ಹಾವೇರಿ ನಗರಸಭೆ ಚುಕ್ಕಾಣಿ ಹಿಡಿಯಲು ಬಿಜೆಪಿ, ಕಾಂಗ್ರೆಸ್‌ ಮಧ್ಯೆ ಭಾರೀ ಪೈಪೋಟಿ..!

ಕುತೂಹಲ ಹೆಚ್ಚಿಸಿದ ನಗರಸಭೆ ಅಧ್ಯಕ್ಷ, ಉಪಾಧ್ಯಕ್ಷ ಚುನಾವಣೆ| ನಗರಸಭೆಯ ಮೂವರು ಕಾಂಗ್ರೆಸ್‌ ಸದಸ್ಯರ ಮೇಲೆ ಗುರುವಾರ ರಾತ್ರಿ ಕೇಸ್‌| ಅಧ್ಯಕ್ಷ, ಉಪಾಧ್ಯಕ್ಷ ಸ್ಥಾನಕ್ಕೆ ಇಂದು ಚುನಾವಣೆ| ಪೈಪೋಟಿಯಲ್ಲಿ ಎರಡೂ ಪಕ್ಷಗಳು| 

Haveri CMC President  Vice President Election Begin grg

ಹಾವೇರಿ(ಅ.31): ನಗರಸಭೆ ಚುಕ್ಕಾಣಿ ಹಿಡಿಯಲು ಬಿಜೆಪಿ, ಕಾಂಗ್ರೆಸ್‌ ನಡುವೆ ತೀವ್ರ ಪೈಪೋಟಿ ನಡೆದಿರುವ ಬೆನ್ನಲ್ಲೇ ಮೂವರು ಕಾಂಗ್ರೆಸ್‌ ಸದಸ್ಯರ ಮೇಲೆ ಜಾತಿ ನಿಂದನೆ ಆರೋಪದಡಿ ಎಫ್‌ಐಆರ್‌ ದಾಖಲಾಗಿದೆ. ಇದು ಇಂದು(ಶನಿವಾರ)  ಆರಂಭವಾದ ಅಧ್ಯಕ್ಷ, ಉಪಾಧ್ಯಕ್ಷ ಚುನಾವಣೆ ಮೇಲೆ ಕುತೂಹಲ ಹೆಚ್ಚಿಸುವಂತೆ ಮಾಡಿದೆ.

ಇಲ್ಲಿಯ ನಗರಸಭೆ ಚುಕ್ಕಾಣಿ ಹಿಡಿಯಲು ಕಾಂಗ್ರೆಸ್‌ ಮತ್ತು ಬಿಜೆಪಿ ಮಧ್ಯೆ ಅಂತಿಮ ಹಂತದ ಕಸರತ್ತು ನಡೆದಿದೆ. ಒಟ್ಟು 31 ಸದಸ್ಯ ಬಲ ಹೊಂದಿರುವ ನಗರಸಭೆಯಲ್ಲಿ ಬಹುಮತ ಯಾವ ಪಕ್ಷಕ್ಕೂ ಇಲ್ಲದಿರುವುದರಿಂದ ಪಕ್ಷೇತರರು ನಿರ್ಣಾಯಕರಾಗಿದ್ದಾರೆ. 31 ಸದಸ್ಯರಲ್ಲಿ ಕಾಂಗ್ರೆಸ್‌ನ 15, ಬಿಜೆಪಿಯ 9, ಪಕ್ಷೇತರ 7 ಸದಸ್ಯರು ಆಯ್ಕೆಯಾಗಿದ್ದಾರೆ. ಅಧ್ಯಕ್ಷ ಸ್ಥಾನವು ಸಾಮಾನ್ಯ ವರ್ಗಕ್ಕೆ ಮೀಸಲಾಗಿದ್ದು, ಉಪಾಧ್ಯಕ್ಷ ಸ್ಥಾನವು ಹಿಂದುಳಿದ ವರ್ಗ ಅ ಮಹಿಳೆಗೆ ಮೀಸಲಾಗಿದೆ.

