ಬಳ್ಳಾರಿ: 2019ರಲ್ಲಿ ಈಡೇರದ ಭರವಸೆ, 2020 ರಲ್ಲಿ ಈಡೇರುತ್ತಾ? ನಿರೀ​ಕ್ಷೆ​ಯಲ್ಲಿ ಜನ​ತೆ

ಹೊಸ ವರ್ಷ ಅಭಿವೃದ್ಧಿ ನಿರೀ​ಕ್ಷೆ​ಯಲ್ಲಿ ಜಿಲ್ಲೆ| ಪ್ರತಿಯೊಂದು ತಾಲೂಕುಗಳು ತಮ್ಮದೇ ಜ್ವಲಂತ ಸಮಸ್ಯೆಗಳಿಂದ ನಲುಗುತ್ತಿವೆ|ಪ್ರತಿ ವರ್ಷ ಜಿಲ್ಲೆಯ ಹರಪನಹಳ್ಳಿ, ಹಡಗಲಿ, ಕೂಡ್ಲಿಗಿ ಸೇರಿದಂತೆ ನಾನಾ ತಾಲೂಕುಗಳಿಂದ ಸಾವಿರಾರು ಕುಟುಂಬಗಳು ಹೊಟ್ಟೆಪಾಡಿಗಾಗಿ ವಲಸೆ ಹೋಗುತ್ತಿವೆ|

Ballari District People Expect Development

ಕೆ.ಎಂ.ಮಂಜುನಾಥ್‌ 

ಬಳ್ಳಾರಿ(ಜ.02): ಜಿಲ್ಲೆಯ ಮಟ್ಟಿಗೆ 2019 ಅಭಿವೃದ್ಧಿಯ ಕನಸುಗಳನ್ನು ಸಾಕಾರಗೊಳಿಸಲಿಲ್ಲ. ಬದಲಿಗೆ ಸಮಸ್ಯೆಗಳನ್ನು ಸೃಷ್ಟಿಸಿದ್ದೇ ಹೆಚ್ಚು. ಹೀಗಾ​ಗಿ, 2020 ಹೊಸ ವರ್ಷವಾದರೂ ಜಿಲ್ಲೆಯನ್ನು ಪ್ರಗತಿಯ ಹಾದಿಯತ್ತ ಕೊಂಡೊಯ್ಯುವಂತಾಗಬೇಕೆಂಬ ನಿರೀ​ಕ್ಷೆ​ಯಲ್ಲಿದ್ದಾರೆ ಜನ​ತೆ.

ಈ ದಿಸೆಯಲ್ಲಿ ಜಿಲ್ಲೆಯ ಜನಪ್ರತಿನಿಧಿಗಳು ಪ್ರಮಾಣಿಕ ಪ್ರಯತ್ನಕ್ಕೆ ಮುಂದಾಗಬೇಕು. ಬಳ್ಳಾರಿ ನಗರ ಸೇರಿದಂತೆ ಪ್ರತಿಯೊಂದು ತಾಲೂಕುಗಳು ತಮ್ಮದೇ ಆದ ಜ್ವಲಂತ ಸಮಸ್ಯೆಗಳಿಂದ ನಲುಗುತ್ತಿದ್ದು ಇದಕ್ಕೆ ಪರಿಹಾರೋಪಾಯದ ಮಾರ್ಗಗಳತ್ತ ಮುನ್ನೆಜ್ಜೆ ಇಡಬೇಕಾಗಿದೆ.

ಏನೇನಿವೆ ನಿರೀಕ್ಷೆಗಳು?

