ಬೆಂಗಳೂರು(ಸೆ.25): ಪ್ರಸಕ್ತ ಆರ್ಥಿಕ ವರ್ಷದ (2020-21) ಮೊದಲ ಪೂರಕ ಅಂದಾಜನ್ನು ರಾಜ್ಯ ಸರ್ಕಾರ ಮಂಡಿಸಿದ್ದು, 4,008 ಕೋಟಿ ರು. ಮೊತ್ತದ ಪೂರಕ ಅಂದಾಜುಗಳಿಗೆ ಗುರುವಾರ ವಿಧಾನಸಭೆಯ ಒಪ್ಪಿಗೆ ಪಡೆದಿದೆ.
ಮುಖ್ಯಮಂತ್ರಿ ಬಿ.ಎಸ್‌. ಯಡಿಯೂರಪ್ಪ ಅವರ ಪರವಾಗಿ ಪೂರಕ ಅಂದಾಜುಗಳನ್ನು ಮಂಡಿಸಿದ ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವ ಜೆ.ಸಿ. ಮಾಧುಸ್ವಾಮಿ, ಕೊರೋನಾ ಸಂಕಷ್ಟದಿಂದಾಗಿ ಅಗತ್ಯ ವೆಚ್ಚಗಳಿಗಾಗಿ ಮೊದಲ ಕಂತಿನ ಪೂರಕ ಅಂದಾಜುಗಳನ್ನು ಮಂಡಿಸಿ ಒಪ್ಪಿಗೆ ಪಡೆದರು.

ಈ ವೇಳೆ ಮಾತನಾಡಿದ ಅವರು, ಸರ್ಕಾರಿ ಆಸ್ಪತ್ರೆಗೆ ಕೊರೋನಾ ವೈದ್ಯಕೀಯ ಸಲಕರಣೆ ಮತ್ತಿತರ ವೆಚ್ಚಗಳಿಗೆ 1,090 ಕೋಟಿ ರು., ವಿವಿಧ ಸರ್ಕಾರಿ ಸಾರಿಗೆ ನಿಗಮಗಳ ಸಿಬ್ಬಂದಿಗೆ ಲಾಕ್ಡೌನ್‌ ವೇಳೆ ವೇತನ ನೀಡಲು 543.91 ಕೋಟಿ ರು., ವೈದ್ಯಕೀಯ ಕಾಲೇಜುಗಳಲ್ಲಿ ಮೂಲ ಸೌಕರ್ಯಕ್ಕಾಗಿ 165.7 ಕೋಟಿ ರು., ಕೃಷಿ ಉಪಕರಣಗಳ ಖರೀದಿಗೆ 100 ಕೋಟಿ ರು., ಆಟೋ ಚಾಲಕರಿಗೆ ಕೊರೋನಾ ಲಾಕ್ಡೌನ್‌ ಪರಿಹಾರ ನೀಡಲು 97 ಕೋಟಿ ರು., ಅಂಗನವಾಡಿಗಳ ದುರಸ್ತಿಗೆ 87 ಕೋಟಿ ರು., ವಾರ್ತಾ ಇಲಾಖೆಯಿಂದ ಬಾಕಿಯಿದ್ದ ಹಣ ಪಾವತಿಸಲು 56 ಕೋಟಿ ರು. ಹೀಗೆ ವಿವಿಧ ವೆಚ್ಚಗಳ ಬಾಬ್ತು 4,008 ಕೋಟಿ ರು. ಪೂರಕ ಅಂದಾಜಿಗೆ ಒಪ್ಪಿಗೆ ನೀಡುವಂತೆ ಮನವಿ ಮಾಡಿದರು.

ಅಧಿಕಾರಿಗಳ ಬೋಗಸ್‌ ಲೆಕ್ಕ- ಸಿದ್ದರಾಮಯ್ಯ

ಈ ವೇಳೆ ವಿಧಾನಸಭೆ ವಿರೋಧಪಕ್ಷದ ನಾಯಕ ಸಿದ್ದರಾಮಯ್ಯ ಮಾತನಾಡಿ, ಈಗಾಗಲೇ 2.37 ಲಕ್ಷ ಕೋಟಿ ರು. ಗಾತ್ರದ ಬಜೆಟ್‌ ಮಂಟಿಸಿದ್ದೀರಿ. ಇದೀಗ 4,008 ಕೋಟಿ ರು. ಪೂರಕ ಅಂದಾಜು ಮಂಡಿಸುತ್ತಿದ್ದೀರಿ. ಈ ಹಣ ಹೇಗೆ ಹೊಂದಿಸುತ್ತೀರಿ? ಹಣ ಎಲ್ಲಿಂದ ಬರುತ್ತದೆ ಎಂದು ಪ್ರಶ್ನಿಸಿದರು.