ಅಧ್ಯಕ್ಷ ಹಾಗೂ ಉಪಾಧ್ಯಕ್ಷ ಸ್ಥಾನದ ಆಯ್ಕೆ ಚುನಾವಣೆಯಲ್ಲಿ ಸ್ಥಳೀಯ ಶಾಸಕರು, ಸಂಸದರ ಮತವೂ ಲೆಕ್ಕಕ್ಕೆ ಬರಲಿದೆ. ಹೀಗಾಗಿ ಅಧ್ಯಕ್ಷ, ಉಪಾಧ್ಯಕ್ಷರಾಯ್ಕೆಯಲ್ಲಿ ನಗರಸಭೆಯ ಒಟ್ಟು ಸದಸ್ಯ ಬಲ 33 ಆಗಲಿದೆ. ಬಹುಮತ ಪಡೆಯಲು 17 ಸದಸ್ಯರ ಬೆಂಬಲ ಬೇಕು. ಈ ಮ್ಯಾಜಿಕ್‌ ಸಂಖ್ಯೆ ತಲುಪಲು ಕೈ, ಕಮಲ ಪಡೆಯ ನಾಯಕರು ಎಲ್ಲ ರೀತಿಯ ಪ್ರಯತ್ನ ನಡೆಸಿದ್ದಾರೆ. ಬಹುಮತ ಇಲ್ಲದಿದ್ದರೂ ಕಾಂಗ್ರೆಸ್‌ ಮ್ಯಾಜಿಕ್‌ ಸಂಖ್ಯೆಗೆ ಹತ್ತಿರದಲ್ಲಿದೆ. ಇದೇ ಕಾರಣಕ್ಕೆ ಕೆಲ ಪಕ್ಷೇತರ ಸದಸ್ಯರನ್ನು ವಿಶ್ವಾಸಕ್ಕೆ ತೆಗೆದುಕೊಂಡಿರುವ ಕಾಂಗ್ರೆಸ್‌ ನಾಯಕರು, ತನ್ನ 15 ಸದಸ್ಯರೊಂದಿಗೆ ಕೆಲ ಪಕ್ಷೇತರರನ್ನು ಅಜ್ಞಾತ ಸ್ಥಳಕ್ಕೆ ಇರಿಸಿದೆ. ಆ ಮೂಲಕ ಶನಿವಾರ ನಡೆಯುವ ಚುನಾವಣೆಯಲ್ಲಿ ಗೆಲ್ಲುವ ವಿಶ್ವಾಸ ಕೈ ನಾಯಕರದ್ದಾಗಿತ್ತು.

ಪುಟ್ಟ ಮಗುವನ್ನು ಕೈಯಲ್ಲಿ ಹಿಡಿದು ಕೆಂಡ ಹಾಯ್ದ ಅರ್ಚಕ : ವೈರಲ್

ಮೂವರು ಸದಸ್ಯರ ಮೇಲೆ ಕೇಸ್‌:

ಆದರೆ, ಗುರುವಾರ ರಾತ್ರಿ ಮೂವರು ಕಾಂಗ್ರೆಸ್‌ ಸದಸ್ಯರ ಮೇಲೆ ದಲಿತ ದೌರ್ಜನ್ಯ, ಜಾತಿ ನಿಂದನೆ ಕೇಸ್‌ ದಾಖಲಾಗಿದೆ. ನಾಗೇಂದ್ರನಮಟ್ಟಿಯ ನಿವೇಶನವೊಂದಕ್ಕೆ ಸಂಬಂಧಿಸಿದಂತೆ ಜಾತಿ ನಿಂದನೆ ಮಾಡಿ, ಹಲ್ಲೆ ನಡೆಸಿ, ಕೊಲೆ ಪ್ರಯತ್ನ ನಡೆಸಿದ್ದಾರೆ ಎಂದು ಶಾಂತಮ್ಮ ಡಂಬರಳ್ಳಿ ಎಂಬವರು ನಗರಸಭೆ ಸದಸ್ಯರಾದ ಐ.ಯು. ಪಠಾಣ, ಮಂಜುನಾಥ ಬಿಷ್ಟಣ್ಣನವರ ಹಾಗೂ ಪೀರಸಾಬ್‌ ಚೋಪದಾರ ಇತರರ ಮೇಲೆ ನೀಡಿದ ದೂರಿನ ಮೇರೆಗೆ ಶಹರ ಠಾಣೆಯಲ್ಲಿ ಎಫ್‌ಐಆರ್‌ ದಾಖಲಾಗಿದೆ. ಆದ್ದರಿಂದ ಈ ಸದಸ್ಯರು ಚುನಾವಣೆಯಲ್ಲಿ ಮತ ಚಲಾಯಿಸಲು ಅವಕಾಶ ಸಿಗಲಿದೆಯೇ ಎಂಬುದು ಸಾರ್ವಜನಿಕರ ಪ್ರಶ್ನೆಯಾಗಿದೆ.

