ಮಂಗಳೂರು(ಆ.01): ಕೊರೋನಾ ಹೆಣಗಳ ಮೇಲೆ ರಾಜ್ಯ ಸರ್ಕಾರ ಹಣ ಮಾಡಿದೆ. ಕೊರೋನಾಕ್ಕಿಂತ ದೊಡ್ಡ ರೋಗ ಬಿಜೆಪಿ ಭ್ರಷ್ಟಾಚಾರ. ಕೊರೋನಾ ನಿಯಂತ್ರಣದ ಸಾಮಗ್ರಿ ಖರೀದಿಯಲ್ಲಿ 2 ಸಾವಿರ ಕೋಟಿ ರು. ಭ್ರಷ್ಟಾಚಾರವಾಗಿದೆ. ನಾನು ಹೇಳಿದ್ದು ಸುಳ್ಳಾದರೆ ನನ್ನನ್ನು ನೇಣಿಗೇರಿಸಿ, ಕೇಸ್‌ ಹಾಕಿ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್‌ ಗುಡುಗಿದ್ದಾರೆ.

ಕೆಪಿಸಿಸಿ ಅಧ್ಯಕ್ಷರಾದ ಬಳಿಕ ಮೊದಲ ಬಾರಿಗೆ ಮಂಗಳೂರಿಗೆ ಆಗಮಿಸಿದ್ದ ಅವರು ಸುದ್ದಿಗೋಷ್ಠಿಯಲ್ಲಿ ಮಾತನಾಡಿ, 2 ಸಾವಿರ ಕೋಟಿ ರು.ಗೂ ಹೆಚ್ಚು ಹಣವನ್ನು ರಾಜ್ಯ ಸರ್ಕಾರ ಕೊರೋನಾ ಹೆಸರಲ್ಲಿ ಲೂಟಿ ಹೊಡೆದದ್ದು ಕೋರ್ಟ್‌ಗೆ ಸಲ್ಲಿಸಿದ ಅಫಿದವಿತ್‌, ಮಾಧ್ಯಮ ದಾಖಲೆ, ಸರ್ಕಾರಿ ಆದೇಶಗಳಲ್ಲಿ ಸ್ಪಷ್ಟವಾಗಿದೆ. ಸರ್ಕಾರ ನಡೆಸಲು ಸಹಕಾರ ಕೊಡಿ ಎಂದು ಮುಖ್ಯಮಂತ್ರಿ ಹೇಳುತ್ತಾರೆ. ನೀವು ಕೊಳ್ಳೆ ಹೊಡೀಲಿಕ್ಕೆ ನಾವು ಸಹಕಾರ ನೀಡಬೇಕಾ ಎಂದು ಪ್ರಶ್ನಿಸಿದರು.

ಲೀಗಲ್ ನೋಟಿಸ್ ಕೊಡ್ಲಿ ಅಂತ ಕಾಯ್ತಿದ್ದೆ: ಅಚ್ಚರಿಗೆ ಕಾರಣವಾಯ್ತು ಸಿದ್ದರಾಮಯ್ಯ ಮಾತು..!

ನಾಲ್ಕು ಲಕ್ಷ ರು.ಗಳ ವೆಂಟಿಲೇಟರ್‌ಗಳನ್ನು 18 ಲಕ್ಷ ರು. ಕೊಟ್ಟು ಖರೀದಿಸಿದ್ದಾರೆ. ಅರ್ಧ ಲೀಟರ್‌ ಸ್ಯಾನಿಟೈಸರನ್ನು 100 ರು. ಕೊಟ್ಟು ನಾವು ಖರೀದಿಸಿದ್ದರೆ, ಸರ್ಕಾರ 600 ರು.ಗೆ ಖರೀದಿಸಿದೆ. ಒಂದು ಆಕ್ಸಿಮೀಟರ್‌ನ್ನು 565 ರು.ಗೆ ನಾವು ಖರೀದಿ ಮಾಡಿದ್ದೇವೆ, ಆದರೆ ಸರ್ಕಾರ 1500 ರು. ಬಿಲ್‌ ಮಾಡಿದೆ. ಥರ್ಮಲ್‌ ಸ್ಕಾ್ಯನರ್‌ ನಾವು 1050 ರು.ಗೆ ಖರೀದಿಸಿದರೆ, ಸರ್ಕಾರ 3-4 ಸಾವಿರ ರು. ಕೊಟ್ಟಿದೆ. ಶೇ.10-15 ಬಿಲ್‌ ಹೆಚ್ಚಿದ್ದರೆ ಒಂದು ಲೆಕ್ಕ ಬೇರೆ, ಆದರೆ ನೂರಾರು ಕೋಟಿ ರು. ಭ್ರಷ್ಟಾಚಾರ ಮಾಡಿದ್ದಾರೆ. ಲೆಕ್ಕ ಕೊಡಿ ಎಂದರೆ ಯಾವ ದಾಖಲೆಯನ್ನಾದರೂ ಬಂದು ನೋಡಿ ಎಂದು ಸಿಎಂ ಹೇಳುತ್ತಾರೆ. ಇಷ್ಟುಪಾರದರ್ಶಕವಾಗಿ ಮಾತನಾಡುವವರು, ನಿಮ್ಮವರೂ ಸದಸ್ಯರಾಗಿರುವ ಪಬ್ಲಿಕ್‌ ಅಕೌಂಟ್‌ ಕಮಿಟಿ ಸಭೆ ಕರೆಯಲು ಯಾಕೆ ಬಿಡ್ತಿಲ್ಲ ಎಂದು ಡಿಕೆಶಿ ಹರಿಹಾಯ್ದರು.

