ಹಾವೇರಿ ಗ್ಯಾಂಗ್ ರೇಪ್ ಪ್ರಕರಣದಲ್ಲಿ ಜಾಮೀನಿನ ಮೇಲೆ ಹೊರಬಂದ ಆರೋಪಿಗಳು ರೋಡ್ ಶೋ ನಡೆಸಿದ್ದಕ್ಕೆ 5 ಜನರನ್ನು ಬಂಧಿಸಲಾಗಿದೆ. ಇನ್ನಿಬ್ಬರು ಆರೋಪಿಗಳು ತಲೆಮರೆಸಿಕೊಂಡಿದ್ದು, ಅವರ ಜಾಮೀನು ರದ್ದುಗೊಳಿಸಲು ಕೋರ್ಟ್‌ಗೆ ಅರ್ಜಿ ಸಲ್ಲಿಸಲಾಗಿದೆ.

ಹಾವೇರಿ (ಮೇ 23): ಹಾವೇರಿ ಜಿಲ್ಲೆಯ ಗ್ಯಾಂಗ್ ರೇಪ್ ಆರೋಪಿಗಳು ಜಾಮೀನು ಸಿಕ್ಕಿ ಜೈಲಿನಿಂದ ಹೊರಬಂದ ಬೆನ್ನಲ್ಲಿಯೇ ತೆರೆದ ವಾಹನದಲ್ಲಿ ಡಿಜೆ ಹಾಕಿಕೊಂಡು ಮೆರವಣಿಗೆ ಮಾಡಿದ್ದರು. ಇದೀಗ ಪುನಃ 7 ಜನರ ಪೈಕಿ 5 ಆಓಪಿಗಳನ್ನು ಬಂಧಿಸಿದ್ದು, ಉಳಿದವರನ್ನು ಬಂಧಿಸಿ ಅವರ ಜಾಮೀನು ರದ್ದತಿ ಮಾಡುವಂತೆ ಕೋರ್ಟ್‌ಗೆ ಅರ್ಜಿ ಸಲ್ಲಿಸಲಾಗಿದೆ ಎಂದು ಹಾವೇರಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಅಂಶುಕುಮಾರ್ ಮಾಹಿತಿ ನೀಡಿದ್ದಾರೆ.

ಹಾನಗಲ್ ಗ್ಯಾಂಗ್ ರೇಪ್ ಆರೋಪಿಗಳಿಂದ ರೋಡ್ ಶೋ ಪ್ರಕರಣದ ಕುರಿತು ಏಷ್ಯಾನೆಟ್ ಸುವರ್ಣ ನ್ಯೂಸ್ ಜೊತೆಗೆ ಮಾತನಾಡಿದ ಅವರು, ಗ್ಯಾಂಗ್ ರೇಪ್ ಕೇಸಿನಲ್ಲಿ ಜಾಮೀನು ಸಿಕ್ಕಿ ವಿಜಯೋತ್ಸವ ಮಾಡಿದ 5 ಜನ ಆರೋಪಿಗಳನ್ನು ಬಂಧಿಸಲಾಗಿದೆ. ಇನ್ನಿಬ್ಬರು ಆರೋಪಿಗಳು ತಲೆಮರೆಸಿಕೊಂಡಿದ್ದು, ಶೋಧ ಕಾರ್ಯ ಮಾಡಲಾಗುತ್ತಿದೆ. ಗ್ಯಾಂಗ್ ರೇಪ್ ಆರೋಪಿಗಳಾಗಿದ್ದರೂ, ಜಾಮೀನಿನ ಮೇಲೆ ಹೊರಬಂದು ಜಾಮೀನು ಷರತ್ತುಗಳನ್ನು ಉಲ್ಲಂಘಿಸಿ ರೋಡ್ ಶೋ ನಡೆಸಿದ್ದಕ್ಕಾಗಿ ಅವರ ಮೇಲೆ ಮತ್ತೊಂದು ಕೇಸ್ ದಾಖಲಾಗಿದೆ. ಜೊತೆಗೆ, 7 ಪ್ರಮುಖ ಆರೋಪಿಗಳ ಜಾಮೀನು ರದ್ದತಿಗೆ ಕೋರ್ಟ್ ಗೆ ಅರ್ಜಿ ಸಲ್ಲಿಸಲಾಗಿದೆ. ಬಿ.ಎನ್.ಎಸ್ 2023 ರಡಿ ಕಲಂ 189/2, 191/2, 281, 351/2 , 351/3 ಸಹ ಕಲಂ 190 ಕೇಸ್ ದಾಖಲು ಮಾಡಲಾಗಿದೆ ಎಂದು ಮಾಹಿತಿ ನೀಡಿದರು.

