ಹಾವೇರಿಯಲ್ಲಿ ಮದುವೆಯಾದ ಯುವತಿಗೆ ಮೆಸೇಜ್ ಕಳುಹಿಸಿದ್ದಕ್ಕೆ ಕಾಂಗ್ರೆಸ್ ಮುಖಂಡನನ್ನು ಬರ್ತಡೇ ದಿನದಂದೇ ಕೊಲೆ ಮಾಡಲಾಗಿದೆ. ಮನೋಜ್ ಪ್ರಕಾಶ್ ಉಡಗಣಿ ಎಂಬ ಕಾಂಗ್ರೆಸ್ ಕಾರ್ಯದರ್ಶಿಯನ್ನು ಕಂಠಪೂರ್ತಿ ಮದ್ಯ ಕುಡಿಸಿ ವರದಾ ನದಿಗೆ ತಳ್ಳಿ ಕೊಲೆ ಮಾಡಲಾಗಿದೆ ಎಂದು ಆರೋಪಿಸಲಾಗಿದೆ. ಮೃತನ ಕುಟುಂಬಸ್ಥರ ಆಕ್ರೋಶ.
ಹಾವೇರಿ (ಆ.01): ಮದುವೆಗೂ ಮುಂಚಿತವಾಗಿ ಲವ್ ಮಾಡುವುದು ಹಾಗೂ ಮದುವೆಯಾದ ನಂತರ ಒಬ್ಬರೂ ದೂರವಾಗುವುದು ಸಾಮಾನ್ಯ. ಆದರೆ, ಹಾವೇರಿ ಜಿಲ್ಲಾ ಕಾಂಗ್ರೆಸ್ ಕಾರ್ಯದರ್ಶಿ ಮಾತ್ರ ಮದುವೆಯಾದ ಯುವತಿಗೆ ಮೆಸೇಜ್ ಕಳಿಸುತ್ತಾ ಸಂಪರ್ಕ ಸಾಧಿಸಲು ಮುಂದಾಗಿದ್ದಾನೆ. ಇದರಿಂದ ಕೋಪಗೊಂಡ ಆಕೆಯ ಗಂಡ, ಕಾಂಗ್ರೆಸ್ ಮುಖಂಡನನ್ನು ಬರ್ತಡೇ ಪಾರ್ಟಿ ದಿನವೇ ಕೊಲೆಗೈದು ಹೆಣ ಬೀಳಿಸಿದ್ದಾನೆ.
ಹೌದು, ಹಾವೇರಿ ಜಿಲ್ಲೆಯ ಕಾಂಗ್ರೆಸ್ ಯುವ ಕಾರ್ಯಕರ್ತ ಬರ್ತಡೆ ದಿನವೇ ಹತ್ಯೆಯಾಗಿರುವ ದುರ್ಘಟನೆ, ಜಿಲ್ಲೆಯ ಹಾನಗಲ್ ತಾಲೂಕು ಬೊಮ್ಮನಹಳ್ಳಿ ಗ್ರಾಮದಲ್ಲಿ ನಡೆದಿದೆ. ಮದುವೆಯಾದ ಯುವತಿಗೆ ಮೆಸೇಜ್ ಕಳಿಸಿದ್ದಕ್ಕೆ ಈತನಿಗೆ ಬರ್ತಡೆ ದಿನನೇ ಸಾವಿನ ಮಹೂರ್ತವೂ ಫಿಕ್ಸ್ ಆಗಿತ್ತು. ಮನೋಜ್ ಪ್ರಕಾಶ್ ಉಡಗಣಿ (28 ವರ್ಷ) ಕೊಲೆಯಾದ ಕಾಂಗ್ರೆಸ್ ಮುಖಂಡನಾಗಿದ್ದಾನೆ. ಮನೋಜ್‌ಗೆ ಕಂಠಪೂರ್ತಿ ಮದ್ಯ ಕುಡಿಸಿ ವರದಾ ನದಿ ಬ್ರಿಡ್ಜ್ ಮೇಲಿಂದ ತಳ್ಳಿ ಕೊಲೆ ಮಾಡಿದ್ದಾರೆ ಎಂದು ಮನೋಜ್‌ನ ಕುಟುಂಬಸ್ಥರು ಆರೋಪ ಮಾಡಿದ್ದಾರೆ.
