ಮಂಗಳೂರು-ಮುಂಬೈ ನಡುವೆ ಸಂಚರಿಸುವ ಮತ್ಸ್ಯಗಂಧ ಎಕ್ಸ್‌ಪ್ರೆಸ್ ರೈಲನ್ನು ಸೂಪರ್‌ಫಾಸ್ಟ್‌ನಿಂದ ಸಾಮಾನ್ಯ ಎಕ್ಸ್‌ಪ್ರೆಸ್ ವಿಭಾಗಕ್ಕೆ ಇಳಿಸಲಾಗಿದೆ. ಇದರಿಂದ ಜನವರಿ 6 ರಿಂದ ಪ್ರಯಾಣಿಕರಿಗೆ ಟಿಕೆಟ್ ದರದಲ್ಲಿ ₹15 ರಿಂದ ₹45 ರವರೆಗೆ ಉಳಿತಾಯವಾಗಲಿದೆ. ಜೊತೆಗೆ ರೈಲಿನ ಸಂಖ್ಯೆಯೂ ಬದಲಾಗಲಿದೆ.

ಮಂಗಳೂರು (ನ.7): ಕರಾವಳಿ ಭಾಗದ ಪ್ರಮುಖ ರೈಲು ಸೇವೆಯಾದ ಮಂಗಳೂರು ಸೆಂಟ್ರಲ್ - ಮುಂಬೈ ಎಲ್‌ಟಿಟಿ (ಮಂಗಳೂರು ಸೆಂಟ್ರಲ್-ಮುಂಬೈ ಲೋಕಮಾನ್ಯ ತಿಲಕ್ ಟರ್ಮಿನಸ್) ನಡುವೆ ಸಂಚರಿಸುವ 'ಮತ್ಸ್ಯಗಂಧ ಎಕ್ಸ್‌ಪ್ರೆಸ್' ರೈಲನ್ನು ಸೂಪರ್‌ಫಾಸ್ಟ್ ವಿಭಾಗದಿಂದ ಸಾಮಾನ್ಯ ಮೇಲ್/ಎಕ್ಸ್‌ಪ್ರೆಸ್ ವಿಭಾಗಕ್ಕೆ ಶ್ರೇಣಿ ಕಡಿತಗೊಳಿಸಿ (Downgrade) ಭಾರತೀಯ ರೈಲ್ವೆ ಆದೇಶಿಸಿದೆ: ಈ ನೂತನ ಆದೇಶವು ಮುಂಬರುವ ಜನವರಿ 6 ರಿಂದ ಜಾರಿಗೆ ಬರಲಿದ್ದು, ಇದರಿಂದಾಗಿ ಪ್ರಯಾಣಿಕರು ಪ್ರತಿ ಟಿಕೆಟ್ ಮೇಲೆ ₹15 ರಿಂದ ₹45 ರವರೆಗೆ ಕಡಿಮೆ ದರ ಪಾವತಿಸಲಿದ್ದಾರೆ.

ಮಂಗಳೂರು ಸೆಂಟ್ರಲ್ ಹಾಗೂ ಮುಂಬೈ ನಡುವೆ ಸಂಚರಿಸುವ ಮತ್ಸ್ಯಗಂಧ ಎಕ್ಸ್‌ಪ್ರೆಸ್ ರೈಲು ನಿಗದಿತ ಗಂಟೆಗೆ 55 ಕಿಲೋಮೀಟರ್‌ಗಳ ಸರಾಸರಿ ವೇಗವನ್ನು ಕಾಯ್ದುಕೊಳ್ಳಲು ವಿಫಲವಾಗಿದ್ದರೂ, ರೈಲ್ವೆ ಇಲಾಖೆಯು ಸೂಪರ್‌ಫಾಸ್ಟ್ ಹೆಸರಿನಲ್ಲಿ ಪ್ರಯಾಣಿಕರಿಂದ ಹೆಚ್ಚುವರಿ ಶುಲ್ಕ ವಸೂಲಿ ಮಾಡುತ್ತಿದೆ ಎಂದು ಪ್ರಯಾಣಿಕರು ಹಾಗೂ ರೈಲು ಹಿತರಕ್ಷಣಾ ಸಂಘಟನೆಗಳು ನಿರಂತರವಾಗಿ ಪ್ರಶ್ನಿಸುತ್ತಿದ್ದವು. ಈ ಹೋರಾಟಕ್ಕೆ ಇದೀಗ ಫಲ ಸಿಕ್ಕಿದೆ.

