ಜ. 9, 2019ರಂದು ರಾತ್ರಿ 12 ಗಂಟೆಯಿಂದ ಹರಪನಹಳ್ಳಿ ತಾಲೂಕು ಅಧಿಕೃತವಾಗಿ ಬಳ್ಳಾರಿ ಜಿಲ್ಲೆಗೆ ಸೇರ್ಪಡೆ ಮಾಡಲಾಗಿದ್ದು, ಈ ಸೇರ್ಪಡೆಯಾಗಿ ಒಂದು ವರ್ಷ ಕಳೆದಿದೆ. 

ಬಿ. ರಾಮಪ್ರಸಾದ್‌ ಗಾಂಧಿ

ಹರಪನಹಳ್ಳಿ [ಜ.07]: ರಾಜ್ಯದಲ್ಲಿಯೇ ಅತ್ಯಂತ ಹಿಂದುಳಿದ ತಾಲೂಕು ಎಂಬ ಹಣೆಪಟ್ಟಿಕಟ್ಟಿಕೊಂಡಿರುವ ಹರಪನಹಳ್ಳಿ ಪುನಃ ಬಳ್ಳಾರಿ ಜಿಲ್ಲೆಗೆ ಸೇರಿ ಈಗ ಒಂದು ವರ್ಷ ತುಂಬುತ್ತದೆ. ಮೊದಲಿನಿಂದಲೂ ಬಳ್ಳಾರಿ ಜಿಲ್ಲೆಯಲ್ಲಿಯೇ ಇದ್ದ ಹರಪನಹಳ್ಳಿ ತಾಲೂಕು ಜೆ.ಎಚ್‌. ಪಟೇಲ್‌ ಮುಖ್ಯಮಂತ್ರಿ ಯಾಗಿದ್ದ ಸಂದರ್ಭದಲ್ಲಿ ನೂತನ ಜಿಲ್ಲೆಯಾಗಿ ರಚನೆಗೊಂಡ ದಾವಣಗೆರೆಗೆ ಸಾಕಷ್ಟು ವಿರೋಧದ ಮಧ್ಯೆಯೂ ಸೇರಿತು.

ದಾವಣಗೆರೆ ಜಿಲ್ಲೆಗೆ ಸೇರಿ 20 ವರ್ಷ ಕಳೆದ ನಂತರ ಬಳ್ಳಾರಿ ಜಿಲ್ಲೆ ಸೇರಿದಂತೆ ಹೈದರಾಬಾದ್‌ ಕರ್ನಾಟಕದ (ಈಗ ಕಲ್ಯಾಣ ಕರ್ನಾಟಕ) 6 ಜಿಲ್ಲೆಗಳಿಗೆ 371 ಜೆ ಸೌಲಭ್ಯ ಲಭ್ಯವಾಯಿತು. ಇದರಿಂದ ಹರಪನಹಳ್ಳಿ ಜನತೆ ವಂಚಿತಗೊಂಡಿತು. ಆಗ ತಾಲೂಕಿನ ಜನರು ನಮಗೂ 371ಜೆ ಬೇಕು ಎಂದು ಹೋರಾಟಕ್ಕಿಳಿದರು. ಆದರೆ, ಒಂದು ತಾಲೂಕಿನ ವಿಚಾರ ಲೋಕಸಭೆಯಲ್ಲಿ ಧ್ವನಿ ಮಾಡಿ ಬಿಲ್‌ ಪಾಸ್‌ ಆಗುವುದು ಅಷ್ಟೊಂದು ಸುಲಭವಿರಲಿಲ್ಲ.

ಇಂತಹ ಸಂದರ್ಭದಲ್ಲಿ ಕೆಲವೊಂದು ತಜ್ಞರ ಸಲಹೆ ಪಡೆದು ಅಂದಿನ ಶಾಸಕ ದಿ. ಎಂ.ಪಿ. ರವೀಂದ್ರ ಅವರು ಹರಪನಹಳ್ಳಿ ತಾಲೂಕನ್ನು ಪುನಃ ಬಳ್ಳಾರಿ ಜಿಲ್ಲೆಗೆ ಸೇರಿಸಿದರೆ 371ಜೆ ಸೌಲಭ್ಯ ಸಿಗುತ್ತದೆ. ಈ ಕೆಲಸ ರಾಜ್ಯ ಸರ್ಕಾರದ ವ್ಯಾಪ್ತಿಗೆ ಬರುತ್ತದೆ ಎಂದು ಹೇಳಿ ಅಂದಿನ ಮುಖ್ಯಮಂತ್ರಿ ಸಿದ್ದರಾಮಯ್ಯನವರ ಬಳಿ ಇಲ್ಲಿಂದ ನಿಯೋಗ ಕರೆದುಕೊಂಡು ಹೋಗಿ ಮನವಿ ಸಲ್ಲಿಸಿ ಒತ್ತಡ ತಂದಾಗ ಹರಪನಹಳ್ಳಿ ತಾಲೂಕು ಪುನಃ ಬಳ್ಳಾರಿ ಜಿಲ್ಲೆಗೆ ಸೇರ್ಪಡೆಯಾಯಿತು.

ಜ. 9, 2019ರಂದು ರಾತ್ರಿ 12 ಗಂಟೆಯಿಂದ ಹರಪನಹಳ್ಳಿ ತಾಲೂಕು ಅಧಿಕೃತವಾಗಿ ಬಳ್ಳಾರಿ ಜಿಲ್ಲೆಗೆ ಸೇರ್ಪಡೆ ಮಾಡಲಾಗಿದೆ ಎಂದು ದಾವಣಗೆರೆಯ ಅಂದಿನ ಜಿಲ್ಲಾಧಿಕಾರಿ ಆದೇಶ ಹೊರಡಿಸಿದ್ದರು. ಜ. 10, 2019ರಿಂದ ತಾಲೂಕು ಬಳ್ಳಾರಿ ಜಿಲ್ಲಾ ವ್ಯಾಪ್ತಿಯಲ್ಲಿ ಕಾರ್ಯನಿರ್ವಹಿತ್ತಾ ಬಂದಿತು.