ಹತ್ತಾರು ಸಮಸ್ಯೆಗಳನ್ನು ಎದುರಿಸುತ್ತಿರುವ ಬಳ್ಳಾರಿ ಮಹಾನಗರ ಸಮಗ್ರ ಅಭಿವೃದ್ಧಿಗೆ ತೆರೆದುಕೊಳ್ಳಬೇಕು. ಜಿಲ್ಲಾ ಕೇಂದ್ರದಿಂದ ಇತರೆ ಪ್ರದೇಶಗಳಿಗೆ ರೈಲ್ವೆ ಸೌಲಭ್ಯಗಳು ಹೆಚ್ಚಳವಾಗಬೇಕು. ತುಂಗಭದ್ರಾ ಜಲಾಶಯದ ಹೂಳೆತ್ತುವ ಅಥವಾ ಪರ್ಯಾಯ ಮಾರ್ಗದ ಕಾರ್ಯಕ್ಕೆ ಚಾಲನೆ ಸಿಗಬೇಕು. ಹಂಪಿಯಲ್ಲಿ ಸೌಕರ್ಯಗಳು ಹೆಚ್ಚಿಸಿ, ಪ್ರವಾಸೋದ್ಯಮ ಬೆಳವಣಿಗೆಗೆ ಮುಂದಾಗಬೇಕು. ಗುಣಮಟ್ಟದ ಶಿಕ್ಷಣ ಕುಸಿತ ಕಾಣುತ್ತಿರುವ ಜಿಲ್ಲೆಯಲ್ಲಿ ಪೂರಕ ಕ್ರಮಗಳನ್ನು ಕೈಗೊಳ್ಳಬೇಕು. ಸರ್ಕಾರಿ ಶಾಲಾ- ಕಾಲೇಜುಗಳಿಗೆ ಅಗತ್ಯ ಸೌಕರ್ಯಗಳನ್ನು ಕಲ್ಪಿಸುವ ಕಾಳಜಿ ಈ ವರ್ಷವಾದರೂ ತೋರಿಸಬೇಕು. ಕಬ್ಬು ಬೆಳೆಗಾರರಿಗೆ ಆತಂಕ ತಂದೊಡ್ಡಿರುವ ಸಿರುಗುಪ್ಪ ದೇಶನೂರು ಹಾಗೂ ಹೊಸಪೇಟೆಯ ಐಎಸ್ಸಾರ್‌ ಸಕ್ಕರೆ ಕಾರ್ಖಾನೆ ಮರು ಆರಂಭದ ಪ್ರಯತ್ನಗಳಾಗಬೇಕು. ಜಿಂದಾಲ್‌ ಸುತ್ತಮುತ್ತಲ ಪ್ರದೇಶದ ನಿವಾಸಿಗಳು ನಿತ್ಯ ನರಕಯಾತನೆ ಅನುಭವಿಸುತ್ತಿದ್ದು ಅವರ ಆಸೆಯಂತೆಯೇ ಬೇರೆಡೆ ಸ್ಥಳಾಂತರಿಸುವ ಕಾರ್ಯ ಪೂರ್ಣಗೊಳಿಸಬೇಕು. ಅನುದಾನವಿಲ್ಲದೆ ಕೊರಗುತ್ತಿರುವ ಬಳ್ಳಾರಿ ಹಾಗೂ ಹಂಪಿ ಕನ್ನಡ ವಿವಿಗಳಿಗೆ ಅನುದಾನ ಹರಿದು ಬಂದು ಶೈಕ್ಷಣಿಕ ಬೆಳವಣಿಗೆಯ ಪೂರಕ ಚಟುವಟಿಕೆಗಳು ಮತ್ತಷ್ಟು ಚುರುಕಾಗಬೇಕು. 

ಹೆಚ್ಚಿನ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ 

ಹೊಟ್ಟೆಪಾಡಿಗಾಗಿ ಪ್ರತಿವರ್ಷ ಸಾವಿರಾರು ಕೂಲಿ ಕಾರ್ಮಿಕರು ಬೇರೆ ರಾಜ್ಯ, ಜಿಲ್ಲೆಗಳಿಗೆ ವಲಸೆ ಹೋಗುತ್ತಿದ್ದು ನರೇಗಾ ಯೋಜನೆಯ ಪರಿಣಾಮಕಾರಿಯಾಗಿ ಜಾರಿಗೊಳಿಸಿ, ವಲಸೆ ಪ್ರಮಾಣ ತಗ್ಗಿಸಬೇಕು. ಬಹುದಿನದ ಬೇಡಿಕೆಯಾದ ಹಗರಿ ಕೃಷಿ ಸಂಶೋಧನಾ ಕೇಂದ್ರದಲ್ಲಿ ಕೃಷಿ ಸಂಬಂಧಿ ಕಾಲೇಜು ನಿರ್ಮಾಣಕ್ಕೆ ಮುಂದಾಗಬೇಕು. ಬಹು ನಿರೀಕ್ಷೆಯ ನಗರದ ಸೂಪರ್‌ ಸ್ಪೆಷಾಲಿಟಿ ಆಸ್ಪತ್ರೆ ಶುರುವಾಗಬೇಕು. ನಗರ ಹೊರ ವಲಯದ ಮುಂಡರಯಲ್ಲಿ 10 ಬಡವರಿಗೆ ಮನೆ ನಿರ್ಮಿಸಿಕೊಡುವ ಕಾರ್ಯ ಈ ವರ್ಷವಾದರೂ ಮುಗಿದು ಬಡವರು ಗೃಹ ಪ್ರವೇಶ ಮಾಡಬೇಕಾಗಿದೆ. ಗಣಿ ಬಾಧಿತ ಪ್ರದೇಶದಲ್ಲಿ ಪರಿಸರ ಪುನಶ್ಚೇತನ ಕಾರ್ಯ ಆರಂಭಿಸಬೇಕಾಗಿದೆ. ನಗರದ ಅನೇಕ ರಸ್ತೆಗಳ ವಿಸ್ತರಣೆಯ ಕಾರ್ಯದ ಪ್ರಸ್ತಾಪವಿದ್ದು ತ್ವರಿತವಾಗಿ ಶುರು ಮಾಡಬೇಕು ಎಂಬ ಒತ್ತಾಸೆಯಿದೆ.

