ಹಾಸನ ಜಿಲ್ಲಾಧಿಕಾರಿ ಲತಾಕುಮಾರಿ ಅವರು ಎಚ್.ಡಿ.ಕುಮಾರಸ್ವಾಮಿ ಮಾಡಿರುವ ಲಂಚದ ಆರೋಪಗಳನ್ನು ಸಂಪೂರ್ಣವಾಗಿ ತಳ್ಳಿಹಾಕಿದ್ದಾರೆ. ವಾಟ್ಸ್‌ಆ್ಯಪ್‌ ಚಾಟ್‌ಗಳು ನಕಲಿಯಾಗಿದ್ದು, ಈ ಬಗ್ಗೆ ಸೈಬರ್ ಕ್ರೈಂ ಮತ್ತು ಪೊಲೀಸ್ ತನಿಖೆ ನಡೆಸುವಂತೆ ಅವರು ಆಗ್ರಹಿಸಿದ್ದಾರೆ.

ಹಾಸನ: ತಮ್ಮ ವಿರುದ್ಧದ ಲಂಚದ ಆರೋಪಗಳನ್ನು ಸಾರಾಸಗಟಾಗಿ ತಿರಸ್ಕರಿಸಿರುವ ಹಾಸನ ಜಿಲ್ಲಾಧಿಕಾರಿ ಲತಾಕುಮಾರಿಯವರು ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿಯವರು ತಮ್ಮ ಹಾಗೂ ತಮ್ಮ ಕಚೇರಿಯ ವಿರುದ್ಧ ಮಾಡಿದ ಲಂಚದ ಆರೋಪಗಳು ಸುಳ್ಳು ಎಂದು ಸ್ಪಷ್ಟಪಡಿಸಿದ್ದಾರೆ.

ಲಂಚದ ಆರೋಪಗಳು ಸಂಪೂರ್ಣ ಸುಳ್ಳು

ಹಾಸನದಲ್ಲೇ ಉಳಿದುಕೊಳ್ಳಲು ಜಿಲ್ಲಾಧಿಕಾರಿ ಲತಾಕುಮಾರಿಯವರು ಜಿಲ್ಲಾ ಉಸ್ತುವಾರಿ ಸಚಿವ ಶಿವಲಿಂಗೇಗೌಡರಿಗೆ 75 ಲಕ್ಷ ರು.ಲಂಚ ನೀಡಿದ್ದಾರೆ ಎಂದು ಕುಮಾರಸ್ವಾಮಿಯವರು ಗಂಭೀರ ಆರೋಪ ಮಾಡಿದ್ದರು. ಅಲ್ಲದೆ, ತಮ್ಮ ಆರೋಪಗಳಿಗೆ ಸಂಬಂಧಿಸಿದಂತೆ ಜಿಲ್ಲಾಧಿಕಾರಿಯವರ ಆಪ್ತ ಸಹಾಯಕರ ವಾಟ್ಸ್‌ಆ್ಯಪ್‌ ಚಾಟ್‌ಗಳನ್ನು ಬಹಿರಂಗಗೊಳಿಸಿದ್ದರು. ಎಚ್ಡಿಕೆಯವರ ಈ ಆರೋಪಗಳಿಗೆ ಸ್ಪಷ್ಟನೆ ನೀಡಿದ ಜಿಲ್ಲಾಧಿಕಾರಿ, ತಮ್ಮ ವಿರುದ್ಧ ಮಾಡಿರುವ ಲಂಚದ ಆರೋಪಗಳು ಸಂಪೂರ್ಣ ಸುಳ್ಳು. ವಾಟ್ಸ್‌ಆ್ಯಪ್‌ ಚಾಟ್‌ಗಳ ಸತ್ಯಾಸತ್ಯತೆ ಕುರಿತು ತನಿಖೆಯಾಗಲಿ. ಚಾಟ್‌ಗಳನ್ನು ಎಡಿಟ್ ಮಾಡಲಾಗಿದೆ ಎಂದು ನಮ್ಮ ಪಿಎ ಹೇಳುತ್ತಿದ್ದಾರೆ. ಈ ವಿಚಾರವನ್ನು ಮುಖ್ಯ ಕಾರ್ಯದರ್ಶಿಗಳ ಗಮನಕ್ಕೂ ತರುತ್ತೇನೆ. ಅಲ್ಲದೆ, ಈ ಬಗ್ಗೆ ಪೊಲೀಸ್‌ ಹಾಗೂ ಸೈಬರ್‌ ಕ್ರೈಂ ವಿಭಾಗಕ್ಕೂ ದೂರು ನೀಡುತ್ತೇನೆ ಎಂದರು.

