ರಾಮ​ನ​ಗರ (ಅ.17): ಕೊರೋನಾ ಸಮ​ಯ​ದಲ್ಲಿ ಜನ​ರಿಗೆ ಮಾಸ್ಕ್‌ ಹಂಚ​ಲಿಲ್ಲ, ಕಷ್ಟಸುಖ​ಗ​ಳನ್ನು ಆಲಿ​ಸ​ಲಿಲ್ಲ. ಚುನಾ​ವಣೆಯಲ್ಲಿ ಯಾವ ಮುಖದಿಂದ ಮತ ಕೇಳ​ಬೇ​ಕೆಂದು ಕಾರ್ಯ​ಕ​ರ್ತರು ಆಡಿ​ದ ಅಸ​ಮಾ​ಧಾನದ ಮಾತು​ಗ​ಳಿಂದ ಬೇಸ​ರ​ಗೊಂಡ ಮಾಜಿ ಸಿಎಂ ಕುಮಾ​ರ​ಸ್ವಾಮಿ ಕೋಪ​ದಿಂದ ಹೊರ ನಡೆದ ಪ್ರಸಂಗ ಶುಕ್ರವಾರ ನಡೆ​ಯಿತು.

ಬಿಡದಿಯ ಕೇತಗಾನಹಳ್ಳಿಯಲ್ಲಿರುವ ತಮ್ಮ ತೋಟದ ಮನೆಯಲ್ಲಿ ಶುಕ್ರವಾರ ನಡೆದ ಮರಳವಾಡಿ ಹೋಬಳಿ ಜೆಡಿಎಸ್‌ ಮುಖಂಡರು ಮತ್ತು ಕಾಯಕರ್ತರ ಸಭೆಯಲ್ಲಿ ಮಾಜಿ ಸಿಎಂ ಕುಮಾ​ರ​ಸ್ವಾಮಿ ಎದು​ರ​ಲ್ಲಿಯೇ ಅನೇಕ ಕಾರ್ಯ​ಕ​ರ್ತರು ಕಾಂಗ್ರೆಸ್‌ ಮುಖಂಡ ಇಕ್ಬಾಲ್‌ ಹುಸೇನ್‌ ಕೊರೋನಾ ಸಂಕ​ಷ್ಟ​ದಲ್ಲಿ ಜನ​ರಿಗೆ ಸ್ಪಂದಿ​ಸಿದ್ದು ಹಾಗೂ ಅವರ ಜನ​ಪರ ಕಾರ್ಯ​ಗ​ಳ ಗುಣ​ಗಾನ ಮಾಡಿ​ದರು.

ಕನಿಷ್ಟ ಸೌಜನ್ಯವೂ ತೋರಿಸಿಲ್ಲ : ಮೋದಿ ವಿರುದ್ಧ ಎಚ್‌ಡಿಕೆ ಅಸಮಾಧಾನ ...

ಕಾರ್ಯಕರ್ತ​ರನ್ನು ಸಮಾ​ಧಾನ ಪಡಿ​ಸಿದ ಕುಮಾ​ರ​ಸ್ವಾಮಿ, ಸಮಸ್ಯೆಗಳಿಗೆ ಸ್ಪಂದಿಸದೆ ನಿಮ್ಮ ಭಾವನೆಗಳಿಗೆ ಧಕ್ಕೆ ತರುವ ಕೆಲಸ ಮಾಡಿದ್ದರೇ ಅದರಿಂದ ನೋವಾಗಿದ್ದರೆ ನನ್ನನ್ನು ಕ್ಷಮಿಸಿಬಿಡಿ. ಕೊವೀಡ್‌-19 ಹಿನ್ನೆಲೆಯಲ್ಲಿ ವೈದ್ಯರು ಸೂಕ್ಷ್ಮವಾಗಿ ಎಚ್ಚರಿಕೆ ನೀಡಿದ್ದ ಕಾರಣಕ್ಕಾಗಿ ಕಾರ್ಯಕರ್ತರನ್ನು ಭೇಟಿ ಮಾಡಲು ಹಾಗೂ ಅವರ ಅಹವಾಲು ಆಲಿಸಲು ಸಾಧ್ಯವಾಗಿರಲಿಲ್ಲ. ಹಾಗಾಗಿ, ಈಗ ಹೋಬಳಿವಾರು ಕಾರ್ಯಕರ್ತರ ಸಭೆಗಳನ್ನು ನಡೆಸಲಾಗುತ್ತಿದೆ ಎಂದರು.