ಹಾವೇರಿಯಲ್ಲಿ ಕಳೆದ ವರ್ಷ ಲಾಡ್ಜ್ ಒಂದರಲ್ಲಿ ಮುಸ್ಲಿಂ ಮಹಿಳೆಯೊಂದಿಗೆ ಸಿಕ್ಕಿಬಿದ್ದ ಮುಸ್ಲಿಂ ಮಹಿಳೆಯನ್ನು ರಕ್ಷಣೆ ಮಾಡುವ ನಿಟ್ಟಿನಲ್ಲಿ ನೈತಿಕ ಪೊಲೀಸ್‌ಗಿರಿ ಮೆರೆದಿದ್ದ 19 ಜನ ಯುವಕರು, ಮಹಿಳೆಯನ್ನು ಎಳೆದೊಯ್ದು ಸಾಮೂಹಿಕ ಅತ್ಯಾ*ಚಾರ ಮಾಡಿದ್ದರು. ಈ ಪ್ರಕರಣದಲ್ಲಿ 7 ಮುಖ್ಯ ಆರೋಪಿಗಳಿಗೆ ಜಾಮೀನು ಸಿಕ್ಕಿ ಹೊರಬಂದಿದ್ದರು. ಸಂತ್ರಸ್ತೆ ಮಹಿಳೆ ದುಃಖದಲ್ಲಿರುವಾಗ ತಪ್ಪು ಮಾಡಿದ ಆರೋಪಿಗಳು ಹಾಗೂ ಅವರ ಬೆಂಬಲಿಗರು ಅಕ್ಕಿ ಆಲೂರು ಪಟ್ಟಣದಲ್ಲಿ ಬೈಕ್‌ಗಳು ಮತ್ತು ಕಾರುಗಳ ಮೆರವಣಿಗೆ ನಡೆಸಿದರು. ಡಿಜೆ ಸಂಗೀತದೊಂದಿಗೆ ಆಚರಣೆ ಮಾಡಿದರು ಮತ್ತು ಆರೋಪಿಗಳು ವಿಜಯದ ಸಂಕೇತಗಳನ್ನು ತೋರಿಸುತ್ತಾ ಕೇಕೆ, ಶಿಳ್ಳೆ ಹಾಕಿಕೊಂಡು ನಗುತ್ತಿರುವುದು ಕಂಡುಬಂದಿದೆ. ಈ ಸಂಪೂರ್ಣ ವಿಡಿಯೋ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದ್ದು, ಜನರಲ್ಲಿ ತೀವ್ರ ಆಕ್ರೋಶ ವ್ಯಕ್ತವಾಗಿತ್ತು.

Scroll to load tweet…

ಹಾವೇರಿ ಸೆಷನ್ಸ್ ಕೋರ್ಟ್ ಇತ್ತೀಚೆಗೆ ಅಫ್ತಾಬ್ ಚಂದನಕಟ್ಟಿ, ಮದರ್ ಸಾಬ್ ಮಂಡಕ್ಕಿ, ಸಾಮಿಯುಲ್ಲಾ ಲಾಲ್ನಾವರ್, ಮೊಹಮ್ಮದ್ ಸಾದಿಕ್ ಅಗಸಿಮನಿ, ಶೋಯೆಬ್ ಮುಲ್ಲಾ, ತೌಸಿಫ್ ಚೋಟ್ಟಿ ಮತ್ತು ರಿಯಾಜ್ ಸಾವಿಕೇರಿಗೆ ಜಾಮೀನು ನೀಡಿದೆ. 26 ವರ್ಷದ ಮಹಿಳೆಯ ಮೇಲಿನ ಸಾಮೂಹಿಕ ಅತ್ಯಾ*ಚಾರದ ಪ್ರಮುಖ ಆರೋಪಿಗಳಾದ ಇವರನ್ನು ಹಲವು ತಿಂಗಳುಗಳಿಂದ ನ್ಯಾಯಾಂಗ ಬಂಧನದಲ್ಲಿರಿಸಲಾಗಿತ್ತು. ಇದೀಗ ಆರೋಪಿಗಳಿಗೆ ಜಾಮೀನು ಸಿಕ್ಕಿದ್ದು, ಅವರೆಲ್ಲರೂ ಹಾವೇರಿಯಲ್ಲಿ ಕಾರು ಹಾಗೂ ಬೈಕ್‌ಗಳ ಮೇಲೆ ವಿಜಯೋತ್ಸವ ಆಚರಣೆ ಮಾಡಿದ್ದಾರೆ.

