ಆಹಾರ ಹುಡುಕುತ್ತ ಗ್ರಾಮದ ತೋಟಗಳಿಗೆ ನುಗ್ಗಿದ ತಾಯಿ ಆನೆ ಅನುಮಾನಸ್ಪದ ರೀತಿಯಲ್ಲಿ ಮೃತಪಟ್ಟಿದೆ. ಇತ್ತ ತಾಯಿ ಕಳೆದುಕೊಂಡ ಮರಿ ಆನೆಯ ಮೋಕರೋಧನೆ ಹಲವರ ಕಣ್ಣಾಲಿ ತೇವಗೊಳಿಸಿದೆ.  ತಾಯಿ ಆನೆಯ ಎಬ್ಬಿಸಲು ಮರಿ ಆನೆ ಇನ್ನಿಲ್ಲದ ಪ್ರಯತ್ನ ಮಾಡಿದೆ.

ಕೊಡಗು (ಜು.26) ಕರ್ನಾಟಕದಲ್ಲಿ ಅತೀ ಹೆಚ್ಚು ಆನೆಗಳು ವಾಸಿಸುವ ಪ್ರದೇಶದಳಲ್ಲಿ ಕೊಡಗು ಪ್ರಮುಖವಾಗಿದೆ. ಕೊಡಗಿನ ಕಾಡುಗಳಲ್ಲಿ ಆನೆಗಳು ಹೆಚ್ಚಿನ ಸಂಖ್ಯೆಯಲ್ಲಿದೆ. ಆದರೆ ಕಾಡಿನಲ್ಲಿ ಆಹಾರ ಕೊರತೆಯಿಂದ ಆನೆಗಳು ನಾಡಿನತ್ತ ಬರುವುದು, ತೋಟಗಳಿಗೆ ನುಗ್ಗುವುದು ಇತ್ತೀಚೆಗೆ ಕೊಡಗು ಮಾತ್ರವಲ್ಲ, ಹಾಸನ, ಸಕಲೇಶಪುರ, ಚಿಕ್ಕಮಗಳೂರು ಸೇರಿದಂತೆ ಹಲವೆಡೆ ನಡೆಯುತ್ತಿದೆ. ಹೀಗಾ ಮರಿ ಜೊತೆ ತಾಯಿ ಆನೆ ಆಹಾರ ಹುಡುಕುತ್ತಾ ಗ್ರಾಮದ ತೋಟಕ್ಕೆ ನುಗ್ಗಿದೆ. ದುರಂತ ಆಂದರೆ ತಾಯಿ ಆನೆ ತೋಟದಲ್ಲೇ ಮೃತಪಟ್ಟಿದೆ. ಇದಕ್ಕಿದ್ದಂತೆ ಕುಸಿದು ಬಿದ್ದು ಮೃತಪಟ್ಟ ತಾಯಿ ಆನೆ ಕಂಡು ಮರಿ ಆನೆ ಕಂಗಾಲಾಗಿದೆ. ತಾಯಿಯನ್ನು ಎಬ್ಬಿಸಲು ಸತತವಾಗಿ ಪ್ರಯತ್ನ ಮಾಡಿದೆ. ಚೀರಾಡಿ ತಾಯಿ ಆನೆಯ ಸುತ್ತು ಬಂದರೂ ತಾಯಿ ಮಾತ್ರ ಏಳಲೇ ಇಲ್ಲ. ಮರಿ ಆನೆಯ ಚೀರಾಟ ಕೇಳಿ ಸ್ಥಳೀಯರು ಧಾವಿಸಿದ್ದಾರೆ. ಸ್ಥಳಕ್ಕೆ ಅರಣ್ಯ ಇಲಾಖೆ ಸಿಬ್ಬಂದಿಗಳು ಧಾವಿಸಿ ಪರಿಶೀಲನೆ ನಡೆಸಿದ್ದಾರೆ. ಇತ್ತ ಮರಿ ಆನೆಯನ್ನು ರಕ್ಷಿಸಲಾಗಿದೆ.

ಹೆಣ್ಣಾನೆಯ ಮರಣೋತ್ತರ ಪರೀಕ್ಷೆ

ಕೊಡಗಿನ ವಿರಾಜಪೇಟೆ ತಾಲೂಕಿನ ಆತನಂದಪುರದಲ್ಲಿ ಈ ಘಟನೆ ನಡೆದಿದೆ. ಕಾಫಿ ತೋಟದ ಮಧ್ಯೆ ರಾತ್ರಿ ವೇಳೆ ಹೆಣ್ಣಾನೆ ಮೃತಪಟ್ಟಿದೆ. ಕೌರಿಕಾಡು ಎಸ್ಟೇಟ್‌ನಲ್ಲಿ ಹೆಣ್ಣಾನೆ ಸಾವು ಹಲವು ಅನುಮಾನಗಳಿಗೆ ಕಾರಣವಾಗಿದೆ. ಸಂಶಯಾಸ್ವದ ರೀತಿಯಲ್ಲಿ ಸತ್ತು ಬಿದ್ದಿರುವ ಹೆಣ್ಣಾನೆಯ ಮರಣೋತ್ತರ ಪರೀಕ್ಷೆ ನಡೆಸಲು ಅರಣ್ಯ ಇಲಾಖೆ ನಿರ್ಧರಿಸಿದೆ. ಅನಾರೋಗ್ಯದ ಕಾರಣದಿಂದ ಮೃತಪಟ್ಟಿದೆಯೋ ಅಥವಾ ಗುಂಡು ತಗುಲಿ ಮೃತಪಟ್ಟಿದೆಯೋ ಅನ್ನೋದು ಮರಣೋತ್ತರ ಪರೀಕ್ಷೆ ಬಳಿಕ ಸ್ಪಷ್ಟವಾಗಲಿದೆ ಎಂದು ಅರಣ್ಯಾಧಿಕಾರಿಗಳು ಹೇಳಿದ್ದಾರೆ.