ಬೇಕಾದ ಬಿಲ್‌ ಮಾತ್ರ ನೀಡ್ತೀರಿ: ಆರ್‌ಟಿಐನಲ್ಲಿ ಕೇಳಿದರೆ ಮಾಹಿತಿ ಇಲ್ಲ ಅಂತೀರಿ. ಇದು ಯಾವ ನೀತಿ? ಖರ್ಚು ಮಾಡಿದ್ದು ಜನರ ಹಣ, ಅವರ ಮುಂದೆ ಉತ್ತರ ಕೊಡಿ. ಕೊರೋನಾ ಲಾಕ್‌ಡೌನ್‌ ಆಗಿ 120 ದಿನಗಳ ಕಾಲ ನಿಮಗೆ ಸಹಕಾರ ನೀಡಿದ್ದೇವೆ. ಸರ್ಕಾರದ ಕೆಲಸಗಳಿಗೆ ಕೈಜೋಡಿಸಲು ನಾವು ಬದ್ಧ. ಆದರೆ ನಿಮ್ಮ ಭ್ರಷ್ಟಾಚಾರಕ್ಕೆ ಬೆಂಬಲ ನೀಡಲು ಸಾಧ್ಯವಿಲ್ಲ. ಕೊರೋನಾ ಬಂದಾಗಿನಿಂದ ಅಭಿವೃದ್ಧಿ ಕಾರ್ಯಗಳನ್ನೇ ನಿಲ್ಲಿಸಿದ್ದೀರಿ. ನಿಮಗೆ ಬೇಕಾದ ಬಿಲ್‌ಗಳನ್ನು ಮಾತ್ರ ನೀಡುತ್ತಿದ್ದೀರಿ ಎಂದು ಆರೋಪಿಸಿದರು.

ಭ್ರಷ್ಟಾಚಾರ ಆರೋಪಕ್ಕೆ ಬಿಸಿ ಮುಟ್ಟಿಸಿದ ಬಿಜೆಪಿ: ಸಿದ್ದರಾಮಯ್ಯ, ಡಿಕೆಶಿಗೆ ಲೀಗಲ್ ನೋಟಿಸ್

ಸರ್ಕಾರದ ಪಾಲಿಸಿಗೇ ಪ್ಯಾರಾಲಿಸಿಸ್‌: ಕೊರೋನಾ ವಿಷಯದಲ್ಲೂ ಭ್ರಷ್ಟಾಚಾರ ಮಾಡಿದ್ದು ಬಿಜೆಪಿ ಸಂಸ್ಕಾರ. ಒಬ್ಬನೇ ಒಬ್ಬ ಬಿಜೆಪಿ ನಾಯಕ ಕೊರೋನಾ ರೋಗಿಗಳನ್ನು ಭೇಟಿ ಮಾಡಲು ಹೋಗಿಲ್ಲ. ರಾಜ್ಯದ ಜನತೆಗೆ ಬಿಜೆಪಿ ಸರ್ಕಾರವೇ ದೊಡ್ಡ ಶಾಪ. ಅದಕ್ಕೆ ಕಣ್ಣು, ಕಿವಿ, ಹೃದಯವೇ ಇಲ್ಲ. ಕೊರೋನಾ ಹೆಣಗಳ ಮೇಲೆ ನೀವು ಕೊಳ್ಳೆ ಹೊಡೆಯಲು ಹೊರಟಿದ್ದೀರಿ. ನಿಮಗೆ ನ್ಯಾಯ ವ್ಯವಸ್ಥೆಯ ಮೇಲೆ ನಂಬಿಕೆ ಇದ್ದರೆ ಕೂಡಲೆ ಹಾಲಿ ನ್ಯಾಯಾಧೀಶರಿಂದ ಜ್ಯುಡಿಶಿಯರಿ ತನಿಖೆಗೆ ಆದೇಶ ಕೊಡಿ, ತಪ್ಪು ಮಾಡಿದ್ದರೆ ನನ್ನನ್ನೂ ಶಿಕ್ಷಿಸಿ ಎಂದು ಡಿ.ಕೆ. ಶಿವಕುಮಾರ್‌ ಆಗ್ರಹಿಸಿದರು.

