ಮೈಸೂರು (ಸೆ.25): ನಗರದಲ್ಲಿ ಕೊರೋನಾ ಸೋಂಕಿತರ ಸಂಖ್ಯೆ ದಿನೇ ದಿನೇ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಸಾರ್ವಜನಿಕವಾಗಿ ಮಾಸ್ಕ್ ಧರಿಸದೇ ಓಡಾಡುವವರಿಗೆ ದಂಡ ವಿಧಿಸುವ ಮೂಲಕ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲು ಜಿಲ್ಲಾಡಳಿತ ತೀರ್ಮಾನಿಸಿದೆ.

ಜಿಲ್ಲೆಯಾದ್ಯಂತ ಕೊರೋನಾ ಸೋಂಕಿತರ ಪ್ರಮಾಣ ಹೆಚ್ಚಾಗುತ್ತಿರುವ ಹಿನ್ನೆಲೆ ಗುರುವಾರ ಸೋಂಕು ನಿಯಂತ್ರಣ ಕುರಿತು ಜಿಲ್ಲಾಧಿಕಾರಿ ಶರತ್‌ ಅವರ ನೇತೃತ್ವದಲ್ಲಿ ಜಿಪಂ ಸಭಾಗಣದಲ್ಲಿ ಸಭೆ ನಡೆಯಿತು. ಜಿಲ್ಲೆಯಲ್ಲಿ ಸೋಂಕು ಪರೀಕ್ಷೆಯನ್ನು ಹೆಚ್ಚಳ ಮಾಡಲು ಸಭೆಯಲ್ಲಿ ನಿರ್ಧಾರಿಸಲಾಯಿತು.

ಕೊರೋನಾ ಸಂಕಷ್ಟ: 4008 ಕೋಟಿ ಪೂರಕ ಅಂದಾಜಿಗೆ ಒಪ್ಪಿಗೆ ...

ಜಿಲ್ಲಾಧಿಕಾರಿ ಶರತ್‌ ಮಾತನಾಡಿ, ಮಾಸ್ಕ್‌ ಧರಿಸದೆ ತಿರುಗಾಡುವವರಿಗೆ ಕಟ್ಟುನಿಟ್ಟಾಗಿ . 200 ದಂಡ ವಿಧಿಸಲು ನಿರ್ಧರಿಸಲಾಗಿದೆ. ಮುಂದಿನ ದಿನಗಳಲ್ಲಿ ಸಾರ್ವಜನಿಕ ಸ್ಥಳಗಳಲ್ಲಿ ಮಾಸ್ಕ್‌ ಕಡ್ಡಾಯವಾಗಿ ಧರಿಸಲೇಬೇಕು ಎಂದು ಸೂಚಿಸಲಾಗುವುದು ಎಂದರು.

ನಗರ ಪೊಲೀಸ್‌ ಆಯುಕ್ತ ಡಾ. ಚಂದ್ರಗುಪ್ತ ಮಾತನಾಡಿ, ಜನರ ಆರ್ಥಿಕ ಪರಿಸ್ಥಿತಿ, ವ್ಯಾಪಾರ, ವಹಿವಾಟು ಗಮನಿಸಿ ಲಾಕ್‌ಡೌನ್‌ ಸಡಿಲಗೊಳಿಸಲಾಗಿತ್ತು. ಆದರೆ ಜನರು ತಾವೇ ಸೋಂಕಿಗೆ ತುತ್ತಾಗುವವರೆಗೆ ಬುದ್ದಿ ಕಲಿಯುವುದಿಲ್ಲ ಎನ್ನಿಸುತ್ತಿದೆ. ಬೇಕಾಬಿಟ್ಟಿಮಾಸ್ಕ್‌ ಧರಿಸುತ್ತಾರೆ. ಕೇವಲ ಗದ್ದದ ಮೇಲೆ ಮಾತ್ರ ಮಾಸ್ಕ್‌ ಇರುತ್ತದೆ. ಇನ್ನು ಮುಂದೆ ಅಂತವರ ವಿರುದ್ಧ ಕ್ರಮ ಕೈಗೊಳ್ಳಲಾಗುವುದು. ಆರೋಗ್ಯದಲ್ಲಿ ಯಾವುದೇ ರೀತಿಯ ತೊಂದರೆ ಕಂಡುಬಂದರೆ ಮುಕ್ತವಾಗಿ ಪರೀಕ್ಷೆ ಮಾಡಿಸಿಕೊಳ್ಳಬಹುದು. ಇದರಿಂದ ರೋಗ ತಡೆಯಲು ಮತ್ತು ನಿಯಂತ್ರಿಸಲು ಸಾಧ್ಯ. ರೋಗ ಲಕ್ಷಣವಿದ್ದರೆ ಮಾತ್ರ ಪರೀಕ್ಷೆ ಮಾಡಿಸಿಕೊಳ್ಳಬೇಕು ಎಂಬ ಆಲೋಚನೆ ಬೇಡ ಎಂದರು.

ಸೋಂಕಿತರಿಗೆ ಹಾಸಿಗೆ ಮೀಸಲಿಡದ 4 ಆಸ್ಪತ್ರೆ ವಿರುದ್ಧ FIRಗೆ ಆದೇಶ

ಅಲ್ಲದೆ ಸಾರ್ವಜನಿಕರು ವೈದ್ಯರ ಜೊತೆ ಅಸಭ್ಯವಾಗಿ ನಡೆದುಕೊಂಡರೆ ಎಫ್‌ಐಆರ್‌ ದಾಖಲಿಸಲಾಗುವುದು. ವೈದ್ಯರು ಒತ್ತಡದಲ್ಲಿ ಕೆಲಸ ಮಾಡುತ್ತಾರೆ. ಅವರಿಗೆ ಸಾರ್ವಜನಿಕರು ಸಹಕರಿಸಬೇಕು. ಮುಂದಿನ ದಿನಗಳಲ್ಲಿ ಟೆಸ್ಟ್‌ ಸಂಖ್ಯೆ ಹೆಚ್ಚಿಸುವ ಉದ್ದೇಶದಿಂದ ಟೀಮ್‌ ಮಾಡಲಾಗುತ್ತಿದೆ. ಜಿಲ್ಲಾಧಿಕಾರಿಗಳು ನಾಳೆಯಿಂದ ಟೀಮ್‌ ಮಾಡಿಸುವುದಾಗಿ ಹೇಳಿದ್ದಾರೆ. ವ್ಯಾಪಾರ ವಹಿವಾಟು ನಡೆಯುವ ಸ್ಥಳದಲ್ಲಿ ಎಚ್ಚರವಹಿಸಬೇಕು. ಮಳಿಗೆ ವ್ಯಾಪಾರಿಗಳು, ತಿಂಡಿ ವ್ಯಾಪಾರಿಗಳು, ಸಾರ್ವಜನಿಕರು ಶಿಸ್ತು ಕಾಪಾಡಬೇಕು ಎಂದು ಕಿವಿಮಾತು ಹೇಳಿದರು.

ಜಿಪಂ ಸಿಇಒ ಡಿ. ಭಾರತಿ, ನಗರ ಪಾಲಿಕೆ ಆಯುಕ್ತ ಗುರುದತ್‌ ಹೆಗಡೆ, ಎಸ್ಪಿ ರಿಷ್ಯಂತ್‌ ಇದ್ದರು.