Asianet Suvarna News Asianet Suvarna News

Tumakur : ತೆರಿಗೆ ಅಧಿಕಾರಿಗಳಿಂದ ರೈತರಿಗೆ ಕಿರುಕುಳ

ಗುಬ್ಬಿ ತಾಲೂಕಿನ ರೈತರು ಬೆಳೆದ ಅಡಿಕೆ ಬೆಳೆಯನ್ನು ಶಿವಮೊಗ್ಗದ ಅಡಿಕೆ ಮಂಡಿಗೆ ಮಾರಾಟ ಮಾಡಲು ತೆಗೆದುಕೊಂಡು ಹೋಗುವಾಗ, ವಾಣಿಜ್ಯ ತೆರಿಗೆ ಇಲಾಖೆಯ ಅಧಿಕಾರಿಗಳು 150 ಚೀಲ ಅಡಿಕೆ ಮೂಟೆಯಿದ್ದ ಲಾರಿಯನ್ನು ವಶಪಡಿಸಿಕೊಂಡು 40 ಲಕ್ಷ ರು. ದಂಡ ವಿಧಿಸಿದ್ದಾರೆ. ಇದರಿಂದ ರೈತರಿಗೆ ಕಿರುಕುಳ ನೀಡುತ್ತಿದ್ದಾರೆ ಎಂದು ರೈತ ಸಂಘದ ರಾಜ್ಯಾಧ್ಯಕ್ಷ ಲಕ್ಷ್ಮೀನಾರಾಯಣಗೌಡ ಆರೋಪಿಸಿದರು.

Harassment of farmers by tax officials snr
Author
First Published Oct 10, 2023, 6:49 AM IST

  ತುಮಕೂರು :  ಗುಬ್ಬಿ ತಾಲೂಕಿನ ರೈತರು ಬೆಳೆದ ಅಡಿಕೆ ಬೆಳೆಯನ್ನು ಶಿವಮೊಗ್ಗದ ಅಡಿಕೆ ಮಂಡಿಗೆ ಮಾರಾಟ ಮಾಡಲು ತೆಗೆದುಕೊಂಡು ಹೋಗುವಾಗ, ವಾಣಿಜ್ಯ ತೆರಿಗೆ ಇಲಾಖೆಯ ಅಧಿಕಾರಿಗಳು 150 ಚೀಲ ಅಡಿಕೆ ಮೂಟೆಯಿದ್ದ ಲಾರಿಯನ್ನು ವಶಪಡಿಸಿಕೊಂಡು 40 ಲಕ್ಷ ರು. ದಂಡ ವಿಧಿಸಿದ್ದಾರೆ. ಇದರಿಂದ ರೈತರಿಗೆ ಕಿರುಕುಳ ನೀಡುತ್ತಿದ್ದಾರೆ ಎಂದು ರೈತ ಸಂಘದ ರಾಜ್ಯಾಧ್ಯಕ್ಷ ಲಕ್ಷ್ಮೀನಾರಾಯಣಗೌಡ ಆರೋಪಿಸಿದರು.

ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ವಶಪಡಿಸಿಕೊಂಡಿರುವ ಅಡಿಕೆ ಸಹಿತ ವಾಹನವನ್ನು ಕೂಡಲೇ ಬಿಡುಗಡೆ ಮಾಡಬೇಕು. ಹಾಗೆಯೇ ರೈತರಿಗಾಗಿರುವ ನಷ್ಟವನ್ನು ಭರಿಸಬೇಕೆಂದು ಎಂದು ಆಗ್ರಹಿಸಿದರು.

ಕೆಲವು ದಿನಗಳ ಹಿಂದೆ ಗುಬ್ಬಿ ತಾಲೂಕಿನ ವಿವಿಧ ಭಾಗಗಳಿಂದ ರೈತರು ಬೆಳೆದ ಅಡಿಕೆಯನ್ನು ಲಾರಿಯಲ್ಲಿ ತುಂಬಿ ಶಿವಮೊಗ್ಗದ ಮಾರುಕಟ್ಟೆಗೆ ಸಾಗಿಸುವ ವೇಳೆ ತಿಪಟೂರಿನಲ್ಲಿ ಪೊಲೀಸ್ ತಂಡದೊಂದಿಗೆ ವಾಣಿಜ್ಯ ತೆರಿಗೆ ಇಲಾಖೆಯ ಅಧಿಕಾರಿಗಳು ವಾಹನವನ್ನು ವಶಪಡಿಸಿಕೊಂಡಿದ್ದರು. ಅಲ್ಲದೆ, ಲಾರಿಯಲ್ಲಿರುವುದು ವ್ಯಾಪಾರಿಗಳಿಗೆ ಸೇರಿದ ಅಡಿಕೆ ಎಂದು ನಲವತ್ತು ಲಕ್ಷ ರು.ದಂಡ ವಿಧಿಸಿದ್ದಾರೆ.