ಸತ್ತ ಮೇಲೆ ಹಣ ಕೊಡ್ತೀರಾ: ಮಾತೆತ್ತಿದರೆ ತಾವು ಬಡವರ ಪರ ಸರ್ಕಾರ ಎನ್ನುತ್ತಾರೆ. ಏನು ಮಾಡಿದ್ದೀರಿ ಬಡವರಿಗೆ? ಕೇಂದ್ರ ಸರ್ಕಾರದ 20 ಲಕ್ಷ ಕೋಟಿ ರು., ರಾಜ್ಯ ಸರ್ಕಾರದ 1600 ಕೋಟಿ ರು. ಘೋಷಣೆ ಮಾಡಿದ್ದು, ಯಾರಿಗೆ ಏನು ಸಹಾಯ ಮಾಡಿದ್ದೀರಿ ಎನ್ನುವ ಪಟ್ಟಿಕೊಡಿ. ಆಟೋ, ಕ್ಯಾಬ್‌ ಚಾಲಕರಿಗೆ ಇವತ್ತಿಗೂ ಸಹಾಯಧನ ಸಿಕ್ಕಿಲ್ಲ. ಯಾವ ಬೀದಿ ಬದಿ ವ್ಯಾಪಾರಿಗೆ ಧನಸಹಾಯ ಮಾಡಿದ್ದೀರಿ? ಸತ್ತ ಮೇಲೆ ಕೊಡ್ತೀರಾ? ಸರ್ಕಾರ ಎಂದರೆ ದುಡ್ಡು ಹೊಡೆಯುವ ವ್ಯವಸ್ಥೆ ಎಂದುಕೊಂಡಿದ್ದೀರಾ? ಬೆಂಗಳೂರಿನಿಂದ ಲಕ್ಷಾಂತರ ವಲಸಿಗರು ಹೊರಟುಹೋಗಿದ್ದಾರೆ. ಅವರ ರಕ್ಷಣೆಗೆ, ಅವರನ್ನು ಕರೆತರಲು ಏನಾದರೂ ಕಾರ್ಯಕ್ರಮ ಮಾಡಿದ್ದೀರಾ? ಕಾರ್ಮಿಕರಿಗೆ ಸರಿಯಾದ ರೀತಿಯಲ್ಲಿ ಹಣ, ಊಟ, ವಸತಿ ಒದಗಿಸಿದ್ದಿದ್ದರೆ ಯಾಕೆ ವಲಸೆ ಹೋಗ್ತಿದ್ದರು? ಬಿಜೆಪಿ ಸರ್ಕಾರಕ್ಕೆ ಗವರ್ಮೆಂಟೂ ಗೊತ್ತಿಲ್ಲ, ಗವರ್ನೆನ್ಸೂ ಗೊತ್ತಿಲ್ಲ ಎಂದು ಕಿಡಿ ಕಾರಿದರು.