ಜಮೀರ್ ಅಹ್ಮದ್‌ಗೆ ಆಹ್ವಾನ ನೀಡಿದ ಬಿಜೆಪಿ ಶಾಸಕ ಸೋಮಶೇಖರ್ ರೆಡ್ಡಿ...

ಇದೀಗ ಬಳ್ಳಾರಿ ಜಿಲ್ಲೆಗೆ ಸೇರ್ಪಡೆಯಾಗಿ ಒಂದು ವರ್ಷ ಕಳೆಯಿತು. ಹೈದರಾಬಾದ್‌ ಕರ್ನಾಟಕ ಎಂಬುದನ್ನು ಯಡಿಯೂರಪ್ಪನವರ ಸರ್ಕಾರ ಕಲ್ಯಾಣ ಕರ್ನಾಟಕ ಪ್ರದೇಶ ಎಂದು ಹೊಸದಾಗಿ ನಾಮಕರಣ ಮಾಡಿತು. ಕಳೆದ ಒಂದು ವರ್ಷದಲ್ಲಿ ರಸ್ತೆ, ಶಾಲಾ ಕೊಠಡಿ, ಅಂಗನವಾಡಿ ಕಟ್ಟಡ, ಹಾಸ್ಟೆಲ್‌ ಕಟ್ಟಡ, ಕಾಲೇಜು ಕಾಂಪೌಂಡ್‌, ವೈದ್ಯರ, ಶುಶ್ರೂಷಕರ ಕ್ವಾರ್ಟರ್ಸ್‌ ಸೇರಿದಂತೆ ವಿವಿಧ ಅಭಿವೃದ್ಧಿ ಕಾರ್ಯಗಳಿಗೆ 371 ಜೆ ಸೌಲಭ್ಯದ ಅಡಿ ಮೂರು ಹಂತದಲ್ಲಿ . 62 ಕೋಟಿ ಮಂಜೂರಾಗಿವೆ ಎಂದು ಅಧಿಕಾರಿಗಳಿಂದ ತಿಳಿದು ಬಂದಿದೆ.

ಬಳ್ಳಾರಿ: 2019ರಲ್ಲಿ ಈಡೇರದ ಭರವಸೆ, 2020 ರಲ್ಲಿ ಈಡೇರುತ್ತಾ? ನಿರೀ​ಕ್ಷೆ​ಯಲ್ಲಿ ಜನ​ತೆ.

ಒಂದು ವರ್ಷದಲ್ಲಿ 371 ಜೆ ಪ್ರಮಾಣ ಪತ್ರಕ್ಕಾಗಿ ಆನ್‌ಲೈನ್‌ನಲ್ಲಿ 18605 ಅರ್ಜಿಗಳು ಸಲ್ಲಿಸಲ್ಪಟ್ಟಿವೆ. ಅವುಗಳಲ್ಲಿ ದಾಖಲೆ ಸರಿ ಇಲ್ಲದ ಕೆಲವೊಂದು ತಿರಸ್ಕೃತಗೊಂಡು ಉಳಿದವರಿಗೆ ಪ್ರಮಾಣ ಪತ್ರ ನೀಡಲಾಗಿದೆ ಎಂದು ಕಂದಾಯ ಮೂಲಗಳು ತಿಳಿಸಿವೆ.

ಬಳ್ಳಾರಿಗೆ ಸೇರಿ ಒಂದು ವರ್ಷದಲ್ಲಿಯೇ ಹರಪನಹಳ್ಳಿಯನ್ನೇ ನೂತನ ಜಿಲ್ಲೆಯನ್ನಾಗಿ ಮಾಡಬೇಕು ಎಂದು ಜಿಲ್ಲಾ ಹೋರಾಟ ಸಮಿತಿ ಕಾರ್ಯಕರ್ತರು ಪ್ರವಾಸಿ ಮಂದಿರ ವೃತ್ತದಲ್ಲಿ ಶಾಮಿಯಾನ ಹಾಕಿಕೊಂಡು ಧರಣಿ ಸತ್ಯಾಗ್ರಹ ಮುಂದುವರಿಸಿದ್ದಾರೆ.

371 ಜೆ ಸೌಲಭ್ಯ ದೊರೆತ ಒಂದು ವರ್ಷದಲ್ಲಿ ಹರಪನಹಳ್ಳಿಗೆ ಶೈಕ್ಷಣಿಕ ಮೀಸಲಾತಿ ಸಿಕ್ಕಿದೆ. ಅನೇಕ ನೌಕರರಿಗೆ ಬಡ್ತಿ ಸಿಕ್ಕಿದೆ. ಸಾಕಷ್ಟುವಿಶೇಷ ಅನುದಾನ ದೊರೆತಿದೆ. ಒಟ್ಟಿನಲ್ಲಿ ಅನುಕೂಲವಾಗಿದೆ, ಇನ್ನು ಹರಪನಹಳ್ಳಿಯನ್ನೇ ಜಿಲ್ಲಾ ಕೇಂದ್ರ ಮಾಡಬೇಕು ಎಂಬ ಹೋರಾಟ ಮುಂದುವರಿಯುತ್ತದೆ.

ಇದ್ಲಿ ರಾಮಪ್ಪ, ಹೋರಾಟಗಾರ, ವಕೀಲರು, ಹರಪನಹಳ್ಳಿ