ರಸ್ತೆ ಅಗಲೀಕರಣದಿಂದ ಬಸ್ ಸಂಚಾರ ಮಾರ್ಗ ಬದಲಾಗಿದ್ದು ಮತ್ತು ಲೋಕಲ್ ಬಸ್ ಸೇವೆ ಆರಂಭವಾಗಿರುವುದರಿಂದ ತಮ್ಮ ಜೀವನೋಪಾಯಕ್ಕೆ ತೊಂದರೆಯಾಗಿದೆ ಎಂದು ಆಟೋ ಚಾಲಕರು ಆರೋಪಿಸಿದ್ದಾರೆ. ಈ ಹಿನ್ನೆಲೆಯಲ್ಲಿ, ಲೋಕಲ್ ಬಸ್ ಸಂಚಾರವನ್ನು ರದ್ದುಗೊಳಿಸಿ, ಎಲ್ಲಾ ಬಸ್‌ಗಳನ್ನು ಬಸ್ ನಿಲ್ದಾಣದ ಮೂಲಕವೇ ಓಡಾಟ ನಡೆಸುವಂತೆ ವ್ಯವಸ್ಥೆ ಕಲ್ಪಿಸಬೇಕೆಂದು ಶಾಸಕರಿಗೆ ಮನವಿ ಸಲ್ಲಿಸಿದ್ದಾರೆ.
ಹಾವೇರಿ: ಬ್ಯಾಡಗಿ ಪಟ್ಟಣದಲ್ಲಿ ರಸ್ತೆ ಅಗಲೀಕರಣ ಕಾಮಗಾರಿಯಿಂದ ಉಂಟಾಗಿರುವ ಬಸ್ ಸಂಚಾರ ಬದಲಾವಣೆ ಹಾಗೂ ಲೋಕಲ್ ಬಸ್ ಸಂಚಾರದಿಂದ ಆಟೋ ಚಾಲಕರ ಬದುಕು ಬೀದಿಗೆ ಬಂದಿದ್ದು, ಲೋಕಲ್ ಬಸ್ ಸಂಚಾರ ರದ್ದು ಮಾಡುವಂತೆ ಆಗ್ರಹಿಸಿ ನೆಹರು ಆಟೋ ಚಾಲಕ ಹಾಗೂ ಮಾಲೀಕರ ಸಂಘದ ಪದಾಧಿಕಾರಿಗಳು ಶಾಸಕ ಬಸವರಾಜ ಶಿವಣ್ಣನವರ ಹಾಗೂ ಮಾಜಿ ಶಾಸಕ ಸುರೇಶಗೌಡ ಪಾಟೀಲ ಅವರಿಗೆ ಮನವಿ ಸಲ್ಲಿಸಿದರು.
ಈ ವೇಳೆ ಮಾತನಾಡಿದ ಆಟೋ ಚಾಲಕ ಗಣೇಶ ವಡ್ಡರ, ರಸ್ತೆ ಅಗಲೀಕರಣ ಕಾಮಗಾರಿ ಹಿನ್ನೆಲೆಯಲ್ಲಿ ಅನೇಕ ಬಸ್‌ಗಳು ಬಸ್ ನಿಲ್ದಾಣಕ್ಕೆ ಬಾರದೆಯೇ ವಿವಿಧ ಮಾರ್ಗಗಳಲ್ಲಿ ಸಂಚರಿಸುತ್ತಿವೆ. ಹಾವೇರಿ ಮಾರ್ಗದ ಬಸ್‌ಗಳು ಹಳೇ ಪೊಲೀಸ್ ಠಾಣೆ ಮಾರ್ಗವಾಗಿ, ರಾಣಿಬೆನ್ನೂರು ಮಾರ್ಗದ ಬಸ್‌ಗಳು ದರ್ಗಾ ಸರ್ಕಲ್ ಮೂಲಕ ಹಾಗೂ ಹಿರೇಕೆರೂರು ಮಾರ್ಗದ ಬಸ್‌ಗಳು ಗುಮ್ಮನಹಳ್ಳಿ ಸಮೀಪದಿಂದ ಸಂಚರಿಸುತ್ತಿರುವುದರಿಂದ ಪ್ರಯಾಣಿಕರು ಮತ್ತು ಆಟೋ ಚಾಲಕರಿಗೆ ಗೊಂದಲ ಉಂಟಾಗುತ್ತಿದೆ.