ಒಂದು ವೇಳೆ ಈ ಮೂವರು ಸದಸ್ಯರು ಗೈರಾದರೆ ಕಾಂಗ್ರೆಸ್‌ಗೆ ಕಷ್ಟಕರವಾಗಲಿದೆ. ಆಗ ಸಭೆಯ ಕೋರ್‌ಂ 30 ಆಗಲಿದ್ದು, ಆಗ ಮ್ಯಾಜಿಕ್‌ ಸಂಖ್ಯೆ 16 ಆಗಲಿದೆ. ಆಗ ಸ್ಥಳೀಯ ಬಿಜೆಪಿ ಶಾಸಕರು, ಬಿಜೆಪಿ ಸಂಸದರು ಹಾಗೂ ಪಕ್ಷೇತರರ ಬೆಂಬಲ ಪಡೆದು ಬಿಜೆಪಿ ಮ್ಯಾಜಿಕ್‌ ನಂಬರ್‌ ತಲುಪಿದರೆ ಗದ್ದುಗೆ ಕಮಲ ಪಡೆ ಪಾಲಾಗಲಿದೆ. ಆದರೆ, ಪ್ರಕರಣದ ಕುರಿತು ಮೇಲಾಧಿಕಾರಿಗಳು ತನಿಖೆ ನಡೆಸಿದ್ದು, ಮೂವರು ಸದಸ್ಯರು ಸಭೆಗೆ ಹಾಜರಾಗಲು ಸಮಸೆÜ್ಯಯಾಗುವುದಿಲ್ಲ ಎಂದು ಹೇಳಲಾಗುತ್ತಿದೆ. ರಾಜಕೀಯ ಒತ್ತಡದಲ್ಲಿ ಸದಸ್ಯರು ಸಭೆಗೆ ಹಾಜರಾಗಲು ಬಂದಾಗ ಪೊಲೀಸರು ಅವರನ್ನು ಬಂಧಿಸಿದರೆ ಕಾಂಗ್ರೆಸ್‌ಗೆ ಕಷ್ಟವಾಗಲಿದೆ. ಒಟ್ಟಿನಲ್ಲಿ ನಗರಸಭೆ ಗದ್ದುಗೆ ಗುದ್ದಾಟ ತಾರಕಕ್ಕೇರಿದೆ. ಪಕ್ಷೇತರರು ಕೈಗೊಳ್ಳುವ ತೀರ್ಮಾನ ಹಾಗೂ ಪ್ರಕರಣದ ಹಿನ್ನೆಲೆಯಲ್ಲಿ ಪೊಲೀಸರು ಕೈಗೊಳ್ಳುವ ಕಾನೂನು ಕ್ರಮದ ಮೇಲೆ ನಗರಸಭೆ ಗದ್ದುಗೆ ಫಲಿತಾಂಶ ಅವಲಂಬಿಸಿದೆ ಎಂದು ಹೇಳಲಾಗುತ್ತಿದೆ.