ಕೊರೋನಾ ಭೀತಿ: 6 ದಿನಕ್ಕೆ ವಿಧಾನಮಂಡಲ ಅಧಿವೇಶನ ಮೊಟಕುಗೊಳಿಸಲು ತೀರ್ಮಾನ

ಇದಕ್ಕೆ ಮಾಧುಸ್ವಾಮಿ ಉತ್ತರಿಸದೆ ನಿಂತರು. ಬಳಿಕ ಸಿದ್ದರಾಮಯ್ಯ ಅವರೇ ಮಾತು ಮುಂದುವರೆಸಿ, ಮಾಧುಸ್ವಾಮಿ ನಾನೂ 13 ಬಜೆಟ್‌ ಮಂಡನೆ ಮಾಡಿದ್ದೇನೆ. ಪ್ರತಿ ಬಾರಿ ಈ ರೀತಿ ಪೂರಕ ಅಂದಾಜು ಮಂಡಿಸುವಾಗಲೂ ತೆರಿಗೆ ವಸೂಲಿ ಹೆಚ್ಚಳ ಮಾಡುತ್ತೇವೆ ಎಂದು ಅಧಿಕಾರಿಗಳು ಬೋಗಸ್‌ ಲೆಕ್ಕ ನೀಡುತ್ತಾರೆ. ನೀವು, ನಾವು ಅದನ್ನು ಸದನದಲ್ಲಿ ಹೇಳುತ್ತೇವೆ. ತೆರಿಗೆ ಹೆಚ್ಚಳವಾಗಲ್ಲ, ಬದಲಿಗೆ ವೆಚ್ಚಗಳನ್ನು ಕಡಿತಗೊಳಿಸಿ ಹೊಂದಾಣಿಕೆ ಮಾಡುತ್ತೇವೆ ಅಷ್ಟೇ ಎಂದರು.

ಇನ್ನೂ 36,000 ಕೋಟಿ ಸಾಲಕ್ಕೆ ಸಿದ್ಧತೆ

ಕರ್ನಾಟಕ ಆರ್ಥಿಕ ಹೊಣೆಗಾರಿಕೆ ಕಾಯಿದೆಗೆ ತಿದ್ದುಪಡಿ ತಂದು ರಾಜ್ಯದ ಜಿಡಿಪಿಯ ಶೇ.5ರವರೆಗೆ ಸಾಲ ಪಡೆಯಲು ಅವಕಾಶ ಮಾಡಿಕೊಳ್ಳುವ ಸಲುವಾಗಿ ಆರ್ಥಿಕ ಹೊಣೆಗಾರಿಕೆ ವಿಧೇಯಕ-2020ನ್ನು ಗುರುವಾರ ವಿಧಾನಸಭೆಯಲ್ಲಿ ಮಂಡಿಸಲಾಯಿತು.

ಸಚಿವ ಸಂಪುಟದ ನಿರ್ಧಾರದಂತೆ ವಿಧಾನಸಭೆಯಲ್ಲಿ ಮಂಡನೆಯಾಗಿರುವ ವಿಧೇಯಕಕ್ಕೆ ಒಪ್ಪಿಗೆ ದೊರೆತರೆ ಈವರೆಗೆ ಜಿಡಿಪಿಯ ಶೇ.3 ರಷ್ಟು ಸಾಲ ಪಡೆಯಲು ಇದ್ದ ಮಿತಿ ಶೇ.5ಕ್ಕೆ ಹೆಚ್ಚಾಗಲಿದೆ. ಇದರಿಂದ ಪ್ರಸಕ್ತ ಸಾಲಿನಲ್ಲಿ ಬಜೆಟ್‌ನಲ್ಲಿ ತಿಳಿಸಿರುವ ಸಾಲದ ಜತೆಗೆ 36 ಸಾವಿರ ಕೋಟಿ ರು.ಗಳಷ್ಟು ಹೆಚ್ಚುವರಿ ಸಾಲ ಮಾಡಲು ಅವಕಾಶ ಕಲ್ಪಿಸಿದಂತಾಗಲಿದೆ. ಸಚಿವ ಸಂಪುಟದಲ್ಲಿ ನಿರ್ಧರಿಸಿರುವಂತೆ 33 ಸಾವಿರ ಕೋಟಿ ರು. ಹೆಚ್ಚುವರಿ ಸಾಲ ಮಾಡಿದರೆ ಆರ್ಥಿಕ ವರ್ಷದ ಅಂತ್ಯಕ್ಕೆ ರಾಜ್ಯದ ಒಟ್ಟು ಸಾಲ 4.19 ಲಕ್ಷ ಕೋಟಿ ರು.ಗಳಷ್ಟಾಗಲಿದೆ.