ಸರಿಯಾದ ಬಸ್ ನಿಲುಗಡೆ ವ್ಯವಸ್ಥೆ ಇಲ್ಲದ ಕಾರಣ ಪ್ರಯಾಣಿಕರು ಹಾಗೂ ಆಟೋ ಚಾಲಕರ ನಡುವೆ ಬಾಡಿಗೆ ವಿಚಾರವಾಗಿ ಮನಸ್ತಾಪಗಳು ಹೆಚ್ಚಾಗುತ್ತಿವೆ. ಆಟೋ ಚಾಲನೆಯೇ ಜೀವನೋಪಾಯದ ಪ್ರಮುಖ ಆಧಾರವಾಗಿರುವುದರಿಂದ ನೂರಾರು ಕುಟುಂಬಗಳು ಸಂಕಷ್ಟಕ್ಕೆ ಸಿಲುಕಿವೆ. ಆದ್ದರಿಂದ ಪೋಸ್ಟ್ ಆಫೀಸ್ ಮಾರ್ಗದ ಮೂಲಕ ಬಸ್‌ಗಳನ್ನು ಬಸ್ ನಿಲ್ದಾಣಕ್ಕೆ ಕರೆತಂದು ಅಲ್ಲಿಂದ ಆಯಾ ಮಾರ್ಗಗಳಿಗೆ ತೆರಳುವಂತೆ ವ್ಯವಸ್ಥೆ ಕಲ್ಪಿಸಬೇಕು ಎಂದು ಆಗ್ರಹಿಸಿದರು.
ಲೋಕಲ್ ಬಸ್ ರದ್ದು ಮಾಡಿ
ಮಾರುತಿ ಒಳಗುಂದಿ ಮಾತನಾಡಿ, ಮೋಟೆಬೆನ್ನೂರು ಮಾರ್ಗವಾಗಿ ರೈಲ್ವೆ ನಿಲ್ದಾಣ, ಹಳೇ ಪೊಲೀ ಸ್ ಠಾಣೆ, ಸುಭಾಷ್ ಸರ್ಕಲ್, ದರ್ಗಾ ಸರ್ಕಲ್, ಕಲಾಭವನ, ಗುಮ್ಮನಹಳ್ಳಿ ರಸ್ತೆ ಹಾಗೂ ಅಗಸನಹಳ್ಳಿ ಮಾರ್ಗವಾಗಿ ಶಿಡೇನೂರಿಗೆ ಸಂಚರಿಸುತ್ತಿರುವ ಲೋಕಲ್ ಬಸ್ ಸೇವೆಯಿಂದ ಆಟೋ ಚಾಲಕರಿಗೆ ಬಾಡಿಗೆ ಸಿಗದಂತಾಗಿದೆ. ಇದರಿಂದ ದಿನನಿತ್ಯದ ಜೀವನ ನಿರ್ವಹಣೆ ಕಷ್ಟಕರವಾಗಿದ್ದು, ಕುಟುಂಬ ನಿರ್ವಹಣೆ, ಮಕ್ಕಳ ಶಿಕ್ಷಣ ಹಾಗೂ ಇತರೆ ಖರ್ಚುಗಳನ್ನು ಭರಿಸುವುದು ದುಸ್ತರವಾಗಿದೆ. ಆದ್ದರಿಂದ ಆಟೋ ಚಾಲಕರ ಹಿತದೃಷ್ಟಿಯಿಂದ ಬಸ್ ನಿಲ್ದಾಣಕ್ಕೆ ಬಸ್‌ಗಳ ಸಂಚಾರವನ್ನು ಪುನಃ ಆರಂಭಿಸಬೇಕು ಹಾಗೂ ಲೋಕಲ್ ಬಸ್ ಸೇವೆಯನ್ನು ಕೂಡಲೇ ರದ್ದು ಮಾಡುವಂತೆ ಆಗ್ರಹಿಸಿದರು. ಈ ವೇಳೆ ಪ್ರಕಾಶ ಬೇನಾಳ, ಪ್ರವೀಣ ಬಂಡಿವಡ್ಡರ, ನಾಗರಾಜ ಕಳ್ಯಾಣಿ, ಕುಮಾರ ಹಿರೇಮಠ, ಕುಮಾರ ಗಾಂಧಿನಗರ, ರಾಜಕುಮಾರ ಯಾದವಾಡ, ಹಸನಸಾಬ್, ಬಸಣ್ಣ ಸೇರಿದಂತೆ ಹಲವರು ಉಪಸ್ಥಿತರಿದ್ದರು.