 

ಮೊದಲು ನೀವು ಉತ್ತರ ಕೊಡಿ: ಸರ್ಕಾರದ ಲೀಗಲ್‌ ನೋಟಿಸ್‌ ವಿಚಾರಕ್ಕೆ ನಾವು ಜವಾಬ್ದಾರಿಯುತ ಪಕ್ಷವಾಗಿ ಉತ್ತರ ಕೊಡುತ್ತೇವೆ. ಅವರು ನೋಟಿಸ್‌ ಬೇಕಾದರೆ ನೀಡಲಿ, ಕೇಸ್‌ ಬೇಕಾದರೆ ಹಾಕಲಿ, ನಾವು ಅದಕ್ಕೆ ಉತ್ತರ ಕೊಡ್ತೇವೆ. ಅದಕ್ಕಿಂತ ಮೊದಲು ನೀವು ಮಾಡಿದ ಭ್ರಷ್ಟಾಚಾರ ಕುರಿತ ನಮ್ಮ ಪ್ರಶ್ನೆಗೆ ಉತ್ತರ ನೀಡಿ ಎಂದು ಡಿಕೆಶಿ ಆಗ್ರಹಿಸಿದರು.

ಹೊರನಾಡಿನವರ ಸ್ವಾಭಿಮಾನಕ್ಕೆ ಧಕ್ಕೆ: ಈ ನಾಡು ಕಟ್ಟಲು ಸಹಕಾರ ನೀಡಿದ ಮುಂಬೈ ಸೇರಿದಂತೆ ಹೊರರಾಜ್ಯ, ಹೊರದೇಶಗಳ ಜನರು ಮರಳಿ ಬರುತ್ತಿದ್ದಾರೆ ಎಂದರೆ ಬಿಜೆಪಿ ಸರ್ಕಾರ ಅವರನ್ನು ಕೀಳಾಗಿ ನಡೆಸಿಕೊಂಡಿತು. ಕೊರೋನಾ ಕಾಲದಲ್ಲಿ ಅವರನ್ನು ಯಾವ ರೀತಿ ಟ್ರೀಟ್‌ ಮಾಡಿದ್ದೀರಿ ಎನ್ನುವುದನ್ನು ನೆನಪಿಸಿಕೊಳ್ಳಿ. ಅವರ ಬಗ್ಗೆ ಬಿಜೆಪಿಯ ಒಬ್ಬನೇ ಒಬ್ಬ ಮುಖಂಡನೂ ತುಟಿ ಬಿಚ್ಚಿಲ್ಲ. ಸರ್ಕಾರ ಅವರಿಗೆ ಸಹಾಯ ಮಾಡದಿದ್ದರೂ ಚಿಂತಿರಲಿಲ್ಲ. ಆದರೆ ಅಸ್ಪೃಶ್ಯರಂತೆ ನಡೆಸಿಕೊಂಡಿದ್ದೀರಿ. ಅವರ ಸ್ವಾಭಿಮಾನಕ್ಕೆ ಧಕ್ಕೆ ಮಾಡಿದ್ದೀರಿ, ಭಾವನೆಗಳಿಗೆ ಕೈಹಾಕಿದ್ದೀರಿ. ಬಿಜೆಪಿ, ಆರೆಸ್ಸೆಸ್‌ ಸಂಸ್ಕೃತಿಯಾ ಇದು ಎಂದು ಡಿಕೆಶಿ ಟೀಕಿಸಿದರು.

ಸಚಿವ ಸ್ಥಾನಕ್ಕಾಗಿ ಸಿಪಿ ಯೋಗೇಶ್ವರ್‌ ಚಿತ್ರ ವಿಚಿತ್ರ ದಾಳ...!

ರಾಜ್ಯ ಸರ್ಕಾರ ನೀಡಿದ ಆಹಾರ ಕಿಟ್‌ಗಳ ಮೇಲೆ ಬಿಜೆಪಿ ಚಿಹ್ನೆ ಹಾಕಿ, ಫೋಟೊ ಹಾಕಿ ಹಂಚಿದ್ದಾರೆ. ಅವರಲ್ಲಿ ಒಬ್ಬರ ಮೇಲಾದ್ರೂ ಕ್ರಮ ಕೈಗೊಂಡು ಬಂಧಿಸಲು ನಿಮಗೆ ಸಾಧ್ಯ ಆಗಿಲ್ಲವೆಂದರೆ ಮುಖ್ಯಮಂತ್ರಿಯಾಗಿ ಯಡಿಯೂರಪ್ಪ ಮುಂದುವರಿಯಲು ಲಾಯಕ್ಕಾ ಎಂದು ಪ್ರಶ್ನಿಸಿದರು.