ಶ್ರೇಣಿ ಕಡಿತಕ್ಕೆ ಕಾರಣವೇನು? ವೇಗದ ಲೆಕ್ಕಾಚಾರ

ರೈಲ್ವೆ ನಿಯಮಾವಳಿಗಳ ಪ್ರಕಾರ, ರೈಲೊಂದನ್ನು 'ಸೂಪರ್‌ಫಾಸ್ಟ್ ಎಕ್ಸ್‌ಪ್ರೆಸ್' ಎಂದು ಪರಿಗಣಿಸಲು ಅದು ಗಂಟೆಗೆ ಕನಿಷ್ಠ 55 ಕಿ.ಮೀ ಸರಾಸರಿ ವೇಗವನ್ನು ಹೊಂದಿರಬೇಕು. ಆದರೆ ಮತ್ಸ್ಯಗಂಧ ಎಕ್ಸ್‌ಪ್ರೆಸ್‌ನ ಲೆಕ್ಕಾಚಾರ ಹೀಗಿದೆ: ರೈಲು ಸಂಖ್ಯೆ 12619 (ಮುಂಬೈ LTT - ಮಂಗಳೂರು ಸೆಂಟ್ರಲ್) ಮುಂಗಾರು ರಹಿತ (Non-monsoon) ವೇಳಾಪಟ್ಟಿಯಲ್ಲಿ ಗಂಟೆಗೆ 53 ಕಿ.ಮೀ ಸರಾಸರಿ ವೇಗ ಹೊಂದಿದೆ. ರೈಲು ಸಂಖ್ಯೆ 12620 (ಮಂಗಳೂರು ಸೆಂಟ್ರಲ್ - ಮುಂಬೈ LTT) ಮುಂಗಾರು ರಹಿತ ವೇಳಾಪಟ್ಟಿಯಲ್ಲಿ ಗಂಟೆಗೆ 54 ಕಿ.ಮೀ ಸರಾಸರಿ ವೇಗ ಹೊಂದಿದೆ. ಮಳೆಗಾಲದ ವೇಳಾಪಟ್ಟಿಯಲ್ಲಿ (Monsoon Timetable) ಇವೆರಡೂ ರೈಲುಗಳ ಸರಾಸರಿ ವೇಗ ಅನುಕ್ರಮವಾಗಿ ಗಂಟೆಗೆ 50 ಕಿ.ಮೀ ಮತ್ತು 52 ಕಿ.ಮೀ ಗೆ ಕುಸಿಯುತ್ತದೆ. ಹೀಗಾಗಿ ಸರಾಸರಿ ವೇಗದ ಮಾನದಂಡ ತಲುಪದಿದ್ದರೂ ಸೂಪರ್‌ಫಾಸ್ಟ್ ಹೆಚ್ಚುವರಿ ಶುಲ್ಕವನ್ನು ಮೂಲ ದರದ ಜೊತೆ ವಿಧಿಸಲಾಗುತ್ತಿತ್ತು. ಇದನ್ನು ತೆರವುಗೊಳಿಸುವಂತೆ ಪ್ರಯಾಣಿಕರ ಸಂಘಟನೆಗಳು ತೀವ್ರವಾಗಿ ಒತ್ತಾಯಿಸಿದ್ದವು.

ಪ್ರಯಾಣಿಕರಿಗೆ ಸಿಗಲಿದೆ ದರ ವಿನಾಯಿತಿ (Superfast Charges Saved)

ಸಾಮಾನ್ಯವಾಗಿ ಭಾರತೀಯ ರೈಲ್ವೆಯು ಸೂಪರ್‌ಫಾಸ್ಟ್ ರೈಲುಗಳಿಗೆ ಮೂಲ ದರದ ಜೊತೆಗೆ ಹೆಚ್ಚುವರಿಯಾಗಿ ಜನರಲ್ ಸೆಕೆಂಡ್ ಕ್ಲಾಸ್‌ಗೆ ₹15, ಸ್ಲೀಪರ್ ಕ್ಲಾಸ್‌ಗೆ (Sleeper) ₹30, 3 ಟೈರ್ ಎಸಿ/ಎಕಾನಮಿ ಮತ್ತು 2-ಟೈರ್ ಎಸಿ ಕ್ಲಾದ್‌ಗೆ ₹45 ಮತ್ತು ಫಸ್ಟ್ ಎಸಿ (1st AC) ಕ್ಲಾಸ್‌ಗೆ ₹75 ಹೆಚ್ಚುವರಿ ಶುಲ್ಕ ವಿಧಿಸುತ್ತದೆ. ಜನವರಿ 6 ರಿಂದ ಮತ್ಸ್ಯಗಂಧ ರೈಲಿನ ಸೂಪರ್‌ಫಾಸ್ಟ್ ಟ್ಯಾಗ್ ರದ್ದಾಗುತ್ತಿರುವುದರಿಂದ ಪ್ರಯಾಣಿಕರು ಈ ಹೆಚ್ಚುವರಿ ಶುಲ್ಕದಿಂದ ವಿನಾಯಿತಿ ಪಡೆಯಲಿದ್ದಾರೆ.