ಮುಂಬರುವ ಸ್ಥಳೀಯ ಸಂಸ್ಥೆಗಳ ಚುನಾವಣೆಯನ್ನು ಗುರಿಯಾಗಿಸಿಕೊಂಡು ಜಿಲ್ಲೆಯಲ್ಲಿ ಜೆಡಿಎಸ್‌ ಪಕ್ಷವನ್ನು ಸದೃಢವಾಗಿ ಸಂಘಟಿಸಬೇಕಾಗಿದೆ. ಚುನಾವಣೆ ಸಂದರ್ಭದಲ್ಲಿ ನಾನು ಏಕಾಏಕಿ ಕಾರ್ಯಕರ್ತರ ಬಳಿ ಎದುರಾದಾಗ ಕೆಲವು ವಿಷಯಕ್ಕೆ ಗೊಂದಲಗಳಾಗಬಾರದು ಎಂಬ ಕಾರಣಕ್ಕೆ ಹೋಬಳಿ ಮಟ್ಟದ ಕಾರ್ಯಕರ್ತರ ಸಭೆ ನಡೆಸಲಾಗುತ್ತಿದೆ. ಸಭೆಯಲ್ಲಿ ಪಕ್ಷದ ಕಾರ್ಯಕರ್ತರಿಗೆ ಎದುರಾಗಿರುವ ಸಮಸ್ಯೆಗಳ ಬಗ್ಗೆ ಪಟ್ಟಿಮಾಡಲಾಗುವುದು. ಹಾಗೆಯೇ ನಮ್ಮ ನಡುವೆ ಇರುವ ಸಣ್ಣಪುಟ್ಟಭಿನ್ನಾಭಿಪ್ರಾಯಗಳನ್ನು ಬಗೆಹರಿಸುವುದು ಸಭೆಯ ಪ್ರಮುಖ ಉದ್ದೇಶ ಎಂದು ತಿಳಿಸಿದರು.

ಈ ಸಂದರ್ಭದಲ್ಲಿ ಮರಳವಾಡಿ ಹೋಬಳಿ ಹಿರಿಯ ಮುಖಂಡ ಬೈರೇಗೌಡ ಮಾತನಾಡಿ, ಕ್ಷೇತ್ರದಲ್ಲಿ ಜೆಡಿಎಸ್‌ ಕಾರ್ಯಕರ್ತರ ಸಮಸ್ಯೆ ಕೇಳುವವರಿಲ್ಲದಂತಾಗಿದೆ. ಶಾಸಕರು ಕ್ಷೇತ್ರಕ್ಕೆ ಬರುವುದಿಲ್ಲ, ಜನರ ಕಷ್ಟಸುಖ ಆಲಿಸುವುದಿಲ್ಲ, ಸೋತವರಿಗೆ ಸಮಾಧಾನ ಹೇಳುವವರಿಲ್ಲ, ಹೀಗಿರುವಾಗ ನಮ್ಮ ಕಷ್ಟಸುಖಗಳನ್ನು ಯಾರ ಬಳಿ ಹೇಳಿಕೊಳ್ಳಬೇಕು? ಪರಿಸ್ಥಿತಿ ಹೀಗೆ ಮುಂದುವರೆದರೆ ಪಕ್ಷದ ಸಂಘಟನೆ ಸಾಧ್ಯವಿಲ್ಲ ಎಂದು ಬೇಸರ ವ್ಯಕ್ತ​ಪ​ಡಿ​ಸಿ​ದರು.

ಇದಕ್ಕೆ ಧ್ವನಿಗೂಡಿ​ಸಿದ ಕಾರ್ಯ​ಕ​ರ್ತರು ಕೊರೋನಾ ಸಂದರ್ಭದಲ್ಲಿ ನಿವ್ಯಾರು ಬಂದು ಮಾಸ್ಕ್ ಹಂಚಲಿಲ್ಲ. ಕಾಂಗ್ರೆಸ್‌ ಮುಖಂಡ ಇಕ್ಬಾಲ್‌ ಹುಸೇನ್‌ ಅವರು ಮಾಸ್ಕ್ ಮತ್ತು ಸ್ಯಾನಿಟೈಸರ್‌ ವಿತರಿಸಿದರು. ಚುನಾವಣೆಯಲ್ಲಿ ನಾವು ಯಾವ ಮುಖ ಹೊತ್ತು ವೋಟು ಕೇಳಬೇಕು? ಎಂದು ಪ್ರಶ್ನಿಸಿದರು.

ಇದ​ರಿಂದ ಕೆಂಡಮಂಡಲರಾದ ಕುಮಾರಸ್ವಾಮಿ, ಕೊರೋನಾ ಹಿನ್ನೆಲೆಯಲ್ಲಿ ಆರೂವರೆ ಕೋಟಿ ರುಪಾ​ಯಿ ಜನರಿಗಾಗಿ ಖರ್ಚು ಮಾಡಿ ರೇಷನ್‌ ಕಿಟ್‌ ಕೊಟ್ಟಿದ್ದು ಮರೆತುಬಿಟ್ರಾ.. ಹೋಗ್ರೀ ಅವರಿಗೆ ​ವೋಟ್‌ ಹಾಕೋಗ್ರಿ ಎಂದು ಹೇಳಿ ಕೋಪಗೊಂಡು ಸಭೆಯಿಂದ ಹೊರನಡೆದರು.