಿತಿಯೂ ಇದೆ ರೀತಿ ಆಗಿದೆ. ಹಾಗಂತ ಉಳಿದ ಬೆಳೆಗಳು ಹಾನಿಗೀಡಾಗಿಲ್ಲ ಅಂತೇನೂ ಇಲ್ಲ. ಹಾನಿಯಾಗಿದೆ. ಆದರೆ ಹೆಚ್ಚಿನ ಪ್ರಮಾಣದಲ್ಲಿ ಹೆಸರು ಹಾಳಾಗಿದೆ. ಇದರಿಂದ ರೈತರಿಗೆ ಕೈಗೆ ಬಂದ ತುತ್ತು ಬಾಯಿಗೆ ಬಾರದಂತಾಗಿದೆ.
ದರ ಇಲ್ಲ: ಇಳುವರಿ ಕಡಿಮೆಯಾಗಿರುವ ಕಾರಣ ಮಾರುಕಟ್ಟೆಯಲ್ಲಿ ದರ ಹೆಚ್ಚಾಗಬೇಕಿತ್ತು. ಆದರೆ ಮಾರುಕಟ್ಟೆಯಲ್ಲೂ ಹೆಸರಿಗೆ ಬೆಲೆ ಇಲ್ಲದಂತಾಗಿದೆ. . 6000ದಿಂದ . 6500 ಕ್ವಿಂಟಲ್ ಮಾರಾಟವಾಗುತ್ತಿದೆ. ಇಷ್ಟಕ್ಕೆ ಮಾರಿದರೆ ಬೆಳೆ ಬೆಳೆಯಲು ಹಾಕಿದ ಅಸಲು ಕೂಡ ಬಾರದು ಎಂಬ ಅಂಬೋಣ ರೈತರದ್ದು. ಮಳೆಯಿಂದ ಹೆಸರು ಹಾಳಾಗಿದೆ. ಅಳಿದುಳಿದ ಹೆಸರು ಕೂಡ ಗುಣಮಟ್ಟದ್ದಲ್ಲ. ಹೀಗಾಗಿ ಮಾರುಕಟ್ಟೆಯಲ್ಲಿ ದರ ಸಿಗುತ್ತಿಲ್ಲ ಎಂಬುದು ದಲ್ಲಾಳಿಗಳ ಹೇಳಿಕೆ.
ಕೈಗೆ ಬಂದ ಹೆಸರು ಬೆಳೆ: ಖರೀದಿ ಕೇಂದ್ರ ಆರಂಭಿಸುವಂತೆ ರೈತರ ಒತ್ತಾಯ
ಕೇಂದ್ರ ಸರ್ಕಾರ ಬೆಂಬಲ ಬೆಲೆಯಡಿ (ಎಂಎಸ್‌ಪಿ) ಪ್ರತಿ ಕ್ವಿಂಟಲ್‌ಗೆ . 7,725 ದರ ನಿಗದಿ ಮಾಡಿದೆ. ಆದರೆ ಈ ವರೆಗೂ ಬೆಂಬಲ ಬೆಲೆ ಕೇಂದ್ರವನ್ನು ಸರ್ಕಾರ ಪ್ರಾರಂಭಿಸಿಲ್ಲ. ಕೂಡಲೇ ಬೆಂಬಲ ಬೆಲೆ ಕೇಂದ್ರ ಶುರು ಮಾಡುವ ಮೂಲಕ ರೈತರಿಗೆ ನೆರವಾಗಬೇಕೆಂಬುದು ಒಕ್ಕೊರಲಿನ ಆಗ್ರಹ. ಒಟ್ಟಿನಲ್ಲಿ ರೈತರಿಗೆ ಹೆಸರು ಬೆಳೆ ಕೈಗೆ ಬಂದ ತುತ್ತು ಬಾಯಿಗೆ ಬಾರದಂತಾಗಿರುವುದಂತೂ ಸತ್ಯ,.
ಧಾರವಾಡ ಜಿಲ್ಲೆಯಲ್ಲಿ 2.73 ಲಕ್ಷ ಹೆಕ್ಟೇರ್ ಪ್ರದೇಶದಲ್ಲಿ ಬೆಳೆ ಪೈಕಿ 89 ಸಾವಿರ ಹೆಕ್ಟೇರ್‌ಗೂ ಹೆಚ್ಚಿನ ಪ್ರದೇಶದಲ್ಲಿನ ಬೆಳೆಹಾನಿಯಾಗಿದೆ. ಇನ್ನೂ 71 ಸಾವಿರ ಹೆಕ್ಟೇರ್ ಪ್ರದೇಶದಲ್ಲಿ ಹೆಸರು ಬೆಳೆಯಲಾಗಿತ್ತು. ಆ ಪೈಕಿ 61566 ಹೆಕ್ಟೇರ್‌ನಲ್ಲಿ ಬೆಳೆದಿದ್ದ ಹೆಸರು ಹಾಳಾಗಿದೆ.
ರಾಜಶೇಖರ ಬಿಜಾಪುರ, ಜಂಟಿ ಕೃಷಿ ನಿರ್ದೇಶಕ
ಹೆಸರು ಬೆಳೆ ಬಹಳ ಹಾನಿಯಾಗಿದೆ. ಕೈಗೆ ಬಂದ ತುತ್ತು ಬಾಯಿಗೆ ಬಾರದಂತಾಗಿದೆ. ಹಾಕಿರುವ ಅಸಲು ಕೂಡ ಬಾರದಂತಾಗಿದೆ. ಕೂಡಲೇ ಬೆಂಬಲ ಬೆಲೆ ಖರೀದಿ ಕೇಂದ್ರ ಆರಂಭಿಸಬೇಕು.
ಕಲ್ಲಪ್ಪ ಹುಲ್ಜತ್ತಿ, ರೈತ