ರೈತರು ಪೂರಕವಾದ ದಾಖಲೆಗಳನ್ನು ನೀಡಿ ಪರಿಪರಿಯಾಗಿ ಕೇಳಿಕೊಂಡರೂ ಯಾವುದೇ ಪ್ರಯೋಜನವಾಗಿಲ್ಲ. ಅಧಿಕಾರಿಗಳ ಈ ಕ್ರಮವನ್ನು ಖಂಡಿಸಿ ತಿಪಟೂರು ವಾಣಿಜ್ಯ ತೆರಿಗೆ ಇಲಾಖೆಯ ಕಚೇರಿ ಎದುರಿಗೆ ರೈತರು ಪ್ರತಿಭಟನೆಗೆ ಮುಂದಾದಾಗ, ವಾಣಿಜ್ಯ ತೆರಿಗೆ ಇಲಾಖೆಯ ನಿರ್ದೇಶಕರು ಸ್ಥಳಕ್ಕೆ ಧಾವಿಸಿ ಅಕ್ಟೋಬರ್ 7 ರೊಳಗೆ ಅಗತ್ಯ ಕ್ರಮ ಕೈಗೊಳ್ಳುವ ಭರವಸೆ ನೀಡಿದ್ದರು. ಈಗ ಅಧಿಕಾರಿಗಳ ಮಾತು ನಂಬಿ ವರ್ತಕರ ಅಡಿಕೆ ಎಂದು ಹಿಂಬರಹ ನೀಡಿ ಮಾತು ಬದಲಿಸಿದ್ದಾರೆಂದು ಆಕ್ರೋಶ ವ್ಯಕ್ತಪಡಿಸಿದರು.

ವಾಣಿಜ್ಯ ತೆರಿಗೆ ಇಲಾಖೆಯ ಅಧಿಕಾರಿಗಳು, ಕೆಲ ವ್ಯಾಪಾರಸ್ಥರು ಮತ್ತು ಟ್ರಾನ್ಸ್ ಪೋರ್ಟ್ ಕಂಪನಿಗಳ ಮಾಲೀಕರೊಂದಿಗೆ ಸೇರಿ, ಬಿಲ್ ಆಗದ ಹತ್ತಾರು ಲಾರಿಗಳನ್ನು ವಿಮಲ್ ಗುಟ್ಕಾ ಕಂಪೆನಿಗೆ ಕಳುಹಿಸುತ್ತಿದ್ದಾರೆ. ಅಲ್ಲದೆ, ಅವರ ನೂರಾರು ಲಾರಿಗಳನ್ನು ತಾವೇ ಮುಂದೆ ನಿಂತು ಜಿಲ್ಲೆಯ, ರಾಜ್ಯದ ಗಡಿಯನ್ನೂ ದಾಟಿಸುತ್ತಿದ್ದಾರೆ. ರೈತರು ಕಷ್ಟಪಟ್ಟು ಬೆಳೆದ ಬೆಳೆಯನ್ನು ಮಾತ್ರ ಮಾರುಕಟ್ಟೆಗೆ ಸಾಗಿಸಲು ಬಿಡದೇ ಕಿರುಕುಳ ನೀಡುತ್ತಿದ್ದಾರೆ. ಇದರ ವಿರುದ್ಧ ಶೀಘ್ರದಲ್ಲೇ ಬೃಹತ್ ಹೋರಾಟ ರೂಪಿಸುವುದಾಗಿ ಅವರು ಹೇಳಿದರು.

ಸುದ್ದಿಗೋಷ್ಠಿಯಲ್ಲಿ ದಸಂಸ ಹಿರಿಯ ಮುಖಂಡ ಕಂದೂರು ತಿಮ್ಮಯ್ಯ, ಅಡಿಕೆ ಮಾರಾಟಕ್ಕೆ ಮುಂದಾಗಿದ್ದ 12ಕ್ಕೂ ಹೆಚ್ಚು ರೈತರು, ರೈತ ಸಂಘದ ವಿವಿಧ ಮುಖಂಡರು ಉಪಸ್ಥಿತರಿದ್ದರು.

Follow Us:
Download App:
  • android
  • ios