Bagalkote: ಇಡ್ಲಿ ಫ್ರೀ, ಚಟ್ನಿಗಷ್ಟೇ ರೊಕ್ಕ; ಅಜ್ಜನ ವಿಡಿಯೋಗೆ 19 ಲಕ್ಷ ವ್ಯೂವ್
ಬಾಗಲಕೋಟೆಯ ನವನಗರದಲ್ಲಿ ತಮ್ಮ ರುಚಿಯಾದ ಇಡ್ಲಿ ಮತ್ತು ಚಟ್ನಿಯಿಂದ ಫೇಮಸ್ ಆಗಿರುವ ಇಡ್ಲಿ ಅಜ್ಜನ ವಿಡಿಯೋ ಇದೀಗ ವೈರಲ್ ಆಗಿದೆ. ಸೈಕಲ್ನಿಂದ ಟೂ ವ್ಹೀಲರ್ ವರೆಗೂ ಬೆಳೆದ ಇವರ ಶ್ರಮ ಮತ್ತು ಪ್ರೀತಿಯನ್ನು ಸ್ಥಳೀಯರು ತಮ್ಮ ಬಾಲ್ಯದ ನೆನಪುಗಳೊಂದಿಗೆ ಮೆಲುಕು ಹಾಕುತ್ತಿದ್ದಾರೆ.

ಇಡ್ಲಿ ಅಜ್ಜ
ಬಾಗಲಕೋಟೆಯ ನವನಗರ ಭಾಗದ ಜನತೆಗೆ ಈ ಇಡ್ಲಿ ಅಜ್ಜ ಅಂದ್ರೆ ಸಿಕ್ಕಾಪಟ್ಟೆ ಫೇಮಸ್. ನವನಗರದ ಐವತ್ತೂ ಸೆಕ್ಟೆರ್ಗಳಲ್ಲಿಯೂ ಬೆಳಗ್ಗೆ ಇಡ್ಲಿ ಅಜ್ಜನ ಗಾಡಿ ಬರೋದನ್ನು ಜನರು ಕಾಯುತ್ತಿರುತ್ತಾರೆ. ಮನೆಯಲ್ಲಿ ಶುದ್ಧವಾಗಿ ತಯಾರಿಸಿಕೊಂಡು ಬರುವ ಇಡ್ಲಿ ಖರೀದಿಸಲು ಜನರು ದಾರಿ ನೋಡುತ್ತಿರುತ್ತಾರೆ. ಈ ವಿಡಿಯೋ ನೋಡಿದ ನವನಗರದ ನಿವಾಸಿಗಳು ತಮ್ಮ ಬಾಲ್ಯದ ದಿನಗಳನ್ನು ನೆನಪು ಮಾಡಿಕೊಂಡಿದ್ದಾರೆ.
ನವನಗರದ ಇಡ್ಲಿ ಅಜ್ಜನ ವಿಡಿಯೋ ವೈರಲ್
ಸದ್ಯ ಈ ಇಡ್ಲಿ ಅಜ್ಜನವರ ವಿಡಿಯೋವೊಂದು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ. ನವನಗರದ ನಿವಾಸಿಯಾಗಿರೋ ಯುವತಿಯೊಬ್ಬರು ಇಡ್ಲಿ ಖರೀದಿಸುವ ಸಂದರ್ಭದಲ್ಲಿ ವಿಡಿಯೋ ಮಾಡಿಕೊಂಡಿದ್ದಾರೆ. ಇದೇ ವೇಳೆ ತಾವು ಚಿಕ್ಕವರಿದ್ದಾಗ ಸೈಕಲ್ನಲ್ಲಿ ಇಡ್ಲಿ ತೆಗೆದುಕೊಂಡು ಬರುತ್ತಿರೋದನ್ನು ನೆನಪಿಸಿಕೊಂಡಿದ್ದಾರೆ. ಈ ವಿಡಿಯೋ ಇಲ್ಲಿವರೆಗೆ 1.9 ಮಿಲಿಯನ್ಗೂ ಅಧಿಕ ವ್ಯೂವ್ ಪಡೆದುಕೊಂಡಿದೆ.
