ಹಾವೇರಿಯಲ್ಲಿ ಬರ್ತಡೇ ಬ್ಯಾನರ್ ತೆರವು ವಿಚಾರದಲ್ಲಿ ನಡೆದ ಗಲಾಟೆ ದುರಂತ ಅಂತ್ಯ ಕಂಡಿದೆ. ನಗರಸಭೆ ಸಿಬ್ಬಂದಿ ರಂಗಪ್ಪ ಹೆರಕಲ್, ಅವಮಾನಕ್ಕೊಳಗಾಗಿ ವಿಷ ಸೇವಿಸಿ ಸಾವಿಗೆ ಯತ್ನಿಸಿದ್ದಾರೆ. ಆದರೆ, ಅವರನ್ನು ಆಸ್ಪತ್ರೆಗೆ ದಾಖಲಿಸಿತ್ತಾದರೂ, ಚಿಕಿತ್ಸೆ ಫಲಿಸದೇ ಸಾವನ್ನಪ್ಪಿದ್ದಾರೆ.

ಹಾವೇರಿ (ಜೂ.24): ಹಾವೇರಿ ನಗರಸಭೆಯಲ್ಲಿ ಬರ್ತಡೇ ಬ್ಯಾನರ್ ತೆರವಿಗೆ ನಡೆದ ಗಲಾಟೆಯಲ್ಲಿ ನಿಂದನೆಯಿಂದ ಖಿನ್ನಗೊಂಡು ರಂಗಪ್ಪ ಹೆರಕಲ್ಲ ವಿಷ ಸೇವಿಸಿ ಸಾವನ್ನಪ್ಪಿದ ದುಃಖದ ಘಟನೆ ನಡೆದಿದೆ. ಸಂಬಂಧಿಸಿದವರ ವಿರುದ್ಧ ಕ್ರಮಕೈಗೊಳ್ಳಬೇಕೆಂದು ಕುಟುಂಬದವರು ಆಗ್ರಹಿಸಿದ್ದಾರೆ.

ಬರ್ತಡೇ ಬ್ಯಾನರ್ ತೆರವು ಗಲಾಟೆ ಪ್ರಕರಣ ಸಾವಿನಲ್ಲಿ ಅಂತ್ಯವಾಗಿದೆ. ಅಕ್ಷತಾ ಕೆ.ಸಿ ಎನ್ನುವ ಮಹಿಳೆ ಬ್ಯಾನರ್ ತೆರವಿಗೆ‌ ಮುಂದಾಗಿದ್ದ ನಗರಸಭೆ ಸಿಬ್ಬಂದಿ ರಂಗಪ್ಪ ಹೆರಕಲ್ಲ ಅವರಿಗೆ ಅವಾಚ್ಯ ಶಬ್ದದಿಂದ ನಿಂದಿಸಿದ್ದರು. ಈ ಘಟನೆ ನಂತರ ಖಿನ್ನತೆಗೆ ಒಳಗಾಗಿದ್ದ ರಂಗಪ್ಪ, ಜೂ.19ರಂದು ವಿಷ ಸೇವನೆ ಮಾಡಿ ಸಾವಿಗೆ ಶರಣಾಗಲು ಯತ್ನಿಸಿದ್ದರು. ವಿಷ ಸೇವನೆ ಮಾಡಿದ್ದ ರಂಗಪ್ಪನನ್ನು ಕುಟುಂಬಸ್ಥರು ಕೂಡಲೇ ಆಸ್ಪತ್ರೆಗೆ ದಾಖಲು ಮಾಡಿದ್ದರು. ಆದರೆ, ಚಿಕಿತ್ಸೆ ಫಲಿಸದೇ ಸಾವನ್ನಪ್ಪಿದ್ದಾರೆ.

ಈ ಘಟನೆ ಹಾವೇರಿ ನಗರಸಭೆ ವ್ಯಾಪ್ತಿಯಲ್ಲಿ ನಡೆದಿದೆ. ಸರ್ಕಾರದ ನಿಯಮಾವಳಿಯಂತೆ ಬ್ಯಾನರ್, ಬಂಟಿಂಗ್ಸ್ ಅನ್ನು ಪಾಲಿಕೆ ಅನುಮತಿ ಇಲ್ಲದೇ ಅಳವಡಿಕೆ ಮಾಡಿದರೆ, ಅದನ್ನು ಅನಧಿಕೃತವೆಂದು ನಗರಪಾಲಿಕೆ ಸಿಬ್ಬಂದಿ ತೆರವು ಮಾಡಬೇಕು. ಹೀಗೆ, ನಗರಸಭೆ ಸಿಬ್ಬಂದಿಯಾದ ರಂಗಪ್ಪ ಹೆರಕಲ್ಲ ಅವರು ಬರ್ತಡೇ ಬ್ಯಾನರ್ ಅನ್ನು ತೆರವುಗೊಳಿಸುವಾಗ ರಂಗಪ್ಪಗೆ ತೀರಾ ಕೆಟ್ಟದಾಗು ಬೈದು ಅವಮಾನ ಮಾಡಿದ್ದರು. ತನ್ನ ಕರ್ತವ್ಯವನ್ನು ಮಾಡುತ್ತಿದ್ದವರಿಗೆ ಅಕ್ಷತಾ ಎನ್ನುವ ಮಹಿಳೆ ತೀವ್ರ ಅವಮಾನ ಮಾಡಿದ್ದರಿಂದ ನೊಂದಿದ್ದ ರಂಗಪ್ಪ ಜೂನ್ 19 ರಂದು ವಿಷಸೇವಿಸಿ ಸಾವಿಗೆ ಯತ್ನಿಸಿದ್ದಾನೆ ಎಂದು ಕುಟುಂಬಸ್ಥರು ಆರೋಪ ಮಾಡಿದ್ದಾರೆ.

