ಚಿಕ್ಕಮಗಳೂರು ಜಿಲ್ಲೆಯ ಬೀರೂರಿನಲ್ಲಿ, ಸಮಾಜದ ಸಂಪ್ರದಾಯವನ್ನು ಮುರಿದು ಹೆಣ್ಣುಮಕ್ಕಳಿಬ್ಬರು ತಮ್ಮ ತಂದೆಯ ಅಂತ್ಯಕ್ರಿಯೆಯನ್ನು ತಾವೇ ನೆರವೇರಿಸಿದ್ದಾರೆ. ಗಂಡು ಮಕ್ಕಳಿಲ್ಲದ ಕಾರಣ, ಪುತ್ರಿ ಐಶ್ವರ್ಯಾ ಅವರು ಕುಟುಂಬದವರ ಒಪ್ಪಿಗೆಯೊಂದಿಗೆ ಈ ಕಾರ್ಯವನ್ನು ಮಾಡಿ, ಲಿಂಗ ಸಮಾನತೆಯ ಸಂದೇಶ ಸಾರಿದ್ದಾರೆ.

ಚಿಕ್ಕಮಗಳೂರು (ಮಾ.14): ಸಮಾಜದಲ್ಲಿ ಇಂದಿಗೂ ಹಲವು ಕಡೆಗಳಲ್ಲಿ ಅಂತ್ಯಸಂಸ್ಕಾರದಂತಹ ಧಾರ್ಮಿಕ ವಿಧಿವಿಧಾನಗಳನ್ನು ಕೇವಲ ಪುರುಷರು ಅಥವಾ ಗಂಡುಮಕ್ಕಳೇ ನೆರವೇರಿಸಬೇಕು ಎಂಬ ಸಂಪ್ರದಾಯ ಚಾಲ್ತಿಯಲ್ಲಿದೆ. ಆದರೆ, ಚಿಕ್ಕಮಗಳೂರು ಜಿಲ್ಲೆಯ ಕಡೂರು ತಾಲೂಕಿನ ಬೀರೂರಿನಲ್ಲಿ ಹೆಣ್ಣುಮಕ್ಕಳಿಬ್ಬರು ಈ ಸಂಪ್ರದಾಯದ ಬೇಲಿಯನ್ನು ಮುರಿದು, ಲಿಂಗ ಸಮಾನತೆಯ ಹೊಸ ಸಂದೇಶ ಸಾರಿದ್ದಾರೆ. ತಮ್ಮ ತಂದೆಯ ಅಂತ್ಯಕ್ರಿಯೆಯನ್ನು ತಾವೇ ನೆರವೇರಿಸುವ ಮೂಲಕ ಸಮಾಜಕ್ಕೆ ಮಾದರಿಯಾಗಿದ್ದಾರೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಬೀರೂರಿನ ನಿವಾಸಿ, ಭಾವಸಾರ ಸಮಾಜದ ಬಿ.ಎಸ್. ವಿಶ್ವನಾಥ್ ಅವರು ಅನಾರೋಗ್ಯದಿಂದ ನಿಧನರಾಗಿದ್ದರು. ಮೃತ ವಿಶ್ವನಾಥ್ ಅವರಿಗೆ ಗಂಡು ಮಕ್ಕಳಿರಲಿಲ್ಲ. ಸಾಮಾನ್ಯವಾಗಿ ಇಂತಹ ಸಂದರ್ಭಗಳಲ್ಲಿ ಕುಟುಂಬದ ಇತರ ಪುರುಷ ಸಂಬಂಧಿಕರು ಅಂತ್ಯಕ್ರಿಯೆ ಮಾಡುವುದು ವಾಡಿಕೆ. ಆದರೆ, ವಿಶ್ವನಾಥ್ ಅವರ ಪುತ್ರಿ ಐಶ್ವರ್ಯಾ ಅವರು ತಂದೆಯ ಅಂತಿಮ ವಿಧಿವಿಧಾನಗಳನ್ನು ತಾವೇ ನೆರವೇರಿಸಲು ನಿರ್ಧರಿಸಿದರು.

ಸಂಪ್ರದಾಯ ಮುರಿದ ಯುವತಿಯರು

ತಮ್ಮ ನಿರ್ಧಾರಕ್ಕೆ ಕುಟುಂಬದ ಹಿರಿಯರ ಒಪ್ಪಿಗೆ ಪಡೆದ ಐಶ್ವರ್ಯಾ, ತಮ್ಮ ತಂಗಿ ಮತ್ತು ಭಾವನ ಜೊತೆಗೂಡಿ ಶುಕ್ರವಾರ ತಂದೆಯ ಅಂತ್ಯಸಂಸ್ಕಾರ ನೆರವೇರಿಸಿದ್ದಾರೆ. ಬೀರೂರಿನ ಹಿಂದೂ ರುದ್ರಭೂಮಿಯಲ್ಲಿ ನಡೆದ ಈ ಧಾರ್ಮಿಕ ವಿಧಿಯಲ್ಲಿ, ಐಶ್ವರ್ಯಾ ಅವರು ಹೆಗಲ ಮೇಲೆ ಮಣ್ಣಿನ ಕುಡಿಕೆ ಹೊತ್ತು ಮೃತದೇಹದ ಸುತ್ತ ಪ್ರದಕ್ಷಿಣೆ ಬಂದು ಶಾಸ್ತ್ರೋಕ್ತವಾಗಿ ಅಂತಿಮ ವಿದಾಯ ಹೇಳಿದರು.

ಹೆಣ್ಣುಮಕ್ಕಳು ಅಬಲೆಯರಲ್ಲ, ಅವರು ಎಲ್ಲಾ ರಂಗಗಳಲ್ಲೂ ಸಮಾನರು ಎಂಬುದನ್ನು ಈ ಸೋದರಿಯರು ಸಾಬೀತುಪಡಿಸಿದ್ದಾರೆ. ಯುವತಿಯರ ಈ ಕಾರ್ಯಕ್ಕೆ ಭಾವಸಾರ ಸಮಾಜದ ಮುಖಂಡರು, ಸ್ನೇಹಿತರು ಹಾಗೂ ಸ್ಥಳೀಯ ನಿವಾಸಿಗಳು ಭಾರಿ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. "ಮಗ ಮಾಡಬೇಕಾದ ಕೆಲಸವನ್ನು ಮಗಳೇ ಮಾಡಿ ತಂದೆಯ ಋಣ ತೀರಿಸಿದ್ದಾಳೆ" ಎಂದು ಸ್ಥಳೀಯರು ಮಾತನಾಡಿದ್ದಾರೆ.