ಇಡ್ಲಿ, ವಡಾ ಮತ್ತು ಚಟ್ನಿ
ಈ ಹಿಂದೆ ಸೈಕಲ್ನಲ್ಲಿ ಬರುತ್ತಿದ್ದೆ. ಇಡ್ಲಿ ವ್ಯಾಪಾರದಲ್ಲಿಯೇ ಎರಡು ಸೈಕಲ್ ಹೋಯ್ತು. ನಂತರ ಒಂದು ಗಾಡಿಯೂ ಹೋಯ್ತು. ಇದು ನನ್ನ ನಾಲ್ಕನೇ ಟೂ ವ್ಹೀಲರ್. ನಮ್ಮ ಚಟ್ನಿಗೆ ನೀವು ಹಣ ಕೊಡಬೇಕು. ನಮ್ಮ ಚಟ್ನಿ ಅಷ್ಟು ರುಚಿಯಾಗಿರುತ್ತದೆ ಎಂದು ಇಡ್ಲಿ ಅಜ್ಜ ಹೇಳಿದ್ದಾರೆ. ರತ್ನಾ ಮೇಟಿ (nagaratna_vlogs_bgk) ಎಂಬವರು ತಮ್ಮ ಇನ್ಸ್ಟಾಗ್ರಾಂನಲ್ಲಿ ಈ ವಿಡಿಯೋ ಶೇರ್ ಮಾಡಿಕೊಂಡಿದ್ದಾರೆ.
ಈ ಇಡ್ಲಿ ಅಜ್ಜ ತುಂಬಾನೇ ಶ್ರಮಜೀವಿ
ಈ ವಿಡಿಯೋಗೆ ಕಮೆಂಟ್ ಮಾಡಿರುವ ಸಂತು ಪವಾರ್ ಎಂಬವರು, ನ್ಯವಾದಗಳು ಮೇಡಂ ಪರಿಚಯಿಸಿದಕ್ಕ,ನಮ್ಮ ಮನೇಲಿ ಇರೋರು ಶ್ರಮ ಜೀವಿ ಅಂದ್ರೆ ಈ ನಮ್ಮ ಹೆಮ್ಮೆಯ ಕಾಕಾ (ಚಿಕ್ಕಪ್ಪ) ಎಂದಿದ್ದಾರೆ. ಇದೇ ವಿಡಿಯೋಗೆ ಪ್ರತಿಕ್ರಿಯಿಸಿರುವ ಮಗಳು ವಿಜ್ಜು ಪವಾರ್ ಗಾಯ್ಕವಾಡ್, ಇವರು ನಮ್ಮ ತಂದೆ ತುಂಬಾನೇ ಶ್ರಮಜೀವಿ ಎಂದು ಹೇಳಿಕೊಂಡಿದ್ದಾರೆ.
ಕೆಲವು ರುಚಿ, ನೆನಪು ಮತ್ತು ವ್ಯಕ್ತಿಗಳು ಹೃದಯದಲ್ಲಿ ಶಾಶ್ವತ
ಅಶ್ವಿನಿ (Ashwinii Vibhute - ashwinivibhute27) ಎಂಬವರು ಸಹ ಈ ವಿಡಿಯೋಗೆ ಪ್ರತಿಕ್ರಿಯಿಸಿದ್ದು, ಹೃದಯಕ್ಕೆ ಹತ್ತಿರವಾದ ಸುಂದರ ವಿಡಿಯೋ ಶೇರ್ ಮಾಡಿದ್ದಕ್ಕೆ ಧನ್ಯವಾದಗಳು. ಬಾಲ್ಯದಲ್ಲಿ ತಿಂದ ಇಡ್ಲಿ, ವಡಾ ಮತ್ತು ಚಟ್ನಿಯ ರುಚಿ ನನಗೆ ಇನ್ನೂ ನೆನಪಿನಲ್ಲಿದೆ. ಅಂಕಲ್ ನೀವು ನಮಗೆ ತೋರಿಸುತ್ತಿದ್ದ ಪ್ರೀತಿಯಿಂದಾಗಿ ಇವುಗಳು ನಮ್ಮ ಜೀವನದ ಸುಂದರ ಅನುಭವಗಳಾಗಿವೆ. ಕೆಲವು ರುಚಿ, ನೆನಪು ಮತ್ತು ವ್ಯಕ್ತಿಗಳು ಹೃದಯದಲ್ಲಿ ಶಾಶ್ವತವಾಗಿ ಉಳಿಯುತ್ತಾರೆ ಎಂದು ಹೇಳಿದ್ದಾರೆ.
ಇದನ್ನೂ ಓದಿ: ಬಾಗಲಕೋಟೆ ಜಿಲ್ಲೆಯ ಈ ಊರಿನ ಜನ್ರು ಪುಣ್ಯಾ ಮಾಡ್ರಿ; ಪುರಿ,ಇಡ್ಲಿ ಏನೇ ತೊಗೊಂಡ್ರು 12 ರೂ ಅಷ್ಟೇ ನೋಡ್ರಿ