ನಗರ ಅಭಿವೃದ್ಧಿಯಾಗಲಿ:

ಬಳ್ಳಾರಿ ಹೆಸರಿಗಷ್ಟೇ ಮಹಾನಗರ ಎನಿಸಿಕೊಂಡಿದೆ. ಆದರೆ, ಇಲ್ಲಿನ ಸಮಸ್ಯೆಗಳು ಹಳ್ಳಿಗಿಂತಲೂ ಕಡೆ ಎನ್ನುವಂತಾಗಿದೆ. ಪಾಲಿಕೆ ಅಧಿಕಾರಿಗಳು ಹಾಗೂ ಸ್ಥಳೀಯ ಜನಪ್ರತಿನಿಧಿಗಳ ನಿರ್ಲಕ್ಷ್ಯದಿಂದಾಗಿಯೇ ಜನರು ಪರಿತಪಿಸುವಂತಾಗಿದೆ. ನಗರದ ಯಾವುದೇ ವಾರ್ಡ್‌ಗೆ ಹೋದರೂ ಗಬ್ಬು ವಾಸನೆಯ ಚರಂಡಿಗಳು, ತೆರವಾಗದ ತ್ಯಾಜ್ಯ, ಸಂಚಾರಕ್ಕೆ ಯೋಗ್ಯವಲ್ಲದ ರಸ್ತೆಗಳು ಕಂಡು ಬರುತ್ತವೆ. ಇನ್ನು ಪ್ರಮುಖ ರಸ್ತೆಗಳು ಗುಂಡಿಗಳಿಂದ ಮುಕ್ತವಾಗಿಲ್ಲ. ‘ಸ್ವಚ್ಛ ಬಳ್ಳಾರಿ-ಸುಂದರ ಬಳ್ಳಾರಿ’ ಘೋಷಣೆಯಾಗಿಯಷ್ಟೇ ಉಳಿದುಕೊಂಡಿದೆ. ಕಿರಿದಾದ ರಸ್ತೆಗಳ ವಿಸ್ತರಣೆ ಕಾರ್ಯವಾಗಬೇಕಾಗಿದೆ. ಹೆಚ್ಚುತ್ತಿರುವ ಜನದಟ್ಟಣೆಯಿಂದ ಸುಗಮ ಸಂಚಾರಕ್ಕೆ ಅಡ್ಡಿಯಾಗಿದ್ದು ಈ ನಿಟ್ಟಿನ ಪೂರಕ ಕಾರ್ಯಗಳು ತ್ವರಿತವಾಗಿ ಶುರುವಾಗಬೇಕಾಗಿದೆ.

ರೈಲ್ವೆ ಸೌಲಭ್ಯಗಳು ಹೆಚ್ಚಳವಾಗಲಿ:

ಗಣಿಗಾರಿಕೆ ನಡೆಯುವ ವೇಳೆ ಅತಿ ಹೆಚ್ಚು ರೈಲ್ವೆ ಇಲಾಖೆಗೆ ರಾಜಧನ ನೀಡಿದ್ದು ಬಳ್ಳಾರಿ ಜಿಲ್ಲೆ. ಆದರೆ, ಈವರೆಗೆ ರೈಲ್ವೆ ಸೌಲಭ್ಯಗಳು ನಿರೀಕ್ಷಿತ ಪ್ರಮಾಣದಲ್ಲಿಲ್ಲ. ಕಳೆದ ವರ್ಷ ಹೊಸಪೇಟೆ- ಹರಿಹರ ರೈಲು ಸಂಚಾರ ಆರಂಭಿಸಿದ್ದು ಬಿಟ್ಟರೆ ಬಳ್ಳಾರಿಯಿಂದ ಬೆಂಗಳೂರಿಗೆ ಇಂಟರ್‌ಸಿಟಿ ರೈಲು ಆರಂಭಿಸಬೇಕು ಎಂಬುದು ಸೇರಿದಂತೆ ಅನೇಕ ಪ್ರಸ್ತಾಪಿತ ಯೋಜನೆಗಳಿಗೆ ಚಾಲನೆ ಸಿಕ್ಕಿಲ್ಲ. ಜಿಲ್ಲೆಯ ಸಂಸದರು ಸೇರಿದಂತೆ ಇತರೆ ಜನಪ್ರತಿನಿಧಿಗಳು ಈ ಬಗ್ಗೆ ಗಮನ ಹರಿಸಬೇಕಾಗಿದೆ.

ಜಲಾಶಯದ ಹೂಳಿನ ಗೋಳು:

ತುಂಗಭದ್ರಾ ಜಲಾಶಯದಲ್ಲಿ ಹೂತಿರುವ ಹೂಳು ತೆಗೆಯಬೇಕು ಎಂಬ ಹೋರಾಟ ಹಲವು ದಶಕಗಳದ್ದು. ಇಂದಿಗೂ ಜೀವಂತವಾಗಿದೆ. ಆದರೆ, ಇದನ್ನು ಸರ್ಕಾರ ಗಂಭೀರವಾಗಿ ಪರಿಗಣಿಸುತ್ತಿಲ್ಲ. ರೈತರು ಪ್ರತಿವರ್ಷ ಹೋರಾಟದ ಮೂಲಕ ಸರ್ಕಾರದ ಗಮನ ಸೆಳೆಯುವ ಪ್ರಯತ್ನ ಮಾಡುತ್ತಿದ್ದಾರಾದರೂ, ಜಿಲ್ಲೆಯ ಜನಪ್ರತಿನಿಧಿಗಳು ಸರ್ಕಾರದ ಮೇಲೆ ಒತ್ತಡ ತರುವ ಕಾಳಜಿ ಮೆರೆದಿಲ್ಲ. ಈ ಹಿಂದೆ ಪರ್ಯಾಯವಾಗಿ ಕೊಪ್ಪಳ ಜಿಲ್ಲೆಯ ನವಿಲೆ ಬಳಿ ಪರ್ಯಾಯ ಜಲಾಶಯದ ಪ್ರಸ್ತಾಪ ಮಾಡಲಾಯಿತು. ಆದರೆ, ಮುಂದಿನ ಹಂತದ ಕೆಲಸಗಳು ಶುರುವಾಗಲಿಲ್ಲ. ಇದರಿಂದ ಪ್ರತಿವರ್ಷ ಬೇಸಿಗೆಯಲ್ಲಿ ಕುಡಿವ ನೀರಿನ ಸಮಸ್ಯೆ ಎದುರಿಸುವಂತಾಗಿದೆ.

ಹಂಪಿ ಅಭಿವೃದ್ಧಿಗೊಳಿಸಬೇಕು:

ವಿಶ್ವ ಪಾರಂಪರಿಕ ತಾಣ ಹಂಪಿ ವೀಕ್ಷಣೆಗೆ ಪ್ರತಿ ವರ್ಷ ದೇಶ- ವಿದೇಶಗಳಿಂದ ಲಕ್ಷಾಂತರ ಜನರು ಆಗಮಿಸುತ್ತಾರೆ. ಆದರೆ, ಬರುವ ಪ್ರವಾಸಿಗರಿಗೆ ಅನುಕೂಲ ಕಲ್ಪಿಸುವತ್ತ ಗಮನ ಹರಿಸಿಲ್ಲ. ಪ್ರವಾಸೋದ್ಯಮ ಕೇಂದ್ರವಾಗಿ ಬಹುದೊಡ್ಡ ಬದಲಾವಣೆಗೆ ಅವಕಾಶ ಇರುವ ಹಂಪಿಯ ಕಡೆಗೆ ರಾಜ್ಯ ಹಾಗೂ ಕೇಂದ್ರ ಸರ್ಕಾರ ಗಮನ ಹರಿಸಿಲ್ಲ. ಈ ಕುರಿತು ಮಾಜಿ ಸಂಸದ ವಿ.ಎಸ್‌. ಉಗ್ರಪ್ಪ ಅವರು ಅನುದಾನ ತರಲು ಸಾಕಷ್ಟುಪ್ರಯತ್ನಿಸಿ, ಒಂದಷ್ಟುಸಫಲವಾದರು. ಬಳಿಕದ ಚುನಾವಣೆಯಲ್ಲಿ ಅವರು ಪರಾಭವಗೊಂಡಿದ್ದರಿಂದ ಅಭಿವೃದ್ಧಿಯ ಅನುದಾನ ಹರಿಯುವಿಕೆ ನಿಂತು ಹೋಯಿತು.