ಪ್ರಕರಣದ ಹಿನ್ನೆಲೆಯೇನು?

ಈ ಪ್ರಕರಣ ಜನವರಿ 8, 2024 ರಂದು ಬೆಳಕಿಗೆ ಬಂದಿತು. ಅಲ್ಪಸಂಖ್ಯಾತ ಸಮುದಾಯದ ಯುವತಿ ಮತ್ತು 40 ವರ್ಷದ ಕೆಎಸ್‌ಆರ್‌ಟಿಸಿ ಬಸ್ ಚಾಲಕ ಖಾಸಗಿ ಹೋಟೆಲ್‌ನಲ್ಲಿ ತಂಗಿದ್ದರು. ಅಲ್ಲಿಗೆ ನುಗ್ಗಿದ ಯುವಕರು ಕಂಡಕ್ಟರ್ ಮೇಲೆ ಹಲ್ಲೆ ನಡೆಸಿ, ಮಹಿಳೆಯನ್ನು ಎಳೆದೊಯ್ದಿದ್ದರು. ಈ ವಿಡಿಯೋ ವೈರಲ್ ಬೆನ್ನಲ್ಲಿಯೇ ಆರಂಭದಲ್ಲಿ ಪೊಲೀಸರು ಇದನ್ನು ನೈತಿಕ ಪೊಲೀಸ್‌ಗಿರಿ ಪ್ರಕರಣವೆಂದು ಪರಿಗಣಿಸಿದ್ದರು. ಆದರೆ ಜನವರಿ 11 ರಂದು ಸಂತ್ರಸ್ತ ಮಹಿಳೆ ಮ್ಯಾಜಿಸ್ಟ್ರೇಟ್ ಮುಂದೆ ಹೇಳಿಕೆ ನೀಡಿ, ತನ್ನನ್ನು ಹೋಟೆಲ್‌ನಿಂದ ಎಳೆದೊಯ್ದು ಯುವಕರ ಗುಂಪು ಹತ್ತಿರದ ಕಾಡಿಗೆ ಕರೆದೊಯ್ದಿದೆ. ಅಲ್ಲಿ 19 ಜನರು ವಿವಿಧ ರೀತಿಯಲ್ಲಿ ಹಲ್ಲೆ ಮತ್ತು ಸಾಮೂಹಿಕ ಅತ್ಯಾ*ಚಾರ ಎಸಗಿದರು ಎಂದು ಆರೋಪಿಸಿದರು. ನಂತರ ಈ ಪ್ರಕರಣಕ್ಕೆ ಸಾಮೂಹಿಕ ಅತ್ಯಾ*ಚಾರದ ಸೆಕ್ಷನ್‌ಗಳನ್ನು ಸೇರಿಸಲಾಯಿತು.

ಪ್ರಾಥಮಿಕ ತನಿಖೆಯಲ್ಲಿ ಸಂತ್ರಸ್ತ ಮಹಿಳೆ ಆರೋಪಿಗಳನ್ನು ಗುರುತಿಸಿದ್ದಳು. ಆದರೆ ನಂತರ ನ್ಯಾಯಾಲಯದಲ್ಲಿ ಅವಳು ಆರೋಪಿಗಳನ್ನು ಗುರುತಿಸುವಲ್ಲಿ ಸಾಧ್ಯವಾಗಲಿಲ್ಲ. ಇದರಿಂದಾಗಿ ಕೇಸಿನ ಆರೋಪಿಗಳ ಮೇಲೆ ಬಲವಾದ ಸಾಕ್ಷಿ ಸಿಗದ ಹಿನ್ನೆಲೆಯಲ್ಲಿ ನ್ಯಾಯಾಲಯವು 7 ಆರೋಪಿಗಳಿಗೆ ಜಾಮೀನು ನೀಡಿದೆ. ಈ ಪ್ರಕರಣದಲ್ಲಿ ಒಟ್ಟು 19 ಜನರನ್ನು ಬಂಧಿಸಲಾಗಿತ್ತು. ಇವರಲ್ಲಿ 12 ಜನರಿಗೆ ಸುಮಾರು 10 ತಿಂಗಳ ಹಿಂದೆ ಜಾಮೀನು ಸಿಕ್ಕಿತ್ತು. ಅವರೆಲ್ಲರೂ ಜಾಮೀನಿನ ಮೇಲೆ ಹೊರಗಿದ್ದಾರೆ. ಆದರೆ ಇದೀಗ ಕೇಸಿನ ಮುಖ್ಯ 7 ಆರೋಪಿಗಳಿಗೆ ಜಾಮೀನು ಮಂಜೂರಾಗಿದೆ.