ವಿಧೇಯಕ ಮಂಡಿಸಿ ಮಾತನಾಡಿದ ಸಚಿವ ಜೆ.ಸಿ. ಮಾಧುಸ್ವಾಮಿ, ಪ್ರಸಕ್ತ ವರ್ಷದಲ್ಲಿ 2.37 ಲಕ್ಷ ಕೋಟಿ ರು. ಗಾತ್ರದ ಆಯವ್ಯಯವನ್ನು ಮಂಡಿಸಿದ್ದು 1,79,920 ಕೋಟಿ ರು. ಆದಾಯ ನಿರೀಕ್ಷೆ ಮಾಡಲಾಗಿತ್ತು. ಆದರೆ, ಕೊರೋನಾ ಲಾಕ್ಡೌನ್‌ನಿಂದಾಗಿ ತೆರಿಗೆ ಮತ್ತಿತರ ಆದಾಯ 1.14 ಲಕ್ಷ ಕೋಟಿ ರು.ಗೆ ಕುಸಿಯುವ ಸಾಧ್ಯತೆ ಇದೆ. ಇದರಿಂದ ಸರ್ಕಾರಕ್ಕೆ 65.8 ಕೋಟಿ ರು. ಹಣದ ಕೊರತೆ ಎದುರಾಗಲಿದೆ. ಪ್ರಸ್ತುತ ಜಿಡಿಪಿಯ ಶೇ.2.23 ರಷ್ಟುಹೊಣೆಗಾರಿಕೆ (ಸಾಲ) ಹೊಂದಿದ್ದೇವೆ. ಕೊರೋನಾ ಸಂಕಷ್ಟದಿಂದಾಗಿ ಕೇಂದ್ರ ಸರ್ಕಾರವು ಶೇ.3 ರಿಂದ 5ರವರೆಗೆ ಸಾಲ ಪಡೆಯಲು ಅವಕಾಶ ನೀಡಿದೆ. ಇದರಿಂದ 36,700 ಕೋಟಿ ರು. ಹೆಚ್ಚುವರಿ ಸಾಲ ಪಡೆಯಲು ಸರ್ಕಾರಕ್ಕೆ ಅವಕಾಶ ಇದೆ ಎಂದರು.

ಅಲ್ಲದೆ, ಜಿಎಸ್‌ಟಿ ಪರಿಹಾರ 11,324 ಕೋಟಿ ರು.ಗಳನ್ನು ಕೇಂದ್ರ ಸರ್ಕಾರದ ಮರುಪಾವತಿ ಭರವಸೆಯೊಂದಿಗೆ ಸಾಲ ಮಾಡಲು ಅವಕಾಶ ನೀಡಲಾಗಿದೆ. ಇವುಗಳೆಲ್ಲದರ ಪರಿಣಾಮ ಈ ಆರ್ಥಿಕ ವರ್ಷದ ಅಂತ್ಯಕ್ಕೆ ರಾಜ್ಯದ ಒಟ್ಟು ಸಾಲ 4.19 ಲಕ್ಷ ಕೋಟಿ ರು.ಗಳಿಗೆ ಹೆಚ್ಚಾಗುವ ಸಾಧ್ಯತೆ ಇದೆ. ಇಷ್ಟಾದರೂ ಒಟ್ಟು ಜಿಡಿಪಿ ಉತ್ಪನ್ನದ ಶೇ.23.2 ರಷ್ಟುಮಾತ್ರ ಸಾಲ ಆಗಲಿದೆ. ಶೇ.25ಕ್ಕಿಂತ ಹೆಚ್ಚಿರಬಾರದು ಎಂಬ ಕರ್ನಾಟಕ ಆರ್ಥಿಕ ಹೊಣೆಗಾರಿಕೆ ನಿಯಮಗಳ ಅಡಿಯೇ ಇರುತ್ತದೆ ಎಂದು ಹೇಳಿದರು.

ಈ ಬಗ್ಗೆ ವಿರೋಧಪಕ್ಷದ ನಾಯಕ ಸಿದ್ದರಾಮಯ್ಯ ಅವರು ಮಾತನಾಡಲು ಶುರು ಮಾಡಿದಾಗ, ಬಸವ ಕಲ್ಯಾಣ ಶಾಸಕ ಬಿ. ನಾರಾಯಣರಾವ್‌ ಅವರು ಸಾವನ್ನಪ್ಪಿರುವ ಸುದ್ದಿ ಬಂದ ಹಿನ್ನೆಲೆಯಲ್ಲಿ ಕಲಾಪ ಮುಂದೂಡಲಾಯಿತು.