ರಾಮ​ನ​ಗ​ರ (ಅ.18):  ಜೆಡಿಎಸ್‌ ಆಶ್ರಯದಲ್ಲಿ ಬೆಳೆದು ಎಲ್ಲ ರೀತಿಯಲ್ಲೂ ಸದೃಢರಾದವರೇ ಪಕ್ಷಕ್ಕೆ ಬೆನ್ನಿಗೆ ಚೂರಿ ಹಾಕಿದರು. ಅಂತಹವರಿಗೆ ಶಿಕ್ಷಕರು ಚುನಾವಣೆಯಲ್ಲಿ ಸರಿಯಾದ ಪಾಠ ಕಲಿಸಬೇಕು ಎಂದು ಬಿಜೆಪಿ ಅಭ್ಯರ್ಥಿ ಪುಟ್ಟಣ್ಣ ವಿರುದ್ಧ ಜೆಡಿಎಸ್‌ ವರಿಷ್ಠರೂ ಆದ ಮಾಜಿ ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ ವಾಗ್ದಾಳಿ ನಡೆ​ಸಿ​ದ​ರು.

ಬಿಡದಿಯ ಕೇತಗಾನಹಳ್ಳಿಯ ತಮ್ಮ ತೋಟದ ಮನೆಯಲ್ಲಿ ನಡೆದ ಶಿಕ್ಷಕರ ಸಭೆಯಲ್ಲಿ ಮಾತನಾಡಿದ ಅವರು, ಒಳ್ಳೆಯವರ ಜತೆ ಸಂಘ ಮಾಡಿ ಅಂತ ಜನರು ಹೇಳುತ್ತಿದ್ದರು. ಆದರೆ, ಕೆಲವರನ್ನು ಅತಿಯಾಗಿ ನಂಬಿ ತಪ್ಪು ಮಾಡಿಕೊಂಡಿದ್ದೇನೆ. ನಮ್ಮ ಕೋರಿಕೆ ಮೇರೆಗೆ ನೀವು(ಶಿಕ್ಷಕರು) ನಮ್ಮ ಮುಖ ನೋಡಿ ಮತ ಹಾಕಿದಿರಿ ನಿಮ್ಮ ತಪ್ಪು ಏನೂ ಇಲ್ಲ. ಆದರೆ ನಾವೇ ತಪ್ಪು ಮಾಡಿಕೊಂಡೆವು ಎಂದು ಟೀಕಿ​ಸಿ​ದ​ರು.

ಆ ವ್ಯಕ್ತಿಗೆ ನಾನೇ ಒಂದು ಬಿಡಿಎ ಸೈಟ್‌ ಮಂಜೂರು ಮಾಡಿಸಿಕೊಟ್ಟಿದ್ದೆ. ಈಗ ಆ ಜಾಗದಲ್ಲಿ 80 ಕೋಟಿ ರುಪಾಯಿ ಖರ್ಚು ಮಾಡಿ ಶಿಕ್ಷಣ ಸಂಸ್ಥೆ ಕಟ್ಟಿಕೊಂಡಿದ್ದಾರೆಂದು ಕೆಲವರು ಹೇಳುತ್ತಿರುವುದು ನನ್ನ ಗಮನಕ್ಕೆ ಬಂದಿದೆ. ನಮ್ಮ ಪಕ್ಷದಲ್ಲಿದ್ದು ಎಲ್ಲ ರೀತಿಯ ಉಪಯೋಗ ಪಡೆದು ಕೋಟ್ಯಂತರ ರುಪಾಯಿ ಮಾಡಿಕೊಂಡಿದ್ದೆ ಅವರ ಸಾಧನೆ. ಪಕ್ಷಕ್ಕೆ ದ್ರೋಹ ಬಗೆದವರಿಗೆ ಚುನಾವಣೆಯಲ್ಲಿ ಶಿಕ್ಷಕರು ತಕ್ಕ ಬುದ್ದಿ ಕಲಿಸಬೇಕಾಗಿದೆ ಎಂದು ಹೇಳಿ​ದರು.