ಪ್ರತಿ ಪ್ರೆಸ್ ಮೀಟ್‌ನಲ್ಲೂ ಒಂದೊಂದು ಸುಳ್ಳು ಆರೋಪ ಕೇಳುತ್ತೇವೆ. ಅದು ಸುಳ್ಳು ಎಂದು ನಮಗೆ ಗೊತ್ತಿರುವುದರಿಂದ ಧೈರ್ಯವಾಗಿ ಎದುರಿಸುತ್ತೇವೆ ಎಂದು ಹೇಳಿದರು.

ತನಿಖೆ ಆಗಬೇಕು?

ಕ್ರಷರ್ ವಿಷಯ ಕುರಿತು ಪ್ರತಿಕ್ರಿಯಿಸಿ, ಆ ಚಾಟ್ ಅನ್ನು ಯಾರು ಮಾಡಿದ್ದಾರೆ ಮತ್ತು ಯಾರ, ಯಾರ ನಡುವೆ ನಡೆದಿದೆ ಎಂಬುದರ ಬಗ್ಗೆ ಖಂಡಿತ ತನಿಖೆ ಆಗಬೇಕು. ಅದರಲ್ಲಿರುವ ವಿಷಯಗಳು ಮತ್ತು ಇಬ್ಬರು ಏನು ಮಾತನಾಡಿದ್ದಾರೆ ಎಂಬುದರ ಬಗ್ಗೆಯೂ ತನಿಖೆ ಆಗಬೇಕು. ಯಾವುದೇ ಕಡತಕ್ಕೆ ಹಣದ ಬೇಡಿಕೆ ಇಡುವುದಿಲ್ಲ. ಮೊದಲನೆಯದಾಗಿ ನಾವು ಪಿಎ ಮೂಲಕ ಕಡತಗಳನ್ನು ತರಿಸುವುದಿಲ್ಲ. ಬೇರೆ ಕಚೇರಿಗಳ ಕಡತಗಳನ್ನು ಅಧಿಕಾರಿಗಳೇ ತಂದು ವಿವರಿಸುತ್ತಾರೆ, ನಾವು ಪರಿಶೀಲನೆ ಮಾಡುತ್ತೇವೆ, ಎಲ್ಲವೂ ಸರಿ ಇದ್ದರೆ ಮಾತ್ರ ಅನುಮೋದನೆ ಆಗುತ್ತದೆ ಎಂದು ಅವರು ಹೇಳಿದರು.

ನಿಯಮಬಾಹಿರವಾಗಿ ಯಾವ ಕೆಲಸವೂ ನಡೆಯುವುದಿಲ್ಲ. ಮಾಧ್ಯಮಗಳಿಗೆ ಹೇಳುವ ಮೊದಲು ಎಫ್ಐಆರ್ ದಾಖಲಿಸಿ, ಚಾಟ್‌ನ ಸತ್ಯಾಸತ್ಯತೆಯನ್ನು ಪರಿಶೀಲಿಸಬೇಕಿತ್ತು. ಇಂತಹ ಸುಳ್ಳು ಆರೋಪಗಳನ್ನು ನಾನು ತಿರಸ್ಕರಿಸುತ್ತೇನೆ. ಮಾಧ್ಯಮಗಳ ಮುಂದೆ ಬಂದು ಒಬ್ಬ ಅಧಿಕಾರಿಯನ್ನು ತೇಜೋವಧೆ ಮಾಡುವುದು, ಹಿಂಸಿಸುವುದು ಮತ್ತು ಕೆಲಸ ಮಾಡಲು ಬಿಡದಿರುವುದು ತಪ್ಪು. ಇಂತಹ ಆರೋಪಗಳನ್ನು ಕಾನೂನಾತ್ಮಕವಾಗಿ ಎದುರಿಸಬೇಕಾಗುತ್ತದೆ ಎಂದು ಅವರು ಹೇಳಿದರು.

ಇದನ್ನೂ ಓದಿ: ಶಿವಲಿಂಗೇಗೌಡಗೆ ಹಾಸನ ಜಿಲ್ಲಾಧಿಕಾರಿ 75 ಲಕ್ಷ ರೂಪಾಯಿ ಲಂಚ: ಎಚ್‌ಡಿಕೆ ಗಂಭೀರ ಆರೋಪ