ಬೆಂಗಳೂರು (ಅ.17):  ಉತ್ತರ ಕರ್ನಾಟಕದಲ್ಲಿ ನೆರೆ ಹಾವಳಿಯಾದರೂ ಪ್ರಧಾನಿಗಳು ಕನಿಷ್ಠ ಸೌಜನ್ಯಕ್ಕೂ ನಾಡಿನ ಜನರಲ್ಲಿ ವಿಶ್ವಾಸ ಮೂಡಿಸುವ ಕೆಲಸ ಮಾಡದಿರುವುದು ಕನ್ನಡಿಗರಿಗೆ ಮಾಡಿರುವ ಅವಮಾನವಾಗಿದೆ ಎಂದು ಕೇಂದ್ರ ಸರ್ಕಾರದ ವಿರುದ್ಧ ಮಾಜಿ ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ ಕಿಡಿಕಾರಿದ್ದಾರೆ.

 ಆರ್‌.ಆರ್‌.ನಗರ ವಿಧಾನಸಭಾ ಕ್ಷೇತ್ರದಲ್ಲಿ ಜೆಡಿಎಸ್‌ ಅಭ್ಯರ್ಥಿ ಪರ ಪ್ರಚಾರ ಕೈಗೊಂಡಿದ್ದ ವೇಳೆ ಸುದ್ದಿಗಾರರ ಜತೆ ಮಾತನಾಡಿದ ಅವರು, ರಾಜ್ಯದಲ್ಲಿ ಕಳೆದ ವರ್ಷವೂ ದೊಡ್ಡ ಮಟ್ಟದಲ್ಲಿ ನೆರೆ ಹಾವಳಿ ಉಂಟಾಗಿತ್ತು. ಈ ವರ್ಷವೂ ಸಹ ಉಂಟಾಗಿದೆ. ಇದು ಮೂರನೇ ಹಂತದಲ್ಲಿ ಬಂದ ನೆರೆಯಾಗಿದೆ. ತೆಲಂಗಾಣ, ಆಂಧ್ರಪ್ರದೇಶದ ಪರಿಸ್ಥಿತಿ ಕುರಿತು ಮಾತನಾಡುವ ಪ್ರಧಾನಿಗಳು, ಅವರದೇ ಪಕ್ಷ ಅಧಿಕಾರ ಇರುವ ನಮ್ಮ ರಾಜ್ಯದ ಜನತೆಯ ಕಷ್ಟದ ಬಗ್ಗೆ ಮಾತನಾಡುವುದಿಲ್ಲ. ಜನತೆಯ ಸಂಕಷ್ಟಕ್ಕೆ ನಾವಿದ್ದೇವೆ ಎಂಬ ವಿಶ್ವಾಸ ಮೂಡಿಸುವ ಕನಿಷ್ಠ ಸೌಜನ್ಯದ ಮಾತುಗಳನ್ನೂ ಆಡದಿರುವುದು ಕನ್ನಡಿಗರಿಗೆ ಮಾಡಿರುವ ಅನುಮಾನ ಎಂದು ಹರಿಹಾಯ್ದರು.

ಬೈ ಎಲೆಕ್ಷನ್‌ನಲ್ಲಿ ಜಾತಿ ವಾರ್: ಹಳೆ ಜೋಡೆತ್ತುಗಳ ನಡುವೆ ಶುರುವಾಯ್ತು ಕಾದಾಟ

ಉತ್ತರ ಕರ್ನಾಟಕ ಭಾಗಕ್ಕೆ ಕಂದಾಯ ಸಚಿವರು ಕಾಟಾಚಾರಕ್ಕೆ ಹೋಗಿದ್ದಾರೆ. ಅದನ್ನು ಬಿಟ್ಟರೆ ಬೇರಾವ ಸಚಿವರೂ ಆ ಭಾಗದ ಜನರ ಕಷ್ಟಕ್ಕೆ ಸ್ಪಂದಿಸುವ ಪ್ರಯತ್ನ ಮಾಡಿಲ್ಲ. ರೈತರು ಬೆಳೆ ನಷ್ಟಮಾಡಿಕೊಂಡು ಕೆಟ್ಟಪರಿಸ್ಥಿತಿಯಲ್ಲಿದ್ದಾರೆ. ಇಂತಹ ಪರಿಸ್ಥಿತಿಯಲ್ಲಿ ಅವರಿಗೆ ಆತ್ಮಸ್ಥೈರ್ಯ ತುಂಬುವ ಕೆಲಸ ಮಾಡದಿರುವುದು ನಮ್ಮ ದುರ್ದೈವ. ಪ್ರವಾಹ ಪಿಡೀತರ ಸಂಕಷ್ಟಕ್ಕೆ ಸ್ಪಂದಿಸುವಂತೆ ಈಗಾಗಲೇ ಸರ್ಕಾರಕ್ಕೆ ಮನವಿ ಮಾಡಲಾಗಿದೆ. ಮತ್ತೊಮ್ಮೆ ಸುದೀರ್ಘ ಪತ್ರ ಬರೆಯಲಾಗುವುದು. ರಾಜ್ಯದಿಂದ 25 ಬಿಜೆಪಿ ಸಂಸದರನ್ನು ರಾಜ್ಯದ ಜನತೆ ಆಯ್ಕೆ ಮಾಡಿದ್ದಾರೆ. ಅವರು ಕರ್ನಾಟಕ ನಮ್ಮ ಕೈಯಲ್ಲಿದೆ ಎನ್ನುತ್ತಾರೆ. ಆದರೆ, ಪ್ರಧಾನಿ ಮುಂದೆ ನಿಂತು ರಾಜ್ಯಕ್ಕೆ ಬೇಕಾಗಿರುವುದನ್ನು ಕೇಳಿ ಪಡೆಯಲು ಸಾಧ್ಯವಾಗುತ್ತಿಲ್ಲ. ಪ್ರಧಾನಿ ಮುಂದೆ ಮಾತನಾಡದಿರುವಷ್ಟುಧೈರ್ಯ ಇಲ್ಲದಿರುವುದನ್ನು ಗಮನಿಸಿದರೆ, ಇವರನ್ನು ಪ್ರಧಾನಿಗಳು ಯಾವ ಮಟ್ಟದಲ್ಲಿ ಇಟ್ಟಿದ್ದಾರೆ ಎಂಬುದನ್ನು ಗಮನಿಸಬಹುದು. ನಾವು ಸಂಸದರಾ ಎಂಬುದನ್ನು ಅವರೇ ಯೋಚನೆ ಮಾಡಬೇಕು ಎಂದು ವಾಗ್ದಾಳಿ ನಡೆಸಿದರು.