RR ನಗರ ಬೈ ಎಲೆಕ್ಷನ್: ಅಳೆದು ತೂಗಿ ಕೊನೆಗೂ ಅಚ್ಚರಿ ಅಭ್ಯರ್ಥಿ ಘೋಷಿಸಿದ ಜೆಡಿಎಸ್ ..

ಈ ಹಿಂದೆ ಜನತಾದಳ ಸರ್ಕಾರ​ದಲ್ಲಿ ಶಿಕ್ಷಣ ಸಚಿ​ವ​ರಾ​ಗಿದ್ದ ಗೋವಿಂದೇಗೌಡರು ಶಿಕ್ಷಕರ ಕ್ಷೇತ್ರಕ್ಕೆ ಅಮೂಲಾಗ್ರ ಕೊಡುಗೆ ನೀಡಿದ್ದಾರೆ. ತಮ್ಮ ಅಧಿಕಾರವಧಿಯಲ್ಲಿ ಶಿಕ್ಷಣ ಕ್ಷೇತ್ರದ ಅಭಿವೃದ್ಧಿಗೆ ಕೈಗೊಂಡ ಯೋಜನೆಗಳ ಬಗ್ಗೆ ಸ್ಮರಿ​ಸಿದ ಕುಮಾ​ರ​ಸ್ವಾಮಿ, 36 ಸಾವಿರ ಶಿಕ್ಷಕರ ನೇಮಕಾತಿ ಮಾಡಿದ್ದೆ. ಮತ್ತಷ್ಟುಅಭಿವೃದ್ಧಿ ಕನಸು ಕಂಡಿದ್ದ ತಮಗೆ ಪೂರ್ಣಾವಧಿ ಅಧಿಕಾರ ಸಿಗಲಿಲ್ಲ ಎಂದು ವಿಷಾದಿಸಿದರು.

ವಿಧಾನ ಪರಿಷತ್‌ನ ಶಿಕ್ಷಕರ ಕ್ಷೇತ್ರದ ಚುನಾವಣೆಗೆ ಸ್ಪರ್ಧಿ​ಸಿ​ರುವ ಜೆಡಿಎಸ್‌ ಅಭ್ಯರ್ಥಿ ಎ.ಪಿ.ರಂಗನಾಥ್‌ ಮಾತನಾಡಿ, ಎಚ್‌.ಡಿ.ದೇವೇಗೌಡರ ಕಾಲದಲ್ಲಿ ದಿವಂಗತ ಎಚ್‌.ಜಿ.ಗೋವಿಂದೇಗೌಡರು ಹಾಗೂ ಎಚ್‌.ಡಿ.ಕುಮಾರಸ್ವಾಮಿರವರ ಅಧಿಕಾರದ ಅವಧಿಯಲ್ಲಿ ಶಿಕ್ಷಣ ಸಚಿವರಾಗಿ ಬಸವರಾಜ ಹೊರಟ್ಟಿಅವರು ಶಿಕ್ಷಣ ಕ್ಷೇತ್ರದಲ್ಲಿ ತಂದ ಸುಧಾರಣೆಗಳು ಹಾಗೂ ಶಿಕ್ಷಕ ಸಮುದಾಯಕ್ಕೆ ಕಲ್ಪಿಸಿದ ಸವಲತ್ತುಗಳನ್ನು ಯಾರೂ ಮರೆತಿಲ್ಲ. ಶಿಕ್ಷಕ ಸಮುದಾಯದ ಬಗ್ಗೆ ಅಪಾರ ಕಾಳಜಿ ಇಟ್ಟುಕೊಂಡು ರಾಜ್ಯಾದ್ಯಂತ ಕೆಲಸ ಮಾಡುತ್ತಿರುವುದಾಗಿ ತಮಗೆ ಶಕ್ತಿ ತುಂಬುವ ಕೆಲಸವನ್ನು ಶಿಕ್ಷಕರು ಮಾಡಬೇಕೆಂದು ಮನವಿ ಮಾಡಿದರು.