ದಲಿತ ಮಹಿಳೆ ಮೇಲೆ ದೌರ್ಜನ್ಯ ನಡೆಸಿದ ಆರೋಪದಲ್ಲಿ ಗುರುವಾರ ರಾತ್ರಿ ಪ್ರಕರಣ ದಾಖಲಾಗಿದೆ. ಪ್ರಕರಣದ ತನಿಖೆಗೆ ತನಿಖಾಧಿಕಾರಿಯನ್ನು ನೇಮಿಸಲಾಗಿದೆ. ತನಿಖೆ ಪ್ರಗತಿಯಲ್ಲಿದ್ದು, ಈಗಲೇ ಏನನ್ನೂ ಹೇಳಲು ಸಾಧ್ಯವಿಲ್ಲ ಎಂದು ಹಾವೇರಿ ಎಸ್ಪಿ ಕೆ.ಜಿ. ದೇವರಾಜು ತಿಳಿಸಿದ್ದಾರೆ.

ನಮ್ಮ ಪಕ್ಷದ ಮೂವರು ಸದಸ್ಯರ ಮೇಲೆ ರಾಜಕೀಯ ಪ್ರೇರಿತ ದೂರು ದಾಖಲಾಗಿದೆ. ಅದಕ್ಕಾಗಿ ಚುನಾವಣೆ ಪ್ರಕ್ರಿಯೆ ಮುಗಿಯುವವರೆಗೆ ಯಾವುದೇ ಕ್ರಮಕೈಗೊಳ್ಳದಂತೆ ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಿದ್ದೇವೆ ಎಂದು ಜಿಲ್ಲಾ ಕಾಂಗ್ರೆಸ್‌ ಅಧ್ಯಕ್ಷ ಎಂ.ಎಂ. ಹಿರೇಮಠ ತಿಳಿಸಿದ್ದಾರೆ. 

ಪಕ್ಷೇತರರಲ್ಲಿ 5 ಸದಸ್ಯರು ಬಿಜೆಪಿ ಬೆಂಬಲಿಸಲಿದ್ದಾರೆ. ಆದ್ದರಿಂದ ನಗರಸಭೆ ಅಧ್ಯಕ್ಷ, ಉಪಾಧ್ಯಕ್ಷ ಚುನಾವಣೆಯಲ್ಲಿ ಬಿಜೆಪಿ ಗೆಲ್ಲಲಿದೆ ಎಂಬ ವಿಶ್ವಾಸವಿದೆ. ಕಾಂಗ್ರೆಸ್‌ ಸದಸ್ಯರ ಮೇಲೆ ಕೇಸ್‌ ದಾಖಲಾಗಿದ್ದರೆ ಪೊಲೀಸರು ಕ್ರಮಕೈಗೊಳ್ಳುತ್ತಾರೆ.

ಬಿಗಿ ಪೊಲೀಸ್  ಬಂದೋಬಸ್ತ್

ಚುನಾವಣೆ ಇರುವ ಹಿನ್ನೆಲೆಯಲ್ಲಿ ನಗರಸಭೆಯ 500 ಮೀ.ಸುತ್ತಮುತ್ತ ಸೆಕ್ಷನ್ 144 ಜಾರಿ ಮಾಡಲಾಗಿದೆ. ನಗರಸಭೆ ಸುತ್ತಮುತ್ತ ಬಿಗಿ ಪೊಲೀಸ್ ಬಂದೋಬಸ್ತ್ ವ್ಯವಸ್ಥೆ ಕಲ್ಪಿಸಲಾಗಿದೆ. 2 ಡಿವೈಎಸ್ಪಿ,7 ಸಿಪಿಐ,13 ಪಿಎಸ್‌ಐ ಹಾಗೂ 120 ಕಾನ್ಸ್‌ಟೇಬಲ್ ಸೇರಿದಂತೆ 4 ಡಿಆರ್, 1 ಕೆಎಸ್‌ಆರ್‌ಪಿ ತುಕಡಿಯನ್ನ ನಿಯೋಜನೆ ಮಾಡಲಾಗಿದೆ. 
 

Latest Videos
Follow Us:
Download App:
  • android
  • ios