RR ನಗರ ಬೈ ಎಲೆಕ್ಷನ್: ಅಳೆದು ತೂಗಿ ಕೊನೆಗೂ ಅಚ್ಚರಿ ಅಭ್ಯರ್ಥಿ ಘೋಷಿಸಿದ ಜೆಡಿಎಸ್
ಬೆಂಗಳೂರಿನ ಆರ್.ಆರ್. ನಗರ ಉಪಚುನಾವಣೆಗೆ ಜೆಡಿಎಸ್ ಅಳೆದು ತೂಗಿ ಕೊನೆಗೂ ಅಚ್ಚರಿ ಅಭ್ಯರ್ಥಿಯನ್ನು ಘೋಷಣೆ ಮಾಡಿದೆ. ಇನ್ನು ಇವರಿಗೇ ಟಿಕೆಟ್ ಕೊಡಲು ಕಾರಣವೇನು ಎನ್ನುವುದನ್ನು ಕುಮಾರಸ್ವಾಮಿ ವಿವರಣೆ ನೀಡಿದ್ದಾರೆ.
ಬೆಂಗಳೂರು, (ಅ.13): ಕೊನೆಗೂ ಜೆಡಿಎಸ್ ಆರ್.ಆರ್. ನಗರ ಉಪಚುನಾವಣೆಗೆ ತನ್ನ ಅಭ್ಯರ್ಥಿಯನ್ನ ಇಂದು (ಮಂಗಳವಾರ) ಘೋಷಣೆ ಮಾಡಿದೆ.
ಜ್ಞಾನಭಾರತಿ ಕೃಷ್ಣಮೂರ್ತಿ ಜೆಡಿಎಸ್ ಆರ್.ಆರ್. ನಗರ ಟಿಕೆಟ್ ಘೋಷಣೆ ಮಾಡಿದ್ದು, ಕೃಷ್ಣಮೂರ್ತಿ ಅವರು ನಾಳೆ (ಬುಧವಾರ) ನಾಮಪತ್ರ ಸಲ್ಲಿಸಲಿದ್ದಾರೆ.
ಆರ್.ಆರ್. ನಗರ ಬೈ ಎಲೆಕ್ಷನ್: ಬಿಜೆಪಿ-ಜೆಡಿಎಸ್‌ಗಿಂತ ಒಂದೆಜ್ಜೆ ಮುಂದೆ ಹೋದ ಕಾಂಗ್ರೆಸ್..!
ಅಭ್ಯರ್ಥಿ ಘೋಷಣೆ ಮಾಡಿದ ಬಳಿಕ ಮಾಧ್ಯಮಗಳ ಜತೆ ಮಾತನಾಡಿದ ಜೆಡಿಎಸ್ ಶಾಸಕಾಂಗ ಪಕ್ಷದ ನಾಯಕ ಎಚ್.ಡಿ.ಕುಮಾರಸ್ವಾಮಿ, ನಾನು ಸಿನಿಮಾ ರಂಗದಿಂದ ಬಂದವನು. ಮುನಿರತ್ನ ಕೂಡ ಸಿನಿಮಾ ಕ್ಷೇತ್ರದವರು. ಹೀಗಾಗಿ ನಮ್ಮ ನಡುವೆ ಸ್ನೇಹವಿದೆ. ಚುನಾವಣೆ ಸಂದರ್ಭದಲ್ಲಿ ಅದು ಅನ್ವಯಿಸಲ್ಲ ಎಂದರು. ಹೀಗಾಗಿ ಕಾರ್ಯಕರ್ತರು ಯಾವುದೇ ಗೊಂದಲಕ್ಕೆ ಒಳಗಾಗಬಾರದು. ಚುನಾವಣೆ ವೇಳೆ ಕೆಲವರು ಅಪಪ್ರಚಾರ ಮಾಡುತ್ತಾರೆ. ನಮ್ಮ ಅಭ್ಯರ್ಥಿ ವಿ.ಕೃಷ್ಣಮೂರ್ತಿಗೆ ಬೆಂಬಲಿಸಬೇಕು. ಕೃಷ್ಣಮೂರ್ತಿ ಅವರ ತಂದೆ ನಮ್ಮ ಪಕ್ಷಕ್ಕೆ ದುಡಿದವರು ಎಂದು ಹೇಳಿದರು.
ಈ ಚುನಾವಣೆಯಲ್ಲಿ ನಮ್ಮ ಪಕ್ಷದ ಅಭ್ಯರ್ಥಿಯನ್ನೇ ಗೆಲ್ಲಿಸಲು ಮನವಿ ಮಾಡುತ್ತೇನೆ. 2008 ಚುನಾವಣೆಯಲ್ಲಿ ಕೃಷ್ಣಮೂರ್ತಿ ಅವರ ತಂದೆ ಜೆಡಿಎಸ್ ಅಧಿಕಾರಕ್ಕೆ ಬರುತ್ತೆ ಅಂತ ನಮ್ಮ ಪರ ಕೆಲಸ ಮಾಡಿದ್ದರು. ಆದರೆ ಕಾಂಗ್ರೆಸ್ ಅಧಿಕಾರಕ್ಕೆ ಬಂತು. ಈ ಶಾಕ್‍ನಿಂದ ಅವರ ತಂದೆ ಹೃದಯಾಘಾತದಿಂದ ಮೃತರಾದರು ಎಂದರು.
ಆ ಕುಟುಂಬದ ಬಗ್ಗೆ ನನಗೆ ಅನುಕಂಪ ಇದೆ. ಸ್ವಂತ ದುಡಿಮೆಯಿಂದ ಕೃಷ್ಣಮೂರ್ತಿ ಬೆಳೆದಿದ್ದಾರೆ. ಹೀಗಾಗಿ ಅವರಿಗೆ ಟಿಕೆಟ್ ಕೊಡ್ತಿದ್ದೇವೆ. ನಾಳೆ (ಬುಧವಾರ) ನಮ್ಮ ಅಭ್ಯರ್ಥಿ ಕೃಷ್ಣಮೂರ್ತಿ ನಾಮಪತ್ರ ಸಲ್ಲಿಸುತ್ತಾರೆ ಎಂದು ಸ್ಪಷ್ಟಪಡಿಸಿದರು.