ರೈಲು ಸಂಖ್ಯೆ ಬದಲಾವಣೆ ಮತ್ತು ನೆಟ್‌ವರ್ಕ್ ವಿವರ

ನೈಋತ್ಯ ರೈಲ್ವೆ (SWR) ಹೊರಡಿಸಿರುವ ಪ್ರಕಟಣೆಯ ಪ್ರಕಾರ, ಜನವರಿ 6 ರಿಂದ ಜಾರಿಗೆ ಬರುವಂತೆ ರೈಲು ಸಂಖ್ಯೆ 12619/12620 ಅನ್ನು ರದ್ದುಗೊಳಿಸಿ, ನೂತನ ರೈಲು ಸಂಖ್ಯೆ 16369/16370 ಎಂದು ಮರುನಾಮಕರಣ ಮಾಡಲಾಗುತ್ತದೆ. ಈ ರೈಲು ದಕ್ಷಿಣ ರೈಲ್ವೆಯ ತಿರುವನಂತಪುರಂ ವಿಭಾಗದ ಒಡೆತನದಲ್ಲೇ ಮುಂದುವರಿಯಲಿದೆ. ಏಕೆಂದರೆ ಈ ರೈಲು, ತಿರುವನಂತಪುರಂ ಸೆಂಟ್ರಲ್ - ಮಂಗಳೂರು ಸೆಂಟ್ರಲ್ - ತಿರುವನಂತಪುರಂ ಎಕ್ಸ್‌ಪ್ರೆಸ್ (ರೈಲು ಸಂಖ್ಯೆ 16347/16348) ಜೊತೆಗೆ ರೇಕ್ ಶೇರಿಂಗ್ (Rake Sharing) ವ್ಯವಸ್ಥೆಯನ್ನು ಹೊಂದಿದೆ.

ಗರೀಬ್ ರಥ್ ಎಕ್ಸ್‌ಪ್ರೆಸ್ ಸಂಖ್ಯೆ ಬದಲಾವಣೆ ದಿನಾಂಕ ಮಾರ್ಪಾಡು

ಇದೇ ಪ್ರಕಟಣೆಯಲ್ಲಿ ರೈಲ್ವೆ ಇಲಾಖೆಯು ಮತ್ತೊಂದು ಪ್ರಮುಖ ಮಾಹಿತಿಯನ್ನು ಹಂಚಿಕೊಂಡಿದೆ. ಮುಂಬೈ LTT - ತಿರುವನಂತಪುರಂ ನಾರ್ತ್ - ಮುಂಬೈ LTT ನಡುವೆ ಸಂಚರಿಸುವ ವಾರಕ್ಕೊಮ್ಮೆಯ ಗರೀಬ್ ರಥ್ ಎಕ್ಸ್‌ಪ್ರೆಸ್ (ರೈಲು ಸಂಖ್ಯೆ 12201) ಅನ್ನು ನೂತನ ರೈಲು ಸಂಖ್ಯೆ 16371 ಎಂದು ಬದಲಾಯಿಸಲಾಗುತ್ತಿದ್ದು, ಈ ಹಿಂದೆ ಜನವರಿ 1 ರಿಂದ ಜಾರಿಗೆ ಬರಲಿದೆ ಎಂದು ಪ್ರಕಟಿಸಲಾಗಿತ್ತು. ಆದರೆ, ಈ ಬದಲಾವಣೆಯು ಇದೀಗ ಜನವರಿ 4 ರಿಂದ ಜಾರಿಗೆ ಬರಲಿದೆ ಎಂದು ನೈಋತ್ಯ ರೈಲ್ವೆ ಪತ್ರಿಕಾ ಪ್ರಕಟಣೆಯಲ್ಲಿ ಸ್ಪಷ್ಟಪಡಿಸಿದೆ.