ಹಾನಗಲ್ ತಾಲೂಕು ಬೊಮ್ಮನಹಳ್ಳಿ ಗ್ರಾಮದ ನಿವಾಸಿ ಮನೋಜ್ ಉಡಗಣಿಯನ್ನು ಶಿವರಾಜ್ ಜಾಲವಾಡಗಿ ಸೇರಿದಂತೆ ಮೂವರು ಆರೋಪಿಗಳು ಸೇರಿ ಹತ್ಯೆ ಮಾಡಿದ್ದಾರೆ ಎಂದು ಹೇಳಲಾಗುತ್ತಿದೆ. ಈ ಪ್ರಕರಣದ ಪ್ರಮುಖ ಆರೋಪಿ ಆಗಿರುವ ಶಿವರಾಜ್ ಜಾಲವಾಡಗಿ ಅವರ ಪತ್ನಿಯನ್ನು ಮದುವೆಗೂ ಮೊದಲೇ ಮನೋಜ್ ಲವ್ ಮಾಡುತ್ತಿದ್ದನು. ಆದರೆ, ಆಕೆಗೆ ಮದುವೆಯಾದ ಬಳಿಕ ಸುಮ್ಮನಿರದೇ, ಮದುವೆ ಬಳಿಕವೂ ಮನೋಜ್ ಶಿವರಾಜ್‌ನ ಪತ್ನಿಗೆ ಮೆಸೆಜ್ ಮಾಡುವುದನ್ನು ಮುಂದುವರೆಸಿದ್ದನು. ಇದರಿಂದ ಶಿವರಾಜ್ ತೀವ್ರ ಆಕ್ರೋಶಗೊಂಡು ಹತ್ಯೆ ಮಾಡಿದ್ದಾನೆ ಎಂದು ಹೇಳಲಾಗುತ್ತಿದೆ.
ಸೇರಿಕೊಂಡು ಮನೋಜ್‌ನನ್ನು ಕಿಡ್ನಾಪ್ ಮಾಡಿ ಕಂಠ ಪೂರ್ತಿ ಬಲವಂತವಾಗಿ ಮದ್ಯ ಕುಡಿಸಿ ವರದಾ ನದಿ ಸೇತುವೆಯಿಂದ ನೂಕಿದ್ದಾರೆ. ಕಳೆದ ಜುಲೈ 26ರಂದು ಮನೋಜ್ ಬರ್ತಡೆ ಇತ್ತು. ಬರ್ತಡೆ ದಿನವೇ ಮನೋಜನ್‌ನ್ನು ಶಿವರಾಜ್ ಹಾಗೂ ಆತನ ಸಹಚರರು ಕಿಡ್ನಾಪ್ ಮಾಡಿ ಹತ್ಯೆ ಮಾಡಿದ್ದಾರೆ. ಸವಣೂರು ತಾಲೂಕು ಮೆಳ್ಳಾಗಟ್ಟಿ ಬಳಿ ವರದಾ ನದಿ ದಡದಲ್ಲಿ ಮನೋಜ್ ಶವ ಪತ್ತೆಯಾಗಿದೆ. ಸ್ಥಳೀಯರು ನೀಡಿದ ಮಾಹಿತಿಯನ್ನು ಆಧರಿಸಿ ಸವಣೂರು ಪೊಲೀಸರು ಸವಣೂರು ತಾಲೂಕು ಮೆಳ್ಳಾಗಟ್ಟಿ ಗ್ರಾಮದ ವರದಾ ನದಿಯಿಂದ ಶವ ಹೊರ ತೆಗಸಿದ್ದಾರೆ. ಹಾನಗಲ್ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಈ ಪ್ರಕರಣ ನಡೆದಿದೆ.
ಈ ಬಗ್ಗೆ ಮಾತನಾಡಿದ ಮೃತ ಮನೋಜ್ ಅವರ ಅಣ್ಣ ಶಂಭು, ಶಿವರಾಜ್ ಜಾಲವಾಡಗಿ ಪತ್ನಿಗೂ ನನ್ನ ತಮ್ಮ ಮನೋಜ್‌ಗೂ ಲವ್ ಇತ್ತು. ಆದರೆ, ಹುಡುಗಿ ಮದುವೆಯಾದ ಬಳಿಕ ಮನೋಜ್ ಮೆಸೇಜ್ ಮಾಡಿದ್ದಾನೆ ಎಂದು ಆರೋಪ ಮಾಡಿದ್ದರು. ಇದೇ ವಿಚಾರವಾಗಿ ಈ ಹಿಂದೆಯೂ ಮನೋಜ್‌ಗೆ ಜೀವ ಬೆದರಿಕೆ ಹಾಕಿದ್ದರು. ಶಿವರಾಜ್ ಜಾಲವಾಡಗಿ ಬೆದರಿಕೆ ಹಾಕಿದ್ದನು. ಮನೋಜ್ ಕುತ್ತಿಗೆಗೆ ಚಾಕು ಇಟ್ಟು ಕೊಲೆ ಮಾಡೋದಾಗಿ ಬೆದರಿಕೆ ಹಾಕಿದ್ದನು. ನನ್ನ ತಮ್ಮ ಕಾಂಗ್ರೆಸ್ ಜಿಲ್ಲಾ ಕಾರ್ಯದರ್ಶಿ ಆಗಿದ್ದನು. ಕಾಂಗ್ರೆಸ್ ಪಕ್ಷದಲ್ಲಿ ಬಹಳ ಸಕ್ರೀಯವಾಗಿ ಓಡಾಡಿಕೊಂಡಿದ್ದನು. ಆದರೆ, ಅವನನ್ನು ಕಿಡ್ನಾಪ್ ಮಾಡಿ ಶಿವರಾಜ್ ಜಾಲವಾಡಗಿ ಹತ್ಯೆ ಮಾಡಿದ್ದಾರೆ ಎಂದು ಆರೋಪಿಸಿದರು.