ರಾಜ್ಯದ ಪ್ರವಾಸೋದ್ಯಮ ಸಚಿವರು ಹಂಪಿ ಅಭಿವೃದ್ಧಿಯ ಬಗ್ಗೆ ಪ್ರಸ್ತಾಪಿಸಿದ್ದು, ಈ ವರ್ಷವಾದರೂ ಚಾಲನೆ ಸಿಗಲಿದೆಯೇ ಎಂಬುದನ್ನು ನೋಡಬೇಕು.

ಶೈಕ್ಷಣಿಕ ಪ್ರಗತಿಗೆ ಮುಂದಡಿ ಇಡಲಿ:

ಶೈಕ್ಷಣಿಕವಾಗಿ ಅತ್ಯಂತ ಹಿಂದುಳಿದ ಹಣೆಪಟ್ಟಿ ಕಟ್ಟಿಕೊಂಡಿರುವ ಬಳ್ಳಾರಿ ಜಿಲ್ಲೆ ಯಾವ ಬದಲಾವಣೆ ಕಂಡುಕೊಂಡಿಲ್ಲ. ಆಂಧ್ರಪ್ರದೇಶದಿಂದ ಹತ್ತಾರು ಖಾಸಗಿ ಶಿಕ್ಷಣ ಸಂಸ್ಥೆಗಳು ಇಲ್ಲಿ ತಲೆ ಎತ್ತಿ ಪೋಷಕರಿಂದ ಲಕ್ಷಾಂತರ ರು. ಹಣ ಜೇಬಿಗೆ ಇಳಿಸಿಕೊಳ್ಳುವ ಬೆಳವಣಿಗೆ ಬಿಟ್ಟರೆ ಮತ್ತೇನೂ ಆಗಿಲ್ಲ. ಸರ್ಕಾರಿ ಶಾಲಾ ಕಾಲೇಜುಗಳ ಸ್ಥಿತಿಯಲ್ಲಿ ಯಾವ ಬದಲಾವಣೆಯಾಗಿಲ್ಲ. ಕನಿಷ್ಠ ಮೂಲ ಸೌಕರ್ಯವಿಲ್ಲದೆ ಸರ್ಕಾರಿ ಶಾಲೆ-ಕಾಲೇಜುಗಳು ಬಳಲುತ್ತಿವೆ. ಇದರಿಂದ ಪ್ರತಿ ವರ್ಷ ಎಸ್ಸೆಸ್ಸೆಲ್ಸಿ-ಪಿಯುಸಿ ಫಲಿತಾಂಶದಲ್ಲಿ ಬಡ ಹಾಗೂ ಮಧ್ಯಮವರ್ಗದ ಮಕ್ಕಳು ಹೆಚ್ಚಾಗಿ ಆಶ್ರಯಿಸಿರುವ ಸರ್ಕಾರಿ ಶಿಕ್ಷಣ ಸಂಸ್ಥೆಗಳಲ್ಲಿ ಫಲಿತಾಂಶ ಇಳಿಮುಖವಾಗುತ್ತಿದೆ. ಸರ್ಕಾರಿ ಶಾಲೆಗಳಲ್ಲಿ ಶಿಕ್ಷಕರನ್ನು ನೀಡುವ ಕನಿಷ್ಟಕೆಲಸವಾದರೂ ಈ ಬಾರಿ ಆಗಬೇಕಾಗಿದೆ.