ಇನ್ನು ವಿಷ ಸೇವನೆ ಮಾಡಿದ್ದ ರಂಗಪ್ಪನನ್ನು ಹುಬ್ಬಳ್ಳಿ ಕಿಮ್ಸ್ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗುತ್ತಿದ್ದರೂ, ಚಿಕಿತ್ಸೆಗೆ ಸ್ಪಂದಿಸದೇ ಮೃತಪಟ್ಟಿದ್ದಾರೆ. ಈ ಪ್ರಕರಣಕ್ಕೆ ಸಂಬಂಧಿಸಿದ ಎಲ್ಲ ಆರೋಪಿಗಳನ್ನ ಗಡಿಪಾರು ಮಾಡುವಂತೆ ಕುಟುಂಬ ಸದಸ್ಯರು ಆಗ್ರಹ ಮಾಡಿದ್ದಾರೆ. ಈ ಘಟನೆಗೆ ಸಂಬಂಧಿಸಿದಂತೆ ರಂಗಪ್ಪನ ಕುಟುಂಬ ಸದಸ್ಯರು ನಗರಸಭೆಯ ಮುಂದೆ ಶವವಿಟ್ಟು ಪ್ರತಿಭಟನೆ ಮಾಡಲು ಮುಂದಾಗಿದ್ದಾರೆ. ಹಾವೇರಿ ನಗರ ಪೊಲೀಸ್ ಠಾಣೆಯ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದೆ.

ಘಟನೆ ಹಿನ್ನಲೆ ಏನು?

ಕೆಲ ದಿನಗಳ ಹಿಂದೆ ಶಾಂತಪ್ಪ ಕೊರವರ ಎಂಬುವವನ ಬರ್ತಡೆ ಇತ್ತು. ಶಾಂತಪ್ಪ ಹಾವೇರಿ ಕೊರವರ ಓಣಿ ನಿವಾಸಿಯಾಗಿದ್ದಾರೆ. ಬರ್ತಡೆ ಹಿನ್ನಲೆ ಶಾಂತಪ್ಪ ಕೊರವರ ಅವರು ತಮ್ಮ ಏರಿಯಾದಲ್ಲಿ ದೊಡ್ಡದಾಗಿ ಬ್ಯಾನರ್ ಹಾಕಿಸಿದ್ದರು. ನಗರಸಭೆ ಅನುಮತಿ ಇಲ್ಲದೇ ಬ್ಯಾನರ್ ಹಾಕಿದ್ದರು ಎಂಬ ಕಾರಣಕ್ಕೆ ನಗರಸಭೆ ಅಧಿಕಾರಿಗಳು ಬ್ಯಾನರ್ ತೆರವಿಗೆ ಮುಂದಾಗಿದ್ದರು. ಈ ವೇಳೆ ಶಾಂತಪ್ಪ ಕೊರವರ ಬರ್ತಡೆ ಬ್ಯಾನರ್ ತೆರವುಗೊಳಿಸದಂತೆ ಅಕ್ಷತಾ ಕೆ.ಸಿ ಎನ್ನುವವರು ಫೋನ್ ನಲ್ಲಿ ಅವಾಜ್ ಹಾಕಿದ್ದರು.

ಶಾಂತಪ್ಪ ಕೊರವರ ಹಾಗೂ ಅಕ್ಷತಾ ಕೆ.ಸಿ ಇಬ್ಬರೂ ಆತ್ಮೀಯರು. ಹೀಗಾಗಿ ಶಾಂತಪ್ಪ ಬ್ಯಾನರ್ ತೆರವುಗೊಳಿಸದಂತೆ ಅಕ್ಷತಾ ಕೆ.ಸಿ. ಅವಾಜ್ ಹಾಕಿದ್ದರು. ಇದೇ ವೇಳೆ ಫೋನ್‌ನಲ್ಲಿ ರಂಗಪ್ಪನಿಗೆ ಅವಾಚ್ಯ ಶಬ್ದಗಳಿಂದ ನಿಂದಿಸಿದ್ದರು. ಅಕ್ಷತಾ ಅವರ ನಿಂದನೆಯನ್ನು ಮನಸ್ಸಿಗೆ ಹಚ್ಚಿಕೊಂಡು ರಂಗಪ್ಪ ಸಾಯಲು ಪ್ರಯತ್ನಿಸಿದ್ದರು ಎಂದು ಕುಟುಂಬಸ್ಥರು, ಆರೋಪಿಸಿದ್ದು ಪೊಲೀಸ್ ಠಾಣೆ ಮೆಟ್ಟಿಲೇರಿದ್ದಾರೆ. ಇದೀಗ ಅಕ್ಷತಾ, ಶಾಂತಪ್ಪ ಸೇರಿ ಎಲ್ಲರನ್ನೂ ಗಡಿಪಾರು ಮಾಡುವಂತೆ ಆಗ್ರಹ ಮಾಡುತ್ತಿದ್ದಾರೆ.