ಮರಿ ಆನೆ ರಕ್ಷಣೆ

ಮಧ್ಯರಾತ್ರಿ ತೋಟಕ್ಕೆ ಎಂಟ್ರಿಕೊಟ್ಟ ಹೆಣ್ಣಾನೆ ಕುಸಿದು ಬಿದ್ದು ಮೃತಪಟ್ತಿದೆ. ತಾಯಿ ಆನೆ ಜೊತೆ ಹೆಜ್ಜೆ ಹಾಕುತ್ತಾ ಬಂದಿದ್ದ ಮರಿ ಆನೆಯ ಮೂಕರೋಧನೆ ಹಲವರನ್ನು ಭಾವುಕರನ್ನಾಗಿಸಿದೆ. ತಾಯಿ ಕಳೆದುಕೊಂಡ ಮರಿ ಆನೆಯನ್ನು ಸ್ಥಳೀಯರು ಕಾಫಿ ಗಿಡಕ್ಕೆ ಕಟ್ಟಿ ಹಾಕಿ ರಕ್ಷಣೆ ಮಾಡಿದ್ದಾರೆ. ಮಾಹಿತಿ ತಿಳಿಯುತ್ತಿದ್ದಂತೆ ಸ್ಥಳಕ್ಕೆ ಧಾವಿಸಿದ ಅರಣ್ಯಾಧಿಕಾರಿಗಳು ಮರಿ ಆನೆಯನ್ನು ರಕ್ಷಿಸಿದ್ದಾರೆ.

ಗ್ರಾಮಗಳಿಗೆ, ತೋಟಗಳಿಗೆ ನುಗ್ಗುವ ಕಾಡಾನೆಗಳು ಹಲವು ಬಾರಿ ಗಂಭೀರವಾಗಿ ಗಾಯಗೊಂಡು ಮೃತಪಟ್ಟ ಘಟನೆಗಳಿವೆ. ಇನ್ನು ಕೆಸರು ತುಂಬಿದ ಕೆರೆಯಲ್ಲಿ ಸಿಲುಕಿ ಪರದಾಡಿದ ಘಟನೆಗಳೂ ಇವೆ. ಇತ್ತೀಚೆಗೆ ಕೊಡಗಿನ ಪೊನ್ನಂಪೇಟೆ ತಾಲ್ಲೂಕಿನ ತಿತಿಮತಿ ಸಮೀಪದ ಕನ್ನಂಬಾಡಿಯಲ್ಲಿ ಕೆಸರು ತುಂಬಿದ ಕೆರೆಯಲ್ಲಿ ಸಿಲುಕಿದ ಆನೆ ತೀವ್ರವಾಗಿ ಪರದಾಡಿತ್ತು. ತಕ್ಕ ಸಮಯದಲ್ಲಿ ಅರಣ್ಯಾಧಿಕಾರಿಗಳು ಬರದೆ ಸ್ಥಳೀಯ ಆಕ್ರೋಶಕ್ಕೂ ಕಾರಣವಾಗಿತ್ತು. ಎರಡು ದಿನಗಳಿಂದ ಕೆರೆಯಲ್ಲಿ ಸಿಲುಕಿ ಆನೆ ಪರದಾಡಿತ್ತು. ಆಹಾರ ವಿಲ್ಲದ ಆನೆ ಅಸ್ವಸ್ಥಗೊಂಡ ಘಟನೆಯೂ ನಡೆದಿತ್ತು.

ಕೊಡಗಿನ ಹಲವೆಡೆ ಕಾಡಾನೆಗಳು ದಾಳಿ ಮಾಡಿದ ಹಲವು ಘಟನೆಗಳು ವರದಿಯಾಗಿದೆ. ಇತ್ತೀಚೆಗೆ ಕೊಡಗಿನ ಗಡಿ ಭಾಗ ಆನೆಚೌಕೂರಿನಲ್ಲಿ ಅರಣ್ಯ ಇಲಾಖೆ ಚೆಕ್ ಪೋಸ್ಟ್ ಮೇಲೆ ಕಾಡಾನೆ ದಾಳಿ ಮಾಡಿತ್ತು. ಆನೆ ದಾಳಿ ಆಗುತ್ತಿದ್ದಂತೆ ಕರ್ತವ್ಯದಲ್ಲಿದ್ದ ಸಿಬ್ಬಂದಿ ದಿಕ್ಕಾಪಾಲಾಗಿ ಓಡಿದ್ದಾರೆ. ಕೊಠಡಿಯೊಳಗೆ ಓಡಿ ಹೋಗಿ ಬಾಗಿಲು ಹಾಕಿದ ಘಟನೆ ನಡೆದಿತ್ತು.