ಸಕ್ಕರೆ ಕಾರ್ಖಾನೆ ಪುನಾರಂಭವಾಗಲಿ:

ಸಿರುಗುಪ್ಪ ತಾಲೂಕಿನ ದೇಶನೂರು ಶುಗರ್‌ ಹಾಗೂ ಹೊಸಪೇಟೆಯ ಐಎಸ್ಸಾರ್‌ ಸಕ್ಕರೆ ಕಾರ್ಖಾನೆ ಮುಚ್ಚಿ ಹೋಗಿದ್ದರಿಂದ ಕಬ್ಬು ಬೆಳೆಗಾರರು ತೀವ್ರ ಸಮಸ್ಯೆ ಎದುರಿಸುವಂತಾಗಿದೆ. ಇದೇ ಕೃಷಿಯನ್ನು ಅವಲಂಬಿಸಿರುವ ಸಾವಿರಾರು ರೈತರು ಬೇರೆಡೆ ಕಬ್ಬು ಕಳಿಸುವ ಸ್ಥಿತಿ ಎದುರಾಗಿದೆ. ಈ ಎರಡು ಸಕ್ಕರೆ ಕಾರ್ಖಾನೆಗಳು ಆರಂಭವಾದಲ್ಲಿ ಸ್ಥಳೀಯ ರೈತರಿಗೆ ಅನುಕೂಲವಾಗಲಿದೆ. ಈ ದಿಸೆಯ ಪ್ರಯತ್ನ ಆಯಾ ಕ್ಷೇತ್ರ ವ್ಯಾಪ್ತಿಯ ಶಾಸಕರು ಮಾಡಬೇಕಾಗಿದೆ.

ಕಾರ್ಖಾನೆಗಳಿಂದ ಮುಕ್ತಿ ಸಿಗಲಿ:

ಜಿಂದಾಲ್‌ ಸೇರಿದಂತೆ ಸುತ್ತಮುತ್ತಲ ಕಾರ್ಖಾನೆಗಳಿಂದ ಸುಲ್ತಾನಪುರ, ಅಂತಾಪುರ ಗ್ರಾಮಗಳ ನೂರಾರು ಕುಟುಂಬಗಳ ನಿತ್ಯ ನರಕಯಾತನೆ ಅನುಭವಿಸುತ್ತಿವೆ. ಕಾರ್ಖಾನೆಗಳಿಂದ ವಿಷಕಾರಕ ಧೂಳು ಹೊರ ಬರುತ್ತಿರುವುದರಿಂದ ನಾನಾ ಕಾಯಿಲೆಗಳು ಬಳಲುವಂತಾಗಿದೆ. ಹಲವು ಬಾರಿ ಹೋರಾಟ ಮಾಡಿದರೂ ಯಾವುದೇ ಪ್ರಯೋಜನ ಕಾಣದ ಹಿನ್ನೆಲೆಯಲ್ಲಿ ಬೇರೆಡೆ ಸ್ಥಳಾಂತರ ಮಾಡಿ ಎಂದು ಗ್ರಾಮಸ್ಥರು ಮನವಿ ಮಾಡಿಕೊಳ್ಳುತ್ತಿದ್ದಾರೆ. ಜನರ ಸಮಸ್ಯೆ ಆಲಿಸುವತ್ತ ಸರ್ಕಾರ ಗಮನ ಹರಿಸಬೇಕಾಗಿದೆ.

ಪ್ರತಿ ವರ್ಷ ಜಿಲ್ಲೆಯ ಹರಪನಹಳ್ಳಿ, ಹಡಗಲಿ, ಕೂಡ್ಲಿಗಿ ಸೇರಿದಂತೆ ನಾನಾ ತಾಲೂಕುಗಳಿಂದ ಸಾವಿರಾರು ಕುಟುಂಬಗಳು ಹೊಟ್ಟೆಪಾಡಿಗಾಗಿ ವಲಸೆ ಹೋಗುತ್ತಿವೆ. ಇದೇ ವೇಳೆ ನಾನಾ ಅವಘಡಗಳು ಸಂಭವಿಸುತ್ತಿದ್ದು, ವಲಸೆ ತಪ್ಪಿಸಲು ಉದ್ಯೋಗ ಖಾತ್ರಿ ಯೋಜನೆಯನ್ನು ಪರಿಣಾಮಕಾರಿಯಾಗಿ ಜಾರಿಗೊಳಿಸಬೇಕಾಗಿದೆ.
 

Latest Videos
Follow Us:
Download App:
  • android
  • ios