ಕೆಪಿಸಿಸಿ ಕಾರ್ಯಾಧ್ಯಕ್ಷ ಸಲೀಂ ಅಹ್ಮದ್‌, ಮಾಜಿ ಸಚಿವ ರಮಾನಾಥ ರೈ, ಕಾಂಗ್ರೆಸ್‌ ಜಿಲ್ಲಾಧ್ಯಕ್ಷ ಹರೀಶ್‌ ಕುಮಾರ್‌, ಶಾಸಕ ಯು.ಟಿ. ಖಾದರ್‌, ಮಾಜಿ ಶಾಸಕರಾದ ಜೆ.ಆರ್‌. ಲೋಬೊ, ಶಕುಂತಳಾ ಶೆಟ್ಟಿ, ವಿನಯ ಕುಮಾರ್‌ ಸೊರಕೆ, ಐವನ್‌ ಡಿಸೋಜ, ಯುವ ಕಾಂಗ್ರೆಸ್‌ ಜಿಲ್ಲಾಧ್ಯಕ್ಷ ಮಿಥುನ್‌ ರೈ ಮತ್ತಿತರರಿದ್ದರು.

ಖಾಸಗಿ ಆಸ್ಪತ್ರೆಗಳಿಂದ ಸರ್ಕಾರಕ್ಕೆ ಪಾಲು

ಪ್ರಧಾನಮಂತ್ರಿ, ರಾಜ್ಯ ಸರ್ಕಾರದ ಆರೋಗ್ಯ ಯೋಜನೆಗಳು, ಆಯುಷ್ಮಾನ್‌ ವ್ಯವಸ್ಥೆ ಇರಬೇಕಾದರೆ ಕೊರೋನಾ ಸೋಂಕಿತ ಎಲ್ಲರಿಗೂ ಉಚಿತ ಚಿಕಿತ್ಸೆ ನೀಡಬಹುದಿತ್ತು. ಆದರೆ ರಾಜ್ಯ ಸರ್ಕಾರ ಕೊರೋನಾ ಚಿಕಿತ್ಸೆಗೆ ಖಾಸಗಿ ಆಸ್ಪತ್ರೆಗಳಿಗೆ ರೇಟ್‌ ಫಿಕ್ಸ್‌ ಮಾಡಿದೆ. ದರ ನಿಗದಿ ಮಾಡಿದ್ದೇ ತಪ್ಪು. ಹೀಗಾಗಿಯೇ ಖಾಸಗಿ ಆಸ್ಪತ್ರೆಗಳು ಲಕ್ಷಾಂತರ ರು. ಬಿಲ್‌ ಮಾಡತೊಡಗಿವೆ. ಇದರಲ್ಲಿ ಸರ್ಕಾರಕ್ಕೆ ಪಾಲು ಇದೆ ಎಂದು ಡಿ.ಕೆ. ಶಿವಕುಮಾರ್‌ ಗಂಭೀರ ಆರೋಪ ಮಾಡಿದರು.

ದ.ಕ.ದಿಂದ ಕಾಂಗ್ರೆಸ್‌ ಪ್ರಚಾರ

ಕೆಪಿಸಿಸಿ ಅಧ್ಯಕ್ಷನಾಗಿ ಪದಗ್ರಹಣ ಸ್ವೀಕಾರ ಮಾಡಿದ ಬಳಿಕ ಬೆಂಗಳೂರಿನಿಂದ ಹೊರಗೆ ಭೇಟಿ ನೀಡಿದ್ದು ಮೊದಲು ದಕ್ಷಿಣ ಕನ್ನಡಕ್ಕೆ. ಇಲ್ಲಿ ರಾಜಕಾರಣದ ಭಿನ್ನಾಭಿಪ್ರಾಯ ಏನೇ ಇದ್ದರೂ ಜನಸಾಮಾನ್ಯರು ಎಲ್ಲ ಧರ್ಮದವರೊಂದಿಗೆ ಸಹಬಾಳ್ವೆಯಿಂದ ಗೌರವಯುತವಾದ ಬದುಕು ಸಾಗಿಸುತ್ತಿದ್ದಾರೆ. ಈ ಸೌಹಾರ್ದತೆಯ ಇತಿಹಾಸವನ್ನು ಯಾರೂ ತಿದ್ದಲಾಗದು. ಈ ಪುಣ್ಯ ಭೂಮಿಯಿಂದಲೇ ಕಾಂಗ್ರೆಸ್‌ ತತ್ವ ಸಿದ್ಧಾಂತದ ಪ್ರಚಾರ ನಡೆಸಲು ಉದ್ದೇಶಿಸಿದ್ದೇನೆ ಎಂದು ಡಿಕೆಶಿ ಹೇಳಿದರು.